More

    ಭಯ ಸೃಷ್ಟಿಸಿದ್ದ ಮಾನಸಿಕ ಅಸ್ವಸ್ಥ ಮಹಿಳೆ ರಕ್ಷಣೆ


    ಉಡುಪಿ: ತೆಂಕನಿಡಿಯೂರಿನ ಜನವಸತಿ ಪ್ರದೇಶದಲ್ಲಿ ಕನಿಷ್ಠ ಉಡುಗೆಯೊಂದಿಗೆ ಅಲೆದಾಡಿ ದಾರಿಹೋಕರ ಮೇಲೆ ಹಲ್ಲೆ ನಡೆಸುತ್ತಾ ಪರಿಸರದಲ್ಲಿ ದಾಂಧಲೆ ಎಬ್ಬಿಸುತ್ತಿದ್ದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಸೋಮವಾರ ರಾತ್ರಿ ರಕ್ಷಿಸಿ ದೊಡ್ಡಣಗುಡ್ಡೆಯ ಬಾಳಿಗಾ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸ್ಥಳೀಯ ನಿವಾಸಿ ವಿಮಲಾ ಪೂಜಾರಿ (52) ಆಸ್ಪತ್ರೆಗೆ ದಾಖಲಾದ ಮಹಿಳೆ. ಪತಿ ತೀರಿಕೊಂಡ ಬಳಿಕ ಒಂಟಿ ಜೀವನ ನಡೆಸುತ್ತಿದ್ದ ವಿಮಲಾ ಅವರಿಗೆ ಮಕ್ಕಳಿಲ್ಲ. ಎರಡು ವಾರದ ಹಿಂದೆ ಮಾನಸಿಕ ಅಸ್ವಸ್ಥತೆ ತೀವ್ರಗೊಂಡು ಮನೆ, ಅಂಗಡಿ ಮುಂಗಟ್ಟುಗಳಿಗೆ ನುಗ್ಗುವುದು, ಬಾಟಲಿ ಒಡೆಯುವುದು, ಸಾರ್ವಜನಿಕರಿಗೆ ಹಲ್ಲೆ ನಡೆಸುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವ ಮೂಲಕ ಪರಿಸರದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದರು. ಆಕೆಯ ಸಾಕು ನಾಯಿಗಳೂ ಸಾರ್ವಜನಿಕರ ಮೇಲೆ ದಾಳಿಗೆ ಯತ್ನಿಸುತ್ತಿದ್ದವು. ಹೀಗಾಗಿ ಸ್ಥಳೀಯರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಮನೆಯಿಂದ ಹೊರಗೆ ಬರಲು ಹೆದರುವ ಸನ್ನಿವೇಶ ಎದುರಾಗಿತ್ತು.

    ಈ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದ ಸಮಾಜ ಸೇವಕ ವಿಶು ಶೆಟ್ಟಿ, ಮಲ್ಪೆಯ ಮಹಿಳಾ ಶುಶ್ರೂಷಕಿ ತನುಜಾ ಅವರೊಂದಿಗೆ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯ ನಡೆಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕ್ಲಪ್ತ ಕಾಲದಲ್ಲಿ ಮನೋರೋಗಕ್ಕೆ ಚಿಕಿತ್ಸೆ ಪಡೆಯದಿರುವುದು ಮಹಿಳೆಯ ಈ ಪರಿಸ್ಥಿತಿಗೆ ಕಾರಣವಾಗಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ ಕುಲಾಲ್ ನೆರವಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts