More

    ವಿಶ್ವವಿದ್ಯಾಲಯಗಳಲ್ಲಿ ಯೂನಿಫೈಡ್ ಸಿಸ್ಟಮ್ ಶೀಘ್ರ- ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ಹೇಳಿಕೆ

    ಬಳ್ಳಾರಿ: ವಿವಿಗಳಲ್ಲಿ ಪಾರದರ್ಶಕ ಆಡಳಿತ ನೀಡುವುದಕ್ಕಾಗಿ ಯೂನಿಫೈಡ್ ಯುನಿರ್ವಸಿಟಿ ಸಿಸ್ಟಮ್ ಆಡಳಿತ ಶೀಘ್ರ ಜಾರಿಗೆ ತರಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ, ಡಿಸಿಎಂ ಡಾ.ಅಶ್ವಥ್ ನಾರಾಯಣ ಹೇಳಿದರು. ನಗರದ ಹೊರವಲಯದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ವಿದ್ಯಾಲಯದ ಕೇಂದ್ರೀಯ ಗ್ರಂಥಾಲಯ ಹಾಗೂ ಬಹುಚಟುವಟಿಕಾ ಕೇಂದ್ರಗಳ ಉದ್ಘಾಟನೆ ಹಾಗೂ ಮಹನೀಯರ ಪುತ್ಥಳಿ ಅನಾವರಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

    ಅನುದಾನ ಬಳಕೆ ಸೇರಿ ವಿವಿಧ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸಲು ವಿವಿ ಕುಲಪತಿಗಳ ಮೇಲೆ ತಜ್ಞರ ಉನ್ನತ ಸಮಿತಿ ರಚಿಸಿ, ಪಾರದರ್ಶಕ ಆಡಳಿತ ನೀಡಲಾಗುವುದು. ಉನ್ನತ ವಿಶ್ವ ವಿದ್ಯಾಲಯಗಳು ಸಮಾಜಕ್ಕೆ ದಿಕ್ಕು ತೋರಿಸಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಬೆಳೆಸಬೇಕು ಎನ್ನುವ ಸಂಕಲ್ಪದೊಂದಿಗೆ ನೂತನ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದರು.

    3 ರಿಂದ 6 ವರ್ಷದ ಮಕ್ಕಳ ಮೆದುಳು ವ್ಯಾಪಕವಾಗಿ ಬೆಳವಣಿಗೆಯಾಗುತ್ತದೆ. ಆ ವಯಸ್ಸಲ್ಲಿ 10 ರಿಂದ 15ಭಾಷೆ ಕಲಿಯುವ ಸಾಮರ್ಥ್ಯ ಇರುತ್ತದೆ. ಗುಣಮಟ್ಟದ ಶಿಕ್ಷಣ ನೀಡಿದರೇ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿದೆ. ಹೀಗಾಗಿ ಅಂಗನವಾಡಿ ಶಾಲೆಗಳನ್ನು ಮಾಂಟೆಸರಿ ಶಾಲೆಗಳನ್ನಾಗಿ ಪರಿವರ್ತಿಸಲಾಗುವುದು ಎಂದರು. ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು, ಅಧ್ಯಾಪಕರನ್ನು ನೇಮಿಸಲಾಗುವುದು. ಶಿಕ್ಷಕರಿಗೆ ತರಬೇತಿ ಕೇಂದ್ರ ಆರಂಭಿಸಲಾಗುವುದು. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸಲು ವಿವಿಗಳಲ್ಲಿ ಸೆಂಟ್ರಲ್ ಡ್ಯಾಶ್ ಬೋರ್ಡ್ ಆರಂಭಿಸಲಾಗುವುದು. ಉದ್ಯೋಗ ವಿನಿಮಯ ಕೇಂದ್ರ ತೆರೆಯಲಾಗುವುದು. ವಿದ್ಯಾರ್ಥಿಗಳ ಶಿಷ್ಯವೇತನ, ತರಬೇತಿ, ಶಿಕ್ಷಣ ಸಾಲ ವಿತರಣೆಗೆ 4700 ಕೋಟಿ ರೂ.ಮೀಸಲು ಇರಿಸಲಾಗಿದೆ. ವಿಎಸ್‌ಕೆ ವಿವಿ ಅಭಿವೃದ್ಧಿಗೆ ವಿಶೇಷ ಅನುದಾನ ಮಂಜೂರು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.

    ಕುಲಪತಿ ಪ್ರೊ.ಸಿದ್ದು ಅಲಗೂರು ಮಾತನಾಡಿ, ವಿಶ್ವವಿದ್ಯಾಲಯಕ್ಕೆ ಸಮಸ್ಯೆಗಳಿಲ್ಲ. ಸವಾಲುಗಳಿವೆ. ಸರ್ಕಾರ ಕೈ ಜೋಡಿಸಿ ಸಕಾಲಕ್ಕೆ ಅನುದಾನ ಬಿಡುಗಡೆಗೊಳಿಸಿದರೇ ಎಲ್ಲ ಸವಾಲುಗಳು ನಿವಾರಣೆಯಾಗಲಿವೆ ಎಂದರು. ಸಂಸದ ವೈ.ದೇವೆಂದ್ರಪ್ಪ, ಶಾಸಕ ಜಿ.ಸೋಮಶೇಖರರಡ್ಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಸುಶೀಲ್ ನಮೋಶಿ, ಕುಲಸಚಿವರಾದ ರಮೇಶ, ತುಳಸಿಮಾಲಾ, ಸಿಂಡಿಕೇಟ್ ಸದಸ್ಯರು ಇತರರಿದ್ದರು.

    ಜನಾರ್ದನರೆಡ್ಡಿ ಸಚಿವರಾಗಿದ್ದ ಸಮಯದಲ್ಲಿ ಸರ್ಕಾರದಲ್ಲಿ ನಾವು ಏನು ಹೇಳಿದರೂ ನಡೆಯುತಿತ್ತು. ಹೀಗಾಗಿ 10 ವರ್ಷಗಳ ಹಿಂದೆ ಸಿಎಂ ಅವರ ಬಳಿ ಖುದ್ದಾಗಿ ತೆರಳಿ ಬಳ್ಳಾರಿಗೆ ವಿಶ್ವವಿದ್ಯಾಲಯ ತಂದೆವು. ಇಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಯಾದ ಬಳಿಕ ಲಕ್ಷಾಂತರ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದಿದ್ದಾರೆ. ಮುಂದೆಯೂ ವಿವಿಗೆ ನನ್ನ ಕೈಲಾದ ಸಹಕಾರ ನೀಡುವೆ.
    | ಜಿ.ಸೋಮಶೇಖರೆಡ್ಡಿ ಶಾಸಕ ಬಳ್ಳಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts