More

    ಬರ ಘೋಷಣೆಗೆ ಸರ್ಕಾರಕ್ಕೆ ಒತ್ತಾಯ

    ವಿಜಯಪುರ: ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆಯಾಗದೆ ರೈತರು ಕಂಗಾಲಾಗಿದ್ದಾರೆ. ಈವರೆಗೂ ಬಿತ್ತನೆಯನ್ನೇ ಮಾಡಲಾಗದೆ ಆತಂಕದಲ್ಲಿ ದಿನದೂಡುತ್ತಿರುವ ಅನ್ನದಾತನಿಗೆ ಆಸರೆಯಾಗುವ ನಿಟ್ಟಿನಲ್ಲಿ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿ ಪರಿಹಾರ ಕಾರ್ಯ ಕೈಗೊಳ್ಳಲು ಆಗ್ರಹಿಸಿ ಭಾರತೀಯ ಕಿಸಾನ ಸಂಘದ ಉತ್ತರ ಪ್ರಾಂತದ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

    ಅಧ್ಯಕ್ಷ ಭೀಮಸೇನ ಕೊಕರೆ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಕೊರತೆಯಿಂದ ಶೇ.25 ರಷ್ಟು ಮಾತ್ರ ಬಿತ್ತನೆಯಾಗಿದೆ. ಮಳೆ ಕೊರತೆಯಿಂದಾಗಿ ಬರದ ಛಾಯೆ ಎದ್ದು ಕಾಣುತ್ತಿದೆ. ಬಿತ್ತನೆಯಾದ ಜಮೀನುಗಳಲ್ಲೂ ಬೆಳೆಗಳು ಒಣಗುತ್ತಿವೆ. ಹೀಗಾಗಿ ಒಟ್ಟಾರೆ ಮುಂಗಾರು ಮಳೆ ವಿಫಲವಾಗಿದ್ದರಿಂದ ಬರಗಾಲ ಘೋಷಣೆ ಮಾಡಿ ರೈತರಿಗೆ 1 ಎಕರೆಗೆ ಕನಿಷ್ಠ ರೂ. 12,000ಪರಿಹಾರ ನೀಡಲು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

    ಜಿಲ್ಲೆಯ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ, ವಿಜಯಪುರ, ಚಡಚಣ ಹಾಗೂ ಇಂಡಿ ತಾಲೂಕಿನ 62ಕ್ಕೂ ಹೆಚ್ಚು ಗ್ರಾಮಗಳಿಗೆ ನೀರಾವರಿ ಒದಗಿಸುವ ಯೋಜನೆಯಾಗಿದೆ. ಈ ಯೋಜನೆಗೆ ಈಗಾಗಲೇ ಟೆಂಡರ್ ಆಗಿದ್ದು, ಕಾರ್ಯಾದೇಶ ಕೂಡ ನೀಡಲಾಗಿದೆ. ಹೀಗಾಗಿ ತ್ವರಿತವಾಗಿ ಕಾಮಗಾರಿ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

    ಜಿಲ್ಲಾಧ್ಯಕ್ಷ ಮಲ್ಲನಗೌಡ ಪಾಟೀಲ ಮಾತನಾಡಿ, ಜಿಗಜಿಣಗಿಯಿಂದ ಚಡಚಣವರೆಗೆ ಹರಿಯುವ ಹಳ್ಳ ಸುಮಾರು 15ಕಿಮೀ ವ್ಯಾಪ್ತಿ ಹೊಂದಿದ್ದು, ಇಲ್ಲಿ 3 ಕಿಲೋ ಮೀಟರ್‌ಗೆ 1ರಂತೆ ಚೆಕ್ ಡ್ಯಾಂ ನಿರ್ಮಿಸಿ ಗಡಿ ಭಾಗದ ರೈತರಿಗೆ ಅನುಕೂಲವಾಗುವಂತೆ ಕ್ರಮ ಜರುಗಿಸಬೇಕು. ಇದರಿಂದ ಹತ್ತಾರು ಹಳ್ಳಿಗಳಿಗೆ ಪ್ರಯೋಜನವಾಗುತ್ತದೆ ಎಂದರು.

    ಡೋಣಿ ನದಿ ಪುನಃಶ್ಚೇತನಗೊಳಿಸಬೇಕು. ದ್ರಾಕ್ಷಿ ಬೆಳೆಗೆ ಬೆಂಬಲ ಬೆಲೆ ಕೊಡಬೇಕು. ಶಾಲೆ, ಅಂಗನವಾಡಿಗಳ ಬಿಸಿಯೂಟದಲ್ಲಿ ಒಣದ್ರಾಕ್ಷಿ ನೀಡುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಗೊಬ್ಬರ ಮತ್ತು ಕೀಟನಾಶಕಗಳ ಬೆಲೆಯನ್ನು ನಿಯಂತ್ರಿಸಲು ಕ್ರಮ ಜರುಗಿಸಬೇಕು. ಆಧುನಿಕ ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಹಾಯಧನ ಒದಗಿಸಲು ಕ್ರಮ ಜರುಗಿಸಬೇಕು ಎಂದರು.

    ಎಂ.ಎಲ್. ಬಾಗೇವಾಡಿ, ವಿ.ಆರ್. ಇಳಗಿ, ಬಸಪ್ಪ ಚೌಧರಿ, ಎಚ್.ಕೆ. ಶಿವಮಂದಿರ, ಶ್ರೀಶೈಲ ಜಾಲಗೇರಿ, ನಾಗಯ್ಯ ಪೂಜಾರಿ, ಜಕ್ಕಪ್ಪ ಕಟ್ಟಿಮನಿ, ರಾಮಣ್ಣ ಪರೀಟ, ಅಮೋಘ ಬೂದಿಹಾಳ, ಎ.ಎ. ಸಾವಳಗಿ, ಎಸ್.ಆರ್. ಬಿರಾದಾರ, ಎ.ಎಂ. ಪಾಟೀಲ, ಸಿ.ಐ. ಗುಣದಾಳ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts