More

    ಏರು ಧ್ವನಿಗೆ ನಲುಗಿದ ಸಭೆ, ಉಳ್ಳಾಲ ನಗರಸಭೆಯಲ್ಲಿ ಅಗತ್ಯಕ್ಕಿಂತ ಅನಗತ್ಯ ವಿಚಾರದ್ದೇ ಚರ್ಚೆ

    ಉಳ್ಳಾಲ: ವಾದ-ವಿವಾದ, ಆರೋಪ-ಪ್ರತ್ಯಾರೋಪ, ಅಗತ್ಯ ವಿಚಾರಕ್ಕಿಂತ ಅನಗತ್ಯ ವಿಚಾರಗಳ ಚರ್ಚೆಯ ಮಧ್ಯೆ ಏರು ಧ್ವನಿಯ ಮಾತುಗಳ ಮಧ್ಯೆ ಗುರುವಾರ ನಡೆದ ಉಳ್ಳಾಲ ನಗರಸಭೆಯ ಸಾಮಾನ್ಯ ಸಭೆ ನಲುಗಿಹೋಯಿತು.

    ನಗರಸಭೆ ಅಧ್ಯಕ್ಷೆ ಚಿತ್ರಕಲಾ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಜೆಂಡಾಕ್ಕಿಂತ ಮೊದಲು ಒಂದೂವರೆ ಗಂಟೆ ಅನಗತ್ಯ ವಿಷಯಗಳಿಗೆ ವಿನಿಯೋಗವಾಯಿತು. ವಾಲಿಬಾಲ್ ಮೈದಾನದಲ್ಲಿ ಟೆಂಟ್ ಹಾಕಿ ವ್ಯಾಕ್ಸಿನ್ ಕೊಡ್ತಾರೆ, ಕೌನ್ಸಿಲರ್‌ಗಳಿಗೆ ಮಾಹಿತಿ ಇಲ್ಲದೆ ಲಸಿಕೆ ಕೊಟ್ಟಿದ್ದಾರೆ, ಡಿಎಚ್‌ಒಗೆ ಪತ್ರ ಬರೆದು ದಿನ ನಿಗದಿಯಾಗಿ ಎರಡು ಗಂಟೆ ಕಾದರೂ ವ್ಯಾಕ್ಸಿನ್ ಬಂದಿಲ್ಲ ಎಂದು ಜೆಡಿಎಸ್‌ನ ಖಲೀಲ್ ಅಸಮಾಧಾನ ವ್ಯಕ್ತಪಡಿಸಿದರು. ಮನೆಯಲ್ಲಿ ನಿಧನ ಹೊಂದಿದರೂ ಮರಣ ಪ್ರಮಾಣಪತ್ರ ಕೊಡುತ್ತಿಲ್ಲ ಎಂದು ಬಾಜಿಲ್ ಡಿಸೋಜ ಹೇಳಿದರೆ, ಉಪಾಧ್ಯಕ್ಷ ಅಯೂಬ್ ಮಂಚಿಲ ಏರು ಧ್ವನಿಯಲ್ಲಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

    ಪೌರಾಯುಕ್ತ ರಾಯಪ್ಪ ಆರೋಗ್ಯಾಧಿಕಾರಿಯನ್ನು ಕರೆದು, ಜನನ -ಮರಣ ಪ್ರಮಾಣ ಪತ್ರದ ದಾಖಲೆ ನೀವೇ ಇತ್ಯರ್ಥಪಡಿಸಲು ಹೋಗಿ ಸಮಸ್ಯೆ ತಂದುಕೊಳ್ಳಬೇಡಿ ಎಂದು ಸೂಚಿಸಿದರು. ಇದರ ಮಧ್ಯೆಯೇ ಕಾಂಗ್ರೆಸ್‌ನ ರವಿಚಂದ್ರ ಏರು ಧ್ವನಿಯಲ್ಲಿ ಮಾತನಾಡಿದ್ದು, ಪೌರಾಯುಕ್ತರ ಅಸಮಾಧಾನಕ್ಕೆ ಕಾರಣವಾಯಿತು. ಒಬ್ಬರು ಮಾತನಾಡುವಾಗ ಇನ್ನೊಬ್ಬರು ಮಾತನಾಡಬೇಡಿ, ಅಧ್ಯಕ್ಷರ ಅನುಮತಿ ಪಡೆದು ಮಾತನಾಡಿ ಸದನಕ್ಕೆ ಗೌರವ ಕೊಡಿ ಎಂದು ಸಲಹೆ ನೀಡಿದರು.

    ಕಾರ್ಯಕ್ರಮದ ಬಗ್ಗೆ ಗಮನಕ್ಕೆ ತರುವುದಿಲ್ಲ ಎಂದು ಜೆಡಿಎಸ್‌ನ ದಿನಕರ್ ಉಳ್ಳಾಲ್ ಹಾಗೂ ಅಸ್ಗರ್ ಆಕ್ಷೇಪಿಸಿದಾಗ ಕಾಂಗ್ರೆಸ್‌ನ ಇಸ್ಮಾಯಿಲ್ ಧ್ವನಿಗೂಡಿಸಿ ಕಾರ್ಯಕ್ರಮ ನಡೆಸುವಾಗ ಎಲ್ಲರ ಗಮನಕ್ಕೆ ತಂದರೆ ಒಳ್ಳೆಯದು ಎಂದಿದ್ದು ಅಧ್ಯಕ್ಷರಿಗೆ ಇರಿಸುಮುರಿಸು ಉಂಟುಮಾಡಿತು. ಈ ಮಧ್ಯೆ ನಗರಸಭೆ ಅಧಿಕಾರಿಗಳು ಸೋಮೇಶ್ವರದಲ್ಲೂ ಕೆಲಸ ಮಾಡಬೇಕಿರುವುದರಿಂದ ತೊಂದರೆ ಆಗಿದೆ. ಇದನ್ನು ತಡೆಯಲು ಅಧ್ಯಕ್ಷರಿಗೆ ಆಗದಿದ್ದರೆ ಜಿಲ್ಲಾಧಿಕಾರಿ ಬಳಿ ನಾವೇ ಹೋಗುತ್ತೇವೆ ಎಂದು ಬಿಜೆಪಿ ಕೌನ್ಸಿಲರ್‌ಗಳು ಸವಾಲು ಹಾಕಿದರು.
    ಆಶ್ರಯ ಸಮಿತಿಗೆ 20 ವರ್ಷ, ಒಳಚರಂಡಿಗೆ 12 ವರ್ಷಗಳಾಗಿವೆ. ಕ್ರೀಡಾಂಗಣಕ್ಕೆ ನಿರ್ಣಯ ಮಾಡಿದ ಬಳಿಕ ಖಾಸಗಿ ಜಮೀನು ಎಂದು ಹೇಳುತ್ತೀರಿ. ಪಂಪ್‌ವೆಲ್ ಮೇಲ್ಸೇತುವೆ ವಿರುದ್ಧ ಮೆರವಣಿಗೆ ಮಾಡಿದಂತೆ ನಾವೂ ಮೆರವಣಿಗೆ ಮಾಡಬೇಕಾಗುತ್ತದೆ. ನಿಮ್ಮ ಅವಧಿಯಲ್ಲೇ ಈ ಸಮಸ್ಯೆಗೆ ಮುಕ್ತಿ ನೀಡಿ ಎಂದು ದಿನಕರ್ ಉಳ್ಳಾಲ್ ಹೇಳಿದರು.

    ಪೊಲೀಸ್ ಇಲಾಖೆ ವಿರುದ್ಧ ಅಸಮಾಧಾನ: ರಸ್ತೆ ಬದಿ ಮರಳು ಹಾಕ್ತಾರೆ, ಅಬ್ಬಕ್ಕ ವೃತ್ತ ಬಳಿ ಮೂರ್ನಾಲ್ಕು ವರ್ಷಗಳಿಂದ ವಾಹನಗಳು ನಿಂತಿವೆ. ಈ ಬಗ್ಗೆ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜೆಡಿಎಸ್‌ನ ಜಬ್ಬಾರ್ ಪೊಲೀಸ್ ಅಧಿಕಾರಿಯನ್ನು ಪ್ರಶ್ನಿಸಿದರು. ಯಾರ ಮೇಲಾದರೂ ಕೇಸು ಇದ್ದಾಗ ಅವರ ಬಗ್ಗೆ ಮಾಹಿತಿ ಕೇಳುತ್ತೀರಿ, ಆದರೆ ಶಾಂತಿಸಭೆಗೆ ಜನಪ್ರತಿನಿಧಿಗಳನ್ನು ಕರೆಯುತ್ತಿಲ್ಲ ಅಯೂಬ್ ಮಂಚಿಲ ಆಕ್ಷೇಪಿಸಿದರು. ಉಳ್ಳಾಲ ಠಾಣೆಯ ಅಂಗಳದಲ್ಲಿ ಹಲವು ಪೊಲೀಸ್ ವಾಹನಗಳಿವೆ. ತುರ್ತು ಸಂದರ್ಭ ವಾಹನ ತಿರುಗಿಸಲೂ ಏಳೆಂಟು ನಿಮಿಷ ಬೇಕಾಗುತ್ತದೆ ಎಂದು ಕಾಂಗ್ರೆಸ್‌ನ ಮಹಮ್ಮದ್ ಮುಕಚ್ಚೇರಿ ಹೇಳಿದರು. ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ರಾತ್ರಿಯಾದಾಗ ಕುಡಿದು ಗಲಾಟೆ ಮಾಡುತ್ತಾರೆ ಎಂದು ಕಾಂಗ್ರೆಸ್‌ನ ಭಾರತಿ, ಓವರ್‌ಬ್ರಿಡ್ಜ್ ಕೆಳಗಡೆ ಕುಟುಂಬಗಳೇ ವಾಸವಾಗಿವೆ ಎಂದು ಬಿಜೆಪಿಯ ಗೀತಾ ನಾಯಕ್ ಅಸಾಮಾಧಾನ ವ್ಯಕ್ತಪಡಿಸಿದರು.

    ಉಳ್ಳಾಲದಲ್ಲಿ ಒಂದೂವರೆ ಲಕ್ಷ ಜನಸಂಖ್ಯೆಯಿದ್ದು, ಪೊಲೀಸರ ಸಂಖ್ಯೆ ಕೇವಲ 55. ಇದರಿಂದ ಕೆಲವೊಂದು ಸಭೆ ನಡೆಸಲು ಕಷ್ಟವಾಗುತ್ತಿದೆ. ವಾಹನ ನಿಲ್ಲಿಸಲು ಮುಂದಕ್ಕೆ ವ್ಯವಸ್ಥೆ ಮಾಡುತ್ತೇವೆ ಎಂದು ಎಸ್.ಐ. ಶಿವಕುಮಾರ್ ಕೆ. ಭರವಸೆ ನೀಡಿದರು. ಅಜೆಂಡಾ ತೀರ ವೈಯಕ್ತಿಕ ಎನ್ನುವಂತಿದೆ, ಇದರಲ್ಲಿ ಅಭಿವೃದ್ಧಿಯ ವಿಚಾರವೇ ಇಲ್ಲ. ಅಧಿಕಾರಕ್ಕೆ ಬಂದು ಇಷ್ಟು ತಿಂಗಳಾದರೂ ನಗರಸಭೆ ಅನುದಾನದಲ್ಲಿ ಕೆಲಸ ಆಗಿಲ್ಲ. ನಮ್ಮ ಸಭೆ, ಸಮಯಕ್ಕೆ ಯಾವುದೇ ಬೆಲೆ ಇಲ್ಲವೇ ಎಂದು ಮಹಮ್ಮದ್ ಮುಕಚ್ಚೇರಿ ಅಸಮಾಧಾನ ವ್ಯಕ್ತಪಡಿಸಿದರು.

    ಮನೆ ಕಾರ್ಯಕ್ರಮಕ್ಕೆ ಹೆಲ್ಪ್‌ಲೈನ್ ಕರೆ: ಗುತ್ತಿಗೆದಾರರ ಮನೆಯ ಕಾರ್ಯಕ್ರಮಗಳಿಗೆ ನಗರಸಭೆ ಹೆಲ್ಪ್‌ಲೈನ್‌ನಿಂದ ಗುತ್ತಿಗೆದಾರನೇ ಆಹ್ವಾನ ನೀಡುವುದು ಏಕೆಂದು ಕಾಂಗ್ರೆಸ್‌ನ ಸಪ್ನಾ ಪ್ರಶ್ನಿಸಿದರು. ಧ್ವನಿಗೂಡಿಸಿದ ದಿನಕರ್ ಉಳ್ಳಾಲ್, ನಗರಸಭೆಯ 25 ವರ್ಷಗಳ ಇತಿಹಾಸದಲ್ಲಿ ಇಂಥ ಅವ್ಯವಸ್ಥೆ ಕಂಡಿಲ್ಲ, ಅಲ್ಲದೆ ನಿಮ್ಮವರೇ ಆರೋಪಿಸುವಂತಾಗಿದೆ ಎಂದು ಲೇವಡಿ ಮಾಡಿ ಈ ಬಗ್ಗೆ ಗಂಭೀರ ಚರ್ಚೆ ನಡೆಯಬೇಕು ಎಂದರು. ಇದಕ್ಕೆ ಜೆಡಿಎಸ್, ಕಾಂಗ್ರೆಸ್ ಸದಸ್ಯರೂ ಬೆಂಬಲ ನೀಡಿ ಮುಂದಕ್ಕೆ ಯಾರೂ ವೈಯಕ್ತಿಕ ಸಮಾರಂಭಕ್ಕೆ ನಗರಸಭೆ ಫೋನ್ ಬಳಸಬಾರದು ಎಂದರು.

    ಹೊಂದಾಣಿಕೆ ಕೊರತೆ ಬಯಲಿಗೆ!: ಸ್ಥಾಯಿ ಸಮಿತಿ ಮತ್ತು ಮಧ್ಯೆ ನಡುವೆ ಹೊಂದಾಣಿಕೆ ಕೊರತೆ ಕಂಡುಬಂತು. ಕಾಮಗಾರಿ ವಿಚಾರದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಮಾಹಿತಿಯೇ ಇಲ್ಲದ ವಿಚಾರ ಬೆಳಕಿಗೆ ಬಂತು. ಇದರ ವಿರುದ್ಧ ಎಸ್‌ಡಿಪಿಐ, ಜೆಡಿಎಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಕಾಂಗ್ರೆಸ್ ಸದಸ್ಯರೂ ಅಧ್ಯಕ್ಷರಿಗೆ ಕಿವಿಮಾತು ಹೇಳಿದರು.

    ನೊಂದು ಮಾತನಾಡಿದ ಪೌರಾಯುಕ್ತ!: ಕಾಮಗಾರಿಗೆ ಸಂಬಂಧಿಸಿ ಎಸ್‌ಡಿಪಿಐನ ಕಮರುನ್ನೀಸಾ ಬರೆದ ಪತ್ರದಲ್ಲಿ ತಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಲಾಗಿದೆ. ಇದರಿಂದ ಬೇಸರವಾಗಿದ್ದು, ಹುದ್ದೆಯೇ ಬೇಡ ಎನ್ನುವಂತಾಗಿದೆ. ತಾನು ಇದುವರೆಗೂ ಗುತ್ತಿಗೆದಾರರಿಂದ ಚಹಾ ಕೂಡ ಕುಡಿದಿಲ್ಲ. ವೈಯಕ್ತಿಕವಾಗಿ ದೂಷಣೆ ಮಾಡುವಾಗಲೂ ಮನುಷ್ಯತ್ವ ಇರಬೇಕು. ನಗರಸಭೆಯಲ್ಲಿ ಶೇ.50 ಭ್ರಷ್ಟಾಚಾರ ತಡೆಹಿಡಿದಿದ್ದೇನೆ ಎಂದು ಪೌರಾಯುಕ್ತ ರಾಯಪ್ಪ ನೊಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts