More

    ಮೇಲ್ಮನೆ ಚುನಾವಣೆ; ಜವರಾಯಿಗೌಡ ಪರ ಜೆಡಿಎಸ್ ವರಿಷ್ಠರ ಒಲವು?

    ಬೆಂಗಳೂರು: ವಿಧಾನ ಪರಿಷತ್ತಿನ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣಾ ಪ್ರಚಾರ ಭರಾಟೆ ನಡುವೆಯೇ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯೂ ಘೋಷಣೆಯಾಗಿದೆ.

    ಒಟ್ಟು 11 ಸ್ಥಾನಗಳಿಗೆ ಜೂ.13 ರಂದು ನಡೆಯುವ ಚುನಾವಣೆಗೆ ರಾಜಕೀಯ ಪಕ್ಷಗಳಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ. ಕೆಳಮನೆಯ ಆಯಾ ಪಕ್ಷಗಳ ಸದಸ್ಯರ ಬಲದ ಮೇಲೆ ಕಾಂಗ್ರೆಸ್ 7, ಬಿಜೆಪಿ 3, ಜೆಡಿಎಸ್ 1 ಸ್ಥಾನ ಪಡೆಯಬಹುದಾಗಿದೆ.

    ಜೆಡಿಎಸ್‌ನ ಒಂದು ಸ್ಥಾನಕ್ಕೆ ಇನ್ನಿಲ್ಲದ ಸ್ಪರ್ಧೆ ಏರ್ಪಟ್ಟಿದೆ. ಪಕ್ಷದ ಪ್ರಭಾವಿಗಳು ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ವಿಧಾನ ಪರಿಷತ್ ಸದಸ್ಯರಾಗಿದ್ದ ಬಿ.ಎಂ.ಫಾರೂಕ್, ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಕೂಡ ಈ ಸ್ಥಾನದ ಆಕಾಂಕ್ಷಿಗಳು. ಈ ಇಬ್ಬರೂ ಪಕ್ಷಕ್ಕೆ ನಿಷ್ಠರಾಗಿದ್ದಾರೆ. ಈ ಇಬ್ಬರೂ ಜೆಡಿಎಸ್ ಪರಮೋಚ್ಛ ನಾಯಕ ಎಚ್.ಡಿ.ದೇವೇಗೌಡರ ಮೂಲಕ ವಿಧಾನ ಪರಿಷತ್ ಪ್ರವೇಶ ಪಡೆಯಲು ತೆರೆಮರೆಯ ಪಯತ್ನ ನಡೆಸಿದ್ದಾರೆ ಎನ್ನಲಾಗಿದೆ.

    ಈ ನಡುವೆ ಯಶವಂತಪುರ ವಿಧಾನಸಭೆ ಚುನಾವಣೆಯಲ್ಲಿ ನಿರಂತರ ಮೂರು ಬಾರಿ ಸೋಲು ಕಂಡ ಜಯವರಾಯಿಗೌಡ ಹೆಸರು ಕೂಡ ಜೆಡಿಎಸ್ ಪಾಳೆಯದಲ್ಲಿ ಮುನ್ನೆಲೆಗೆ ಬಂದಿದೆ.

    ಕಳೆದ ಚುನಾವಣೆ ಪ್ರಚಾರದಲ್ಲಿ ಜವರಾಯಿಗೌಡ, ‘ನನಗೆ ಚುನಾವಣೆ ಬೇಕಿರಲಿಲ್ಲ. ಅಧಿಕಾರ ಇಲ್ಲದೇ ಇದ್ದರೂ ಜನ ಸೇವೆ ಮಾಡಲು ಹಿಂದೇಟು ಹಾಕಿಲ್ಲ. ಚುನಾವಣೆಗೆ ಸಾಕಷ್ಟು ವೆಚ್ಚ ಮಾಡಿದ್ದೇನೆ. ಆರ್ಥಿಕವಾಗಿ ಶಕ್ತಿ ಇಲ್ಲದೇ ಇದ್ದರೂ ಚುನಾವಣೆ ಎದುರಿಸುತ್ತಿದ್ದೇನೆ. ಈ ಚುನಾವಣೆ ನನ್ನ ಅಳಿವು-ಉಳಿವಿನ ಪ್ರಶ್ನೆಯಾಗಿದೆ’ ಎಂದು ಭಾವನಾತ್ಮಕ ಮಾತುಗಳನ್ನಾಡಿದ್ದರು. ಆದರೂ ಚುನಾವಣೆಯಲ್ಲಿ ಸೋಲು ಕಂಡರು.

    ಜವರಾಯಿಗೌಡರ ಚುನಾವಣೆಯನ್ನು ಜೆಡಿಎಸ್ ವರಿಷ್ಠರು ಕೂಡ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಖುದ್ದು ದೇವೇಗೌಡರೇ ಚುನಾವಣಾ ಅಖಾಡಕ್ಕಿಳಿದು ಪ್ರಚಾರ ಮಾಡಿದ್ದರು. ಕುಮಾರಸ್ವಾಮಿ ಕೂಡ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದರು. ಆದಾಗ್ಯೂ ಜವರಾಯಿಗೌಡ ಪರಾಭವಗೊಂಡರು. ಈ ಸೋಲಿನಿಂದ ಕಂಗೆಟ್ಟಿರುವ ಹಾಗೂ ಆರ್ಥಿಕವಾಗಿಯೂ ದೊಡ್ಡ ಮಟ್ಟದ ಹೊಡೆತ ತಿಂದಿರುವ ಜವರಾಯಿಗೌಡಗೆ ಮೇಲ್ಮನೆಗೆ ಅವಕಾಶ ಮಾಡಿಕೊಡಲು ಕುಮಾರಸ್ವಾಮಿ ಆಲೋಚಿಸಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.

    ಬಿ.ಎಂ. ಫಾರೂಕ್, ಕುಪೇಂದ್ರರೆಡ್ಡಿ ಹಾಗೂ ಜವರಾಯಿಗೌಡರ ನಡುವೆ ಬಿರುಸಿನ ಸ್ಪರ್ಧೆ ಇದ್ದು, ಹೈಕಮಾಂಡ್ ಯಾರ ಕಡೆಗೆ ಒಲವು ತೋರುತ್ತದೆ ಎಂಬುದು ಮೂರ‌್ನಾಲ್ಕು ದಿನದಲ್ಲಿ ಗೊತ್ತಾಗಲಿದೆ.
    ——————————

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts