More

    ಕುಕ್ಕೆ ಪರಿಸರಕ್ಕೆ ತಡೆರಹಿತ ವಿದ್ಯುತ್; 8 ಕೋಟಿ ವೆಚ್ಚದಲ್ಲಿ ಭೂಗತ ಕೇಬಲ್ ಅಳವಡಿಕೆ

    ರತ್ನಾಕರ ಸುಬ್ರಹ್ಮಣ್ಯ
    ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಇಲ್ಲಿನ ಪರಿಸರದಲ್ಲಿ ತಡೆ ರಹಿತ ವಿದ್ಯುತ್ ಪೂರೈಕೆಗೆ ಭೂಗತ ವಿದ್ಯುತ್ ತಂತಿ ಅಳವಡಿಕೆ ಯೋಜನೆಯು ಅನುಷ್ಠಾನಗೊಂಡು ಕಾಮಗಾರಿ ವೇಗದಿಂದ ನಡೆಯುತ್ತಿದೆ. ಕ್ಷೇತ್ರಕ್ಕೆ ತನ್ನದೇ ವಿದ್ಯುತ್ ಸಬ್‌ಸ್ಟೇಷನ್ ಇದ್ದರೂ ಅಲ್ಲಿಗೆ ಅರಣ್ಯದ ನಡುವೆ ವಿದ್ಯುತ್ ಹಾದು ಬರುವ ಕಾರಣ ಮಳೆ ಬಂದರೆ ವಿದ್ಯುತ್ ಕಡಿತವಾಗುತ್ತದೆ. ಪ್ರತೀ ಮಳೆಗಾಲದಲ್ಲಿ ಇಲ್ಲಿನ ಜನತೆ ದಿನಗಟ್ಟಲೆ ಕತ್ತಲೆಯಲ್ಲಿ ಕಳೆಯುವುದುಂಟು. ಹೀಗಾಗಿ ಈ ಯೋಜನೆ ಪರಿಸರದ ಜನಕ್ಕೆ ಮಹತ್ವದ್ದೆನಿಸಿದೆ.

    ಸುಮಾರು 8 ಕೋಟಿ ರೂ.ವೆಚ್ಚದ ಯೋಜನೆ ಇದಾಗಿದ್ದು, ಗುತ್ತಿಗಾರಿನಿಂದ ಕುಕ್ಕೆಗೆ 17.5 ಕಿ.ಮೀ ದೂರ ಕೇಬಲ್ ಅಳವಡಿಕೆಯಾಗಲಿದೆ. ಸುಬ್ರಹ್ಮಣ್ಯದ ಇಂಜಾಡಿ ತನಕ ಕೇಬಲ್ ಅಳವಡಿಕೆ ಮಾಡಲಾಗಿದ್ದು, ಇನ್ನು 2 ಕಿ.ಮೀ.ದೂರ ಕಾಮಗಾರಿ ನಡೆಯಬೇಕಾಗಿದೆ.

    ಗುತ್ತಿಗಾರಿನಿಂದ ಕುಕ್ಕೆಗೆ:  ಗುತ್ತಿಗಾರಿನ ಬಳ್ಳಕ್ಕದಲ್ಲಿ 33/11 ಕೆವಿ ನೂತನ ಸಬ್‌ಸ್ಟೇಷನ್ ಕಾಮಗಾರಿ ನಡೆಯುತ್ತಿದ್ದು, ಜುಲೈ ವೇಳೆಗೆ ಉಪಯೋಗಕ್ಕೆ ತೆರೆದುಕೊಳ್ಳಲಿದೆ. ಇಲ್ಲಿಂದ ಭೂಗತ ಮಾರ್ಗದ ಮೂಲಕ ಕುಕ್ಕೆಗೆ ಲಿಂಕ್‌ಲೈನ್ ಮಾಡಲಾಗಿದೆ. ಗುತ್ತಿಗಾರಿಗೆ ಬೆಳ್ಳಾರೆ ಸಬ್‌ಸ್ಟೇಷನ್‌ನಿಂದ ವಿದ್ಯುತ್ ಸರಬರಾಜಾಗಲಿದೆ. ಮಾಡಾವಿನ 110 ಕೆ.ವಿ ಸ್ಟೇಷನ್‌ನಿಂದ ಬೆಳ್ಳಾರೆ ಮೂಲಕ ನೇರವಾಗಿ ಗುತ್ತಿಗಾರಿಗೆ ಬರುತ್ತದೆ. ಬೆಳ್ಳಾರೆ ಮೂಲಕ ಬರುವ ಪಥದಲ್ಲಿ ಅರಣ್ಯ ಕಡಿಮೆ ಇರುವ ಕಾರಣ ಈ ಹಾದಿಯಲ್ಲಿ ವ್ಯತ್ಯಯ ಕಡಿಮೆ. ಸುಬ್ರಹ್ಮಣ್ಯಕ್ಕೆ ಕಡಬದಿಂದ ಬರುವ ವಿದ್ಯುತ್ ಸಂಪರ್ಕ ಕಡಿತಗೊಂಡಾಗ ಈ ವ್ಯವಸ್ಥೆ ಉಪಯೋಗಿಸಬಹುದು. ಕಡಬದಿಂದ ಕುಕ್ಕೆಗೆ ಬರುವ ಅರಣ್ಯಮಯ ಹಾದಿಯಲ್ಲಿ ನಿರಂತರ ವಿದ್ಯುತ್ ವ್ಯತ್ಯಯ ಜಾಸ್ತಿ. ಈಗಾಗಲೇ ಗುತ್ತಿಗಾರಿನಿಂದ ಸುಬ್ರಹ್ಮಣ್ಯದ ಇಂಜಾಡಿ ತನಕ ಕಾಮಗಾರಿ ಸಮಾಪ್ತಿಗೊಂಡಿದೆ. ಮುಂದೆ ಬೈಪಾಸ್ ಮೂಲಕ ಸಾಗಿ ಕುಮಾರಧಾರಾದಲ್ಲಿನ ವಿದ್ಯುತ್ ಸಬ್‌ಸ್ಟೇಷನ್ ತನಕ ಭೂಗತವಾಗಿ ತಂತಿ ಅಳವಡಿಕೆ ಕಾರ್ಯವು ಶೀಘ್ರ ಮುಗಿಯಲಿದೆ.

    ಗರಿಷ್ಠ ಸುರಕ್ಷತೆ: ಆರು ಅಡಿ ಹೊಂಡ ತೆಗೆದು ಅದರ ಮೇಲೆ 1 ಅಡಿ ಮರಳು ಹಾಕಿ ಅದರ ಮೇಲೆ ಬಲಿಷ್ಠವಾದ ಯುಜಿ ಕೇಬಲ್ ಅನ್ನು ಅಳವಡಿಸಿ ಮೇಲೆ 1ಅಡಿ ಮರಳು ಹಾಕಲಾಗುತ್ತದೆ. ಮರಳಿನ ಮೇಲೆ ಇಟ್ಟಿಗೆ ಇಟ್ಟು ಮತ್ತೆ ಮಣ್ಣಿನಿಂದ ಮುಚ್ಚಲಾಗುವುದು. ಕೇಬಲ್ ಮುಚ್ಚಿದ ನಂತರ ಪ್ರತಿ 500 ಮೀ ದೂರದಲ್ಲಿ ಕೇಬಲ್ ಹಾದು ಹೋಗಿರುವ ಬಗ್ಗೆ ಎಚ್ಚರಿಕೆ ಫಲಕ ಅಳವಡಿಸಲಾಗಿದೆ. ಬಲಿಷ್ಠವಾದ ಯುಜಿ ಕೇಬಲ್ 33ಕೆ.ವಿ ಸಾಮರ್ಥ್ಯ ಹೊಂದಿದ್ದು, 400 ಸ್ವೇರ್ ಎಂ.ಎಂ ವಿಸ್ತಾರ ಹೊಂದಿದೆ. ಲೈನ್‌ನಲ್ಲಿ ಎಲ್ಲಿಯಾದರೂ ಸಮಸ್ಯೆಯುಂಟಾದರೆ ಸರಿ ಮಾಡಲು ಪ್ರತಿ 5 ಕಿ.ಮೀ.ಗೆ ಒಂದೊಂದು ಜಿಒಎಸ್ ಅಳವಡಿಸಲಾಗಿದೆ.
     
    ಗ್ರಾಮೀಣ ಪ್ರದೇಶಕ್ಕೆ ಅನುಕೂಲ: ಸುಬ್ರಹ್ಮಣ್ಯ ಮಾತ್ರವಲ್ಲದೆ ಇಲ್ಲಿಂದ ವಿದ್ಯುತ್ ತೆರಳುವ ಪ್ರದೇಶಗಳಾದ ಸುಬ್ರಹ್ಮಣ್ಯ, ಗುತ್ತಿಗಾರು, ಕೊಲ್ಲಮೊಗ್ರ, ಬಾಳುಗೋಡು, ಯೇನೆಕಲ್ಲು, ಕಲ್ಮಕಾರು, ಗುತ್ತಿಗಾರು, ಪಂಜ ಎಲಿಮಲೆ ದೊಡ್ಡತೋಟ ಮೊದಲಾದ ಗ್ರಾಮೀಣ ಪ್ರದೇಶಕ್ಕೆ ನಿರಂತರ ವಿದ್ಯುತ್ ನೀಡಲು ಈ ಯೋಜನೆ ಸಹಕಾರಿ. ಕುಕ್ಕೆಗೆ ಮಾತ್ರವಲ್ಲದೆ ಆಸುಪಾಸಿನ ಗ್ರಾಮೀಣ ಭಾಗಕ್ಕೆ ನಿರಂತರ ವಿದ್ಯುತ್‌ಗೆ ಹಾಗೂ ರೈತರಿಗೆ ಗುಣಮಟ್ಟದ ವಿದ್ಯುತ್ ನೀಡಲು ಪೂರಕ ಯೋಜನೆ.
     
    ಭೂಗತ ಕೇಬಲ್ ವಿದ್ಯುತ್ ಸರಬರಾಜಿನಿಂದ ಗುಣಮಟ್ಟದ ನಿರಂತರ ವಿದ್ಯುತ್ ಒದಗಲಿದೆ. ಕುಕ್ಕೆ ಕ್ಷೇತ್ರಕ್ಕೆ ಮಾತ್ರವಲ್ಲದೆ ಕುಕ್ಕೆಯ ಸಬ್ ಸ್ಟೇಷನ್‌ನಿಂದ ವಿದ್ಯುತ್ ಪಡೆಯುವ ಗ್ರಾಮೀಣ ಪ್ರದೇಶಕ್ಕೆ, ರೈತರಿಗೂ 12 ಗಂಟೆ ನಿರಂತರ ತ್ರೀ ಫೇಸ್ ವಿದ್ಯುತ್ ಒದಗಿಸಲು ಕೂಡಾ ಈ ಯೋಜನೆ ಪೂರಕ.
    -ಎಸ್.ಅಂಗಾರ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು
     
    ಭೂಗತ ಮಾರ್ಗದ ಮೂಲಕ ಕೇಬಲ್ ಅಳವಡಿಕೆ ಕಾರ್ಯ ಗುತ್ತಿಗಾರಿನಿಂದ ಸುಬ್ರಹ್ಮಣ್ಯದ ಇಂಜಾಡಿ ತನಕ ನೆರವೇರಿದೆ. ಬಲಿಷ್ಠ ಮತ್ತು ಗುಣಮಟ್ಟದ ಯುಜಿ ಕೇಬಲ್ ಮೂಲಕ ಭೂಗತವಾಗಿ ವಿದ್ಯುತ್ ಪೂರೈಕೆಯಾಗಲಿದೆ. 17.5 ಕಿ.ಮೀ ದೂರದ ಹಾದಿಯಲ್ಲಿ ಪ್ರತಿ 5 ಕಿ.ಮೀ.ಗೆ ಒಂದರಂತೆ 6 ಕಡೆ ಸುರಕ್ಷತೆಗಾಗಿ ಜಿಒಎಸ್ ಅಳವಡಿಸಲಾಗಿದೆ
    -ಚಿದಾನಂದ ಕೆ. ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಸುಬ್ರಹ್ಮಣ್ಯ ಉಪವಿಭಾಗ

     



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts