More

    ಕಡಿಮೆಯಾಗದ ಬಾಲ್ಯ ವಿವಾಹ; ನ್ಯಾಯಾಧೀಶ ದೀಪಕ್‌ಪಾಟೀಲ್ ಕಳವಳ ಕಾನೂನು ಅರಿವು ಹೊಂದಲು ಸಲಹೆ

    ನೆಲಮಂಗಲ: ಬಾಲ್ಯ ವಿವಾಹ ಸಾಮಾಜಿಕ ಪಿಡುಗು. ಕಠಿಣ ಕಾನೂನುಗಳಿದ್ದರೂ ಬಾಲ್ಯ ವಿವಾಹ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಕಾಯ್ದೆ ಉದ್ದೇಶ ಸಫಲವಾಗಬೇಕಾದರೆ ಸಾಮಾಜಿಕ ಅರಿವು ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ದೀಪಕ್‌ಪಾಟೀಲ್ ತಿಳಿಸಿದರು.

    ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ನೆಲಮಂಗಲ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕಾರ್ಯವಿಧಾನ ಕುರಿತು ಆಯೋಜಿಸಿದ್ದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

    ವಿವಾಹ ಹುಡುಗ, ಹುಡುಗಿಗೆ ಸಾಮಾಜಿಕ ಭದ್ರತೆ ನೀಡುತ್ತದೆ. ಆದರೆ, ಅದೆ ವಿವಾಹ ಅಸಿಂಧುವಾಗುವಂತಿದ್ದರೆ ಅದಕ್ಕೆ ಅರ್ಥವೇ ಇರುವುದಿಲ್ಲ. ಹಿಂದು ವಿವಾಹ ಕಾಯ್ದೆ ಪ್ರಕಾರ ಮದುವೆಗೆ ಹುಡುಗನಿಗೆ 21 ವರ್ಷ ಹಾಗೂ ಹುಡುಗಿಗೆ 18 ವರ್ಷವಾಗಿರಬೇಕು. ಬಾಲ್ಯ ವಿವಾಹ ಮಾಡುವುದು ವೈದ್ಯಕೀಯವಾಗಿ ಮತ್ತು ಸಾಮಾಜಿಕವಾಗಿ ಸರಿಯಲ್ಲ. ಅಪ್ರಾಪ್ತೆಯರಿಗೆ ವಿವಾಹ ಮಾಡುವುದರಿಂದ ಗರ್ಭಪಾತ, ಬಾಣಂತಿ ಸಾವು ಪ್ರಕರಣ ಹೆಚ್ಚುತ್ತವೆ ಎಂದು ತಿಳಿಸಿದರು.

    ತಹಸೀಲ್ದಾರ್ ಕೆ.ಮಂಜುನಾಥ್ ಮಾತನಾಡಿ, ಬಾಲ್ಯ ವಿವಾಹ ಎಂಬ ಅನಿಷ್ಠ ಪದ್ಧತಿ ಅನಾದಿಕಾಲದಿಂದಲ್ಲೂ ನಡೆದು ಬಂದಿದೆ. ದೇಶ ಜಾಗತಿಕಮಟ್ಟದಲ್ಲಿ ಎಷ್ಟೇ ಅಭಿವೃದ್ಧಿ ಸಾಧಿಸಿದರೂ ಇಂತಹ ಮೌಢ್ಯಗಳಿಂದ ಹೊರಬರಲು ಸಾಧ್ಯವಾಗಿಲ್ಲ. ಪರಿಣಾಮಕಾರಿ ಕಾಯ್ದೆಗಳಿದ್ದರೂ ಕಾನೂನು ಮತ್ತು ಸಮಾಜದ ಕಣ್ತಪ್ಪಿಸಿ ಬಾಲ್ಯ ವಿವಾಹ ನಡೆಸುವ ಮೂಲಕ ಪಾಲಕರೇ ಮಕ್ಕಳ ಭವಿಷ್ಯಕ್ಕೆ ಮುಳ್ಳಾಗುತ್ತಿದ್ದಾರೆ ಎಂದು ಬೇಸರಿಸಿದರು.

    ಬಾಲ್ಯ ವಿವಾಹ ತಡೆದ ಸಂದರ್ಭದಲ್ಲಿ ಆ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದರೆ, ಅವರಿಗೆ ಸೂಕ್ತ ಆಪ್ತ ಸಮಾಲೋಚನೆ ಮೂಲಕ ಅವರನ್ನು ಈ ಸಂಕೋಲೆಯಿಂದ ಪಾರಾಗುವಂತೆ ಮಾಡಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಉಪನಿರ್ದೇಶಕ ಎಸ್.ನಟರಾಜು ತಿಳಿಸಿದರು.

    ಕ್ಷೇತ್ರ ಶಿಕ್ಷಾಣಧಿಕಾರಿ ಎಂ.ಎಚ್.ತಿಮ್ಮಯ್ಯ, ರಂಗಪ್ಪ, ಕಾರ್ಮಿಕ ನಿರೀಕ್ಷಕ ಧನಪಾನ್‌ನಾಯಕ್, ಎಸ್‌ಐ ಜಯಂತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಪುಷ್ಪಾ, ವಿಜಯಲಕ್ಷ್ಮೀ, ಹೇಮಾ, ಸುಜಾತಾ, ಮಕ್ಕಳ ಸಹಾಯವಾಣಿ ಸಂಯೋಜಕ ದಿನೇಶ್, ಸಂಪನ್ಮೂಲ ವ್ಯಕ್ತಿ ಮಂಜುನಾಥ್, ನಾಗವಣಿ ಮತ್ತಿತರರು ಉಪಸ್ಥಿತರಿದ್ದರು.

    ಅತ್ಯಾಚಾರಿಯೊಂದಿಗೆ ವಿವಾಹ!
    ಪೋಕ್ಸೋ ಕಾಯ್ದೆ ಜಾರಿಗೆ ಬಂದ ಬಳಿಕ ಬಾಲ್ಯ ವಿವಾಹಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ಅಪ್ರಾಪ್ತೆಯರ ಮೇಲೆ ಅತ್ಯಾಚಾರ ನಡೆದಾಗ ಅತ್ಯಾಚಾರಿಯೊಂದಿಗೆ ವಿವಾಹ ಮಾಡಿಸುವ ಪ್ರಕಣ ಕಂಡುಬರುತ್ತಿವೆ. ಇಡೀ ಸಮಾಜ ಜಾಗೃತವಾಗುವ ಅಗತ್ಯವಿದ್ದು, ಬಾಲ್ಯ ವಿವಾಹ ತಡೆಗಟ್ಟಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜತೆಗೆ ಪ್ರತಿಯೊಬ್ಬ ಅಧಿಕಾರಿಗಳು ಹಾಗೂ ಸಾರ್ವಜನಿಕರು ಕೈಜೋಡಿಸಬೇಕು ಎಂದು ನ್ಯಾಯಾಧೀಶ ದೀಪಕ್‌ಪಾಟೀಲ್ ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts