More

    ಪ್ರಧಾನಿ ವಿರುದ್ಧ ರಾಹುಲ್ ಹೇಳಿಕೆಗೆ ಲೋಕಸಭೆಯಲ್ಲಿ ಆರೋಗ್ಯ ಸಚಿವರಿಂದ ಖಂಡನೆ: ಡಾ.ಹರ್ಷವರ್ಧನ್ ಮೇಲೆರಗಲು ಪ್ರಯತ್ನಿಸಿದ ಕಾಂಗ್ರೆಸ್ ಸಂಸದ, ಪ್ರತಿಪಕ್ಷ ಸದಸ್ಯರ ಪ್ರತಿಭಟನೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಗುರುವಾರ ಲೋಕಸಭೆಯಲ್ಲಿ ರಾಹುಲ್ ಗಾಂಧಿಯವರು ನೀಡಿದ ಹೇಳಿಕೆಯನ್ನು ಖಂಡಿಸಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿಕೆ ನೀಡಿದ್ದರಿಂದ, ಪ್ರತಿಪಕ್ಷ ಸದಸ್ಯರಿಂದ ತೀವ್ರ ಪ್ರತಿಭಟನೆ ವ್ಯಕ್ತವಾಯಿತು.

    ಪ್ರಶ್ನೋತ್ತರ ಅವಧಿಯಲ್ಲಿ ರಾಹುಲ್ ಗಾಂಧಿ ಅವರು ಮಡಿಕಲ್ ಕಾಲೇಜು ಸ್ಥಾಪನೆ ಕುರಿತ ಪ್ರಶ್ನೆಯನ್ನು ಕೇಳಿದ್ದರು. ಇದಕ್ಕೆ ಉತ್ತರಿಸುವುದಕ್ಕೆ ಎದ್ದು ನಿಂತ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು, ಗಾಂಧಿ ಅವರ ಪ್ರಶ್ನೆಗೆ ಉತ್ತರಿಸುವ ಮುನ್ನ ಪ್ರಧಾನಿಯವರ ಬಗ್ಗೆ ಅವರು ನೀಡಿದ ಹೇಳಿಕೆ ಕುರಿತು ಲಿಖಿತ ಹೇಳಿಕೆ ಓದುವುದಿದೆ ಎಂದು ಹೇಳಿದರು.

    ಪ್ರಧಾನಿಯವರ ಬಗ್ಗೆ ರಾಹುಲ್ ಗಾಂಧಿಯವರು ನೀಡಿರುವ ಹೇಳಿಕೆ ಮತ್ತು ಅಲ್ಲಿ ಬಳಸಿರುವ ಪದಗಳು ಖಂಡನೀಯವಾದುದು ಎಂದು ಸಚಿವ ಹರ್ಷವರ್ಧನ್ ಅವರು ಲಿಖಿತ ಹೇಳಿಕೆ ಓದಲಾರಂಭಿಸಿದರು. ಕೂಡಲೇ ಸ್ಪೀಕರ್ ಓಂ ಬಿರ್ಲಾ ಅವರು, ಪ್ರಶ್ನೆ ಉತ್ತರ ನೀಡುವುದಕ್ಕೆ ಸೀಮಿತಗೊಳಿಸಬೇಕು ಎಂದು ಸಚಿವರಿಗೆ ನಿರ್ದೇಶಿಸಿದರು. ಆದರೆ, ಹರ್ಷವರ್ಧನ್ ಲಿಖಿತ ಹೇಳಿಕೆ ಓದುವುದನ್ನು ಮುಂದುವರಿಸಿದರು.

    ಸಚಿವರ ನಿಲುವನ್ನು ಖಂಡಿಸಿ ಕಾಂಗ್ರೆಸ್ ಸಂಸದರು ಸ್ಪೀಕರ್ ಎದುರು ಬಂದು ಪ್ರತಿಭಟನೆ ಆರಂಭಿಸಿದರು. ತಮಿಳುನಾಡಿನ ಕಾಂಗ್ರೆಸ್ ಸಂಸದ ಮನಿಕಾ ಠಾಗೋರ್​ ಆಡಳಿತ ಪಕ್ಷದ ಆಸನಗಳತ್ತ ಧಾವಿಸಿ ಹರ್ಷವರ್ಧನ್ ಅವರ ಮೇಲೆರಗಲು ಮುಂದಾದರು. ವರ್ಧನ್ ಅವರು ಟ್ರಜರಿ ಬೆಂಚ್​ನ ಎರಡನೇ ಸಾಲಿನಲ್ಲಿದ್ದರು.ಕೂಡಲೇ ಉತ್ತರ ಪ್ರದೇಶದ ಬಿಜೆಪಿ ಸದಸ್ಯ ಬ್ರಿಜ್ ಭೂಷಣ್ ಶರಣ್ ಸಿಂಗ್ ಠಾಗೋರ್ ಅವರನ್ನು ತಡೆದು, ಹರ್ಷವರ್ಧನ್ ಬಳಿ ಸಾಗದಂತೆ ನೋಡಿಕೊಂಡರು.

    ಕೇರಳದ ಕಾಂಗ್ರೆಸ್ ಸಂಶದ ಹಿಬಿ ಈಡನ್ ಕೂಡ ಮಧ್ಯಪ್ರವೇಶಿಸಲು ಪ್ರಯತ್ನಿಸಿದ್ದರು. ಸ್ಮೃತಿ ಇರಾನಿ ಸೇರಿದಂತೆ ಹಲವು ಸಚಿವರು, ಸಂಸದರು ಹರ್ಷವರ್ಧನ್ ಅವರತ್ತ ಮುನ್ನುಗ್ಗಿ ಬರುತ್ತಿದ್ದ ಕಾಂಗ್ರೆಸ್ ಸಂಸದರನ್ನು ತಡೆಯಲು ಪ್ರಯತ್ನಿಸಿದರು. ಪರಿಸ್ಥಿತಿ ತಿಳಿಗೊಳಿಸುವ ಸಲುವಾಗಿ ಸ್ಪೀಕರ್ ಓಂ ಬಿರ್ಲಾ ಅವರು ಲೋಕಸಭೆ ಕಲಾಪವನ್ನು ಒಂದು ಗಂಟೆ ತನಕ ಮುಂದೂಡಿದ್ದರು.

    ಆಗಿರುವುದೇನು?: ದೆಹಲಿ ಚುನಾವಣಾ ಕಣದಲ್ಲಿ ರಾಹುಲ್ ಗಾಂಧಿ ಪ್ರಚಾರದ ವೇಳೆ, ಇನ್ನಾರು ತಿಂಗಳು ಕಳೆದರೆ ಮೋದಿ ಅವರನ್ನು ಯುವಕರು ಕೋಲು ತೆಗೆದುಕೊಂಡು ಹೊಡೆಯಲಿದ್ದಾರೆ ಎಂದು ಹೇಳಿದ್ದರು.

    ಇದಕ್ಕೆ ಪ್ರತಿಯಾಗಿ, ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಲೋಕಸಭೆಯಲ್ಲಿ, ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಹೊಡೆತ ತಿನ್ನುವುದಕ್ಕೆ ಶರೀರವನ್ನು ಹುರಿಗೊಳಿಸಲು ದಿನವೂ ಇನ್ನು ಸೂರ್ಯನಮಸ್ಕಾರದ ಪ್ರಮಾಣ ಹೆಚ್ಚಿಸುವುದಾಗಿ ಹೇಳಿದ್ದರು.

    ಪ್ರಧಾನಿಯವರ ಈ ಪ್ರತಿಕ್ರಿಯೆ ತನ್ನ ಹೇಳಿಕೆಗೆ ಸಂಬಂಧಿಸಿದ್ದು ಎಂಬುದು ರಾಹುಲ್​ ಗಾಂಧಿ ಅವರಿಗೆ ತಡವಾಗಿ ಅರಿವಾಗಿದ್ದು, ಅವರ ಪ್ರತಿಕ್ರಿಯೆ ವಿಡಿಯೋ #Tubelite #Tubelight #TubelightRahul ಇತ್ಯಾದಿ ಹ್ಯಾಷ್ ಟ್ಯಾಗ್ ಮೂಲಕ ಟ್ರೆಂಡ್ ಆಗಿತ್ತು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts