More

    ಅನಧಿಕೃತ ನೀರು ಬಳಕೆದಾರರ ವಿರುದ್ಧ ಕ್ರಮಕೈಗೊಳ್ಳಿ- ನೀರಾವರಿ ಇಲಾಖೆ ಅಧಿಕಾರಿಗಳಿಗೆ ಶಾಸಕ ವೆಂಕಟರಾವ್ ನಾಡಗೌಡ ಸೂಚನೆ

    ಸಿಂಧನೂರು: ತಾಲೂಕಿನ 32, 36 ಹಾಗೂ 54 ಉಪ ಕಾಲುವೆಯಿಂದ ಅನಧಿಕೃತ ನೀರು ಬಳಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಶಾಸಕ ವೆಂಕಟರಾವ್ ನಾಡಗೌಡ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.

    ನಗರದ ಶಾಸಕರ ಕಚೇರಿಯಲ್ಲಿ ಶನಿವಾರ ನಡೆದ ನೀರಾವರಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಮೇಲ್ಭಾಗದಲ್ಲಿ ಅನಧಿಕೃತ ಪೈಪ್ ಅಳವಡಿಸುವುದರಿಂದ ಟೇಲೆಂಡ್(ಕೊನೆ)ಭಾಗಕ್ಕೆ ನೀರು ಸಮರ್ಪಕವಾಗಿ ತಲುಪುತ್ತಿಲ್ಲ. ಮೂರು ಉಪಕಾಲುವೆ ವ್ಯಾಪ್ತಿಯಲ್ಲಿ ದೊಡ್ಡ ಪೈಪ್‌ಗಳನ್ನು ಅಳವಡಿಸಿ ಅಕ್ರಮವಾಗಿ ಕಾಲುವೆ ನೀರು ಪಡೆಯುತ್ತಿರುವ ಬಗ್ಗೆ ದೂರುಗಳಿವೆ. ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ಮಾಡಬೇಕು. ಅಕ್ರಮ ನೀರಾವರಿ ಯಾರೇ ಮಾಡಿರಲಿ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಹಿಂಜರಿಯಬಾರದು ಎಂದು ತಿಳಿಸಿದರು.

    ನೀರಾವರಿ ಅಧಿಕಾರಿಗಳು ಪರಿಶೀಲನೆ ನಡೆಸಿ ಎಲ್ಲ ಪಂಪ್‌ಸೆಟ್‌ಗಳನ್ನು ವಶಕ್ಕೆ ಪಡೆದು, ಕೇಸ್ ದಾಖಲಿಸಿ ಕ್ರಮ ಜರುಗಿಸಬೇಕು. ಅಕ್ರಮ ಪಂಪ್‌ಸೆಟ್ ಅಳವಡಿಸಿಕೊಂಡವರ ವಿದ್ಯುತ್ ಸಂಪರ್ಕವನ್ನು ಜೆಸ್ಕಾ ಕಡಿತಗೊಳಿಸಬೇಕು. ನೀರನ್ನು ಪೋಲು ಮಾಡದೆ ಮಿತವಾಗಿ ಬಳಸಬೇಕು. ನೀರಾವರಿ ಇಲಾಖೆಗಳಲ್ಲಿ ವಾಹನಗಳ ಕೊರತೆ ಇರುವುದು ಗಮನಕ್ಕಿದ್ದು, ಈ ಕುರಿತು ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಅನುಕೂಲ ಕಲ್ಪಿಸಲಾಗುವುದು ಎಂದರು.

    ತುಂಗಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ ನೀರು ಹರಿಸಿದ್ದರೂ ಕೆಳಭಾಗಕ್ಕೆ ತಲುಪದಿರುವ ಬಗ್ಗೆ ರೈತರು ದೂರವಾಣಿ ಮೂಲಕ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೇಲ್ಭಾಗದಲ್ಲಿ ಬಂದ್ ಮಾಡಿ ಉಪಕಾಲುವೆಗಳ ಗೇಟ್‌ಗಳಲ್ಲಿ ಸರಿಯಾಗಿ ಗೇಜ್ ಅಳವಡಿಸಿ ಕೆಳಭಾಗಕ್ಕೆ ಸಮರ್ಪಕವಾಗಿ ನೀರು ಹರಿಸಬೇಕು ಎಂದು ಸಲಹೆ ನೀಡಿದರು.
    ನೀರಾವರಿ ಇಲಾಖೆಯ ಎಇ ಈರಣ್ಣ ಎಇಇ ಪ್ರಕಾಶ, ಹನುಮಂತಪ್ಪ, ನಾಗಪ್ಪ, ಸೂಗಪ್ಪ, ಜೆಸ್ಕಾಂ ಎಇಇ ಚಂದ್ರಶೇಖರ ದೇಸಾಯಿ, ಉಪ ತಹಸೀಲ್ದಾರ ಅಂಬಾದಾಸ್, ಧರ್ಮನಗೌಡ ಮಲ್ಕಾಪುರ, ತಾಪಂ ಮಾಜಿ ಸದಸ್ಯ ಚಂದ್ರಭೂಪಾಲ ನಾಡಗೌಡ ಇದ್ದರು.

    ಈಗಾಗಲೇ ಎರಡನೆ ಬೆಳೆಗೆ ಕಾಲುವೆಯಲ್ಲಿ ನೀರು ಹರಿಸಲಾಗುತ್ತಿದೆ. ಏ.15 ವರೆಗೆ ಎಡದಂಡೆ ನಾಲೆಗೆ ನೀರು ಹರಿದು ಬರಲಿದ್ದು ಐಸಿಸಿ ಸಭೆ ಕರೆಯುವ ಅಗತ್ಯವಿಲ್ಲ. ನೀರಿನ ಸಂಗ್ರಹದ ಆಧಾರದ ಮೇಲೆ ಅವಶ್ಯಕತೆ ಬಿದ್ದರೆ ಐಸಿಸಿ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು.
    | ವೆಂಕಟರಾವ್ ನಾಡಗೌಡ ಶಾಸಕ ಸಿಂಧನೂರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts