More

    ಮಹಿಳಾ ದೌರ್ಜನ್ಯ ತಡೆಗೆ ಕಠಿಣ ಕಾನೂನು ಜಾರಿಗೆ ಒತ್ತಾಯ

    ಮಡಿಕೇರಿ: ಮಹಿಳೆಯರು ಹಾಗೂ ಯುವತಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗೆ ಕಠಿಣ ಕಾನೂನು ಜಾರಿಗೆ ತರಬೇಕು ಮತ್ತು ದೌರ್ಜನ್ಯ ಪ್ರಕರಣಗಳನ್ನು ಶೀಘ್ರ ಇತ್ಯರ್ಥ ಪಡಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕೊಡಗು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ಜಿಲ್ಲಾಧಿಕಾರಿ ವೆಂಕಟರಾಜಾ ಅವರ ಮೂಲಕ ಸರ್ಕಾರಕ್ಕೆ ಇತ್ತೀಚೆಗೆ ಮನವಿ ಸಲ್ಲಿಸಿದರು.


    ಜಿಲ್ಲಾಧಿಕಾರಿಗಳನ್ನು ಭೇಟಿಯಾದ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಅನಿತಾ ಪೂವಯ್ಯ ಹಾಗೂ ಪದಾಧಿಕಾರಿಗಳು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಮಹಿಳೆಯರು ಆತಂಕದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹತ್ಯೆ, ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿದೆ ಎಂದು ಆರೋಪಿಸಿದರು.


    ಬೆಳಗಾವಿಯಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ದೌರ್ಜನ್ಯ ನಡೆಸಲಾಗಿದೆ. ರಾಣಿಬೆನ್ನೂರಿನಲ್ಲಿ ಮಹಿಳೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ವಿವಸ್ತ್ರಗೊಳಿಸಿ ಥಳಿಸಲಾಗಿದೆ. ಹಾವೇರಿಯಲ್ಲಿ ಏಳು ಪುರುಷರು ಯುವತಿಯೊಬ್ಬಳನ್ನು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಹುಬ್ಬಳ್ಳಿಯ ಕಾಲೇಜು ಕ್ಯಾಂಪಸ್ ನಲ್ಲಿ ಕಾಂಗ್ರೆಸ್ ಕಾರ್ಪೋರೇಟರ್ ಪುತ್ರಿ ನೇಹಾಳನ್ನು ಅಮಾನುಷವಾಗಿ ಕೊಲೆ ಮಾಡಲಾಗಿದೆ. ಕೊಡಗಿನ ಸೂರ್ಲಬ್ಬಿ ಗ್ರಾಮದಲ್ಲಿ ವಿದ್ಯಾರ್ಥಿನಿ ಯು.ಎಸ್.ಮೀನಾಳ ರುಂಡವನ್ನು ಕತ್ತರಿಸಲಾಗಿದೆ. ಮೇ ೧೫ರಂದು ಹುಬ್ಬಳ್ಳಿಯಲ್ಲಿ ಯುವಕನೊಬ್ಬ ೨೧ ವರ್ಷದ ಅಂಜಲಿ ಅಂಬಿಗೇರ ಎಂಬ ಯುವತಿಯನ್ನು ಇರಿದು ಕೊಲೆ ಮಾಡಿದ್ದಾನೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾನೂನಿಗೆ ಹೆದರುವವರ ಸಂಖ್ಯೆ ಕಡಿಮೆಯಾಗಿದೆ. ಆರೋಪಿಗಳು ಸಾಕ್ಷ್ಯಾಧಾರಗಳಿಲ್ಲದೆ ಕಾನೂನಿನ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿದೆ. ಆದ್ದರಿಂದ ರಾಜ್ಯ ಸರಕಾರ ಅಪರಾಧ ತಡೆಗೆ ಕಠಿಣ ನಿಯಮ ರೂಪಿಸಬೇಕು ಎಂದು ಅನಿತಾ ಪೂವಯ್ಯ ಒತ್ತಾಯಿಸಿದರು.


    ಮನವಿ ಸಲ್ಲಿಸುವ ಸಂದರ್ಭ ಮಹಿಳಾ ಮೋರ್ಚಾದ ಪದಾಧಿಕಾರಿಗಳಾದ ಕವಿತಾ ಭೋಜಪ್ಪ, ಸೌಮ್ಯ ಸುನೀಲ್, ಕವಿತಾ ವಿರೂಪಾಕ್ಷ, ಸುಮಾ ಸುದೀಪ್, ಪ್ರಮೀಳ ಯೋಗೇಶ್, ಸೀತಮ್ಮ, ತಂಗಮ್ಮ, ವೈಭವಿ, ಕಲಾವತಿ, ಸಂಗೀತ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts