More

    Success Story | ಸ್ಪರ್ಧಾತ್ಮಕ ಪರೀಕ್ಷೆಗೆ ಹಾರ್ಡ್​ವರ್ಕ್​ ಎನ್ನುತ್ತಾ ರಾತ್ರಿಯಿಡೀ ಓದಬೇಡಿ!

    ಮತ್ಸ್ಯಯಂತ್ರ ಭೇದಿಸುವ ವೇಳೆ ಅರ್ಜುನನಿಗೆ ಮೀನಿನ ಕಣ್ಣು ಮಾತ್ರ ಕಂಡಂತೆ ಜೀವನದಲ್ಲಿ ನಮಗೆ ನಮ್ಮ ಗುರಿಯ ಬಗ್ಗೆ ಮಾತ್ರ ಗಮನವಿರಬೇಕು. ಆಗ ಮಾತ್ರ ಸೂಪರ್​ ಸಕ್ಸಸ್​ ಕಾಣುವುದಕ್ಕೆ ಸಾಧ್ಯ. ನೀವು ನಿಜವಾಗಿಯೂ ಸಿವಿಲ್​ ಸರ್ವೀಸ್​ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರೆ ಎಲ್ಲ ತರಹದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ. ಹೊಡೆದರೆ ಆನೆ ಕುಂಭಸ್ಥಳಕ್ಕೆ ಹೊಡೆಯುತ್ತೇನೆ ಎನ್ನುವ ಮನೋಭಾವ ಸಲ್ಲವೆಂದು ಸ್ಪರ್ಧಾರ್ಥಿಗಳಿಗೆ ಸೂಚಿಸಿರುವ ಬಿಬಿಎಂಪಿ ವಿಶೇಷ ಆಯುಕ್ತ(ಕಲ್ಯಾಣ)ರಾದ ರೆಡ್ಡಿ ಶಂಕರ ಬಾಬುರವರು ಸ್ಪಧಾರ್ತಕ ಪರೀಕ್ಷೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದಾರೆ.

    ಅಶ್ವಿನಿ ಎಚ್​.ಆರ್​.

    ಡಿಸಿ ಆಗುವುದಕ್ಕೆ ಪ್ರೇರಣೆಯಾದ ಘಟನೆ

    ಶಾಲಾ ಶಿಕ್ಷಕರ ಮಗನಾದ ರೆಡ್ಡಿ ಶಂಕರ ಬಾಬು ಬೆಳೆದದ್ದು ಓದಿದ್ದು ಆಂಧ್ರ ಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯಲ್ಲಿರುವ ಕುಪ್ಪಂನಲ್ಲಿ. ಶಿಕ್ಷಣದಲ್ಲಿ ಮೊದಲಿನಿಂದಲೂ ಆಸಕ್ತಿಯಿತ್ತು. ಚಿಕ್ಕವನಿದ್ದಾಗ ಕಡಿಮೆ ಅಂಕ ಬಂದರೆ ಹೋಗಿ ಮುಖ್ಯ ಶಿಕ್ಷಕರ ಬಳಿ ಕಂಪ್ಲೆಂಟ್​ ಮಾಡುತ್ತಿದ್ದರು. ಅಷ್ಟೇ ಅಲ್ಲ, ನಾಲ್ಕನೇ ತರಗತಿಯಲ್ಲಿದ್ದಾಗಲೇ ಮರುಮೌಲ್ಯಮಾಪನ ಕೂಡ ಮಾಡಿಸಿದ್ದರು. ಬೇರೆಯವರಿಗೆ ಹೆಚ್ಚು ಅಂಕ ಬಂದಾಗ ಅಸಡ್ಡೆ ಮಾಡದೆ ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದರು. ತದನಂತರ ತನ್ನಲ್ಲಿರುವ ಕೊರತೆಯ ಬಗ್ಗೆ ಯೋಚಿಸಿ, ಪರೀಕ್ಷೆ ಬರೆದು ಫಲಿತಾಂಶ ಬರುವವರೆಗೂ ಕಾಯುತ್ತಿದ್ದರು.

    ಹಾಗೆ ನೋಡಿದರೆ ಹತ್ತನೇ ತರಗತಿಯಲ್ಲಿದ್ದಾಗಲೇ ಸಿವಿಲ್​ ಸರ್ವೀಸ್​ ಪರೀಕ್ಷೆ ಬರೆಯಬೇಕೆಂಬ ಬಗ್ಗೆ ಆಲೋಚನೆ ಬಂತು. ಅದಕ್ಕೂ ಕಾರಣವಿದೆ. ಆಗಸ್ಟ್​ 15ರ ಸಮಯದಲ್ಲಿ ಪರೇಡ್​ನಲ್ಲಿ ಜಿಲ್ಲಾಧಿಕಾರಿಗಳಿಗೆ ಸಿಕ್ಕ ಗೌರವ ನೋಡಿ, ನೌಕರಿ ಮಾಡಿದರೆ ಇಂತಹದನ್ನು ಮಾಡಬೇಕೆಂಬ ಆಸೆಯಾಯಿತಂತೆ. ಆದರೆ ಮನೆಯಲ್ಲಿ ಪಾಲಕರಿಗೆ ಇಂಜಿನಿಯರಿಂಗ್​, ಡಾಕ್ಟರ್​ ಓದಬೇಕೆಂಬ ಆಸೆಯಿದ್ದರಿಂದ ಬಲವಂತದಿಂದ ಇಂಜಿಯರ್​ ಓದಿದರು. ಕೊನೆಗೆ ಮನೆಯಲ್ಲಿನ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ತಾತ್ಕಲಿಕವಾಗಿ ಆ ಹುದ್ದೆಯ ಬಗ್ಗೆ ಯೋಚಿಸುವುದನ್ನೂ ಬಿಟ್ಟುಬಿಟ್ಟರು.

    ಇದನ್ನೂ ಓದಿ: Success Story | ನಾನು UPSC ಪರೀಕ್ಷೆ ಬರೆದಾಗ 9 ತಿಂಗಳ ಗರ್ಭಿಣಿ; ಮೊದಲ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದೆ!

    ಎಚ್​ಎಂಟಿಯಲ್ಲಿ ಅಪ್ರೆಂಟೀಸ್​

    1993ರಲ್ಲಿ ಬೆಂಗಳೂರಿನ ಎಚ್​ಎಂಟಿಯಲ್ಲಿ ಅಪ್ರೆಂಟೀಸ್​ ಆಗಿ ಸೇರಿಕೊಂಡ ರೆಡ್ಡಿ ಶಂಕರ ಬಾಬು ನಂತರ ಟಿವಿಎಸ್​ ಎಲೆಕ್ಟ್ರಾನಿಕ್ಸ್​ನಲ್ಲಿ ಕೆಲಸಕ್ಕೆ ಸೇರಿಕೊಂಡರು. ಕೆಲಸಕ್ಕೆ ಸೇರಿಕೊಂಡೆನೆಂದು ಸುಮ್ಮನೆ ಕೂರಲಿಲ್ಲ. ಸಾಮರ್ಥ್ಯವಿರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗೂ ಹಾಜರಾಗುತ್ತಿದ್ದರು. ಪ್ರಯತ್ನದ ಫಲವೆಂಬಂತೆ ಹೈದ್ರಾಬಾದ್​ ಸರ್ಕಾರಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಅವಕಾಶ ಒದಗಿಬಂತು. ಅಲ್ಲಿ ಸಂಬಳ ಟಿವಿಎಸ್​ಗಿಂತ ಕಡಿಮೆಯಿತ್ತು. ಆದರೆ ಅವರಿಗೆ ಬೇಕಾಗಿದ್ದು ಸಂಬಳವಲ್ಲ, ಕನಸು ನನಸು ಮಾಡಿಕೊಳ್ಳಬೇಕೆಂಬ ಛಲ. ಅಲ್ಲಿಂದ ಸಿವಿಲ್​ ಸರ್ವೀಸ್​ಗೆ ಸಿದ್ಧತೆ ನಡೆಸತೊಡಗಿದರು. ಮೊದಲ ಪ್ರಯತ್ನದಲ್ಲಿ ಸಂದರ್ಶನದವರೆಗೂ ಹೋದರೂ ಯಶಸ್ವಿಯಾಗಲಿಲ್ಲ. ಎರಡನೇ ಪ್ರಯತ್ನದಲ್ಲಿ ಗುರಿ ಸಾಧಿಸಿದರು. ಯುಪಿಎಸ್​ಸಿಯಲ್ಲಿ 464ನೇ ರ್ಯಾಂಕ್​ ಬಂತು. ಇದುವರೆಗೆ ಭಾರತದ ಅನೇಕ ರಾಜ್ಯಗಳಲ್ಲಿ ಕೆಲಸ ಮಾಡಿದ್ದು, ದೆಹಲಿಯಲ್ಲಿ ಸಿಇಒ ಆಗಿ ಕೆಲಸ ಮಾಡುವ ಸಂದರ್ಭದಲ್ಲಿ ರಾಷ್ಟ್ರ ಪ್ರಶಸ್ತಿ ಸಹ ಪಡೆದಿದ್ದಾರೆ. ದೆಹಲಿಯನ್ನು ಸ್ವಚ್ಛ ಭಾರತ ಪಟ್ಟಿಯಲ್ಲಿ ಮೊದಲನೇ ರ್ಯಾಂಕ್​ನಲ್ಲಿ ಬರುವಂತೆ ನೋಡಿಕೊಂಡ ಹೆಗ್ಗಳಿಕೆಯೂ ಇದೆ.

    ಕೈನಲ್ಲಿ ಕೆಲಸವಿರಲಿ

    “ನಮ್ಮ ಆರ್ಥಿಕ ಪರಿಸ್ಥಿತಿ ನೋಡಿಕೊಳ್ಳಬೇಕು. ಕೈನಲ್ಲಿ ಕೆಲಸವಿದ್ದರೆ ಉದ್ಯೋಗ ಭದ್ರತೆ ಇರುತ್ತದೆ. ಆ ನಂತರ ನಾವು ಪರೀಕ್ಷೆಗೆ ತಯಾರಿ ನಡೆಸಿದರೆ ಒಳಿತು. ನಾನು ಕೂಡ ಯಾವುದೇ ಕೋಚಿಂಗ್​ ಸೆಂಟರ್​ಗೆ ಹೋಗಲಿಲ್ಲ. ಆ ಶಕ್ತಿಯೂ ನಮಗಿರಲಿಲ್ಲ. ನಿರುದ್ಯೋಗಿಯಾಗಿದ್ದು, ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರೆ, ಪರೀಕ್ಷೆಯಲ್ಲಿ ಪಾಸಗದಿದ್ದರೆ ಮುಂದೇನು ಎಂಬ ಭಯ ಪೋಷಕರಿಗೂ ಇರುತ್ತದೆ. ಆದ್ದರಿಂದ ಅವರಿಗೂ ಭಯಪಡಿಸದೆ, ಯಾವಾಗಲೂ ನಾವು ಹುದ್ದೆಯಲ್ಲಿದ್ದುಕೊಂಡು ಪ್ರಯತ್ನಪಡಬೇಕು. ಮುಖ್ಯ ಪರೀಕ್ಷೆಯ ಸಮಯ ಬಿಟ್ಟು, ಬೇರೆ ಸಮಯದಲ್ಲಿ ರಜೆಯೇ ತೆಗೆದುಕೊಳ್ಳುತ್ತಿರಲಿಲ್ಲ. ಪರೀಕ್ಷೆ ತೆಗೆದುಕೊಂಡ 15 ಲಕ್ಷ ಜನರಲ್ಲಿ, ಕೇವಲ 1 ಸಾವಿರ ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ. ಆದ್ದರಿಂದ ನಮಗೆ ಯಾವಾಗಲೂ ಒಂದು ಆಯ್ಕೆ ಇರಲೇಬೇಕು. ನಮ್ಮ ಕೈನಲ್ಲಿ ಕೆಲಸ ಅಂತ ಇರಬೇಕು. ಸುಮ್ಮನೆ ಸಿವಿಲ್​ ಸರ್ವೀಸ್​ ಮಾಡ್ತೀನಿ ಅಂತ ಪ್ಯಾಶನ್​ ಮಾತ್ರ ಇಟ್ಟುಕೊಳ್ಳುವುದಲ್ಲ’

    ಇದನ್ನೂ ಓದಿ: Success Story: ಕೋಚಿಂಗ್ ಹೋಗಲೇ ಇಲ್ಲೆ… ಆದ್ರೂ ಐಎಎಸ್ ಪಾಸ್; ಏನಿದರ‌ ಗುಟ್ಟು..?

    ನೋಟ್ಸ್​ ಮಾಡಿ

    “ಪರೀಕ್ಷೆ ಬರೆಯುವ ಮುನ್ನ ನಮಗೆಷ್ಟು ಜ್ಞಾನವಿದೆ. ನಾವೇನು ಪ್ರಯತ್ನ ಮಾಡುತ್ತಿದ್ದೇವೆ, ಎಷ್ಟು ಪುಸ್ತಕಗಳನ್ನು ಓದುತ್ತಿದ್ದೇವೆಂಬ ಬಗ್ಗೆ ಗಮನವಿರಬೇಕು. ಈಗಂತೂ ಪುಸ್ತಕ ಖರೀದಿಗೆ ಖರ್ಚು ಮಾಡಬೇಕಿಲ್ಲ. ಇತ್ತೀಚೆಗೆ ಎಲ್ಲ ಮಾಹಿತಿಯೂ ಇಂಟರ್​ನೆಟ್​ನಲ್ಲೇ ಲಭ್ಯವಾಗಲಿದೆ. ಹಾಗೆಂದು ಅದನ್ನು ನೋಡಿ ಸುಮ್ಮನಾಗುವುದಲ್ಲ. ಓದಿಕೊಂಡು ನೋಟ್ಸ್​ ಮಾಡಬೇಕು. ಆ ನೋಟ್ಸ್​ ನಮಗೇ ಬಲ.

    ಬಹುತೇಕರು ಪತ್ರಿಕೆ ಅಂದೊಡನೆ ಕೇವಲ ರಾಜಕೀಯ ಸುದ್ದಿಯಿರುತ್ತದೆ ಅಂದುಕೊಳ್ಳುತ್ತಾರೆ. ಆದರೆ ಅದು ತಪ್ಪು ತಿಳುವಳಿಕೆ. ಹಣಕಾಸು, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ಪ್ರವಾಸೋದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ ಹೀಗೆ ಎಲ್ಲ ಮಾಹಿತಿ ಪತ್ರಿಕೆಗಳಲ್ಲಿ ಅಡಕವಾಗಿರುತ್ತದೆ. ನಾವು ಓದುವ ರೀತಿಯಲ್ಲಿರುತ್ತದೆ ಪತ್ರಿಕೆ. ಪತ್ರಿಕೆಗಳಲ್ಲಿ ಸಿಗುವ ಜ್ಞಾನ ಮತ್ತೆಲ್ಲಿಯೂ ಸಿಗುವುದಿಲ್ಲ. ಅದನ್ನು ಓದುತ್ತಾ ಒಂದು ವರ್ಷ ನೋಟ್ಸ್​ ತಯಾರು ಮಾಡಿಕೊಂಡರೆ ಜ್ಞಾನಭಂಡಾರವೇ ಸಿಗಲಿದೆ. ಪ್ರಚಲಿತ ಮಾಹಿತಿಗೆ ಬೇರೆಲ್ಲಿಯೂ ಹುಡುಕುವ ಪ್ರಮೇಯ ಬರುವುದಿಲ್ಲ. ಎಲ್ಲ ವಿಷಯಗಳ ಪ್ರಚಲಿತ ಮಾಹಿತಿ ಅಲ್ಲಿಯೆ ಸಿಗಲಿದೆ. ಇದನ್ನೆಲ್ಲಾ ಬಿಟ್ಟು ನಮಗೆ ಕಾಂಪಿಟೇಶನ್​ ಎಕ್ಸಾಂಗೆ ಪುಸ್ತಕ ಸಿಗುತ್ತಿಲ್ಲ, ಕೋಚಿಂಗ್​ ಸಿಗುತ್ತಿಲ್ಲ ಅನ್ನುವುದು ಸರಿಯಲ್ಲ. ಟೀ ಟೈಂನಲ್ಲಿ ಓದುವುದಕ್ಕೆ ಅಲ್ಲ ಪತ್ರಿಕೆಗಳಿರುವುದು, ಪತ್ರಿಕೆಗಳು ನಮ್ಮ ಜೀವನ ರೂಪಿಸುವುತ್ತವೆ ಎಂಬ ದೃಷ್ಟಿಯಿಂದ ಓದಿದರೆ ಸರಸ್ವತಿ ಕಟಾಕ್ಷ ಸುಲಭವಾಗಿ ಸಿಗಲಿದೆ’.

    ಇದನ್ನೂ ಓದಿ: Success Story: ಐಎಎಸ್​ ಆಗದಿದ್ದರೆ ಟೆಕ್ಸ್​ಟೈಲ್​ ಉದ್ಯಮ ಮಾಡಲು ನಿರ್ಧರಿಸಿದ್ದೆ!

    ದಾರಿ ಹುಡುಕಿದರೆ ಸಿಗಲಿದೆ

    “ಓದಲು ಈಗ ನೂರು ದಾರಿಯಿದೆ. ಹಾಗಾಗಿ ನಾವು ಪಾಲಕರಿಗೆ ದುಡ್ಡು ಕೇಳುತ್ತಾ ಹೊರೆ ಮಾಡಿ, ಕೋಚಿಂಗ್​ ತೆಗೆದುಕೊಳ್ಳಲು ಸರಿಯಲ್ಲ. ಈಗ ಎಲ್ಲಿಯೂ ಹೋಗುವ ಅವಶ್ಯವಿಲ್ಲ. ಒಂದು ವಿಷಯಕ್ಕೆ 14 ಗಂಟೆ ಮೀಸಲಿಟ್ಟು ಓದಿ, ಅಧ್ಯಯನ ನಡೆಸಿದರೆ ಆ ವಿಷಯ ನಮಗೆ ಒಲಿಯುತ್ತದೆ. ವಿವಿಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಲೈಬ್ರರಿ ಸೌಲಭ್ಯವಿದೆ. ಸರ್ಕಾರ ವಿದ್ಯಾರ್ಥಿವೇತನ ನೀಡುತ್ತಿದೆ. ಇದನ್ನೆಲ್ಲಾ ಸದುಪಯೋಗಪಡಿಸಿಕೊಳ್ಳಬೇಕು. ಹಳೆಯ ಪತ್ರಿಕೆಗಳನ್ನಿಟ್ಟುಕೊಂಡು ಅದಕ್ಕೆ ಸುಲಭವಾಗಿ ಉತ್ತರಿಸಿದರೆ ಗೊತ್ತಾಗಿಬಿಡುತ್ತದೆ ನಮ್ಮ ಜ್ಞಾನ ಹಾಗೂ ನಾವೆಲ್ಲಿದ್ದೇವೆ ಎಂಬುದು. ಅದಕ್ಕಿಂತ ಪರೀಕ್ಷಕ ಮತ್ತೊಂದಿಲ್ಲ. ಅದಕ್ಕೆ ಉತ್ತರಿಸುತ್ತಾ ನೀವು ಮಾನಸಿಕವಾಗಿ ಸಿದ್ಧರಾಗುತ್ತಾ ಹೋಗಬೇಕು. ಆತ್ಮಾವಲೋಕನ ಮಾಡಿಕೊಳ್ಳಬೇಕು. ಹಾಗೆಂದು ಹೆಗಲು ತಟ್ಟಿಕೊಳ್ಳುವುದಲ್ಲ, ತಪ್ಪುಗಳನ್ನು ಗುರುತಿಸುತ್ತಾ ಹೋಗಬೇಕು. ಯಾವುದರಲ್ಲಿ ನಮಗೆ ಜ್ಞಾನವಿದೆ ನೋಡಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಿದವರ ಬಳಿ ಒಳ್ಳೊಳ್ಳೆಯ ಪುಸ್ತಕಗಳು ಸಿಗುತ್ತವೆ. ಕೇಳಿ ಪಡೆದುಕೊಳ್ಳಿ. ದಾರಿ ಹುಡುಕಿದರೆ ಸಿಗುತ್ತದೆ. ಮನೆಯಲ್ಲಿ ಧ್ಯಾನ ಮಾಡಿದರೆ ಬರುವುದಿಲ್ಲ’.

    ನಮ್ಮ ಜೀವನ ನಮ್ಮ ಕೈಯ್ಯಲ್ಲಿದೆ

    “ಸಮಾಜ ಗೆಲ್ಲುವವರನ್ನೇ ನೆನಪಿಟ್ಟುಕೊಳ್ಳುವುದು. ತಂತ್ರ, ಯೋಜನೆ ಇದನ್ನೆಲ್ಲಾ ಬೇರೆಯವರು ಹೇಳಿಕೊಡುವಂತಹುದ್ದಲ್ಲ, ನಮಗೆ ನಾವೇ ಪರೀಕ್ಷಿಸಿಕೊಳ್ಳುವಂತಹುದ್ದು. ನಮ್ಮ ಜೀವನ ನಮ್ಮ ಕೈಯ್ಯಲ್ಲೇ ಇದೆ. ಪಾಸಾಗುವುದು ನಮ್ಮ ಕೈಯ್ಯಲ್ಲೇ ಇದೆ. ಸಾಧಿಸಲು ಎಲ್ಲರಿಗೂ ಅವಕಾಶವಿದೆ. ಹಾರ್ಡ್​ವರ್ಕ್​ ಎಂದರೆ ರಾತ್ರಿಯಿಡೀ ಒಂದು ವಿಷಯ ಓದುವುದಲ್ಲ, ಫೋಕಸ್​ ಇಟ್ಟುಕೊಂಡು ಪುನಃ ಪರೀಕ್ಷೆ ಮಾಡಿಕೊಳ್ಳಬೇಕು. ನಮಗೆ ನಾವೇ ಪರೀಕ್ಷೆ ಮಾಡಿಕೊಂಡರೆ ಬೇರೆಯವರು ಬಂದು ಫೇಲ್​ ಎಂದು ಹೇಳುವ ಅವಶ್ಯಕತೆ ಇರುವುದಿಲ್ಲ’.

    ಇದನ್ನೂ ಓದಿ: Success Story | ಐಎಎಸ್ ಆಗಲು ‘ಪೃಥ್ವಿ’ ಸಿನಿಮಾ ಪ್ರೇರಣೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts