More

    ಉಕ್ಕಡಗಾತ್ರಿ ಅಜ್ಜಯ್ಯ ಭಕ್ತರ ಆರಾಧ್ಯ ದೈವ

    ಮಲೆಬೆನ್ನೂರು: ಉಕ್ಕಡಗಾತ್ರಿ ಅಜ್ಜಯ್ಯನ ಕ್ಷೇತ್ರ ಪವಾಡಗಳಿಂದ ಹೆಸರಾಗಿದ್ದು, ವಿಶೇಷ ಶಕ್ತಿ ಹೊಂದಿದೆ ಎಂದು ನಂದಿಗುಡಿ ಬೃಹನ್ಮಠದ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಉಕ್ಕಡಗಾತ್ರಿಯಲ್ಲಿ ಒಂದು ವಾರದವರೆಗೆ ನಡೆಯಲಿರುವ ಶ್ರೀ ಕರಿಬಸವೇಶ್ವರ ಗದ್ದುಗೆಯ ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಸೋಮವಾರ ನಂದಿ ಧ್ವಜಾರೋಹಣ ಮೂಲಕ ಚಾಲನೆ ನೀಡಿ ಮಾತನಾಡಿದರು.

    ಇಲ್ಲಿನ ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿ, ಅಜ್ಜಯ್ಯನ ದರ್ಶನ ಪಡೆಯುವ ಭಕ್ತರಿಗೆ ಪುಣ್ಯ ಪ್ರಾಪ್ತಿಯಾಗುವ ಜತೆಗೆ ಸರ್ವ ಕಷ್ಟ ಕಾರ್ಪಣ್ಯ ದೂರಾಗುತ್ತವೆ ಎಂದರು.

    ಅಜ್ಜಯ್ಯನ ದರ್ಶನ ಪಡೆದರೆ, ದೆವ್ವ, ಪೀಡೆ, ಪಿಶಾಚಿ ದೂರ ಹೋಗುತ್ತವೆ ಎಂಬ ನಂಬಿಕೆಯಿಂದ ಇಲ್ಲಿಗೆ ಭಕ್ತರು ಬರುತ್ತಿದ್ದಾರೆ. ಇಲ್ಲಿನ ಆಡಳಿತ ಮಂಡಳಿ ಸರ್ವರನ್ನೂ ಸಮಾನವಾಗಿ ಕಾಣುವ ಪದ್ದತಿ ರೂಢಿಯಲ್ಲಿದೆ ಎಂದು ಹೇಳಿದರು.

    ಶ್ರೀ ಕರಿಬಸವೇಶ್ವರ ಟ್ರಸ್ಟ್‌ನ ಕಾರ್ಯದರ್ಶಿ ಸುರೇಶ್ ಮಾತನಾಡಿ, ನದಿ ದಂಡೆಯಲ್ಲಿ ಸ್ನಾನ ಘಟ್ಟ, ಜವಳ ಮಂದಿರ, ಸಾಮೂಹಿಕ ವಿಶ್ರಾಂತಿ ಧಾಮ ಇರುವ ಬೃಹತ್ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅಜ್ಜಯ್ಯಗೆ 3 ಕೆಜಿ ತೂಕದ ಚಿನ್ನದ ಕಿರೀಟ ಮಾಡಿಸುವ ಸಂಕಲ್ಪ ಮಾಡಿದ್ದೇವೆ. ಭಕ್ತರು ಚಿನ್ನ ಅಥವಾ ಅದರ ಮೌಲ್ಯದ ಹಣ ದೇಣಿಗೆ ನೀಡಬಹುದು ಎಂದು ಹೇಳಿದರು.

    25 ಸಾವಿರ ಜನ ಏಕಕಾಲಕ್ಕೆ ಕುಳಿತು ಊಟ ಮಾಡುವ 3 ಕೋಟಿ ರೂ. ವೆಚ್ಚದ ದಾಸೋಹ ಮಂದಿರ ನಿರ್ಮಾಣಕ್ಕೆ ನೀಲಿ ನಕ್ಷೆ ಸಿದ್ಧವಾಗಿದೆ. ತಾಂತ್ರಿಕ ಕಾಲೇಜು ಮಾಡುವ ಸಂಕಲ್ಪ ಸಹ ಮಾಡಿದ್ದೇವೆ ಎಂದರು.

    ಧ್ವಜಾರೋಹಣಕ್ಕೂ ಮುನ್ನ ವೇದ ಮಂತ್ರಗಳ ಘೋಷಣೆ ನಡೆಯಿತು. ಗದ್ದಿಗೆಯ್ಯ ಪಾಟೀಲ್, ವಿವೇಕಾನಂದ ಪಾಟೀಲ್, ಹೊಸಳ್ಳಿ ಗದ್ದಿಗೆಪ್ಪ, ಪ್ರಕಾಶ್ ಕೋಟರ, ಬೇವಿನಹಳ್ಳಿ ಬಸವರಾಜ್, ಭರಮಗೌಡ ಶಿವಪೂಜೆ, ಶಾಂತನವರ ಶಿವಣ್ಣ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts