More

    ರಾಜ್ಯದಲ್ಲಿ ಉದ್ಯೋಗಯೋಗ: ತಗ್ಗಿದ ನಿರುದ್ಯೋಗ ದರ, ಉಪಕಸುಬು, ಸ್ವಯಂ ಉದ್ಯೋಗ ಹೆಚ್ಚಳ

    | ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

    ಇತ್ತೀಚಿನ ದಿನಗಳಲ್ಲಿ ಆರ್ಥಿಕ ಹಿಂಜರಿತ ಆತಂಕ ಹಿನ್ನೆಲೆಯಲ್ಲಿ ಟ್ವಿಟರ್, ಅಮೆಜಾನ್, ಮೆಟಾ ಸೇರಿ ದೊಡ್ಡ ದೊಡ್ಡ ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುತ್ತಿವೆ. ಆದರೆ ಕರ್ನಾಟಕದಲ್ಲಿ ಪರಿಸ್ಥಿತಿ ವಿಭಿನ್ನವಾಗಿದ್ದು, ನೆರೆ ರಾಜ್ಯಗಳಿಗೆ ಹೋಲಿಸಿದರೆ ನಿರುದ್ಯೋಗ ಪ್ರಮಾಣ ಕಡಿಮೆ ಇದೆ.

    ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ವರದಿ ಪ್ರಕಾರ, ರಾಜ್ಯದ ಪರಿಸ್ಥಿತಿ ಸುಧಾರಿಸಿದೆ. ಕರ್ನಾಟಕದ ನಿರುದ್ಯೋಗ ಪ್ರಮಾಣವನ್ನು ಇತರೆ ರಾಜ್ಯಗಳೊಂದಿಗೆ ತುಲನೆ ಮಾಡಿರುವ ಇಲಾಖೆ ಸಮಾಧಾನ ತರುವ ಸಂಗತಿಯನ್ನು ಪ್ರಸ್ತಾಪಿಸಿದೆ. ಸುತ್ತಮುತ್ತಲಲ್ಲಿ ಉದ್ಯೋಗ ಕಳೆದುಕೊಂಡು ಅತಂತ್ರರಾದವರ ಬಗ್ಗೆಯೇ ಚರ್ಚೆಯಾಗುತ್ತಿದ್ದ ನಡುವೆ ಪರಿಸ್ಥಿತಿ ಸುಧಾರಿಸಿರುವ ಸುಳಿವು ಸಿಕ್ಕಿರುವುದು ಕೊಂಚ ನೆಮ್ಮದಿ ಮೂಡಿಸಿದೆ.

    ಇದನ್ನೂ ಓದಿ: ಹಳಿ ದಾಟುವಾಗ ರೈಲು ಡಿಕ್ಕಿಯಾಗಿ ಯುವತಿ ದುರ್ಮರಣ: ವಿದ್ಯಾರ್ಥಿನಿಯ ಪ್ರಾಣ ಕಸಿದ ಮೊಬೈಲ್​!

    ರಾಜ್ಯದಲ್ಲಿ ಉದ್ಯೋಗಯೋಗ: ತಗ್ಗಿದ ನಿರುದ್ಯೋಗ ದರ, ಉಪಕಸುಬು, ಸ್ವಯಂ ಉದ್ಯೋಗ ಹೆಚ್ಚಳದೇಶದ ಪ್ರಮುಖ ರಾಜ್ಯಗಳ ಪೈಕಿ ಕರ್ನಾಟಕ (ನಗರ ಪ್ರದೇಶ) ಕಡಿಮೆ ನಿರುದ್ಯೋಗ ದರ ದಾಖಲಿಸಿದೆ. ನಿರುದ್ಯೋಗ ದರವು ಎಲ್ಲ ವ್ಯಕ್ತಿಗಳಿಗೆ ಶೇ.2.7 ಅಂದರೆ, ನಗರ ಮತ್ತು ಗ್ರಾಮೀಣವನ್ನು ಒಟ್ಟುಗೂಡಿಸಿ, ಅಖಿಲ ಭಾರತ ಮಟ್ಟದ ಶೇ.4.2ಕ್ಕೆ ಹೋಲಿಸಿದರೆ ಕಡಿಮೆ ಇದೆ ಎಂಬ ಸಂಗತಿಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಂಘಟಿತ ವಲಯ ದಲ್ಲಿ ಹಣಕಾಸು ಮತ್ತು ವಿಮೆ ಸೌಲಭ್ಯ ಸೇವೆಗಳು, ವೃತ್ತೀಯ ವೈಜ್ಞಾನಿಕ ಮತ್ತು ತಾಂತ್ರಿಕ ಸೇವೆಗಳು, ಸಾರ್ವಜನಿಕ ಆಡಳಿತ, ರಕ್ಷಣೆ ಮತ್ತು ಸಾಮಾಜಿಕ ಭದ್ರತೆಗೆ ಸಂಬಂಧಿಸಿದ ವಲಯಗಳಲ್ಲಿ ಉದ್ಯೋಗ ಪ್ರಮಾಣ ಏರಿಕೆಯಾಗಿದೆ.

    ಕೃಷಿ, ಅರಣ್ಯ ಮತ್ತು ಮೀನುಗಾರಿಕೆ ವಲಯ, ಗಣಿಗಾರಿಕೆ, ಸಗಟು, ಚಿಲ್ಲರೆ ವ್ಯಾಪಾರ, ಮೋಟಾರು ವಾಹನ ರಿಪೇರಿ, ಸಾರಿಗೆ ಮತ್ತು ದಾಸ್ತಾನು ಸಂಗ್ರಹಣೆ, ಮಾಹಿತಿ ತಂತ್ರಜ್ಞಾನ, ಸಾಮಾಜಿಕ ಸೇವೆ ಕ್ಷೇತ್ರಗಳ ಉದ್ಯೋಗ ಪ್ರಮಾಣ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದೆ. ವಸತಿ, ಉಪಾಹಾರ ಸೌಕರ್ಯ ಸೇವೆ, ಸ್ಥಿರ-ಚರಾಸ್ತಿ, ವ್ಯಾಪಾರ ಸೇವೆಗಳು, ಮನೋರಂಜನೆ, ವಿಹಾರ ಇತರೆ ಸೇವಾ ಚಟುವಟಿಕೆಗಳ ವಲಯದಲ್ಲಿ ಉದ್ಯೋಗ ಪ್ರಮಾಣ ತಟಸ್ಥವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 2018-19ರಲ್ಲಿ ಅಖಿಲ ಭಾರತ ನಿರುದ್ಯೋಗ ದರ ಶೇ.3.7 ಇದ್ದರೆ ಕರ್ನಾಟಕದಲ್ಲಿ ಶೇ.1.4 ಇತ್ತು ಎಂಬುದು ಗಮನಾರ್ಹ ಸಂಗತಿ.

    ನೋಂದಣಿ ಪ್ರಮಾಣ
    ಪ್ರಸ್ತುತ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡವರ ವಿಚಾರಕ್ಕೆ ಬರುವುದಾದರೆ 2022ರ ನವೆಂಬರ್​ನಲ್ಲಿ 2.25 ಲಕ್ಷ ನೋಂದಣಿಯಾಗಿತ್ತು. 2022ರ ಮಾರ್ಚ್​ನಲ್ಲಿ ಈ ಪ್ರಮಾಣ 2.34 ಲಕ್ಷವಿತ್ತು. ಅಂದರೆ ಶೇ.3.70 ಇಳಿಕೆಯಾಗಿದೆ. ಸ್ನಾತಕೋತ್ತರ ಪದವಿ ಶಿಕ್ಷಣ ಪಡೆದವರ ದಾಖಲಾತಿ ಪ್ರಮಾಣ ಶೇ.15.23, ಪದವಿ ಶಿಕ್ಷಣ ಪಡೆದವರ ದಾಖಲಾತಿ ಪ್ರಮಾಣ ಶೇ.6.95 ಇದೆ.

    ಐಟಿ ಕ್ಷೇತ್ರದಲ್ಲಿ ಆತಂಕ
    ವಿವಿಧ ಮುಂದುವರಿದ ರಾಷ್ಟ್ರಗಳಲ್ಲಿ ಜಾಗತಿಕ ಆರ್ಥಿಕ ಕುಸಿತದಿಂದ ದೊಡ್ಡ ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿವೆ. ರಾಜ್ಯದಲ್ಲಿ ಸಹ ಐಟಿ ಕಂಪನಿಗಳಲ್ಲಿ ಈ ಭಯ ಇದ್ದೇ ಇದೆ. ನೇಮಕಗಳನ್ನು ಮಾಡಿಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದು, ಹೊಸ ನೇಮಕಗಳನ್ನು ತಡೆ ಹಿಡಿದಿವೆ. ಹೀಗಾಗಿ ಉದ್ಯೋಗ ವಾಗ್ದಾನ ಪತ್ರ ಹಿಡಿದ ಸಾವಿರಾರು ಮಂದಿ ಕಂಪನಿಗಳ ಕರೆಗೆ ಕಾಯುತ್ತಿದ್ದಾರೆ.

    ಇದನ್ನೂ ಓದಿ: ಮುಕೇಶ್​ ಅಂಬಾನಿ ಕುಟುಂಬಕ್ಕೆ Z+ ಭದ್ರತೆ ಒದಗಿಸಲು ಸುಪ್ರೀಂಕೋರ್ಟ್​ ಆದೇಶ

    ಮತ್ತಷ್ಟು ಉದ್ಯೋಗ ಸೃಷ್ಟಿ
    ಕಳೆದ ವರ್ಷದ ನವೆಂಬರ್​ನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆದಿದ್ದು, ರಾಜ್ಯಕ್ಕೆ 10 ಲಕ್ಷ ಕೋಟಿಯಷ್ಟು ಹೂಡಿಕೆಯ ಭರವಸೆ ಸಿಕ್ಕಿತ್ತು, ಇದರಿಂದ 7 ಲಕ್ಷಕ್ಕಿಂತ ನೇರ ಉದ್ಯೋಗ ಸೃಷ್ಟಿಯಾಗುವ ಅವಕಾಶಗಳಿವೆ ಎಂದು ಸರ್ಕಾರ ಹೇಳಿಕೊಂಡಿತ್ತು. ಇದೀಗ 80ಕ್ಕಿಂತ ಹೆಚ್ಚು ಪ್ರಸ್ತಾವನೆಗಳಿಗೆ ರಾಜ್ಯ ಸರ್ಕಾರ ಎಲ್ಲ ರೀತಿಯ ಅನುಮೋದನೆ ಕೊಟ್ಟಿದೆ. ಕೆಲವು ಘಟಕ ಆರಂಭಿಸುವ ಪ್ರಕ್ರಿಯೆ ಆರಂಭಿಸಿವೆ. ಒಟ್ಟಾರೆ ಒಡಂಬಡಿಕೆ ಮಾಡಿಕೊಂಡ ಹೂಡಿಕೆದಾರರಿಗೆ 90 ದಿನದೊಳಗೆ ಅನುಮೋದನೆ ಕೊಡುವ ಗುರಿ ಹಾಕಿಕೊಂಡಿತ್ತು. ಈ ಒಡಂಬಡಿಕೆಗಳು ಕಾರ್ಯರೂಪಕ್ಕೆ ಬಂದರೆ ರಾಜ್ಯದಲ್ಲಿ ತಕ್ಕಮಟ್ಟಿನ ಉದ್ಯೋಗ ಕೊರತೆ ನೀಗಲಿದೆ ಎಂಬ ವಿಶ್ಲೇಷಣೆ ಇದೆ.

    ರಾಜಕೀಯ ಲೆಕ್ಕಾಚಾರ
    ಚುನಾವಣೆ ಸಂದರ್ಭದಲ್ಲಿ ಭ್ರಷ್ಟಾಚಾರ ಮತ್ತು ನಿರುದ್ಯೋಗ ವಿಷಯ ಪ್ರಧಾನ ಅಸ್ತ್ರವಾಗಿ ಬಳಕೆಯಾಗುವ ಸಾಧ್ಯತೆ ಇತ್ತು. ಪ್ರತಿಪಕ್ಷ ಕಾಂಗ್ರೆಸ್ ನಿರುದ್ಯೋಗ ವಿಚಾರವನ್ನೇ ಬಳಸಿ ರಾಜ್ಯಾದ್ಯಂತ ಮಾಹಿತಿ ಸಂಗ್ರಹ ಮಾಡುವುದು, ಸಮಾವೇಶ ನಡೆಸುವುದು ಮತ್ತು ಭರವಸೆ ನೀಡಲು ಬಯಸಿತ್ತು. ನಾಲ್ಕು ತಿಂಗಳ ಹಿಂದೆ ಆ ಪಕ್ಷಕ್ಕೆ ರಾಜ್ಯಾದ್ಯಂತ ಸಿಕ್ಕಿದ ನಿರುದ್ಯೋಗಿಗಳ ಸಂಖ್ಯೆ 84 ಸಾವಿರ. ಸರಿಸುಮಾರು ಒಂದು ಲಕ್ಷ ಯುವಕರ ಸಮಾವೇಶ ನಡೆಸಲು ಉದ್ದೇಶಿಸಿತ್ತು.

    ಕೇರಳದಲ್ಲಿ ಹೆಚ್ಚು
    ವಿವಿಧ ವಿಚಾರದಲ್ಲಿ ಕೇರಳ ಮಾಡೆಲ್ ಎಂದು ಪ್ರಚಾರ ಪಡೆಯುವ ರಾಜ್ಯದಲ್ಲಿ ನಿರುದ್ಯೋಗ ದರ ಹೆಚ್ಚಾಗಿದೆ. ಅಂಕಿಅಂಶಗಳ ಪ್ರಕಾರ ಅಲ್ಲಿ ಶೇ.10.1 ನಿರುದ್ಯೋಗವಿದ್ದು, ಐದು ವರ್ಷದ ಹಿಂದೆಯೂ ಇದೇ ಪ್ರಮಾಣದಲ್ಲಿದ್ದು ಪರಿಸ್ಥಿತಿ ಸುಧಾರಿಸಿದಂತೆ ಕಾಣಿಸುತ್ತಿಲ್ಲ.

    ಇದನ್ನೂ ಓದಿ: ಅನ್ಯಾಯ ಸರಿಪಡಿಸಲು ಅವಕಾಶ: ಬಿಜೆಪಿ ಸೇರಿದ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಹೇಳಿಕೆ

    ಪರಿಸ್ಥಿತಿ ಸುಧಾರಿಸಿದ್ದೇಗೆ?
    1. ಖಾಸಗಿ ವಲಯ ನಿಧಾನವಾಗಿ ಕೋವಿಡ್​ಪೂರ್ವದ ಸ್ಥಿತಿಯತ್ತ ಮರಳಿರುವುದು.
    2. ಹೊಸ ನೇಮಕ ಪ್ರಕ್ರಿಯೆ ಚುರುಕು, ಸ್ವಯಂ ಉದ್ಯೋಗದತ್ತ ಹೊರಳುತ್ತಿರುವ ಯುವ ಸಮೂಹ.
    3. ಗಿಗ್ ವರ್ಕ್(ಉಪವೃತ್ತಿ) ಕಲ್ಪನೆ ವ್ಯಾಪಕವಾಗಿ ಬೆಳೆಯುತ್ತಿರುವುದು.
    4. ಮಂದಗತಿಯಲ್ಲಾದರೂ ಐಟಿ ಕಂಪನಿಗಳು ನೇಮಕ ಪ್ರಕ್ರಿಯೆ ಮುಂದುವರಿಸಿರುವುದು.

    1,200 ಕೋಟಿ ರೂ. ಸೋರಿಕೆ ತಡೆ: ನರೇಗಾ ಕಾರ್ವಿುಕರಿಗೆ ಡಿಜಿಟಲ್ ಹಾಜರಾತಿ, ಅಕ್ರಮಕ್ಕೆ ಕಡಿವಾಣ

    ಅನ್ಯಾಯ ಸರಿಪಡಿಸಲು ಅವಕಾಶ: ಬಿಜೆಪಿ ಸೇರಿದ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts