ಚಿತ್ರದುರ್ಗ: ಸಾಮಾಜಿಕ ಭದ್ರತಾ ಯೋಜನೆಗಳನ್ನು ವಿಸ್ತರಿಸಲು ಅಸಂಘಟಿತ ವರ್ಗಗಳ ಕಾರ್ಮಿಕರ ದತ್ತಾಂಶವನ್ನು ಇ-ಶ್ರಮ್ ಪೋರ್ಟಲ್‌ನಲ್ಲಿ ಜಿಲ್ಲೆಯ ಎಲ್ಲ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ (ಸಿಎಸ್‌ಸಿ) ಉಚಿತವಾಗಿ ನೋಂದಾಯಿಸಲಾಗುವುದೆಂದು ಡಿಸಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.
ಡಿಸಿ ಕಚೇರಿಯಲ್ಲಿ ಸೋಮವಾರ ಅಸಂಘಟಿತ ವಲಯದ ಕಾರ್ಮಿಕರ ಸಮಗ್ರ ರಾಷ್ಟ್ರೀಯ ಡೇಟಾಬೇಸ್ ಸಿದ್ಧಪಡಿಸುವ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಮಾತನಾಡಿದರು.
ದೇಶದಲ್ಲಿ 38 ಕೋಟಿ ಕಾರ್ಮಿಕರು ಅಸಂಘಟಿತ ವರ್ಗಗಳಲ್ಲಿದ್ದು, ಪ್ರಸ್ತುತ ಅವರ ಕೇಂದ್ರೀಕೃತ ದತ್ತಾಂಶ ಲಭ್ಯವಿಲ್ಲ. ಇದರಿಂದ ಸರ್ಕಾರಗಳಿಗೆ ವಲಸೆ, ಕಟ್ಟಡ ಕಾರ್ಮಿಕರ ಸಹಿತ ಅಸಂಘಟಿತರ ಸಮಸ್ಯೆಗಳನ್ನು ನಿವಾರಿಸುವುದು ಕಷ್ಟ ಸಾಧ್ಯವಾಗುತ್ತಿದೆ. ದತ್ತಾಂಶ ಸಿದ್ಧಪಡಿಸಿದರೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ವಿಸ್ತರಿಸಲು ಸಾಧ್ಯವಾಗಲಿದೆ ಎಂದರು.
ಕಾರ್ಮಿಕ ಅಧಿಕಾರಿ ಜಿ.ಇಬ್ರಾಹಿಂಸಾಬ್ ಮಾತನಾಡಿ, ಸುಪ್ರೀಂಕೋರ್ಟ್ ನಿರ್ದೇಶನದಂತೆ ಡಿಸೆಂಬರ್ ಅಂತ್ಯಕ್ಕೆ ರಾಜ್ಯದಲ್ಲಿ 1.89 ಕೋಟಿ ಅಸಂಘಟಿತ ಕಾರ್ಮಿಕರ ನೋಂದಣಿ ಗುರಿ ಇದೆ. ಇ-ಶ್ರಮ್ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯಲ್ಲಿ 37,415 ಅಸಂಘಟಿತ ಕಾರ್ಮಿಕರ ನೋಂದಣಿ ಆಗಿದ್ದು ಜಿಲ್ಲೆ 24 ನೇ ಸ್ಥಾನದಲ್ಲಿದೆ ಎಂದರು.
ಕಾರ್ಮಿಕ ನಿರೀಕ್ಷಕ ಡಿ.ರಾಜಣ್ಣ, ಟಿ.ಕುಸುಮಾ, ಅಲ್ಲಾಭಕ್ಷಿ ಮತ್ತಿತರ ಕಾರ್ಮಿಕ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಹಾಗೂ ಕಾರ್ಮಿಕ ಸಂಘಟನೆಗಳ ಪ್ರಮುಖರಿದ್ದರು.