More

    ಬಾವಿಗಳ ನೀರು ಕುಡಿಯಲು ಅಯೋಗ್ಯ

    ಕಾರವಾರ: ಸಣ್ಣ ನೀರಾವರಿ ಇಲಾಖೆ ನಿರ್ವಿುಸಿದ ಖಾರ್ಲ್ಯಾಂಡ್ ಒಡ್ಡನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ತಾಲೂಕಿನ ಹಣಕೋಣ ಗ್ರಾಪಂ ವ್ಯಾಪ್ತಿಯ ಅಂಬಿಗವಾಡ, ಪಾಟ್ಲೆವಾಡ, ಬಾಬುನಾಯ್ಕ ವಾರ್ಡ್​ಗಳಲ್ಲಿ 10 ಕ್ಕೂ ಹೆಚ್ಚು ಬಾವಿಗಳ ನೀರು ಕುಡಿಯಲು ಅಯೋಗ್ಯವಾಗಿವೆ. ಕುಡಿಯಲು ನೀರು ಒದಗಿಸಬೇಕು ಎಂದು ಗ್ರಾಮಸ್ಥರು ಜಿಪಂ ಸಿಇಒ ಅವರಿಗೆ ಮನವಿ ಮಾಡಿದ್ದಾರೆ.

    ಗ್ರಾಮದಲ್ಲಿ 35 ಕ್ಕೂ ಹೆಚ್ಚು ಮನೆಗಳಿದ್ದು, 10 ರಷ್ಟು ಬಾವಿಗಳಿವೆ. ದೂರದಲ್ಲಿರುವ ಕಾಳಿ ನದಿಯ ಹಿನ್ನಿರು ಉಬ್ಬರದ ಸಮಯದಲ್ಲಿ ಮನೆಗಳ ಸಮೀಪದ ಖಾಲಿ ಜಾಗಗಳಿಗೆ ನುಗ್ಗಿ ನಿಲ್ಲುತ್ತದೆ. ಇದರಿಂದ ಬಾವಿಗಳ ನೀರು ಬಳಕೆಗೆ ಅಯೋಗ್ಯವಾಗುತ್ತದೆ. ಇದನ್ನು ತಡೆಯಲು ಹಲ ವರ್ಷಗಳ ಹಿಂದೆಯೇ ಗ್ರಾಮದ ಪಕ್ಕ ಖಾರ್ಲ್ಯಾಂಡ್ ಒಡ್ಡು ನಿರ್ಮಾಣ ಮಾಡಲಾಗಿದೆ. ಆದರೆ, ಅದನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಒಡ್ಡು ಪ್ರಯೋಜನಕ್ಕೆ ಬಾರದಂತಾಗಿದೆ ಎಂದು ದೂರಿದ್ದಾರೆ. ಸದ್ಯ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಅದಕ್ಕೆ ತುರ್ತು ಕ್ರಮ ವಹಿಸಬೇಕು ಎಂದು ವಿನಂತಿಸಿದ್ದಾರೆ.

    ಹಲಗೆ ಅಳವಡಿಕೆ: ಹಣಕೋಣಜೂಗ ರಸ್ತೆಯ ಇಕ್ಕೆಲಗಳ ಖಾರ್ಲ್ಯಾಂಡ್ ಒಡ್ಡು ನಿರ್ವಹಣೆ ಇಲ್ಲದೇ ಹಾಳಾದ ಬಗ್ಗೆ, ಗ್ರಾಮಸ್ಥರ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ವಿಜಯವಾಣಿ ಮಾರ್ಚ್ 22 ರಂದು ವರದಿ ಪ್ರಕಟಿಸಿತ್ತು. ಪರಿಣಾಮವಾಗಿ ಒಡ್ಡಿನ ಗೇಟ್​ಗಳಿಗೆ ಸಣ್ಣ ನೀರಾವರಿ ಇಲಾಖೆ ಹಲಗೆಗಳನ್ನು ಅಳವಡಿಸಿದೆ. ಆದರೆ, ಒಡ್ಡಿನ ಗೇಟ್​ಗಳು ತುಕ್ಕು ಹಿಡಿದು ಶಿಥಿಲಾವಸ್ಥೆ ತಲುಪಿದ್ದರಿಂದ ಹಲಗೆ ಅಳವಡಿಕೆ ನಂತರವೂ ಉಪ್ಪು ನೀರು ಒಳನುಗ್ಗುತ್ತಿದೆ. ಇದರಿಂದ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂದು ಗ್ರಾಮಸ್ಥ ಜಗದೀಶ ಗಂಗೆಪುತ್ರ ದೂರಿದ್ದಾರೆ. ಸಮಸ್ಯೆಗೆ ಶಾಶ್ವತ ಪರಿಹಾರ ಕ್ರಮ ಜರುಗಿಸುವಂತೆ ಜಿಪಂ ಸಿಇಒಗೆ ಅವರು ಮನವಿ ಮಾಡಿದ್ದಾರೆ.

    ಹಣಕೋಣ ಖಾರ್ಲ್ಯಾಂಡ್ ಒಡ್ಡಿನ ಗೇಟ್​ಗೆ ಪ್ರತಿ ವರ್ಷ ಹಲಗೆ ಹಾಕಿದರೂ ಅದು ನಾಪತ್ತೆಯಾಗುತ್ತದೆ. ನಿರ್ವಹಣೆಗೆ ನಮಗೆ ಯಾವುದೇ ಅನುದಾನವಿಲ್ಲ. ಇದರಿಂದ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದೇವೆ. ಖಾರ್ಲ್ಯಾಂಡ್ ಒಡ್ಡುಗಳ ರಿಪೇರಿಗೆ ಈ ಬಜೆಟ್​ನಲ್ಲಿ ಸರ್ಕಾರ ಅನುದಾನ ಘೊಷಿಸಿದೆ. ಪ್ಲ್ಯಾಪ್ ಗೇಟ್ ಅಳವಡಿಕೆಗೆ ಚಿಂತನೆ ನಡೆದಿದೆ.

    ವಿನೋದ ನಾಯ್ಕ

    ಸಣ್ಣ ನೀರಾವರಿ ಇಲಾಖೆ ಎಇಇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts