More

    ಅವೈಜ್ಞಾನಿಕ ಮಾರ್ಗಸೂಚಿ ರದ್ದಿಗೆ ಅತಿಥಿ ಉಪನ್ಯಾಸಕರ ಆಗ್ರಹ

    ಹಗರಿಬೊಮ್ಮನಹಳ್ಳಿ: ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಅವೈಜ್ಞಾನಿಕ ಮಾರ್ಗಸೂಚಿಗಳನ್ನು ಅಳವಡಿಸಿರುವ ರಾಜ್ಯ ಸರ್ಕಾರದ ನಡೆಯನ್ನು ವಿರೋಧಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟದ ಪದಾಧಿಕಾರಿಗಳು ಪಟ್ಟಣದ ಶಾಸಕರ ನಿವಾಸದಲ್ಲಿ ನೇಮಿರಾಜನಾಯ್ಕರಿಗೆ ಮನವಿ ಸಲ್ಲಿಸಿದರು.

    ಇದನ್ನೂ ಓದಿ: ಪ್ರೌಢಶಾಲಾ ಶಿಕ್ಷಕರನ್ನು ಉಪನ್ಯಾಸಕ ಹುದ್ದೆಗೆ ಬಡ್ತಿ: ಮಾಹಿತಿ ಕೇಳಿದ ಪಿಯು ಇಲಾಖೆ

    ತಾಲೂಕು ಒಕ್ಕೂಟದ ಗೌರವಾಧ್ಯಕ್ಷ ಎಂ.ಶಿವಮೂರ್ತಿ ಮಾತನಾಡಿ, ಸರ್ಕಾರಿ ಪದವಿ ಕಾಲೇಜುಗಳಲ್ಲಿ ಪ್ರತಿ ವರ್ಷವೂ ವಿವಿಧ ವಿಷಯಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆ ಪ್ರತೀತಿಯಾಗಿದೆ.

    ಪ್ರಸಕ್ತ ಸಾಲಿನಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದ್ದು, ಈ ಬಾರಿ ಕಾಲೇಜು ಶಿಕ್ಷಣ ಇಲಾಖೆ ದಿಢೀರ್ ಮಾರ್ಗಸೂಚಿಯಲ್ಲಿ ಕೆಲವು ಕ್ರಮಗಳನ್ನು ಬದಲಿಸಿ ಅವೈಜ್ಞಾನಿಕವಾಗಿ ಆದೇಶ ಹೊರಡಿಸಿದೆ.

    ಆಯಾ ವಿಷಯಗಳ ಕಾರ್ಯಾಭಾರದನ್ವಯ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಂಡು ಪಾಳೇ ಪದ್ದತಿಯಲ್ಲಿ ತರಗತಿಗಳನ್ನು ಪಡೆಯಲು ಸೂಚಿಸಿದೆ. ಇದರಿಂದಾಗಿ ಉಪನ್ಯಾಸಕರಿಗೆ ವೃತ್ತಿಯ ಅಭದ್ರತೆ ಕಾಡಲಿದೆ.

    ಹಿಂದಿನ ಸರ್ಕಾರ ಅತಿಥಿ ಉಪನ್ಯಾಸಕರ ಗೌರವ ಧನ ದುಪ್ಪಟ್ಟು ಮಾಡಿ ಪ್ರತಿ ತಿಂಗಳು (10 ಮಾಸಿಕ) ನಿಗಧಿತ ದಿನಕ್ಕೆ ವೇತನ ಪಾವತಿಸಿ ಪ್ರೋತ್ಸಾಹಿಸಿತ್ತು. ಆದರೆ, ಈಗಿನ ಸರ್ಕಾರ ನಿಗಧಿತ ಅವಧಿಗೆ ಕತ್ತರಿ ಹಾಕಿ, ವೇತನ ಕಡಿತಗೊಳಿಸುವ ಹುನ್ನಾರ ನಡೆಸಿದೆ.

    ಅಷ್ಟಲ್ಲದೇ ಉಪನ್ಯಾಸದ ಜತೆಗೆ ಮೌಲ್ಯಮಾಪನವನ್ನು 5 ದಿನಗಳಿಗೆ ಮೀಸಲು ಮಾಡಿ ಅವೈಜ್ಞಾನಿಕ ಕ್ರಮಗಳನ್ನು ಪಾಲಿಸಿರುವುದು ಶೋಚನೀಯ. ಕೂಡಲೇ ರಾಜ್ಯ ಸರ್ಕಾರ ನೂತನ ಮಾರ್ಗಸೂಚಿಗಳನ್ನು ರದ್ದುಗೊಳಿಸಿ ಅತಿಥಿ ಉಪನ್ಯಾಸಕರಿಗೆ ಜೀವನ ಭದ್ರತೆ ಬಗ್ಗೆ ಅಲೋಚಿಸಬೇಕಿದೆ ಎಂದರು.

    ಶಾಸಕ ಕೆ.ನೇಮಿರಾಜ ನಾಯ್ಕ ಮನವಿ ಸ್ವೀಕರಿಸಿ ಮಾತನಾಡಿ, ಸರ್ಕಾರಿ ಪದವಿ ಕಾಲೇಜಿನಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಗುಣಮಟ್ಟದ ಶಿಕ್ಷಣದ ಅಗತ್ಯ ಹೆಚ್ಚಾಗಿರುವುದರಿಂದ ಉಪನ್ಯಾಸಕರ ಕೊರತೆಯಾಗದಂತೆ ನಿಗಾವಹಿಸಬೇಕಿದೆ.

    ನೂತನ ಮಾರ್ಗಸೂಚಿ ಬಗ್ಗೆ ಸಿಎಂ ಸೇರಿ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ಬೇಡಿಕೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
    ಒಕ್ಕೂಟದ ತಾಲೂಕು ಅಧ್ಯಕ್ಷ ಅಕ್ಕಿ ಬಸವೇಶ್, ಉಪನ್ಯಾಸಕರಾದ ಅವಿನಾಶ್ ಕುಮಾರ್ ಜಾಧವ್, ಪಿ.ರಾಜಲಿಂಗಪ್ಪ, ಬಿ.ದುರುಗಪ್ಪ, ಟಿ.ಮೋಹನ್, ಕೆ.ರಂಗನಾಥ, ಬಿ.ಸವಿತಾ, ಎಚ್.ಅಮೀರ್ ಜಾನ್, ಜೋಗಿನಕಟ್ಟಿ ನಾಗರಾಜ, ಕೆ.ಎಸ್.ನಾಗರಾಜ, ಪ್ರವೀಣ್ ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts