More

    ನಡೆಯದ ವಿವಿ ಪದವಿ ಪರೀಕ್ಷೆ, ಪ್ರವೇಶಾತಿ ವಂಚಿತ ಅಭ್ಯರ್ಥಿಗಳು

    ವೇಣುವಿನೋದ್ ಕೆ.ಎಸ್. ಮಂಗಳೂರು

    ಕೋವಿಡ್ ಲಾಕ್‌ಡೌನ್ ಕಾರಣದಿಂದಾಗಿ ಮಂಗಳೂರು ವಿಶ್ವವಿದ್ಯಾಲಯ ಅಧೀನದ ಕಾಲೇಜುಗಳ ಪದವಿ ಪರೀಕ್ಷೆಗಳಿಗೆ ವೇಳಾಪಟ್ಟಿ ಘೋಷಿಸಿದರೂ ಪರೀಕ್ಷೆ ನಡೆಸಲಾಗಿಲ್ಲ.

    ಆದರೆ ಇದೇ ವೇಳೆಗೆ ಸ್ವಾಯತ್ತ ಕಾಲೇಜುಗಳು ಆನ್‌ಲೈನ್ ಮೂಲಕ ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಿದ್ದು, ಅನೇಕ ಸ್ವಾಯತ್ತ ಸಂಸ್ಥೆಗಳಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶಾತಿ ಪ್ರಕ್ರಿಯೆ ಶುರುವಾಗಿದೆ. ಇದರಿಂದಾಗಿ ವಿಶ್ವವಿದ್ಯಾಲಯ ಅಧೀನದ ಕಾಲೇಜುಗಳ ಅನೇಕ ವಿದ್ಯಾರ್ಥಿಗಳು ತಮಗೆ ಬೇಕೆನಿಸಿದ ಕೋರ್ಸ್‌ಗಳಿಗೆ, ಸಂಸ್ಥೆಗಳಿಗೆ ಸೇರಲಾಗುತ್ತಿಲ್ಲ ಎಂಬ ಅಳಲು ತೋಡಿಕೊಂಡಿದ್ದಾರೆ.

    ಮಂಗಳೂರು ವಿವಿ ವ್ಯಾಪ್ತಿಯಲ್ಲಿ 153 ಮಂಗಳೂರು ವಿವಿ ಸಂಯೋಜಿತ ಹಾಗೂ 36 ಸರ್ಕಾರಿ ಕಾಲೇಜುಗಳು ಇವೆ. ಇವುಗಳಲ್ಲೆಲ್ಲೂ ಪದವಿ ತರಗತಿ ನಡೆಸುವುದು ಸಾಧ್ಯವಾಗಿಲ್ಲ. ಮಂಗಳೂರು ವಿವಿ ವ್ಯಾಪ್ತಿಯಲ್ಲಿ 5 ಸ್ವಾಯತ್ತ ಕಾಲೇಜುಗಳು ಕಾರ್ಯಾಚರಿಸುತ್ತಿದ್ದರೆ ಹಲವು ಸ್ನಾತಕೋತ್ತರ ಕೋರ್ಸ್ ನೀಡುವ ವಿದ್ಯಾಸಂಸ್ಥೆಗಳಿವೆ. ಸ್ವಾಯತ್ತ ಕಾಲೇಜುಗಳು ಪದವಿ ಪರೀಕ್ಷೆ ನಡೆಸಿದ್ದರಿಂದ ಅವುಗಳ ವಿದ್ಯಾರ್ಥಿಗಳು ಮುಂದಿನ ಕೋರ್ಸ್‌ಗೆ ಹೋಗುವುದಕ್ಕೆ ಅನುಕೂಲವಾಗಿದೆ.

    ನಮ್ಮ ಮಕ್ಕಳು ಮಂಗಳೂರು ವಿವಿ ವ್ಯಾಪ್ತಿಯ ಕಾಲೇಜಿಗೆ ಹೋಗುತ್ತಾರೆ. ಅವರನ್ನು ಈಗ ಮಣಿಪಾಲದ ಖಾಸಗಿ ವಿದ್ಯಾಸಂಸ್ಥೆಗೆ ಎಂಎಸ್ಸಿ ಮಾಡಲು ಸೇರಿಸಬೇಕಿತ್ತು, ಅಲ್ಲಿ ಈಗಾಗಲೇ ಪ್ರವೇಶಾತಿ ಶುರುವಾಗಿದೆ. ಆದರೆ ನನ್ನ ಮಗನನ್ನು ಸೇರಿಸುವುದಕ್ಕೆ ಆಗುತ್ತಿಲ್ಲ, ಇದಕ್ಕೆ ಮಂಗಳೂರು ವಿಶ್ವವಿದ್ಯಾಲಯ ಆಡಳಿತ ಏನಾದರೂ ಒಂದು ಪರಿಹಾರ ಕಂಡುಕೊಳ್ಳಬೇಕು ಎಂದು ಪಾಲಕರೊಬ್ಬರು ‘ವಿಜಯವಾಣಿ’ ಜತೆ ಅಳಲು ತೋಡಿಕೊಂಡರು.

    ವಿವಿ ಅಸಹಾಯಕ: ಮಂಗಳೂರು ವಿಶ್ವವಿದ್ಯಾಲಯ ರಾಜ್ಯದ ಉನ್ನತ ಶಿಕ್ಷಣ ಸಚಿವಾಲಯದ ಅಧೀನದಲ್ಲಿ ಬರುವುದರಿಂದ ಸರ್ಕಾರದ ಸೂಚನೆ ಇಲ್ಲದೆ ಪರೀಕ್ಷೆ ಇತ್ಯಾದಿ ನಡೆಸುವಂತಿಲ್ಲ. ಹಾಗಾಗಿ ಲಾಕ್‌ಡೌನ್ ಕಾರಣಕ್ಕಾಗಿ ಹಿಂದೆ ಘೋಷಿಸಲಾಗಿದ್ದ ಪದವಿ ಪರೀಕ್ಷೆಗಳನ್ನು ನಡೆಸಲಾಗಿಲ್ಲ ಎಂದು ಪರೀಕ್ಷಾಂಗ ಕುಲಸಚಿವ ಡಾ.ಪಿ.ಎಲ್.ಧರ್ಮ ತಿಳಿಸುತ್ತಾರೆ.

    ಖಾಸಗಿ ಸ್ವಾಯತ್ತ ಕಾಲೇಜುಗಳಿರುವುದು ಕೇವಲ ಐದು. ಅವರಿಗೆ ಉತ್ತಮ ಸೌಲಭ್ಯ ಇದೆ, ಕಡಿಮೆ ಸಂಖ್ಯೆ ಆದ ಕಾರಣ ಆನ್‌ಲೈನ್ ಮೂಲಕ ಪರೀಕ್ಷೆಗಳನ್ನು ನಡೆಸಿದ್ದಾರೆ. ಆದರೆ ನಾವು ಸರ್ಕಾರದ ಅನುಮತಿ ಇಲ್ಲದೆ ಎಲೆಯನ್ನೂ ಎತ್ತಿಡುವಂತಿಲ್ಲ. ನಾವು ಸ್ವಾಯತ್ತ ಸಂಸ್ಥೆಗಳಿಗೆ ಪ್ರವೇಶಾತಿ ಮಾಡಬೇಕು ಅಥವಾ ಬೇಡ ಎಂದು ಹೇಳುವುದಕ್ಕೂ ಅಧಿಕಾರ ಇಲ್ಲ ಎನ್ನುತ್ತಾರೆ.

    29ರಂದು ಪ್ರಾಂಶುಪಾಲರ ಸಭೆ: ಮಂಗಳೂರು ವಿವಿ ವ್ಯಾಪ್ತಿಯ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ಕುರಿತು ಜೂನ್ 29ರಂದು ಎಲ್ಲ ಕಾಲೇಜು ಪ್ರಾಂಶುಪಾಲರ ಸಭೆಯನ್ನು ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಕರೆದಿದ್ದಾರೆ. ಯಾವ ರೀತಿ ಪರೀಕ್ಷೆ ನಡೆಸುವುದು, ಯಾವಾಗ ನಡೆಸುವುದು ಎಂಬಿತ್ಯಾದಿ ವಿಚಾರಗಳನ್ನು ಅದರಲ್ಲಿ ಅಂತಿಮಗೊಳಿಸಲಾಗುವುದು. ಜುಲೈ 15ರ ಮೊದಲು ಕಾಲೇಜುಗಳಲ್ಲಿ ಲಸಿಕೆ ನೀಡಿ, ತರಗತಿ ನಡೆಸುವ ಬಗ್ಗೆಯೂ ಚರ್ಚೆ ನಡೆಸುವ ನಿರೀಕ್ಷೆ ಇದೆ.

    6ನೇ ಸೆಮಿಸ್ಟರ್‌ಗೆ ಆದ್ಯತೆ: ಇದುವರೆಗೆ ಬೆಸ ಸೆಮಿಸ್ಟರ್‌ಗಳ ಪರೀಕ್ಷೆ ಶೇ.62ರಷ್ಟು ನಡೆದಿದ್ದು, ಇನ್ನು ಶೇ.38ರಷ್ಟು ಬಾಕಿ ಇದೆ. ಅದನ್ನು 15 ದಿನದಲ್ಲಿ ಮುಗಿಸಬಹುದು. ಸಾಮಾನ್ಯವಾಗಿ ಮೇ ತಿಂಗಳಲ್ಲಿ ಪರೀಕ್ಷೆ ನಡೆಸಿ ಜುಲೈ ಒಳಗೆ ಫಲಿತಾಂಶ ಬರುತ್ತಿತ್ತು, ಈ ಬಾರಿ ಕೊಂಚ ತಡವಾಗುವ ನಿರೀಕ್ಷೆ ಇದೆ. ಅಂತಿಮ ಸೆಮಿಸ್ಟರ್ ಮುಗಿಸುವುದಕ್ಕೆ ನಮ್ಮ ಸದ್ಯದ ಆದ್ಯತೆ ಎಂದು ಪ್ರೊ.ಧರ್ಮ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts