More

    ಕಾಂಗ್ರೆಸ್​ನಿಂದ ನಿರುದ್ಯೋಗಿಗಳ ಸರ್ವೆ: ಯುವ, ಮಹಿಳಾ ಘಟಕಕ್ಕೆ ಹೊಣೆ..

    ಬೆಂಗಳೂರು: ಚುನಾವಣೆ ಉದ್ದೇಶದಿಂದ ರಾಜ್ಯಾದ್ಯಂತ ನಿರುದ್ಯೋಗಿಗಳ ಮಾಹಿತಿ ಕಲೆ ಹಾಕಲು ನಿರ್ಧರಿಸಿರುವ ಕಾಂಗ್ರೆಸ್, ಡೇಟಾ ಸಂಗ್ರಹಣೆಗೆ ಮೊಬೈಲ್ ಆಪ್ ಸಿದ್ಧಪಡಿಸಿ ಯುವ ಕಾಂಗ್ರೆಸ್ ಪದಾಧಿಕಾರಿಗಳಿಗೆ ಸರ್ವೆ ಬಗ್ಗೆ ತರಬೇತಿ ನೀಡಿದೆ. ಸೋಮವಾರ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಪ್ ಬಗ್ಗೆ ಪದಾಧಿಕಾರಿಗಳಿಗೆ ಪರಿಚಯ ಮಾಡಿಕೊಡಲಾಯಿತು.

    ಪ್ರತಿ ಬೂತ್ ಮಟ್ಟದಲ್ಲೂ 4-5 ಜನತ ತಂಡ ಮನೆ ಮನೆಗೆ ಭೇಟಿ ಕೊಟ್ಟು ನಿರುದ್ಯೋಗಿಗಳಿದ್ದಾರೆಯೇ? ಎಂದು ಹುಡುಕಿ ಅವರ ವಿವರವನ್ನು ದಾಖಲಿಸಿಕೊಳ್ಳಲಿದೆ. ಹೆಸರು, ವಯಸ್ಸು, ಯಾವಾಗಿನಿಂದ ನಿರುದ್ಯೋಗ? ಕುಟುಂಬ ನಿರ್ವಹಣೆಗೆ ಬೇಕಾಗುವ ಹಣ ಹೀಗೆ ವಿವಿಧ ಮಾಹಿತಿ ಕಲೆ ಹಾಕಲಾಗುತ್ತದೆ. ಮುಂದಿನ ದಿನಗಳಲ್ಲಿ ನಿರುದ್ಯೋಗಿಗಳ ಸಮಾವೇಶ ಮಾಡುವ ಉದ್ದೇಶ ಹೊಂದಲಾಗಿದ್ದು, ಈ ಹಿನ್ನೆಲೆಯಲ್ಲಿ ಯುವಕರು, ನಿರುದ್ಯೋಗಿಗಳ ಮಾಹಿತಿ ಕಲೆ ಹಾಕುವುದು ಮತ್ತು ಅವರನ್ನು ಸಂಪರ್ಕದಲ್ಲಿ ಇಟ್ಟುಕೊಳ್ಳುವ ಪ್ರಯತ್ನ ನಡೆಯಲಿದೆ. ಈ ಬಗ್ಗೆ ಮಾಹಿತಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಿರುದ್ಯೋಗಿ ಯುವಕರನ್ನು ಹುಡುಕಿ, ಅವರಿಗೆ ಉದ್ಯೋಗ ಸೃಷ್ಟಿಸುವ ಬಗ್ಗೆ ಕಾಂಗ್ರೆಸ್ ಕಾರ್ಯಕ್ರಮ ರೂಪಿಸಿದೆ. ನಾನು, ಸಿದ್ದರಾಮಯ್ಯ ಸೇರಿ ಇತರ ನಾಯಕರೆಲ್ಲರೂ ಹಳಬರಾಗಿದ್ದೇವೆ. ಈಗಿನ ಯುವಕರು ಬಹಳ ಬುದ್ಧಿವಂತರಾಗಿದ್ದು, ಯುವಕರ ಧ್ವನಿ ಪಕ್ಷದ ಅಧ್ಯಕ್ಷರ ಧ್ವನಿಯಾಗಬೇಕು. ಹೀಗಾಗಿ ಎಲ್ಲರ ಅಭಿಪ್ರಾಯ ಪಡೆದುಕೊಳ್ಳಲಾಗುತ್ತಿದೆ ಎಂದರು.

    ಮುಂದೆ ನಾವು ಚುನಾವಣೆಗೆ ಹೋಗುವಾಗ ಯುವಕರಿಗೆ ಯಾವ ಭರವಸೆ ನೀಡಬೇಕು? ಪ್ರಣಾಳಿಕೆಯಲ್ಲಿ ಏನನ್ನು ಹೇಳಬೇಕು? ಕಳೆದ ಚುನಾವಣೆ ವೇಳೆ ರಾಹುಲ್ ಗಾಂಧಿ ನ್ಯಾಯ್ ಯೋಜನೆ ತಿಳಿಸಿದ್ದರು. ಅದೇ ರೀತಿ ಬೇರೆ ಉತ್ತಮ ಯೋಜನೆ ನೀಡಬಹುದೇ? ಎಂದು ಆಲೋಚನೆ ಮಾಡಲು ಅಭಿಪ್ರಾಯ ನೀಡಲು ಅವಕಾಶವಿದೆ ಎಂದರು.

    ಡಿಕೆ-ಪರಂ ಸಭೆ: ಪಕ್ಷದೊಳಗಿನ ಇತ್ತೀಚಿನ ಬೆಳವಣಿಗೆ ಹಾಗೂ ಮುಂದೆ ನಡೆಸಬೇಕಾದ ಸಮಾವೇಶಗಳ ಕುರಿತಂತೆ ಚರ್ಚೆ ನಡೆಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಭೆ ನಡೆಸಿದ್ದಾರೆ. ವಿವಿಧ ಸಮುದಾಯಗಳ ಸಮಾವೇಶ ನಡೆಸಬೇಕಿದೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮಾವೇಶಗಳನ್ನು ಪರಮೇಶ್ವರ್ ನೇತೃತ್ವದಲ್ಲಿ ನಡೆಸಲಾಗುತ್ತಿದೆ. ಬಳ್ಳಾರಿಯಲ್ಲಿ ಪರಿಶಿಷ್ಟ ಜಾತಿಯ ಸಮಾವೇಶ ಹಾಗೂ ಚಿತ್ರದುರ್ಗದಲ್ಲಿ ಪರಿಶಿಷ್ಟ ಪಂಗಡದ ಸಮಾವೇಶ ನಡೆಯುವುದು. ಈ ಸಮಾವೇಶ ಕುರಿತು ಉಭಯ ನಾಯಕರು ಚರ್ಚೆ ನಡೆಸಿದ್ದಾರೆಂದು ಗೊತ್ತಾಗಿದೆ.

    ಸಿದ್ದರಾಮಯ್ಯ ನಿವಾಸದಲ್ಲಿ ಆಪ್ತರ ಸಭೆ

    ತಮಗೆ 75 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಆಯೋಜಿಸುತ್ತಿರುವ ಸಮಾವೇಶದ ತಯಾರಿ ಬಗ್ಗೆ ಸಿದ್ದರಾಮಯ್ಯ ಸೋಮವಾರ ಸಭೆ ಕರೆದಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ಭೈರತಿ ಸುರೇಶ್, ಅಶೋಕ್ ಪಟ್ಟಣ ಸಭೆಯಲ್ಲಿದ್ದು, ಸಮಾವೇಶದ ಪೂರ್ವತಯಾರಿ ಬಗ್ಗೆ ಮಾಹಿತಿ ಹಂಚಿ ಕೊಂಡರು. ಈಗಾಗಲೆ ಸ್ಥಳ ಪರಿಶೀಲನೆ ನಡೆದಿದ್ದು, ಅಲ್ಲಿನ ಸ್ಥಿತಿಗತಿ, ಪ್ರತಿ ವಿಧಾನಸಭಾ ಕ್ಷೇತ್ರ ದಿಂದ ಜನರನ್ನು ಸೇರಿಸುವ ಬಗ್ಗೆ ವಿಚಾರ ವಿನಿಯಮ ನಡೆಸಲಾಗಿದೆ ಎಂದು ತಿಳಿದುಬಂದಿದೆ.

    ಆ.15ರಂದು ಸ್ವಾತಂತ್ರ್ಯ ನಡಿಗೆ

    ಕರ್ನಾಟಕ ಕಾಂಗ್ರೆಸ್ ಆಗಸ್ಟ್ 15ರಂದು ಬೆಂಗಳೂರಿನಲ್ಲಿ ಸ್ವಾತಂತ್ರ್ಯ ನಡಿಗೆ ಹಮ್ಮಿಕೊಂಡಿದ್ದು, ಸುಮಾರು ಒಂದು ಲಕ್ಷ ಮಂದಿ ಸೇರಿಸುವ ಉದ್ದೇಶ ಹೊಂದಿದೆ. ಎಐಸಿಸಿ ಸೂಚನೆಯಂತೆ ಪ್ರತಿ ಜಿಲ್ಲೆಯಲ್ಲಿ 75 ಕಿಮೀ ಪಾದಯಾತ್ರೆ ಮಾಡಲಾಗುತ್ತಿದೆ. ಹಾಗೆಯೇ ಬೆಂಗಳೂರಿನಲ್ಲಿ ರಾಜ್ಯದೆಲ್ಲೆಡೆಯಿಂದ ಪ್ರಮುಖರು, ಕಾರ್ಯಕರ್ತರು ಆಗಮಿಸಬೇಕೆಂದು ಸೂಚನೆ ಕೊಡಲಾಗಿದೆ. ಕನಿಷ್ಠ 1 ಲಕ್ಷ ಮಂದಿ ರಾಷ್ಟ್ರ ಧ್ವಜ ಹಿಡಿದು ಹೆಜ್ಜೆ ಹಾಕಬೇಕು. ಆ ಮೂಲಕ ರಾಷ್ಟ್ರೀಯ ದಾಖಲೆ ನಿರ್ವಿುಸಬೇಕು. ದೂರದ ಜಿಲ್ಲೆಗಳ ಪ್ರತಿ ವಿಧಾನಸಭಾ ಕ್ಷೇತ್ರದಿಂದ 500-1000 ಜನ ಈ ಕಾರ್ಯಕ್ರಮಕ್ಕೆ ಆಗಮಿಸಬೇಕು. ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳ ಪ್ರತಿ ಕ್ಷೇತ್ರದಿಂದ ಕನಿಷ್ಠ 3 ಸಾವಿರ ಜನ ಭಾಗವಹಿಸುವಂತೆ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಕಾಂಗ್ರೆಸ್ ನಾಯಕರ ಹೊರತಾಗಿ ಕ್ರೀಡೆ, ಸಿನಿಮಾ, ಸಾಹಿತ್ಯ ಸೇರಿ ವಿವಿಧ ಕ್ಷೇತ್ರದವರನ್ನು ಕರೆಸಿ ಪಕ್ಷದ ವೇದಿಕೆಯಲ್ಲಿ ಕಾಣಿಸುವ ಉದ್ದೇಶವಿದ್ದು, ಬಸವನಗುಡಿಯಲ್ಲಿ ಸಮಾರೋಪ ಸಮಾರಂಭ ನಡೆಸಲು ಬಯಸಲಾಗಿದೆ.

    ಇದೇ ವಿಚಾರವಾಗಿ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಈ ದೇಶಕ್ಕೆ ಕಾಂಗ್ರೆಸ್ ತಂದುಕೊಟ್ಟ ಸ್ವಾತಂತ್ರ್ಯವನ್ನು ಬಿಜೆಪಿಯವರು ಹೈಜಾಕ್ ಮಾಡಲು ಹೊರಟಿದ್ದಾರೆ. ಅವರು ಮನೆ, ಮನೆಯಲ್ಲೂ ತಿರಂಗಾ ಹಾರಿಸುತ್ತಾರಂತೆ. ಸಂತೋಷ. ಅವರು ಯಾರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ. ಆದರೂ ಸ್ವಾತಂತ್ರ್ಯ ನಮ್ಮದು ಎನ್ನುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಈ ಕಾರ್ಯಕ್ರಮವನ್ನು ಬಸವನಗುಡಿ ಮೈದಾನದಲ್ಲಿ ಮಾಡಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದು, ಅವಕಾಶ ನೀಡಿಲ್ಲ. ಇದು ಪಕ್ಷದ ಕಾರ್ಯಕ್ರಮ ಅಲ್ಲ. ದೇಶದ ಕಾರ್ಯಕ್ರಮ. ಇದಕ್ಕೆ ಅನುಮತಿ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ನಿಯೋಗ ತೆರಳಿ ಮನವಿ ಮಾಡುತ್ತೇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts