More

    500 ಶಾಲೆಗಳು ಕೆಪಿಎಸ್‌ಗಳಾಗಿ ಮೇಲ್ದರ್ಜೆಗೆ

    ಕಡೂರು: ಮುಂಬರುವ ಶೈಕ್ಷಣಿಕ ವರ್ಷದೊಳಗೆ 500 ಶಾಲೆಗಳನ್ನು ಕೆಪಿಎಸ್‌ಗಳಾಗಿ ಮೇಲ್ದರ್ಜೆಗೇರಿಸುವ ಗುರಿ ಇಟ್ಟುಕೊಂಡಿದ್ದೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

    ತಾಲೂಕಿನ ಮರವಂಜಿ ಗ್ರಾಮದಲ್ಲಿ ಭಾನುವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಜ್ಞಾನದೀವಿಗೆ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
    ರಾಜ್ಯದಲ್ಲಿ ಎರಡು ಗ್ರಾಪಂಗೆ ಒಂದರಂತೆ ಒಟ್ಟು ಮೂರು ಸಾವಿರ ಕೆಪಿಎಸ್‌ಗಳನ್ನು ಆರಂಭಿಸುವ ಯೋಜನೆ ಇದೆ. ಗ್ರಾಮಗಳಲ್ಲಿ ಗುಡಿಗಳನ್ನು ಚಿಕ್ಕದು ಮಾಡಿ ಶಾಲೆಗಳನ್ನು ದೊಡ್ಡದಾಗಿಸಬೇಕಿದೆ. ನಮ್ಮ ಶಾಲೆ ನಮ್ಮ ಜವಾಬ್ದಾರಿ ಎಂದುಕೊಂಡು ಹಿರಿಯ ವಿದ್ಯಾರ್ಥಿಗಳು ತಾವು ಓದಿದ ಶಾಲೆ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
    ಬಹುತೇಕ ಎಲ್ಲ ಗ್ರಾಮಗಳಲ್ಲಿ ಜನರು ಗುಡಿ ಗೋಪುರ ಕಟ್ಟಲು ಹಣ ನೀಡುತ್ತಾರೆ. ಅದೇ ರೀತಿ ಜ್ಞಾನದೇಗುಲ ಅಭಿವೃದ್ಧಿಗೆ ನೆರವು ನೀಡಬೇಕು. ಪ್ರಸ್ತುತ ರಾಜ್ಯದಲ್ಲಿ ಅನುದಾನಿತ ಸೇರಿ 76 ಸಾವಿರ ಶಾಲೆಗಳಿದ್ದು, ಈ ಪೈಕಿ 48 ಸಾವಿರ ಸರ್ಕಾರಿ ಶಾಲೆಗಳಿವೆ. 1.20 ಕೋಟಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಎಲ್ಲ ಇಲಾಖೆಗಳಿಗಿಂತ ಶಿಕ್ಷಣ ಇಲಾಖೆ ವ್ಯಾಪ್ತಿ ದೊಡ್ಡದು ಎಂದು ಹೇಳಿದರು.
    ಈ ಶಾಲೆಗೆ ಹೆಚ್ಚುವರಿ ಕೊಠಡಿಗಳು, ಕನ್ನಡದ ಜತೆ ಇಂಗ್ಲಿಷ್ ಮಾಧ್ಯಮ, ಸುಸಜ್ಜಿತ ಕ್ರೀಡಾಂಗಣ ಒದಗಿಸುವ ಕಾರ್ಯ ಮಾಡುತ್ತೇನೆ. ಕಡೂರು ಕ್ಷೇತ್ರದಲ್ಲಿ ಕೆಪಿಎಸ್‌ಗಳಾಗಿ ಮೇಲ್ದರ್ಜೆಗೇರಿಸಬೇಕಾದ ಶಾಲೆಗಳ ಪಟ್ಟಿಯನ್ನು ಕೂಡಲೇ ಅಧಿಕಾರಿಗಳು ತಯಾರಿಸಿ ಇಲಾಖೆಗೆ ಸಲ್ಲಿಸಬೇಕಿದೆ. ಅಗತ್ಯ ಅನುದಾನ ದೊರಕಿಸಿಕೊಡುವ ಕಾರ್ಯ ಮಾಡಲಾಗುವುದು ಎಂದರು.
    ಈ ಹಿಂದೆ ಮಕ್ಕಳಿಗೆ ಶಿಕ್ಷಣ ಕೊಡಿಸುವುದೇ ಬಹುದೊಡ್ಡ ಸವಾಲಾಗಿತ್ತು. ಆದರೆ ಕಾಲ ಬದಲಾಗಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲೇಬೇಕೆಂಬ ಕಾಳಜಿ ತೋರುತ್ತಿದ್ದಾರೆ. ಇದಕ್ಕೆ ಪೂರಕವಾಗಿ ನಾನು ದ್ವಿಭಾಷಾ ಆಂಗ್ಲ ಮಾಧ್ಯಮ ಶಾಲೆಗಳ ತರಗತಿಗಳನ್ನು ಆರಂಭಿಸಲಾಗುವುದು. ಈ ನಡುವೆ ಮಾತೃಭಾಷೆ ಕಲಿಕೆ ಕಡ್ಡಾಯ ಮಾಡಲಾಗಿದೆ ಎಂದು ತಿಳಿಸಿದರು.
    ಸಚಿವ ಮಧು ಬಂಗಾರಪ್ಪ ಹಾಗೂ ಶಾಸಕ ಕೆ.ಎಸ್.ಆನಂದ್ 66 ಲಕ್ಷ ರೂ. ವೆಚ್ಚದಲ್ಲಿ ಜೆಜೆಎಂ ಯೋಜನೆ, ಸರ್ಕಾರಿ ಪ್ರಾಥಮಿಕ ಶಾಲೆಯ ಭೋಜನಾಲಯ ಹಾಗೂ ಹೈಟೆಕ್ ಶೌಚಗೃಹ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಹಿರಿಯ ವಿಜ್ಞಾನಿ ಎಂ.ಎಸ್.ಬಾಲಕೃಷ್ಣ, ತಹಸೀಲ್ದಾರ್ ಎಂ.ಪಿ.ಕವಿರಾಜ್, ಜಿಪಂ ಮಾಜಿ ಸದಸ್ಯರಾದ ಶರತ್ ಕೃಷ್ಣಮೂರ್ತಿ, ಷಣ್ಮುಖಭೋವಿ, ಕುರುಬ ಸಮಾಜದ ತಾಲ್ಲೂಕು ಅಧ್ಯಕ್ಷ ಹೋಚಿಹಳ್ಳಿ ಭೋಗಪ್ಪ, ಯರದಕೆರೆ ರಾಜಪ್ಪ, ಗ್ರಾಪಂ ಅಧ್ಯಕ್ಷೆ ಶರಾವತಿ, ಉಪಾಧ್ಯಕ್ಷ ರಂಗನಾಥ್, ಡಿಡಿಪಿಐ ಪ್ರಕಾಶ್, ಬಿಇಒ ಸಿದ್ದರಾಜನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷೆ ಮಮತಾ ಪುನೀತ್, ತಿಪ್ಪೇಶ್, ಎಂ.ಆರ್.ಮರುಳಸಿದ್ದಪ್ಪ ಇತರರಿದ್ದರು.
    ಸ್ಪರ್ಧಾತ್ಮಕ ಗುಣ ಹೆಚ್ಚು: ಖಾಸಗಿಗಿಂತ ಸರ್ಕಾರಿ ಶಾಲೆಗಳ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಹೆಚ್ಚಾಗಿರುವುದು ಹೆಮ್ಮೆಯ ಸಂಗತಿ. ಎಷ್ಟೋ ಕಡೆ ನಿರ್ಲಕ್ಷೃ ತೋರಿದ್ದರಿಂದ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಇಂದಿನ ಕಾಲಘಟ್ಟದಲ್ಲಿ ಶತಮಾನ ಕಂಡ ಸರ್ಕಾರಿ ಶಾಲೆ ಬಗ್ಗೆ ಗ್ರಾಮಸ್ಥರು ತೋರಿರುವ ಅಭಿಮಾನ ಬಹುದೊಡ್ಡದು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದು, ಈ ಬಾರಿ ಬಜೆಟ್‌ನಲ್ಲಿ 44 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಕ್ಷೇತ್ರದಲ್ಲಿ ಕೆಪಿಎಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ದಿಸೆಯಲ್ಲಿ ಮಧು ಬಂಗಾರಪ್ಪ ಅವರ ಕಾರ್ಯವೈಖರಿ ಶ್ಲಾಘನೀಯ. ಇದರ ಜತೆಗೆ ಬರಪೀಡಿತ ಕಡೂರು ಕ್ಷೇತ್ರದ ಶಾಲೆಗಳಿಗೆ ಹೆಚ್ಚಿನ ಅನುದಾನ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts