More

    ಬಿಜೆಪಿ ಭೀಷ್ಮನಿಗೆ ಅಂತಿಮ ವಿದಾಯ

    ಪುತ್ತೂರು: ಬಿಜೆಪಿಯ ಭೀಷ್ಮ, ಕರಾವಳಿಯ ವಾಜಪೇಯಿ ಎಂದೇ ಹೆಸರಾಗಿದ್ದ ರಾಜಕೀಯ ಧುರೀಣ, ಪುತ್ತೂರಿನ ಮಾಜಿ ಶಾಸಕ ಉರಿಮಜಲು ಕೆ. ರಾಮ ಭಟ್ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ಮಂಗಳವಾರ ಸಾವಿರಾರು ಅಭಿಮಾನಿಗಳ ಹಾಗೂ ಪಕ್ಷದ ಕಾರ್ಯಕರ್ತರ ಸಮ್ಮುಖ ಸಕಲ ಗೌರವಗಳೊಂದಿಗೆ ನಡೆಯಿತು. ಪುತ್ತೂರು ಮಡಿವಾಳ ಕಟ್ಟೆ ಸ್ಮಶಾನದಲ್ಲಿ ಬೆಳಗ್ಗೆ 11 ಗಂಟೆಗೆ ಅಗ್ನಿಸ್ಪಶರ್ದೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಯಿತು.

    ಬೆಳಗ್ಗೆ 8 ಗಂಟೆಯ ವೇಳೆಗೆ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿ ಕೊಂಬೆಟ್ಟಿನಲ್ಲಿನ ಸ್ವಗೃಹದಿಂದ ಅವರ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ವಿವೇಕಾನಂದ ಕಾಲೇಜಿಗೆ ಕೊಂಡೊಯ್ದು ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು. ನುಡಿ ನಮನ ಸಲ್ಲಿಸಿದ ಬಳಿಕ, ಬೈಪಾಸ್ ಮೂಲಕ ಪುತ್ತೂರು ನಗರಕ್ಕೆ ಆಗಮಿಸಿ ಕೋ ಆಪರೇಟಿವ್ ಟೌನ್ ಬ್ಯಾಂಕ್ ಆವರಣದಲ್ಲಿ ಬೆಳಗ್ಗೆ 9.30ರಿಂದ 11ರ ತನಕ ಸಾರ್ವಜನಿಕ ದರ್ಶನಕ್ಕೆ ಇರಿಸಲಾಯಿತು.

    ಸರ್ಕಾರಿ ಗೌರವ ಸಲ್ಲಿಕೆ: ಪುಷ್ಪಾಲಂಕೃತ ವಾಹನದಲ್ಲಿ ರಾಮ ಭಟ್ ಅವರ ಪಾರ್ಥಿವ ಶರೀರವನ್ನು ಅವರ ನಿವಾಸದಿಂದ ವಿವೇಕಾನಂದ ಕಾಲೇಜು ಮತ್ತು ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ತನಕ ಸುಮಾರು 6 ಕಿ.ಮೀ. ತನಕ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಬ್ಯಾಂಕ್ ಅವರಣದಲ್ಲಿ ಪಾರ್ಥಿವ ಶರೀರವನ್ನು ಇಟ್ಟು ಪೊಲೀಸ್ ಇಲಾಖೆಯಿಂದ ಮೂರು ಸುತ್ತಿನ ಕುಶಾಲತೋಪು ಹಾರಿಸುವ ಮೂಲಕ ಸರ್ಕಾರಿ ಗೌರವ ಸಲ್ಲಿಸಲಾಯಿತು. ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು.

    ವ್ಯವಹಾರ ಸ್ಥಗಿತಗೊಳಿಸಿ ಗೌರವಾರ್ಪಣೆ : ರಾಮ ಭಟ್ ಪಾರ್ಥಿವ ಶರೀರದ ಮೆರವಣಿಗೆ ವೇಳೆ ಪುತ್ತೂರಿನ ವರ್ತಕ ಸಂಘ ಸದಸ್ಯರು ವ್ಯವಹಾರ ಸ್ಥಗಿತಗೊಳಿಸಿ ಗೌರವ ಸೂಚಿಸಿದರು. ರಾಮ ಭಟ್ ಪ್ರೇರಣೆಯಿಂದಲೇ ಸ್ಥಾಪಿತಗೊಂಡಿದ್ದ ಪುತ್ತೂರಿನ ಸ್ವಾಭಿಮಾನಿ ಕೋ ಆಪರೇಟಿವ್ ಸೊಸೈಟಿ ಮಂಗಳವಾರ ಸೊಸೈಟಿ ಬಂದ್ ಮಾಡಿತ್ತು. ಪುತ್ತೂರಿನ ಅಂಬಿಕಾ ಶಿಕ್ಷಣ ಸಂಸ್ಥೆ ನುಡಿ ನಮನ ಸಲ್ಲಿಸಿ ಶಾಲೆ, ಕಾಲೇಜುಗಳಿಗೆ ರಜೆ ಸಾರಿದೆ.

    ಮಾಜಿ ರಾಷ್ಟ್ರಪತಿ ಕಲಾಂ ಅವರಂತೆ ವಿದ್ಯಾರ್ಥಿಗಳಲ್ಲಿ ಭವಿಷ್ಯ ಕಾಣುತ್ತಿದ್ದೇನೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಸಮಯ ವ್ಯರ್ಥ ಆಗಬಾರದು. ಹಾಗಾಗಿ ತಾನು ಮರಣವನ್ನಪ್ಪಿದರೆ ವಿವೇಕಾನಂದ ಕಾಲೇಜಿಗೆ ರಜೆ ಘೋಷಿಸಬಾರದು ಎಂದು ರಾಮ ಭಟ್ ಹಿಂದೊಮ್ಮೆ ಹೇಳಿದ್ದರು. ಹೀಗಾಗಿ ವಿವೇಕಾನಂದ ಕಾಲೇಜಿಗೆ ಮಂಗಳವಾರ ರಜೆ ಘೋಷಣೆ ಮಾಡಿಲ್ಲ.
    – ಡಾ.ಕೃಷ್ಣ ಭಟ್
    ಪ್ರಧಾನ ಕಾರ್ಯದರ್ಶಿ, ವಿವೇಕಾನಂದ ವಿದ್ಯಾವರ್ಧಕ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts