More

    ಹಸ್ತಪ್ರತಿಗಳ ಸಂರಕ್ಷಣೆ ಮಾಡುತ್ತಿಲ್ಲ ವಿವಿಗಳು

    ಶ್ರವಣಬೆಳಗೊಳ : ಇತಿಹಾಸ ಉಳಿಯಲು ಓಲೆ ಗ್ರಂಥಗಳು, ಹಸ್ತಪ್ರತಿಗಳು, ಶಿಲಾ ಶಾಸನಗಳು, ಪುರಾತನ ಕಡತಗಳ ಸಂಗ್ರಹಣೆ ಮತ್ತು ಸಂರಕ್ಷಣೆ ಬಹಳ ಮುಖ್ಯ ಎಂದು ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಕ್ಯುರೇಟರ್ ಡಾ. ವೆಂಕಟೇಶ ಜೋಯಿಸ್ ಹೇಳಿದರು.

    ಶ್ರವಣಬೆಳಗೊಳದ ಶ್ರೀ ಧವಲತೀರ್ಥಂನಲ್ಲಿರುವ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ನ್ಯಾಷನಲ್ ಮಿಷನ್ ಫಾರ್ ಮ್ಯಾನ್ಯು ಸ್ಕ್ರಿಪ್ಟ್ (ಐಜಿಎನ್‌ಸಿ) ನವದೆಹಲಿ ಹಾಗೂ ಎಸ್.ಎನ್. ಪದವಿ ಪೂರ್ವ ಕಾಲೇಜು ಸಹಯೋಗದೊಂದಿಗೆ ಸೋಮವಾರ ಆಯೋಜಿಸಿದ್ದ ಹಸ್ತಪ್ರಗಳ ಸಂರಕ್ಷಣಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಇತಿಹಾಸವನ್ನು ಉಳಿಸುವಲ್ಲಿ ಹಸ್ತಪ್ರತಿಗಳ ಪಾತ್ರ ಮಹತ್ವದ್ದಾಗಿದ್ದು, ಇದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

    ನಮ್ಮ ದೇಶದ ಅನೇಕ ಪಾರಂಪರಿಕ ಕಡತಗಳು, ಹಸ್ತಪ್ರತಿಗಳು ವಿದೇಶಿಯವರ ದಾಳಿಯಿಂದ ನಷ್ಟವಾಗಿದ್ದು, ಪ್ರಾಕೃತಿಕ ವಿಕೋಪದಿಂದ ಅನೇಕ ಮಹತ್ವದ ಕುರುಹುಗಳು ನಾಶವಾಗಿವೆ. ಯುವ ಸಮುದಾಯ ಪುರಾತನ ಹಸ್ತಪ್ರತಿಗಳ ಅಧ್ಯಯನ ಮತ್ತು ಸಂಶೋಧನೆಗೆ ಒತ್ತು ನೀಡಬೇಕು. ಆಗ ಮಾತ್ರ ಇತಿಹಾಸ ಉಳಿಯಲು ಸಾಧ್ಯ. ಇತ್ತೀಚೆಗೆ ಯಾವ ವಿಶ್ವ ವಿದ್ಯಾಲಯಗಳು ಹಸ್ತಪ್ರತಿಗಳ ಸಂರಕ್ಷಣೆ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ವ್ಯಾಕರಣ, ಜ್ಯೋತಿಷ್ಯ, ಗಣಿತ, ಛಂದಸ್ಸು ವೈದ್ಯ, ವೇದ-ಉಪನಿಷತ್ತುಗಳು ಇಂದಿಗೂ ಉಳಿಯಲು ಹಸ್ತಪ್ರತಿಗಳೇ ಕಾರಣವಾಗಿದೆ. ನಮ್ಮ ದೇಶದ ಹಸ್ತಪ್ರತಿಗಳು ವಿದೇಶಗಳಿಗೂ ಸಾಗಿಸಲ್ಪಟ್ಟಿದ್ದು, ಲೂಯಿಸ್ ರೈಸ್‌ರವರು 30 ಸಾವಿರ ಶಾಸನಗಳನ್ನು ಸಂಗ್ರಹಿಸಿದ್ದರು ಎಂದರು.

    ಎಸ್.ಎನ್. ಪಿಯು ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಎಸ್.ದಿನೇಶ್ ಮಾತನಾಡಿ, ಜಗತ್ತಿನ ಬಹಳಷ್ಟು ಸಮಸ್ಯೆಗಳಿಗೆ ಹಸ್ತಪ್ರತಿಗಳು ಹಾಗೂ ಶಿಲಾ ಶಾಸನಗಳಲ್ಲಿ ಪರಿಹಾರ ಕಂಡುಕೊಳ್ಳುವ ಮಾರ್ಗಸೂಚಿಗಳನ್ನು ವ್ಯಾಖ್ಯಾನಿಸಲಾಗಿದೆ. ಇತಿಹಾಸ, ಐತಿಹಾಸಿಕ, ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಹಸ್ತಪ್ರತಿಗಳು ಮಹತ್ವದ ಪಾತ್ರ ವಹಿಸಿವೆ ಎಂದು ತಿಳಿಸಿದರು.

    ಕಾರ್ಯನಿರ್ವಹಣಾಧಿಕಾರಿ ಮುರಳಿ ಮಾತನಾಡಿ, ಹಸ್ತಪ್ರತಿಗಳ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ ನೀಡಿದ್ದ ಎನ್‌ಆರ್‌ಜೆಎಂ ಯೋಜನೆಯಡಿ ದಕ್ಷಿಣ ಭಾರತದ ನಾಲ್ಕು ರಾಜ್ಯಗಳಿಂದ ಒಟ್ಟು 52 ಸಾವಿರ ಮಾಹಿತಿ ಪಟ್ಟಿ ತಯಾರಿಸಿ ಸಲ್ಲಿಸಲಾಗಿದೆ. 2005ರಿಂದ ಐಜಿಎನ್‌ಸಿಎ ಅಧೀನದಲ್ಲಿ ಕರ್ನಾಟಕದ ಏಳು ಜಿಲ್ಲೆಗಳನ್ನು ನಮ್ಮ ಕಾರ್ಯವ್ಯಾಪ್ತಿಗೆ ನೀಡಿದ್ದು, ಅದರ ಕಾರ್ಯ ಮುಂದುವರೆದಿದೆ. ಇದುವರೆಗೆ ಸುಮಾರು 25 ಸಾವಿರ ಹಸ್ತಪ್ರತಿಗಳನ್ನು ಸಂರಕ್ಷಿಸಲಾಗಿದೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ನ್ಯಾಯಾಂಗ ಇಲಾಖೆಯ ಸತೀಶ್ ಅಂಚೆ ಚೀಟಿಗಳನ್ನು ಪ್ರದರ್ಶಿಸಿದರು. ಸಂಸ್ಥೆಯ ನಿರ್ದೇಶಕ ಡಾ.ಎನ್.ಸುರೇಶ್ ಕುಮಾರ್, ಹಜಾರಿ ಪಾರ್ಶ್ವನಾಥ್, ಎಸ್.ಎನ್. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿಜಯಕುಮಾರ್, ಡಾ.ರಾಜೇಂದ್ರ ಪಾಟೀಲ್, ಉಪನ್ಯಾಸಕರು ಹಾಗೂ ಪ್ರಾಕೃತ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಆರ್.ಟಿ.ಮಹಾವೀರ್ ಹಾಗೂ ಬೋಧಕ ಮತ್ತು ಬೋದಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts