More

    ರಾಜಕಾಲುವೆ ಮೇಲೆಯೇ ಕಟ್ಟಡ!

    ಅನ್ಸಾರ್ ಇನೋಳಿ ಉಳ್ಳಾಲ

    ಮಳೆಗಾಲದಲ್ಲಿ ನೀರು ಹರಿಯುವ ರಾಜಕಾಲುವೆ ಮೇಲೆ ಖಾಸಗಿ ಕಟ್ಟಡ ಎದ್ದು ನಿಂತಿದೆ. ಮಳೆ ಬಂದರೆ ಕಾಲುವೆ ಬ್ಲಾಕ್ ಆಗಿ ನೀರೆಲ್ಲಾ ಸ್ಥಳೀಯ ಮನೆಗಳಿಗೆ ನುಗ್ಗಲಿದೆ. ಹಲವು ವರ್ಷಗಳ ಸಮಸ್ಯೆ ಬಗೆಹರಿಸುವಲ್ಲಿ ಅಧಿಕಾರಿಗಳು ತೋರಿರುವ ಅಸಹಾಯಕತೆ ಹತ್ತಾರು ಅನುಮಾನಗಳನ್ನು ಹುಟ್ಟುಹಾಕಿವೆ…

    -ಇದು ಕೆರೆಬೈಲ್ ನಿವಾಸಿಗರ ಕಥೆ! ಚೆಂಬುಗುಡ್ಡೆ ಹಿಂದು ರುದ್ರಭೂಮಿ ಬಳಿಯಿಂದ ಕೆರೆಬೈಲ್, ಕಲ್ಲಾಪು ಆಗಿ ಮಳೆನೀರು ನೇರವಾಗಿ ನೇತ್ರಾವತಿ ನದಿ ಸೇರುವ ರಾಜಕಾಲುವೆ ಇದೆ. ಇದು ಎರಡೂವರೆ ಕಿ.ಮೀ.ನಷ್ಟು ಉದ್ದವಿದೆ. ಆದರೆ ಕಾಲುವೆಯಲ್ಲಿ ಹೂಳು ತುಂಬಿಕೊಂಡಿದ್ದು, ಮಳೆಗಾಲದಲ್ಲಿ ಹೂಳೆತ್ತುವ ಕೆಲಸ ಮಾಡಲಾಗುತ್ತದೆ. ಆದರೂ ನೀರು ಸರಾಗವಾಗಿ ಹರಿಯಲು ಕಲ್ಲಾಪುವಿನಲ್ಲಿರುವ ಖಾಸಗಿ ಸಭಾಂಗಣದ ಕಟ್ಟಡ ಅಡ್ಡಿಯಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

    ಈ ಸಭಾಂಗಣಕ್ಕೆ ಬೇಕಾದ ಅಡುಗೆ ಕೋಣೆಯ ಕಟ್ಟಡ ಕಾಲುವೆಯ ಮೇಲ್ಭಾಗದಲ್ಲೇ ರಾಜಾರೋಷವಾಗಿ ನಿರ್ಮಿಸಲಾಗಿದೆ. ಇದರಿಂದ ಕಾಲುವೆಯಲ್ಲಿ ಹೂಳು ತುಂಬಿ ಎತ್ತರದ ಭಾಗದಿಂದ ಹರಿದು ಬರುವ ನೀರು ಅಡುಗೆ ಕೋಣೆಯ ಕಟ್ಟಡದ ಅಡಿಭಾಗದಲ್ಲಿ ನಿಂತು ಸ್ಥಳೀಯ ಮನೆಗಳಿಗೆ ನುಗ್ಗುತ್ತದೆ. ಈ ಬಗ್ಗೆ ಸ್ಥಳೀಯರು ನಗರಸಭೆ ಮಾತ್ರವಲ್ಲದೆ ಮೇಲಧಿಕಾರಿಗಳಿಗೂ ದೂರು ನೀಡಿದ್ದಾರೆ. ದೂರು ಬಂದ ತಕ್ಷಣ ಇಂಜಿನಿಯರ್‌ಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ನಂತರ ಪತ್ತೆಯೇ ಇರುವುದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

    ರಸ್ತೆ ಸಂಪರ್ಕಕ್ಕೂ ಅಡ್ಡಿ

    ಕೆರೆಬೈಲ್ ಪ್ರದೇಶ ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿದೆ. ಕೆರೆಬೈಲ್‌ನಲ್ಲಿ ಕಚ್ಚಾ ರಸ್ತೆಯಿದ್ದು, ಹಿಂದೆ ಈ ರಸ್ತೆಯ ಮೂಲಕ ಕಲ್ಲಾಪು ರಾ.ಹೆ.ಗೆ ನಡೆದುಕೊಂಡು ಹೋಗಲು ಆಗುತ್ತಿತ್ತು. ಹೀಗೆ ಹೋದರೆ ಕೇವಲ ಅರ್ಧ ಕಿ.ಮೀ. ಮಾತ್ರ ಆಗುತ್ತಿತ್ತು. ಆದರೆ ಇಲ್ಲಿನ ರಸ್ತೆ ಸಭಾಂಗಣದ ಅಡುಗೆ ಕೋಣೆಗಾಗಿ ಮುಚ್ಚಲ್ಪಟ್ಟ ಕಾರಣ ತೊಕ್ಕೊಟ್ಟು ಮೂಲಕ ಹೋಗಬೇಕಿದ್ದು, ಎರಡು ಕಿ.ಮೀ. ಸಂಚರಿಸಬೇಕಿದೆ.

    ರಾಜಕಾಲುವೆಗೆ ತಾಗಿಕೊಂಡು ಇರುವ ರಸ್ತೆ ವಾಹನಗಳ ಓಡಾಟಕ್ಕೆ ಯೋಗ್ಯವಾಗಿದ್ದರೂ ಅಭಿವೃದ್ಧಿ ಕಾಣದೆ ಸೊರಗಿದೆ. ಕಾಲುವೆ ಜತೆ ರಸ್ತೆಗೂ ಖಾಸಗಿ ಕಟ್ಟಡ ಕಂಟಕವಾಗಿ ಕಾಡಿದೆ. ಸ್ಥಳೀಯ ಭಾಗದಲ್ಲಿ ಅಗ್ನಿ ಅನಾಹುತ ಆದರೆ ವಾಹನ ಬರಲು ರಸ್ತೆಯೇ ಇಲ್ಲದ ಪರಿಸ್ಥಿತಿ ಇಲ್ಲಿಯದ್ದು. ಆದರೂ ಅಧಿಕಾರಿಗಳದ್ದು ಜಾಣಮೌನ. ಅಧಿಕಾರಿಗಳ ಹಿಂದೆ ಒತ್ತಡ ಇದೆ ಎನ್ನುವ ಆರೋಪ ಸ್ಥಳೀಯರದ್ದು.

    ಕೆರೆಯೊಂದಿಗೆ ರಸ್ತೆ ಅಭಿವೃದ್ಧಿ ಕನಸು

    ಹಿಂದೆ ಈ ಪ್ರದೇಶ ಕೃಷಿ ಆವೃತ ಆಗಿದ್ದು, ನೂರಾರು ಎಕರೆ ಗದ್ದೆ, ಗುಡ್ಡ, ಪಕ್ಕದಲ್ಲೇ 40 ಸೆಂಟ್ಸ್ ಜಮೀನಿನಲ್ಲಿ ದೊಡ್ಡ ಕೆರೆಯಿತ್ತು. ಕೆರೆಯ ನೀರು ಸೀಯಾಳ ನೀರಿನ ಮಾದರಿಯಲ್ಲಿದ್ದ ಕಾರಣ ಸ್ಥಳೀಯರು ಮಾತ್ರವಲ್ಲದೆ ತೊಕ್ಕೊಟ್ಟು, ಇತರ ಭಾಗಗಳಿಂದಲೂ ಜನರು ಇಲ್ಲಿಗೆ ಬಂದು ಕುಡಿಯಲು ಹಾಗೂ ಇತರ ಕಾರ್ಯಕ್ಕೆ ನೀರು ಬಳಸುತ್ತಿದ್ದರು. ಗದ್ದೆಯಲ್ಲಿ ಎರಡು ಬೆಳೆ ತೆಗೆದು ತರಕಾರಿ ಬೆಳೆಸಲಾಗುತ್ತಿತ್ತು. ಈ ಕಾರಣದಿಂದಲೇ ಇಲ್ಲಿಗೆ ಕೆರೆಬೈಲ್ ಎನ್ನುವ ಹೆಸರು ಬಂದಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಜೆರಾಲ್ಡ್ ಅಪೋಸ್.

    ಕ್ರಮೇಣ ಕೆರೆಯಲ್ಲಿ ಹೂಳು ತುಂಬಿದ್ದು, ಪ್ರಸ್ತುತ ಸಂಪೂರ್ಣ ಮುಚ್ಚಲ್ಪಟ್ಟು ಗಿಡ, ಮರಗಳು ಬೆಳೆದಿವೆ. ಇದರ ಅಭಿವೃದ್ಧಿಗೆ ಮೂಡಾದಿಂದ 60 ಲಕ್ಷ ರೂ. ಅನುದಾನ ಮೀಸಲಿಡಲಾಗಿದ್ದು, ಗುದ್ದಲಿ ಪೂಜೆಯೂ ನೆರವೇರಿಸಲಾಗಿದೆ. ಆದರೆ ಲೋಕಾಯುಕ್ತ ದಾಳಿಯಿಂದ ಮುಡಾಕ್ಕೆ ಆಯುಕ್ತರಿಲ್ಲದೆ ಕೆಲಸ ಆರಂಭಕ್ಕೆ ಅಡ್ಡಿಯಾಗಿದೆ. ಆದರೂ ಮುಂದಿನ ಎರಡು ಮೂರು ತಿಂಗಳಲ್ಲೊಂದು ಸುಂದರವಾದ ಕೆರೆ ನಿರ್ಮಾಣಗೊಂಡು ಹಿಂದಿನ ಗತ್ತು, ಗೈರತ್ತಿನಿಂದ ಮೆರೆಯಲಿದೆ ಎನ್ನುವ ನಿರೀಕ್ಷೆ ಸ್ಥಳೀಯರದ್ದು. ಕೆರೆಯೊಂದಿಗೆ ಕಾಲುವೆ ಹಾಗೂ ರಸ್ತೆ ಅಭಿವೃದ್ಧಿಗೊಂಡಲ್ಲಿ ಸ್ಥಳೀಯರಿಗೆ ಇನ್ನಷ್ಟು ಅನುಕೂಲವಾಗಲಿದೆ.

    ನಾನು ಅಧ್ಯಕ್ಷನಾದ ಬಳಿಕ ಪ್ರಥಮ ಕಾಮಗಾರಿ ಇದಾಗಿದ್ದು, ಕೆರೆ ಅಭಿವೃದ್ಧಿಗಾಗಿ 60 ಲಕ್ಷ ರೂ. ಮೀಸಲಿಡಲಾಗಿದೆ. ಮುಂದಕ್ಕೆ ಅಲ್ಲಿಗೆ ಯಾವ ಕೆಲಸ ಆಗಬೇಕು ಎನ್ನುವ ಬಗ್ಗೆ ಮುಡಾಕ್ಕೆ ಹೊಸ ಆಯುಕ್ತರು ಬಂದ ಬಳಿಕ ಸ್ಥಳ ಪರಿಶೀಲನೆ ನಡೆಸಿ ಕ್ರಮ, ಅನುದಾನ ಮೀಸಲಿಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು.
    – ಸದಾಶಿವ ಉಳ್ಳಾಲ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ

    ರಾಜಕಾಲುವೆ ಮೇಲೆ ಖಾಸಗಿ ಕಟ್ಟಡ ನಿರ್ಮಾಣಗೊಂಡಿದ್ದು, ಮಳೆನೀರು ಹರಿಯಲು ಸಮಸ್ಯೆ ಆಗಿದೆ. ಇದರಿಂದ ರಸ್ತೆ ಸಂಪರ್ಕ ಅಸಾಧ್ಯ ಎನಿಸಿದೆ. ಈ ಬಗ್ಗೆ ಇಲಾಖೆಗಳಿಗೆ ಸ್ಥಳೀಯರು ಹಲವು ಬಾರಿ ದೂರು ನೀಡಿದ್ದು, ನಗರಸಭೆಯ ಇಂಜಿನಿಯರ್‌ಗಳು ಬಂದು ವೀಕ್ಷಿಸಿ ಹೋಗುತ್ತಾರೆಯೇ ಹೊರತು ಇದುವರೆಗೂ ಕ್ರಮ ಕೈಗೊಂಡಿಲ್ಲ.
    – ರಾಜೇಶ್ ಯು.ಬಿ., ಉಳ್ಳಾಲ ನಗರಸಭೆ ಸದಸ್ಯ

    ಸ್ಥಳೀಯರ ಅಪೇಕ್ಷೆಯಂತೆ ಕೆರೆ ಅಭಿವೃದ್ಧಿ ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ. ರಸ್ತೆ ಅಭಿವೃದ್ಧಿ ಎಲ್ಲರ ಕನಸಾಗಿದ್ದರೂ ಆಸುಪಾಸಿನಲ್ಲಿರುವ ಖಾಸಗಿ ಜಮೀನು ಬಿಟ್ಟುಕೊಡಲು ಮನಸ್ಸು ಮಾಡಬೇಕು. ಹಿಂದೊಮ್ಮೆ ಕೆಲಸ ಆರಂಭಿಸಲಾಗಿದ್ದರೂ ಖಾಸಗಿಯವರ ಆಕ್ಷೇಪದಿಂದ ನಿಲ್ಲಿಸಲಾಗಿತ್ತು.
    – ಪ್ರಕಾಶ್ ಪಿಂಟೋ, ಸ್ಥಳೀಯ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts