More

    250 ಕೋಟಿ ರೂ. ಡಿಪಿಆರ್: ಉಡುಪಿ ಯುಜಿಡಿ ಮೇಲ್ಡರ್ಜೆ ಯೋಜನೆ ವಿಶೇಷ ಸಭೆಯಲ್ಲಿ ಮಾಹಿತಿ

    ಉಡುಪಿ: ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ವತಿಯಿಂದ ಉಡುಪಿ ನಗರ ವ್ಯಾಪ್ತಿ ಒಳಚರಂಡಿ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲು 250 ಕೋಟಿ ರೂ. ಮೊತ್ತದ ಡಿಪಿಆರ್ ಸಿದ್ಧಪಡಿಸಲಾಗಿದೆ ಎಂದು ಮಂಡಳಿ ಕಾರ್ಯನಿರ್ವಹಕ ಇಂಜಿನಿಯರ್ ಚಂದ್ರಶೇಖರ್ ತಿಳಿಸಿದರು.

    ಶುಕ್ರವಾರ ನಗರಸಭೆ ಸಭಾಂಗಣದಲ್ಲಿ ‘ನಗರದೊಳಗಿನ ಯುಜಿಡಿ’ ಪುನರ್ ವಿನ್ಯಾಸದ ಡಿಪಿಆರ್ ಬಗ್ಗೆ ವಿಶೇಷ ಸಭೆಯಲ್ಲಿ ಅವರು ಮಾಹಿತಿ ನೀಡಿದರು. ಸರ್ವೇ ಪೂರ್ಣಗೊಳಿಸಲಾಗಿದೆ. ಯೊಜನಾ ವರದಿಯಲ್ಲಿ ಕೆಲವು ಸೂಕ್ಷ್ಮ ಬದಲಾವಣೆ ಬಳಿಕ ಡಿಪಿಆರ್ ಅಂತಿಮಗೊಳಿಸಲಾಗುತ್ತದೆ. ಬಳಿಕ ಮಂಡಳಿಯ ತಾಂತ್ರಿಕ ಸಮಿತಿ ಇದಕ್ಕೆ ಅನುಮೋದನೆ ನೀಡಬೇಕಿದೆ ಎಂದರು.

    ನಗರಸಭೆ ವ್ಯಾಪ್ತಿಯಲ್ಲಿನ 1988 ಹಾಗೂ 2010ರಲ್ಲಿ ಎರಡು ಹಂತದಲ್ಲಿ ಯುಜಿಡಿ ಅಭಿವೃದ್ಧಿ ಪಡಿಸಲಾಗಿತ್ತು.
    ಹೊಸ ಪ್ರಸ್ತಾವನೆಯಲ್ಲಿ ಯುಜಿಡಿ ವ್ಯವಸ್ಥೆಯನ್ನು 148 ಕಿ.ಮೀ. ವಿಸ್ತರಿಸಲಾಗುತ್ತದೆ. ಪ್ರತಿ 30 ಮೀಟರ್‌ಗೆ ಒಂದರಂತೆ 5,600 ಮ್ಯಾನ್‌ಹೋಲ್, ಹಳೆಯದು ಸೇರಿದಂತೆ ಒಟ್ಟು 5 ವೆಟ್‌ವೆಲ್, 11ಸೆಪ್ಟಿಕ್ ಟ್ಯಾಂಕ್ ನಿರ್ಮಿಸಲಾಗುತ್ತದೆ. ಅಲ್ಲಲ್ಲಿ ಸೆಪ್ಟಿಕ್ ಟ್ಯಾಂಕ್ ಮಾಡುವುದರಿಂದ ಕಾಮಗಾರಿ ಮೊತ್ತ ಕಡಿಮೆಯಾಗಲಿದೆ ಎಂದು ಸರ್ವೇ ವರದಿಯನ್ನು ಮಂಡಿಸಿದರು. ನಗರಸಭೆ ಇಂಜಿನಿಯರ್ ಮೋಹನ್‌ರಾಜ್ ಪ್ರತಿಕ್ರಿಯಿಸಿ 5 ವೆಟ್‌ವೆಲ್, 11 ಸೆಪ್ಟಿಕ್ ಟ್ಯಾಂಕ್‌ಗಳನ್ನು ಸಾಧ್ಯವಾದಷ್ಟು ಜನನಿಬಿಡ ಪ್ರದೇಶದಿಂದ ಹೊರಗೆ ಸ್ಥಾಪಿಸಬೇಕಿದ್ದು, ಇದರ ಸಂಖ್ಯೆಯನ್ನು ಇಳಿಸಬೇಕಿದೆ ಎಂದು ಮಂಡಳಿ ಇಂಜಿನಿಯರ್‌ಗಳಿಗೆ ಸಲಹೆ ನೀಡಿದರು.

    4 ಮೀಟರ್ ಆಳದಲ್ಲಿ ಪೈಪ್‌ಲೈನ್
    ಹಿಂದಿನ ಯುಜಿಡಿ ಪೈಪ್‌ಲೈನ್ 8 ಮೀಟರ್ ಆಳದಲ್ಲಿ ಆಳವಡಿಸಲಾಗಿದ್ದು, ಇದು ಅವೈಜ್ಞಾನಿಕ ಕ್ರಮವಾಗಿದೆ. ಇದರಿಂದ ನಿರ್ವಹಣೆ, ದುರಸ್ತಿಗೆ ತೊಂದರೆಯಾಗಿದೆ. ಹೊಸ ವ್ಯವಸ್ಥೆಯಲ್ಲಿ 4 ಮೀಟರ್ ಆಳದಲ್ಲಿ ಪೈಪ್‌ಲೈನ್ ಆಳವಡಿಸಲಾಗುತ್ತದೆ. ಒತ್ತಡಕ್ಕೆ ಅನುಗುಣವಾಗಿ ಪೈಪ್‌ಲೈನ್ ಗಾತ್ರಗಳನ್ನು ಹಾಕಲಾಗುತ್ತದೆ ಎಂದು ಮಂಡಳಿ ಇಂಜಿನಿಯರ್ ಚಂದ್ರಶೇಖರ್ ವಿವರಿಸಿದರು. ಕಾಂಚನಾ ಹುಂಡೈ ಸಮೀಪದ ಸೇತುವೆ ಬಳಿ ಹೊಸವೆಟ್‌ವೆಲ್ ಹಾಗೂ ಮಲ್ಪೆ ರಸ್ತೆಯ ಸಮೀಪದಲ್ಲಿ ಹೊಸದಾಗಿ ಎರಡು ವೆಟ್‌ವೆಲ್ ನಿರ್ಮಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
    ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಬಜೆಟ್‌ನಲ್ಲಿ ಯುಜಿಡಿ ಕಾಮಗಾರಿಗಾಗಿ ಸರ್ಕಾರ ಅನುದಾನ ನಿಗದಿಪಡಿಸಿದ್ದು, ಉಡುಪಿ ನಗರಸಭೆ ಯುಜಿಡಿ ಪುನಶ್ಚೇತನಕ್ಕೆ ಬಜೆಟ್‌ನಿಂದ ಅನುದಾನ ಪಡೆಯಲಾಗುವುದು. ಶೀಘ್ರ ಡಿಪಿಆರ್ ಪೂರ್ಣಗೊಳಿಸಿ, ತಾಂತ್ರಿಕ ಸಮಿತಿಯಲ್ಲಿ ಅನುಮೋದನೆಯಾಗುವಂತೆ ಮಂಡಳಿ ಇಂಜಿನಿಯರ್‌ಗಳಿಗೆ ಸೂಚನೆ ನೀಡಿದರು. ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಪೌರಾಯುಕ್ತ ಉದಯ ಶೆಟ್ಟಿ ಸಭೆ, ನಗರಸಭೆ ಸದಸ್ಯರು ಸಭೆಯಲ್ಲಿದ್ದರು.

    ಉಡುಪಿ ನಗರ ವ್ಯಾಪ್ತಿಯಲ್ಲಿ ವ್ಯವಸ್ಥಿತ ಯುಜಿಡಿ ರೂಪಿಸಲು ವರ್ಟಿಕಲ್ ಆಧಾರಿತ ಸರ್ವೇ ನಡೆಸಲಾಗಿದೆ. ಒಂದು ಕಟ್ಟಡ- 200ಕ್ಕೂ ಅಧಿಕ ಮಂದಿ ನೆಲೆಸಿರುವುದುನ್ನು ಪರಿಗಣಿಸಿ, ಈ ಜನಸಂಖ್ಯೆ ಲೆಕ್ಕಚಾರದಲ್ಲಿ ಯೋಜನೆ ರೂಪಿಸಲಾಗಿದೆ. ಮಂಡಳಿಯಿಂದ ಪೈಪ್‌ಲೈನ್ ಒಂದು ವರ್ಷ, ಎಸ್‌ಟಿಪಿ 5 ವರ್ಷ ನಿರ್ವಹಣೆ ಮಾಡಲಾಗುವುದು.
    ಚಂದ್ರಶೇಖರ್, ಎಕ್ಸಿಕ್ಯೂಟಿವ್ ಇಂಜಿನಿಯರ್, ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts