More

    ನವೀಕರಣ ಸಂಸ್ಕರಣಾ ಶುಲ್ಕ ರದ್ದತಿಗೆ ಆಗ್ರಹ: ಹರಪನಹಳ್ಳಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘ ಪ್ರತಿಭಟನೆ

    ಹರಪನಹಳ್ಳಿ: ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಅವೈಜ್ಞಾನಿಕವಾಗಿ ನಿಯಮಗಳನ್ನು ಹೇರುತ್ತಿದೆಂದು ಆರೋಪಿಸಿ ವಿವಿಧ ಮಠಾಧೀಶರ ನೇತೃತ್ವದಲ್ಲಿ ಖಾಸಗಿ ಶಾಲೆಯ ಶಿಕ್ಷಕರು, ಆಡಳಿತ ಮಂಡಳಿ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿ, ಉಪತಹಸೀಲ್ದಾರ್ ಪ್ರಭಾಕರಗೌಡಗೆ ಮನವಿ ಸಲ್ಲಿಸಿದರು.

    ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ನವೀಕರಣಕ್ಕೆ ಕಟ್ಟಡ, ಸುರಕ್ಷತೆ ಮತ್ತು ಅಗ್ನಿ ಸುರಕ್ಷತೆ ಹೆಸರಿನಲ್ಲಿ ಅನೇಕ ದಾಖಲೆಗಳನ್ನು ಕಡ್ಡಾಯಗೊಳಿಸಿರುವುದರಿಂದ ಮಧ್ಯಮ ಹಾಗೂ ಗ್ರಾಮೀಣ ಭಾಗದ ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದಿವೆ. ಖಾಸಗಿ ಶಾಲೆಗಳನ್ನು ಮುಚ್ಚಿದರೆ ಬಡ ಮಕ್ಕಳ ಶಿಕ್ಷಣವನ್ನು ಸರ್ಕಾರ ಕಸಿದುಕೊಂಡಂತಾಗುತ್ತದೆ. ಅಲ್ಲದೆ ಅನೇಕ ಶಿಕ್ಷಕರು, ಬೋಧಕೇತರ ಸಿಬ್ಬಂದಿ ಜೀವನ ಬೀದಿಗೆ ಬೀಳಲಿದೆ. ಆದ್ದರಿಂದ ಶಾಲಾ ನಿಯಮಗಳನ್ನು ಸರಳೀಕರಣಗೊಳಿಸಬೇಕು ಎಂದು ಒತ್ತಾಯಿಸಿದರು.

    ಬೇಡಿಕೆಗಳು: ಖಾಸಗಿ ಶಾಲೆಗಳಿಗೆ 2018ರಂತೆ ನಿಯಮ ರೂಪಿಸಬೇಕು. ಶಾಲೆಗಳ ನವೀಕರಣಕ್ಕೆ ವಿಧಿಸಿರುವ ಸಂಸ್ಕರಣಾ ಶುಲ್ಕ ರದ್ದುಗೊಳಿಸಬೇಕು. ನವೀಕರಣ ಅಧಿಕಾರವನ್ನು ಸ್ಥಳೀಯ ಬಿಇಒಗೆ ನೀಡಬೇಕು. 1995ರ ನಂತರ ಆರಂಭವಾದ ಮಾತೃಭಾಷಾ ಶಿಕ್ಷಣ ಸಂಸ್ಥೆಗಳಿಗೆ ಅನುದಾನಕ್ಕೆ ಒಳಪಡಿಸಬೇಕು. ಆರ್‌ಟಿಇ ನಿಯಮಕ್ಕೆ ತಿದ್ದುಪಡಿ ತರುವ ಮೂಲಕ ಎಲ್ಲ ಬಡ ಮಕ್ಕಳು ಖಾಸಗಿ ಶಾಲೆಗಳಲ್ಲಿ ಓದುವಂತಾಗಬೇಕು. ಡಿ.23ರೊಳಗೆ ಬೇಡಿಕೆ ಈಡೇರಿಸದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

    ನಿಚ್ಚವ್ವನಹಳ್ಳಿ ಹಾಲಸ್ವಾಮೀಜಿ, ಮುಖಂಡ ಮೌಲಾನ ಅಬ್ದುಲ್ ವಹಬ್‌ಸಾಬ್, ರೂಪ್ ಸಂಸ್ಥೆಯ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, ಸಂಚಾಲಕ ಸುನಿಲ್ ಹುಡಗಿ, ಮುನಿಯಪ್ಪ, ಉಮಾಶಂಕರ, ಬಸವರಾಜ ಕೊಂಡಜ್ಜಿ, ಶಾಹಿದ್ ತಹಸೀಲ್ದಾರ್, ಮಂಜುನಾಥ ಪೂಜಾರ, ಬಸವರಾಜ, ದಾದಾಪೀರ್, ಅರುಣ ಪೂಜಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts