More

    ಮಂಗಳೂರಿನ ಸಸ್ಯಾಗಾರದಲ್ಲಿ ಹುದ್ದೆಗಳು ಖಾಲಿಖಾಲಿ

    ಅನ್ಸಾರ್ ಇನೋಳಿ ಉಳ್ಳಾಲ
    ಸರ್ಕಾರ ನಿಗದಿಪಡಿಸಿರುವ ಹುದ್ದೆಗಳು ಖಾಲಿಯಿದ್ದು, ಕೆಲಸಕ್ಕೆ ಇರುವುದು ಏಕೈಕ ತೋಟಗಾರ. ಆದರೂ ಜೀವಕಳೆ ಮಾಸಿಲ್ಲ. ಇದು ಮಂಗಳೂರು ತಾಲೂಕು ತೋಟಗಾರಿಕಾ ಇಲಾಖೆಯ ಜಿಲ್ಲಾ ಸಸ್ಯಾಗಾರದ ದೃಶ್ಯ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ತಾಲೂಕು ತೋಟಗಾರಿಕಾ ಇಲಾಖೆ ಅಧೀನದ ಜಿಲ್ಲಾ ಸಸ್ಯಾಗಾರ 1.27 ಎಕರೆ ಜಮೀನು ಹೊಂದಿದೆ. ಇದೇ ಕೇಂದ್ರದಿಂದ ಕೃಷಿ ಸಂಬಂಧಿತ ವಿಚಾರದಲ್ಲಿ ಹೊಸ ತಳಿಗಳ ಅಭಿವೃದ್ಧಿ, ಕೃಷಿ, ತೋಟಗಾರಿಕಾ ಗಿಡಗಳನ್ನು ಅಭಿವೃದ್ಧಿಪಡಿಸಿ ಕ್ಷೇತ್ರವಾರು ಇಲಾಖೆಗಳಿಗೆ ತಲುಪಿಸಲಾಗುತ್ತದೆ. ಅಲ್ಲದೆ ಆಲಂಕಾರಿಕಾ ಗಿಡಗಳನ್ನೂ ಇಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ.

    ತಾಲೂಕು ಮಟ್ಟದ ಕೇಂದ್ರ ಇದಾಗಿರುವುದರಿಂದ ಗಿಡಗಳಿಗೆ ಹೆಚ್ಚಿನ ಬೇಡಿಕೆ ಇದೆ. ಆದರೆ ಕೆಲವು ವರ್ಷಗಳಿಂದ ಇಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದೆ. ತೋಟಗಾರಿಕಾ ಕೆಲಸ ನಿರ್ವಹಿಸಲು ಏಕೈಕ ಸಿಬ್ಬಂದಿ ಇದ್ದರೂ ಒತ್ತಡದ ಮಧ್ಯೆಯೂ ಕೇಂದ್ರದ ಜೀವಕಳೆ ಉಳಿಸಿಕೊಂಡಿದ್ದಾರೆ. ಇಲಾಖೆಯಲ್ಲಿ ಸರ್ಕಾರದ ಲೆಕ್ಕಾಚಾರದಂತೆ ಅಧಿಕಾರಿಗಳು, ಸಿಬ್ಬಂದಿ ಸಹಿತ 15 ಜನ ಅವಶ್ಯಕತೆ ಇದೆ. ಆದರೆ ಕೆಲವು ವರ್ಷಗಳಿಂದ ಕೇವಲ ಐದೇ ಮಂದಿ ಇದ್ದಾರೆ. ಭಾರತ ಕೃಷಿ ಪ್ರಧಾನ ದೇಶ ಎಂದು ಕೃಷಿ ವಿಚಾರದಲ್ಲಿ ಬಗ್ಗೆ ಗಂಟೆಗಟ್ಟಲೆ ಭಾಷಣ ಬಿಗಿಯುವ ಜನಪ್ರತಿನಿಧಿಗಳು ನಿರ್ಲಕ್ಷ್ಯ ತಾಳಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಸರ್ಕಾರವೇ ಸೃಷ್ಟಿಸಿರುವ ಸಹಾಯಕ ತೋಟಗಾರಿಕಾ ನಿರ್ದೇಶಕ ಹುದ್ದೆ 2, ಬೆರಳಚ್ಚುಗಾರ, ವಾಹನ ಚಾಲಕ ಹುದ್ದೆ 2, ಅಟೆಂಡರ್ 2 ಹುದ್ದೆಗಳು ಖಾಲಿಯಿದ್ದು, ನಾಲ್ಕು ತೋಟಗಾರ ಹುದ್ದೆಯ ಪೈಕಿ ಮೂರು ಖಾಲಿಯಿವೆ.

    ಏಕೈಕ ತೋಟಗಾರನಿಂದ ಸಲೀಸು ಕೆಲಸ: ಇಲ್ಲಿ ಯಾವುದೇ ಕೆಲಸ ನಡೆಯಬೇಕಿದ್ದರೂ ನುರಿತ ತೋಟಗಾರ ಅಗತ್ಯ. ಸರ್ಕಾರದ ಪ್ರಕಾರ ನಾಲ್ವರು ತೋಟಗಾರರು ಬೇಕಿದ್ದರೂ ಹಲವು ವರ್ಷಗಳಿಂದ ಇರುವುದು ಒಬ್ಬನೇ ತೋಟಗಾರ. ಪಡೀಲ್ ವೀರನಗರದ ರಾಜೀವ ಎಂಬುವರು ಮೊದಲಿಗೆ ಕದ್ರಿ ಪಾರ್ಕ್‌ನಲ್ಲಿ ಕೆಲಸಕ್ಕೆ ಸೇರಿದ್ದು, ಅವರ ಕೆಲಸದಲ್ಲಿನ ಪ್ರಾಮಾಣಿಕತೆ ಮತ್ತು ಚಾಕಚಕ್ಯತೆ ಕಂಡು 20 ವರ್ಷಗಳ ಹಿಂದೆ ತೋಟಗಾರಿಕಾ ಇಲಾಖೆಗೆ ಕರೆಸಿಕೊಳ್ಳಲಾಗಿತ್ತು. ಇಂದಿಗೂ ಅಲ್ಲೇ ಕೆಲಸದಲ್ಲಿದ್ದು, ಇಲಾಖೆಗೆ ಆಧಾರಸ್ಥಂಭದಂತಿದ್ದಾರೆ. ಒತ್ತಡದ ಕೆಲಸದ ಮಧ್ಯೆಯೂ ತರಕಾರಿ, ಬಾಳೆಹಣ್ಣು, ಆಲಂಕಾರಿಕಾ ಗಿಡಗಳ ಸಹಿತ ತೋಟಗಾರಿಕಾ ಗಿಡಗಳನ್ನು ಬೆಳೆಸುವ ಮೂಲಕ ಇಲಾಖೆ ಕಳೆಗುಂದದಂತೆ ನೋಡಿಕೊಂಡಿದ್ದಾರೆ.

    ಎಲ್ಲ ಇಲಾಖೆಗಳಲ್ಲೂ ಸಿಬ್ಬಂದಿ ಕೊರತೆ ಸಾಮಾನ್ಯವಾಗಿದೆ. ನಮ್ಮಲ್ಲಿ ಇತರ ಸಿಬ್ಬಂದಿಗಿಂತಲೂ ತೋಟಗಾರರ ಹುದ್ದೆಗಳೇ ಖಾಲಿಯಾಗಿರುವುದರಿಂದ ಬಹಳಷ್ಟು ತೊಂದರೆಯಾಗಿದೆ. ಈ ಬಗ್ಗೆ ಮೇಲಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
    – ಜಾನಕಿ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕಿ

    ಕೇವಲ ಸಬ್ಸಿಡಿ ನೀಡಿದ ಕೂಡಲೇ ಕೃಷಿ ಅಭಿವೃದ್ಧಿಯಾಗದು. ಕೃಷಿಕರ ಅಭಿವೃದ್ಧಿ ದೃಷ್ಟಿಯಿಂದ, ಹೊಸ ತಳಿಗಳನ್ನು ಅಭಿವೃದ್ಧಿಗೊಳಿಸಿ ರೈತರನ್ನು ನಿರಂತರ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಜವಾಬ್ದಾರಿ ಸರ್ಕಾರದ್ದು. ತೋಟಗಾರಿಕಾ ಇಲಾಖೆ ಪೋಸ್ಟ್‌ಮ್ಯಾನ್ ಕೆಲಸಕ್ಕೆ ಸೀಮಿತವಾಗದಂತಾಗಲು ತಕ್ಷಣ ನುರಿತ ಸಿಬ್ಬಂದಿಯನ್ನು ನೇಮಿಸಬೇಕು.
    – ಮನೋಹರ್ ಶೆಟ್ಟಿ ನಡಿಕಂಬಳಗುತ್ತು, ಪ್ರಧಾನ ಕಾರ್ಯದರ್ಶಿ ರೈತಸಂಘ (ಹಸಿರು ಸೇನೆ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts