More

    ಡೊನಾಲ್ಡ್​ ಟ್ರಂಪ್​ ಭಾರತದಿಂದ ತೆರಳಿದ ತಕ್ಷಣ ಮಾಡಿದ್ದೇನು ಗೊತ್ತಾ? ಭಾರತೀಯ ಮೂಲದ ಅಮೆರಿಕ ಪ್ರಜೆಗಳನ್ನು ಸೆಳೆಯಲು ಭರ್ಜರಿ ಹಣ ವೆಚ್ಚ…!

    ವಾಷಿಂಗ್ಟನ್​: ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತಮ್ಮ ಕುಟುಂಬದೊಂದಿಗೆ ಭಾರತಕ್ಕೆ ಬಂದಿದ್ದರು. ಜಗತ್ತಿನ ಅತ್ಯಂತ ದೊಡ್ಡ ಮೊಟೆರಾ ಕ್ರಿಕೆಟ್​ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ನಮಸ್ತೆ ಟ್ರಂಪ್​ ಅದ್ಧೂರಿ ಸಮಾರಂಭ ದಲ್ಲಿ ಪಾಲ್ಗೊಂಡಿದ್ದರು.

    ಟ್ರಂಪ್​ ಭಾರತ ಭೇಟಿಯ ವೇಳೆ ಎರಡೂ ದೇಶಗಳ ಮಧ್ಯೆ ಪ್ರಮುಖ ಒಪ್ಪಂದಗಳಿಗೂ ಸಹಿಬಿದ್ದಿದೆ. ಭಾರತದ ಆದರ, ಆತಿಥ್ಯವನ್ನು ಮನಸಾರೆ ಹೊಗಳಿ ಅಮೆರಿಕಕ್ಕೆ ವಾಪಸ್ ಹೋದ ಟ್ರಂಪ್​ ಈಗ ಅಲ್ಲಿನ ಭಾರತೀಯ ಮೂಲದವರ ಮತ ಸೆಳೆಯಲು ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದಾರೆ. ಡೊನಾಲ್ಡ್​ ಟ್ರಂಪ್​ ಅವರ ತಂಡ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗುವ ಮೂಲಕ ಭಾರತೀಯ ಮೂಲದ ಅಮೆರಿಕನ್ನರ ಮತ ಸೆಳೆಯುವ ಅಭಿಯಾನ ಶುರು ಮಾಡಿದೆ.

    ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಭಾರತ ಪ್ರವಾಸದ ವಿಡಿಯೋಗಳ ತುಣುಕನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡುವ ಮೂಲಕ ಹೆಚ್ಚೆಚ್ಚು ವೈರಲ್​ ಮಾಡುತ್ತಿದೆ. ಅದಕ್ಕೆ ಸಂಬಂಧಪಟ್ಟಂತೆ ಜಾಹೀರಾತುಗಳನ್ನೂ ಸೋಷಿಯಲ್​ ಮೀಡಿಯಾದಲ್ಲಿ ಹಾಕುತ್ತಿದೆ. ಈ ವಿಡಿಯೋಗಳನ್ನಿಟ್ಟುಕೊಂಡು ಅಮೆರಿಕದಲ್ಲಿರುವ ಭಾರತೀಯರನ್ನು ಖುಷಿಪಡಿಸುವ ಕೆಲಸಕ್ಕೆ ಇಳಿದಿದೆ. ಈ ಪ್ರಚಾರ ಕಾರ್ಯಕ್ಕಾಗಿ ವೆಚ್ಚ ಮಾಡಿರುವ ಹಣದ ಮೊತ್ತ ಐದು ಅಂಕಿಗಳಲ್ಲಿ ಇದೆ ಎಂದು ಅಂದಾಜಿಸಲಾಗಿದೆ.

    ಅಮೆರಿಕದಲ್ಲಿ ರಿಪಬ್ಲಿಕನ್​ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯೋರ್ವರು ಭಾರತೀಯ ಮೂಲದ ಅಮೆರಿಕ ಪ್ರಜೆಗಳ ಮತ ಸೆಳೆಯಲು ಅಭಿಯಾನ ಶುರು ಮಾಡಿ, ಅದಕ್ಕೆಂದೇ ಇಷ್ಟೊಂದು ದೊಡ್ಡ ಮೊತ್ತದ ಹಣ ಖರ್ಚು ಮಾಡುತ್ತಿರುವುದು ಇದೇ ಮೊದಲ ಬಾರಿ ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ.

    ಡೊನಾಲ್ಡ್​ ಟ್ರಂಪ್​ ಅವರು ಭಾರತದಿಂದ ಫೆ.24ರಂದು ಅಮೆರಿಕಕ್ಕೆ ವಾಪಸ್ ಆಗಿದ್ದು, ಬುಧವಾರದಿಂದಲೇ ಚುನಾವಣಾ ಪ್ರಚಾರ ಕಾರ್ಯವೂ ಪ್ರಾರಂಭವಾಗಿದೆ. ಫೇಸ್​ಬುಕ್, ಇನ್​ಸ್ಟಾಗ್ರಾಂ, ಯೂಟ್ಯೂಬ್, ಆನ್​ಲೈನ್​ ವೆಬ್​​ಸೈಟ್​ಗಳಂತ ಪ್ರಮುಖ ಜಾಲತಾಣಗಳಲ್ಲಿ ಚುನಾವಣಾ ಪ್ರಚಾರ ಕಾರ್ಯ ಶುರುವಾಗಿದೆ. ಇನ್ನೂ ಎರಡುವಾರಗಳ ಕಾಲ ಇದು ಮುಂದುವರಿಯಲಿದೆ ಎಂದು ಟ್ರಂಪ್​ ಟೀಂನ ಪ್ರಮುಖ ಅಧಿಕಾರಿಯೋರ್ವರು ತಿಳಿಸಿದ್ದಾರೆ.

    ಭಾರತೀಯ ಮೂಲದ ಅಮೆರಿಕನ್ನರು ಉದ್ಯಮದಲ್ಲಿ ಪ್ರಚಂಡರು, ಕಲೆಯಲ್ಲಿ ಪ್ರವೀಣರು, ತಂತ್ರಜ್ಞಾನದಲ್ಲಿ ಕೂಡ ಹೊಸದನ್ನು ತರಬಲ್ಲರು (Indian Americans are titans of business, masters of the arts and innovate technology like few others ), ಭಾರತೀಯರು ನಮ್ಮ ದೇಶದ ಸಂಸ್ಕೃತಿ ಮತ್ತು ಆರ್ಥಿಕತೆಯನ್ನು ಬಲಪಡಿಸುವಲ್ಲಿ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ನಾವು ನಿಮಗಾಗಿ ಸದಾ ಹೋರಾಡುತ್ತೇವೆ. (“Your contributions have strengthened our culture and economy. I will always fight for YOU!) ಎಂಬಿತ್ಯಾದಿ ವಾಕ್ಯಗಳನ್ನು ಈ ಪ್ರಚಾರ ಜಾಹೀರಾತುಗಳಲ್ಲಿ ಕಾಣಬಹುದಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts