More

    ನಿಯಂತ್ರಣಕ್ಕೆ ಬಾರದ ಅಕ್ರಮ ಮರಳುಗಾರಿಕೆ

    ಹೂವಿನಹಡಗಲಿ: ತಾಲೂಕಿಗೆ ಹೊಂದಿಕೊಂಡು 60 ಕಿಮೀ ದೂರದಲ್ಲಿ ಹರಿಯುವ ತುಂಗಭದ್ರ ನದಿಯಲ್ಲಿ ನೀರು ಸಂಪೂರ್ಣ ಕಡಿಮೆಯಾದ ಕಾರಣ ದಿನನಿತ್ಯ ಜಿಲ್ಲೆ ಮತ್ತು ಅನ್ಯ ಜಿಲ್ಲೆಯ ಅಕ್ರಮ ಮರಳುದಂದೆಕೋರರಿಂದ ಮರಳು ಕಳ್ಳಸಾಗಾಣಿಕೆ ನಡೆಸುತ್ತಿರುವುದು ಅವ್ಯಾಹತವಾಗಿ ನಡೆಯುತ್ತಿದೆ.
    ತಾಲೂಕಿನ ಹರವಿ, ಲಿಂಗನಾಯಕನಹಳ್ಳಿ, ಕುರುವತ್ತಿ, ಮೈಲಾರ, ಬನ್ನಿಮಟ್ಟಿ, ಬ್ಯಾಲಹುಣ್ಸಿ, ಅಂಗೂರು, ಕೋಟಿಹಾಳ, ಹೊನ್ನೂರು, ನವಲಿ, ಕೊಂಬಳಿ, ಮದಲಗಟ್ಟಿ, ಕಂದಗಲ್ಲು, ಪುರ, ಸೋವೆನಹಳ್ಳಿ, ಹಕ್ಕಂಡಿ ಈ ಭಾಗಗಳಲ್ಲಿ ಹಗಲಿನಲ್ಲಿಯೆ ನದಿಯಲ್ಲಿ ಜೆಸಿಬಿ, ಟ್ಯ್ರಾಕ್ಟರ್ ಹಾಗೂ ಟಿಪ್ಪರ್‌ಗಳ ಸದ್ದು ಜೋರಾಗಿಯೇ ಕೇಳಿಸುತ್ತಿದೆ.

    ಹಿರೇಹಡಗಲಿ ಹೋಬಳಿ ವ್ಯಾಪ್ತಿಯಲ್ಲಿನ ಬಹುತೇಕ ಗ್ರಾಮಗಳು ನದಿ ತೀರದ ಪ್ರದೇಶಗಳಿವೆ. ಈ ಭಾಗದಲ್ಲಿ 25 ದಿನಗಳಿಂದಲೂ ನಿರಂತರವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ ಅಧಿಕಾರಿಗಳು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಕುಂಟು ನೆಪ ಹೇಳಿ ಸುಮ್ಮನ್ನೆ ಕುಳಿತ್ತಿದ್ದಾರೆ.

    ತಾಲೂಕಿನ ಕುರುವತ್ತಿಯ ಸುತ್ತ ಮುತ್ತಲಿರುವ ಗುಡ್ಡಗಾಡು ಪ್ರದೇಶಗಳಲ್ಲಿ, ಹರವಿ, ಮೈಲಾರ, ಹೊನ್ನೂರು ಹಾಗೂ ನವಲಿ ಗ್ರಾಮದ ಖಾಸಗಿಯವರ ಜಮೀನುಗಳಲ್ಲ್ಲಿ ಮರಳನ್ನು ಸಂಗ್ರಹಿಸಿ ರಾತ್ರಿ ಸಮಯದಲ್ಲಿ ಬೇರೆಡೆಗೆ ಸಾಗಿಸಲಾಗುತ್ತಿದೆ.

    ಇನ್ನು ಹೊರ ಜಿಲ್ಲೆಗಳ ಗ್ರಾಮಗಳಾದ ಗಳಗನಾಥ, ಕುದ್ಯ್ರಾಳ, ಹಾವನೂರು, ಚಂದಾಪುರ, ತೆರದಳ್ಳಿ, ವಿಠಲಾಪುರ, ಮೇವುಂಡಿ, ಗಂಗಾಪುರ ಗ್ರಾಮಗಳ ಮರಳುದಂದೆಕೋರರು ವಿಜಯನಗರ ಜಿಲ್ಲಾ ಪ್ರದೇಶಕ್ಕೆ ಬಂದು ಹಗಲಿನಲ್ಲಿ ಮರಳು ತುಂಬಿಕೊಂಡು ಹೋಗುತ್ತಿದ್ದಾರೆ.

    ತಾಲೂಕಿನ ನದಿ ತೀರದ ಗ್ರಾಮಗಳ ದಂಧೆಕೋರರು ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಯ ನಿಗದಿ ಮಾಡಿಕೊಂಡು ಮರಳುಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ. ಬೆಳಗಿನ ಜಾವದ ವರೆಗೂ ಟ್ರ್ಯಾಕ್ಟರ್‌ಗಳು ನಗರ ಹಾಗೂ ಸುತ್ತಲಿನ ಗ್ರಾಮಗಳಿಗೆ ಮರಳನ್ನು ಹೊತ್ತುತಂದು ಹಾಕಿ ತೆರಳುತ್ತಿವೆ. ಇದನ್ನು ಗಮನಿಸಿಯೂ ಅಧಿಕಾರಗಳು ಸುಮ್ಮನಿದ್ದಾರೆ.

    ನಿಯಂತ್ರಣಕ್ಕೆ ಬರುತ್ತಲಿಲ್ಲ ಎಂದ ಶಾಸಕ: ಕಳೆದ ಬಾರಿ ಸದನದಲ್ಲಿ ಕ್ಷೇತ್ರದ ಶಾಸಕ ಕೃಷ್ಣನಾಯ್ಕ ತಾಲೂಕಿನಲ್ಲಿ ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗುವ ಮೂಲಕ ತಾಲೂಕಿನಲ್ಲಿ ನಡೆಯುವ ಅವ್ಯವಹಾರಗಳಿಗೆ ಶಕ್ತಿ ತುಂಬುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಆದರೂ ಸಹ ಹಿರೇಹಡಗಲಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮಗಳು ನಿಯಂತ್ರಣಕ್ಕೆ ಬರುತ್ತಲಿಲ್ಲ ಎಂದು ಶಾಸಕರು ವಿಜಯವಾಣಿ ಯೊಂದಿಗೆ ಮಾತನಾಡಿ ಬೇಸರ ವ್ಯಕ್ತಪಡಿಸಿದರು.

    ಟೆಂಡರ್ ಆಗದ ಮರಳು ಬ್ಲಾಕ್‌ಗಳು: ಹರಪನಹಳ್ಳಿ ಹಾಗೂ ಹೂವಿನಹಡಗಲಿ ತಾಲೂಕುಗಳಲ್ಲಿ ಸುಮಾರು 15 ಮರಳಿನ ಬ್ಲಾಕ್‌ಗಳಿದ್ದು, ಕರ್ನಾಟಕ ಸ್ಟೇಟ್ ಮಿನರಲ್ ಕಾರ್ಪೊರೇಷನ್ ಲಿ.ಗೆ 8 ಬ್ಲಾಕ್‌ಗಳನ್ನು ನೀಡಲಾಗಿದೆ. ಇನ್ನು 7 ಬ್ಲಾಕ್‌ಗಳಿವೆ. ಇಟ್ಟು 15 ಮರಳಿನ ಬ್ಲಾಕ್‌ಗಳಿದ್ದರೂ ಸಹ ಸಾರ್ವಜನಿಕರಿಗೆ ಮರಳು ದೊರಕುವುದು ಕಷ್ಟಕರವಾಗಿದೆ.

    ಮರಳಿಗಾಗಿ ಪರದಾಟ: ಸಾರ್ವಜನಿಕರು ಕಟ್ಟಡ ಕಾಮಗಾರಿ ಹಾಗೂ ಮನೆ ನಿರ್ಮಾಣಗಳಿಗೆ ಮರಳು ಅವಶ್ಯವಾಗಿ ಬೇಕಾಗುತ್ತದೆ. ಆದರೇ ಸರ್ಕಾರ ನಿಯಮ ಜಾರಿ ಮಾಡಿರುವುದರಿಂದ ಅಂಗೈಯಲ್ಲಿಯೇ ಮರಳಿದ್ದರೂ ಹೆಚ್ಚಿನ ಬೆಲೆ ನೀಡಿ ಮರಳು ಪಡೆಯಬೇಕಾದ ಅನಿವಾರ್ಯ ಬಂದೊದಗಿದೆ.

    ತಾಲೂಕಿನಲ್ಲಿ ನಡೆಯುವ ಅಕ್ರಮ ಮರಳುಗಾರಿಕೆ ಹಾಗೂ ಇತರ ಸಮಸ್ಯೆಗಳ ಬಗ್ಗೆ ಸದನದಲ್ಲಿಯೂ ಚರ್ಚಿಸಿರುವೆ. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಮೌಖಿಕವಾಗಿಯೂ ಹೇಳಿರುವೆ. ಇತ್ತೀಚಿನ ದಿನಗಳಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಈ ಎಲ್ಲಾ ಚಟುವಟಿಕೆಗಳನ್ನು ನಿಯಂತ್ರಣಕ್ಕೆ ತರುತ್ತಿದ್ದಾರೆ. ಇನ್ನು ಹೆಚ್ಚಿನ ಮಟ್ಟದಲ್ಲಿ ಕ್ರಮಕೈಗೊಳ್ಳಬೇಕಿದೆ.

    ಕೃಷ್ಣನಾಯ್ಕ
    ಶಾಸಕರು ಹೂವಿನಹಡಗಲಿ

    ಈಗಾಗಲೇ ನದಿ ತೀರದ ಪ್ರದೇಶದಲ್ಲಿ ಅಕ್ರಮ ಮರಳುಗಾರಿಕೆ ತಡೆಯಲು ಸಿಬ್ಬಂದಿ ನೇಮಿಸಲಾಗುತ್ತಿದೆ. ಎಲ್ಲೆಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತವೆ ಎಂಬುದನ್ನು ಪೂರ್ಣ ನಿಗಾವಹಿಸಿ ಸೂಕ್ತ ರೀತಿಯ ಕಾನೂನು ಕ್ರಮ ಜರುಗಿಸಲಾಗುವುದು.

    ಎಂ.ಎಸ್.ದಿವಾಕರ
    ಜಿಲ್ಲಾಧಿಕಾರಿ ವಿಜಯನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts