More

     ಆರ್ಥಿಕ ಪ್ರಗತಿಗೆ ಬೇಕು ಜನರ ಸಹಭಾಗಿತ್ವ

    ದಾವಣಗೆರೆ:  ಅರ್ಥ ವ್ಯವಸ್ಥೆಯಲ್ಲಿ ಭಾರತ 5ನೇ ಸ್ಥಾನದಲ್ಲಿದೆ. ಅದನ್ನು 3ನೇ ಸ್ಥಾನಕ್ಕೆ ತರಬೇಕೆಂಬುದು ಕೇಂದ್ರ ಸರ್ಕಾರದ ಸಂಕಲ್ಪವಾಗಿದೆ. ಅದನ್ನು ಈಡೇರಿಸಲು ದೇಶದ ಜನರ ಸಹಭಾಗಿತ್ವದ ಅಗತ್ಯವಿದೆ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೇಳಿದರು.
     ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ 11ನೇ aವಾರ್ಷಿಕ ಘಟಿಕೋತ್ಸವದಲ್ಲಿ ಮಾತನಾಡಿ, ಒಂದು ಕಾಲಕ್ಕೆ ದೇಶದ ಅರ್ಥ ವ್ಯವಸ್ಥೆ ಸದೃಢವಾಗಿತ್ತು, ಆದ್ದರಿಂದ ಭಾರತವನ್ನು ‘ಚಿನ್ನದ ಹಕ್ಕಿ’ ಎಂದು ಕರೆಯಲಾಗುತ್ತಿತ್ತು. ಮತ್ತೆ ಆ ಸ್ಥಿತಿಗೆ ನಾವು ಮರಳಬೇಕಿದೆ. ಇದನ್ನು ಸಾಧಿಸುವಲ್ಲಿ ಯುವಜನರ ಪಾತ್ರ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು.
     ದೇಶಕ್ಕೆ ಸ್ವಾತಂತ್ರೃ ದೊರೆತು 75 ವರ್ಷಗಳಾಗಿವೆ. ಈ ಅವಧಿಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ವೇಗವಾಗಿ ಪ್ರಗತಿಯಾಗಿದೆ. 25 ವರ್ಷಗಳ ಹಿಂದಿನ ಸ್ಥಿತಿ ಹೇಗಿತ್ತು, ಈಗ ಹೇಗಿದೆ, ಮುಂದೆ ಏನಾಗಬೇಕು ಎನ್ನುವುದರ ಕುರಿತು ಚಿಂತನೆ ನಡೆಸಬೇಕಿದೆ ಎಂದು ತಿಳಿಸಿದರು.
     ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದು 2047ಕ್ಕೆ 100 ವರ್ಷಗಳಾಗುತ್ತವೆ. ಆ ವೇಳೆಗೆ ನಮ್ಮ ದೇಶ ‘ವಿಕಸಿತ ಭಾರತ’ವಾಗಿ ವಿಶ್ವದಲ್ಲಿ ಮೊದಲ ಸಾಲಿನಲ್ಲಿ ಇರುವಂತಾಗಬೇಕು. ಸ್ವಾತಂತ್ರೃಕ್ಕಾಗಿ ಹೋರಾಟ ನಡೆಸಿದ ಹಿರಿಯರ ಕನಸೂ ಅದೇ ಆಗಿತ್ತು ಎಂದು ಹೇಳಿದರು.
     ದೇಶದ ಪ್ರಗತಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸುವ ಯೋಜನೆಗಳ ಸಾಕಾರಕ್ಕೆ ಜನರೂ ಕೈಜೋಡಿಸಿದಾಗ ಕೆಲಸಗಳು ಗುಣಮಟ್ಟದಿಂದ ಕೂಡಿರುತ್ತವೆ, ಕಾಮಗಾರಿಗಳು ಕಾಲಮಿತಿಯಲ್ಲಿ ಆಗುತ್ತವೆ. ಇದರಿಂದ ಖರ್ಚು ವೆಚ್ಚಗಳು ಕಡಿಮೆಯಾಗಿ ಯೋಜನೆಗಳು ಶೀಘ್ರ ಪೂರ್ಣಗೊಂಡು ಜನರಿಗೆ ತಲುಪುತ್ತವೆ ಎಂದು ತಿಳಿಸಿದರು.
     ಇಂದಿನ ಮತ್ತು ಮುಂದಿನ ಪೀಳಿಗೆಯವರು ದೇಶದ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ದೇಶದ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು.
     ಪರಿಸರ ಸಂರಕ್ಷಣೆ ಇಂದಿನ ತುರ್ತು ಅಗತ್ಯವಾಗಿದೆ. ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. ನೀರು, ನೆಲ, ಗಾಳಿ ಎಲ್ಲವೂ ಮಲಿನವಾಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ಮಳೆ ನೀರು ಕೊಯ್ಲು ಮಾಡಬೇಕು. ಭೂಮಿ, ವನ, ಜಲ ಸಂರಕ್ಷಣೆ ಮಾಡಬೇಕಿದೆ ಎಂದು ತಿಳಿಸಿದರು.
     ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮಾತನಾಡಿ, ವಿದ್ಯಾವಂತ ನಿರುದ್ಯೋಗಿಗಳು ದೊಡ್ಡ ಸಂಖ್ಯೆಯಲ್ಲಿದ್ದು ಅವರಿಗೆ ಕೆಲಸ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿದೆ. ಇದಕ್ಕೆ ಸಂಬಂಧಿಸಿದಂತೆ 10 ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಗಿದೆ. ಕೌಶಲ ಆಧಾರಿತ ಶಿಕ್ಷಣದ ಮೂಲಕ ಬದಲಾವಣೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
     ವೃತ್ತಿ ಶಿಕ್ಷಣದ ಜತೆಗೆ ಇತರ ಪದವಿಗಳಲ್ಲಿ ಶಿಕ್ಷಣ ಪಡೆಯುವವರಿಗೂ ಉದ್ಯೋಗ ದೊರೆಯುವ ನಿಟ್ಟಿನಲ್ಲಿ ಯೋಚಿಸಲಾಗುತ್ತಿದೆ. ಯಾವ ಕ್ಷೇತ್ರಗಳಲ್ಲಿ ಉದ್ಯೋಗಕ್ಕೆ ಬೇಡಿಕೆಯಿದೆ ಎಂಬುದನ್ನು ಅಧ್ಯಯನ ನಡೆಸಿ ಅದಕ್ಕೆ ಪೂರಕವಾದ ಶಿಕ್ಷಣವನ್ನು ನೀಡುವ ಉದ್ದೇಶವಿದೆ ಎಂದರು.
     ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಏಕ ಕಾಲದಲ್ಲಿ ಪ್ರವೇಶಾತಿ ನಡೆಯುವ ನಿಟ್ಟಿನಲ್ಲಿ ಸರ್ಕಾರ ಕ್ರಮಗಳನ್ನು ಕೈಗೊಳ್ಳುತ್ತಿದೆ. ರಾಜ್ಯದ ಇತರ ಸರ್ಕಾರಿ ವಿವಿಗಳಿಗೆ ಹೋಲಿಸಿದಾಗ ದಾವಣಗೆರೆ ವಿವಿಯು ಪದವಿಗಳ ಪ್ರವೇಶಾತಿ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿದೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಸಾಧನೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
     ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ 7 ವಿಶ್ವವಿದ್ಯಾಲಯಗಳಿಗೆ ತಲಾ 50 ಲಕ್ಷ ರೂ. ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸಿದ್ದರು. ಅದರಂತೆ ದಾವಣಗೆರೆ ವಿವಿಗೆ 50 ಲಕ್ಷ ರೂ. ನೀಡಲಾಗಿದೆ ಎಂದು ತಿಳಿಸಿದರು.
     ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಘಟಿಕೋತ್ಸವ ಭಾಷಣ ಮಾಡಿದರು. ಕುಲಪತಿ ಪ್ರೊ.ಬಿ.ಡಿ. ಕುಂಬಾರ, ಕುಲಸಚಿವ (ಪ್ರಭಾರ) ಪ್ರೊ. ವೆಂಕಟರಾವ್ ಎಂ. ಪಲಾಟೆ, ಕುಲಸಚಿವ (ಮೌಲ್ಯಮಾಪನ) ಪ್ರೊ.ಸಿ.ಕೆ. ರಮೇಶ ಇದ್ದರು.
     …
     
     ಅಸಮಾಧಾನ, ಕಿವಿಮಾತು
     ಘಟಿಕೋತ್ಸವ ಸಮಾರಂಭ ನಡೆಯುತ್ತಿದ್ದ ವೇಳೆ ಚಿನ್ನದ ಪದಕ ಮತ್ತು ಪಿಎಚ್.ಡಿ ಪದವಿ ಸ್ವೀಕರಿಸಿದ ಕೆಲವು ವಿದ್ಯಾರ್ಥಿಗಳು ಎದ್ದು ಬಂದಿದ್ದರ ಬಗ್ಗೆ ರಾಜ್ಯಪಾಲರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿ ಅಸಮಾಧಾನ ವ್ಯಕ್ತಪಡಿಸಿದರು.
     ವಿದ್ಯಾರ್ಥಿಗಳು ಕಾರ್ಯಕ್ರಮ ಮುಗಿಯುವ ವರೆಗೂ ಇರಬೇಕು, ಅರ್ಧದಲ್ಲೆ ಎದ್ದು ಹೋಗುವುದು ಸರಿಯಲ್ಲ. ಭವಿಷ್ಯದಲ್ಲೂ ಯಾವುದಾದರೂ ಸಮಾರಂಭಕ್ಕೆ ಹೋದರೆ ಮುಕ್ತಾಯ ಆಗುವ ವರೆಗೂ ಇರಬೇಕು. ಮುಖ್ಯ ಅತಿಥಿಗಳ ಭಾಷಣ ಕೇಳಿ ಪ್ರೇರಣೆ ಪಡೆಯಬೇಕು. ಶಿಕ್ಷಣ ಮುಗಿಯಿತು, ಪದವಿ ಪಡೆದೆವು, ನಮ್ಮ ಕೆಲಸ ಮುಗಿಯಿತು ಎನ್ನುವ ಪ್ರವೃತ್ತಿ ಸರಿಯಲ್ಲ ಎಂದರು.
     ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರೂ ತಮ್ಮ ಭಾಷಣದಲ್ಲಿ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು.
     …

    ಮೂವರಿಗೆ ಗೌರವ ಡಾಕ್ಟರೇಟ್
     ಸುಪ್ರೀಂ ಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ್, ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಡಾ.ಕೆ. ಸಿದ್ದಪ್ಪ, ಹಿರಿಯ ವ್ಯಂಗ್ಯಚಿತ್ರಕಾರ, ಪತ್ರಕರ್ತ ಎಚ್.ಬಿ. ಮಂಜುನಾಥ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
     ಈ ಸಂದರ್ಭದಲ್ಲಿ 2022-23 ನೇ ಸಾಲಿಗೆ 14,357 ವಿದ್ಯಾರ್ಥಿಗಳಿಗೆ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಯಿತು. 45 ವಿದ್ಯಾರ್ಥಿಗಳು 79  ಚಿನ್ನದ ಪದಕಗಳನ್ನು ಪಡೆದರು. 64 ಅಭ್ಯರ್ಥಿಗಳಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಯಿತು. ವಾಣಿಜ್ಯ ಶಾಸ್ತ್ರ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿನಿ ದೀಪ್ತಿ ಜೆ. ಗೌಡರ್ ಅತಿ ಹೆಚ್ಚು ಅಂಕಗಳೊಂದಿಗೆ 5 ಸ್ವರ್ಣ ಪದಕ ಗಳಿಸಿದರು.
     …
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts