More

    ಅಕಾಲಿಕ ಮಳೆಯಿಂದ ರಾಗಿ ಬೆಳೆಗೆ ಹಾನಿ

    ಬೈಲಕುಪ್ಪೆ: ಮೂರ್ನಾಲ್ಕು ದಿನಗಳಿಂದ ಆಗಾಗ್ಗೆ ಸುರಿಯುತ್ತಿರುವ ಅಕಾಲಿಕ ಮಳೆ ಹಾಗೂ ಮೋಡ ಕವಿದ ವಾತಾವರಣದಿಂದಾಗಿ ಕಟಾವು ಮಾಡಿರುವ ರಾಗಿ, ಹುರುಳಿ ಹಾಗೂ ಅವರೆಕಾಯಿ ಬೆಳೆಗೆ ತೊಂದರೆಯಾಗಿದೆ.

    ಈಗಾಗಲೇ ರಾಗಿ ಕಟಾವು ಮಾಡಿರುವ ರೈತರಿಗೆ ತುಂತುರು ಮಳೆ ಅಡ್ಡಿಯಾಗಿದೆ. ಮುಂಗಾರು ಬೀಜ ಬಿತ್ತುವ ವೇಳೆ ಮಳೆಯಾಗಲಿಲ್ಲ. ಈಗ ಫಸಲು ಬಂದಿರುವ ವೇಳೆ ಅಕಾಲಿಕ ಮಳೆ ಸುರಿಯುತ್ತಿದ್ದು, ಕೈಗೆ ಬಂದ ಫಸಲು ಬಾಯಿಗೆ ಬರಲಿಲ್ಲ ಎಂಬಂತಾಗಿದೆ ಎಂದು ರೈತ ಜವರೇಗೌಡ ಅಳಲು ತೋಡಿಕೊಂಡಿದ್ದಾರೆ.

    ತಿರುಮಲಾಪುರ, ಮಂಚದೇವನಹಳ್ಳಿ, ಕೊಪ್ಪ ಚೆನ್ನಕಲ್ಲು ಕಾವಲು, ಬೆಣಗಾಲು ಜೋಗನಹಳ್ಳಿ, ಬೆಕ್ಕರೆ, ಭುವನಹಳ್ಳಿ, ಕಣಗಾಲು ಸೇರಿದಂತೆ ಹಲವು ಗ್ರಾಮಗಳಲ್ಲಿ ಹಿಂಗಾರು ಬೆಳೆ ರಾಗಿ, ಹುರುಳಿಯನ್ನು ಕಟಾವು ಮಾಡಲಾಗಿದೆ. ಆದರೀಗ ಕಳೆದೊಂದು ವಾರದಿಂದ ಬೆಳಗ್ಗೆಯಿಂದ ಸಂಜೆವರೆಗೂ ಮೋಡ ಕವಿದ ವಾತಾವರಣದ ಮಧ್ಯೆ ಜಿಟಿಜಿಟಿ ಮಳೆಯಾಗುತ್ತಿರುವುದರಿಂದ ರಾಗಿ ಫಸಲನ್ನು ಮನೆಗೆ ಕೊಂಡೊಯ್ಯಲು ಸಮಸ್ಯೆಯಾಗಿದೆ.

    ಕಟಾವು ಮಾಡಿರುವ ರಾಗಿ ಜಮೀನಿನಲ್ಲಿ ಇರುವುದರಿಂದ ಫಸಲು ನೀರಿನಲ್ಲಿ ನೆನೆದು ಹಾಳಾಗುತ್ತಿದೆ. ಜತೆಗೆ ಬೇಸಿಗೆಗೆ ದನ-ಕರುಗಳಿಗೆ ಅಗತ್ಯವಿರುವ ರಾಗಿ ಹುಲ್ಲು ಸಹ ನೀರಿನಲ್ಲಿ ತೋಯ್ದು ಹಾಳಾಗುವ ಸ್ಥಿತಿ ಎದುರಾಗಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ.

    ಈ ಭಾಗ ಸೊನೆ ಅವರೆಕಾಯಿಗೆ ಹೆಸರುವಾಸಿ. ಮುಂಜಾನೆ ಇಬ್ಬನಿ ಇದ್ದಲ್ಲಿ ಸೋನೆ ಅವರೆ ಸೊಗಸಾಗಿರಲಿದೆ. ಆದರೀಗ ಮಳೆ ಹಾಗೂ ಮೋಡದ ವಾತಾವರಣಕ್ಕೆ ಸಿಲುಕಿ ಹೂವು ಉದುರುತ್ತಿದ್ದು, ಅವರೆ ಬೆಳೆ ನಷ್ಟವಾಗಲಿದೆ. ಹವಾಮಾನ ಇಲಾಖೆ ವರದಿಯಂತೆ ಮುಂದಿನ 3-4 ದಿನ ತುಂತುರು ಮಳೆ ಬರುವ ಸಾಧ್ಯತೆ ಇದ್ದು, ರೈತರು ಬೆಳೆ ಉಳಿಸಿಕೊಳ್ಳಲು ಪರದಾಡುವಂತಾಗಿದೆ.

    ಈಗಾಗಲೇ ಶೇ.60ರಷ್ಟು ರಾಗಿ ಬೆಳೆ ಕಟಾವು ಮಾಡಲಾಗಿದೆ. ಈಗಿನ ಅಕಾಲಿಕ ಮಳೆ ಹಾಗೂ ಮೋಡ ಮುಸುಕಿದ ವಾತಾವರಣದಿಂದ ರಾಗಿ ಹಾಗೂ ದ್ವಿದಳ ಧಾನ್ಯಗಳ ಒಕ್ಕಣೆ ಕಾರ್ಯಕ್ಕೆ ಅಡಚಣೆಯಾಗಿದೆ.
    ಪ್ರಸಾದ್, ಸಹಾಯಕ ಕೃಷಿ ನಿರ್ದೇಶಕ , ಪಿರಿಯಾಪಟ್ಟಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts