More

    ಕರೊನಾ ಸೋಂಕಿಗೆ ಉಳ್ಳಾಲದ ಮಹಿಳೆ ಬಲಿ

    ಉಳ್ಳಾಲ: ಕರೊನಾ ಸೋಂಕಿಗೆ ಮಂಗಳವಾರ ವೃದ್ಧರೊಬ್ಬರು ಬಲಿಯಾದ ಬೆನ್ನಲ್ಲೇ, ಬೇಧಿಯಿಂದ ಬಳಲುತ್ತಿದ್ದ ಉಳ್ಳಾಲ ಆಜಾದ್‌ನಗರದ 57 ವರ್ಷದ ಮಹಿಳೆಯೋರ್ವರು ಬುಧವಾರ ಮೃತಪಟ್ಟಿದ್ದಾರೆ.
    ನಾಲ್ಕು ದಿನಗಳ ಹಿಂದೆ ತೊಕ್ಕೊಟ್ಟಿನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಅಧಿಕ ರಕ್ತದೊತ್ತಡ, ಹೈಪರ್ ಥೈರಾಯ್ಡ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಲ್ಲಿ ಮಂಗಳವಾರ ರಾತ್ರಿ ಕರೊನಾ ಸೋಂಕು ಕಾಣಿಸಿಕೊಂಡಿತ್ತು ಎಂದು ತಿಳಿದುಬಂದಿದೆ.
    ಬೇಧಿ ಸಮಸ್ಯೆ ಉಂಟಾಗಿದ್ದರಿಂದ ಜೂನ್ 19ರಂದು ಅವರು ತೊಕ್ಕೊಟ್ಟು ಜಂಕ್ಷನ್‌ನ ಖಾಸಗಿ ಆಸ್ಪತ್ರೆಗೆ ಅವರು ದಾಖಲಾಗಿದ್ದರು. 21ರಂದು ಬಿಡುಗಡೆಗೊಂಡು ಕುತ್ತಾರ್ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಜ್ವರವೂ ಇದ್ದ ಕಾರಣ ಗಂಟಲು ದ್ರವ ತಪಾಸಣೆಗೆ ಕಳುಹಿಸಲಾಗಿತ್ತು. ಮಂಗಳವಾರ ಬಂದ ವರದಿಯಲ್ಲಿ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

    ಪಕ್ಕದ ಮನೆ ಮಹಿಳೆಗೂ ಸೋಂಕು
    ಮೃತ ಮಹಿಳೆಯ ಪಕ್ಕದ ಮನೆಯ ಮಹಿಳೆಗೂ ಸೋಂಕು ಧೃಡಪಟ್ಟಿದೆ. ಮೃತ ಮಹಿಳೆಯಂತೆ ಪಕ್ಕದ ಮನೆಯ ಮಹಿಳೆಗೂ ಬೇಧಿ ಸಮಸ್ಯೆ ಇದ್ದ ಕಾರಣ, ಜೂ.20ರಂದು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ಸಂಬಂಧಪಟ್ಟ ಉಳ್ಳಾಲದ ಆಸ್ಪತ್ರೆಗೆ ದಾಖಲಾಗಿದ್ದು, 22ರಂದು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಕುತ್ತಾರ್ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಟಲು ದ್ರವ ತಪಾಸಣೆಯ ವರದಿ ಮಂಗಳವಾರ ಬಂದಿದ್ದು ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಒಂದೇ ಕಂಪೌಂಡ್‌ನೊಳಗಿರುವ ಎರಡು ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಮೃತ ಮತ್ತು ಸೋಂಕಿತ ಮಹಿಳೆೆಯರ ಮನೆಗಳು ಒಂದೇ ಕಂಪೌಂಡ್‌ನಲ್ಲಿದ್ದು ಅವರಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ, ಅಲ್ಲದೆ ಅವರಿಗೆ ಸೋಂಕು ತಗುಲಿರುವ ಹಿನ್ನೆಲೆಯೂ ನಿಗೂಢವಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ಕಲೆ ಹಾಕುತ್ತಿದೆ. ಇಬ್ಬರೂ ಎರಡು ದಿನ ಆಸ್ಪತ್ರೆಗಳಲ್ಲಿದ್ದ ಕಾರಣ ಆಸ್ಪತ್ರೆ ಸಿಬ್ಬಂದಿಗೂ ಕರೊನಾ ಭೀತಿ ಎದುರಾಗಿದೆ. ರೋಗಿಯ ಸಂಪರ್ಕದಲ್ಲಿದ್ದ ಸಿಬ್ಬಂದಿ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಚಿಂತನೆ ನಡೆಸಿದ್ದು, ಗಂಟಲುದ್ರವ ಪರೀಕ್ಷೆಗೆ ಶಿಫಾರಸು ಮಾಡಲಾಗಿದೆ.

    ಉಳ್ಳಾಲ ಠಾಣೆ ಎಸ್‌ಐಗೆ ಸೋಂಕು
    ಉಳ್ಳಾಲ: ಇಲ್ಲಿನ ಠಾಣಾ ಎಸ್‌ಐಗೆ ಕರೊನಾ ಸೋಂಕು ದೃಢಪಟ್ಟಿದೆ. ಅವರು ತಲಪಾಡಿ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಠಾಣೆಯನ್ನು ಸೀಲ್‌ಡೌನ್ ಮಾಡುವ ಬಗ್ಗೆ ಇಂದು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿದು ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts