More

    ದರಪಟ್ಟಿಗಿಂತ ದುಪ್ಪಟ್ಟು ಹಣ

    ಕುಂದಾಪುರ: ಯುಜಿಡಿ ಕಾಮಗಾರಿಗೆ ಸ್ಥಳ ವಿಕ್ರಯದಲ್ಲಿ ಸರ್ಕಾರದ ದರಪಟ್ಟಿಗಿಂತ ದುಪ್ಪಟ್ಟು ಹಣ ನೀಡಲಾಗಿದೆ. ಹೊಳೆ ಬದಿ ಜಾಗದಲ್ಲಿ ಯಾವುದೇ ಅಭಿವೃದ್ಧಿ ಆಗದಿದ್ದರೂ ನಷ್ಟ ಪರಿಹಾರ ಅಂತ 47 ಲಕ್ಷ ರೂ. ಸೇರಿ 97 ಲಕ್ಷ ರೂ. ಜಾಗದ ಮಾಲೀಕರಿಗೆ ಸಂದಾಯ ಮಾಡಲಾಗಿದೆ. ಪುರಸಭೆ ಸದಸ್ಯರ ಗಮನಕ್ಕೂ ತಾರದೆ ಇಷ್ಟು ದೊಡ್ಡ ವ್ಯವಹಾರ ಮುಚ್ಚಿಟ್ಟು ಮಾಡಿದ್ದು ಏಕೆ? ಜಾಗ ಖರೀದಿಗಾಗಿ ಸಂದಾಯ ಮಾಡಿದ ಹಣ ಕುರಿತು ತನಿಖೆ ನಡೆಸಬೇಕು. ಇಲ್ಲದಿದ್ದರೆ ನ್ಯಾಯಾಲಯದಲ್ಲಿ ಹೋರಾಟ ಮಾಡುವುದಾಗಿ ಪುರಸಭೆ ಆಡಳಿತ ಪಕ್ಷ ಸದಸ್ಯ ಗಿರೀಶ್ ದೇವಾಡಿಗ ಎಚ್ಚರಿಕೆ ನೀಡಿದರು.
    ಕುಂದಾಪುರ ಪುರಸಭೆ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರೇ ಧ್ವನಿ ಎತ್ತಿದ್ದು, ಅದಕ್ಕೆ ಪುರಸಭೆ ಎಲ್ಲ ಸದಸ್ಯರು ಧ್ವನಿ ಸೇರಿಸಿದ್ದು ಸಾಮಾನ್ಯ ಸಭೆಯ ವಿಶೇಷ.
    ಯುಜಿಡಿ ಕಾಮಗಾರಿ ಜಾಗ ಖರೀದಿ ದರಪಟ್ಟಿ ಸರಿಯಾಗಿಲ್ಲ. ಸರ್ಕಾರದ ದರಪಟ್ಟಿಗೂ ಭೂ ಮಾಲೀಕರಿಗೆ ಕೊಟ್ಟ ಪರಿಹಾರಕ್ಕೂ ತುಂಬಾ ವ್ಯತ್ಯಾಸವಿದೆ. ಸಮಿತಿ ಮಾಡಿದ ದರಪಟ್ಟಿ ಬಗ್ಗೆ ತನಿಖೆ ಮಾಡಬೇಕು ಎಂದು ಗಿರೀಶ್ ಒತ್ತಾಯಿಸಿದ್ದು, ಪುರಸಭೆ ಎಲ್ಲ ಸದಸ್ಯರು ಜಾಗ ವಿಕ್ರಯ ದರಪಟ್ಟಿಗೆ ವಿರೋಧ ವ್ಯಕ್ತ ಪಡಿಸಿದರು.
    ರಾಷ್ಟ್ರೀಯ ಹೆದ್ದಾರಿ ಬೊಬ್ಬರ್ಯ ಕಟ್ಟೆ ಬಳಿ ಡೈವರ್ಶನ್, ಚರಂಡಿ ಹೂಳು, ತ್ಯಾಜ್ಯ ನೀರು ಹೊಳೆಗೆ ಬಿಡುವುದು, ಮಲೇರಿಯಾ, ಸ್ವಚ್ಛತೆ, ರಸ್ತೆ, ವಿದ್ಯುತ್, ಸಂಚಾರ ವಿಷಯಕ್ಕೆ ಸಂಬಂಧಿಸಿ ಸಭೆಯಲ್ಲಿ ಚರ್ಚೆ ನಡೆಯಿತು.
    ನೂತನವಾಗಿ ಕುಂದಾಪುರ ಪುರಸಭೆ ನಾಮನಿರ್ದೇಶಕ ಸದಸ್ಯರಾಗಿ ಆಯ್ಕೆಯಾದ ದಿವಾಕರ ಪೂಜಾರಿ, ನಾಗರಾಜ ಕಾಂಚನ್, ಪುಷ್ಪಾ ಶೇಟ್, ಪ್ರಕಾಶ್ ಖಾರ್ವಿ ಹಾಗೂ ರತ್ನಾಕರ ಶೇರೆಗಾರ್ ಅವರಿಗೆ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಪ್ರಮಾಣ ವಚನ ಬೋಧಿಸಿದರು.
    ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂದೀಪ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಪೂಜಾರಿ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.

    ಮುಖ್ಯಾಧಿಕಾರಿ ಸಲಹೆಗೆ ತಿರುಗೇಟು: ಜಾಗ ವಿಕ್ರಯದಲ್ಲಿ ಸರ್ಕಾರ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚು ಹಣ ಕೊಟ್ಟಿರುವುದು ಒಪ್ಪಲು ಸಾಧ್ಯವಿಲ್ಲ ಎಂದು ಎಲ್ಲ ಸದಸ್ಯರು ಪ್ರತಿರೋಧ ಒಡ್ಡಿದ್ದರಿಂದ ಬಾಕಿಯಿರುವ ವೆಟ್‌ವೆಲ್ ಕಾಮಗಾರಿ ಪ್ರಕ್ರಿಯೆ ನಿಲ್ಲಿಸುವಂತೆ ನಿರ್ಣಯ ಕೈಗೊಳ್ಳಲು ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಸದಸ್ಯರಿಗೆ ಸಲಹೆ ನೀಡಿದರು. ಈ ಸಲಹೆಗೆ ತಿರುಗಿಬಿದ್ದ ಸದಸ್ಯರು, ಕಾಮಗಾರಿ ನಿಲ್ಲಿಸುವಂತೆ ನಿರ್ಣಯ ಮಾಡಲಾಗದು. ಜಾಗ ಖರೀದಿಯಲ್ಲಿ ಪುರಸಭೆ ಹಣ ಪೋಲಾಗಿದೆ. ಇನ್ನುಳಿದ ಎರಡು ಕಾಮಗಾರಿ ಜಾಗ ವಿಕ್ರಯ ಕ್ರಮಬದ್ಧವಾಗಿ ನಡೆದಿದ್ದರೆ ನಮ್ಮದೇನು ಅಭ್ಯಂತರವಿಲ್ಲ ಎಂದರು. ಜಿಲ್ಲಾಧಿಕಾರಿ ಸೂಚಿಸಿದ ದರದಲ್ಲಿ ಹಣ ಸಂದಾಯ ಮಾಡಲಾಗಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು. ಜಾಗ ವಿಕ್ರಯದಲ್ಲಿ ಸಂದಾಯವಾದ ಹಣದ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವ ನಿರ್ಧಾರದ ನಂತರ ಸಭೆ ಮುಂದುವರಿಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts