More

    ಸೋಂಕಿತರ ಬಿಡುಗಡೆ, ಉಡುಪಿ ಫಸ್ಟ್

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
    ಅತಿ ಹೆಚ್ಚು ಕರೊನಾ ಸೋಂಕಿತರು ಪತ್ತೆಯಾಗುವ ಮೂಲಕ ರಾಜ್ಯದಲ್ಲಿ ಮೊದಲು ಸಾವಿರ ಗಡಿ ದಾಟಿದ ಜಿಲ್ಲೆ ಉಡುಪಿ. ಆಸ್ಪತ್ರೆಗೆ ದಾಖಲಾಗಿ ಯಾವುದೇ ಚಿಕಿತ್ಸೆ ಇಲ್ಲದೆ ವೈದ್ಯರ ಕಣ್ಗಾವಲಲ್ಲಿ ಬಿಡುಗಡೆಯಾದವರು ಸಾವಿರ ಮಂದಿ! ಈ ಪಟ್ಟಿಯಲ್ಲಿಯೂ ಉಡುಪಿಗೆ ಪ್ರಥಮ ಸ್ಥಾನ.

    ಜಿಲ್ಲೆಯಲ್ಲಿ ಮೊದಲ ಪ್ರಕರಣ ದಾಖಲಾದುದು ಮಾ.24ರಂದು. ಅನಂತರದ ದಿನಗಳಲ್ಲಿ ಮತ್ತಿಬ್ಬರು ದಾಖಲಾಗಿ ಸಂಖ್ಯೆ ಮೂರಾಯಿತು. ಮೂವರು ಬಿಡುಗಡೆ ಆದ ನಂತರ ಕೆಲ ದಿನಗಳ ಕಾಲ ಉಡುಪಿಯಲ್ಲಿ ಪಾಸಿಟಿವ್ ಸಂಖ್ಯೆ ಸೊನ್ನೆಗೆ ಇಳಿದಿದ್ದು, ಬೇರೆ ಬೇರೆ ರಾಜ್ಯದಿಂದ ಜಿಲ್ಲೆಗೆ ಜನ ಬರಲು ಆರಂಭಿಸಿದ ನಂತರ ಪಾಸಿಟಿವ್ ಸಂಖ್ಯೆ ಏರಿ ರಾಜ್ಯದಲ್ಲಿ ಸಾವಿರ ಸಂಖ್ಯೆ ದಾಟಿದ ಜಿಲ್ಲೆ ಎನ್ನುವ ಕಪ್ಪುಪಟ್ಟಿ ಸೇರಬೇಕಾಯಿತು. ಈವರೆಗೆ ಉಡುಪಿ ಜಿಲ್ಲೆಯಲ್ಲಿ ಆಸ್ಪತ್ರೆಗೆ ದಾಖಲಾದ 1362 ಜನರ ಪೈಕಿ 1154 ಬಿಡುಗಡೆ ಆಗಿದ್ದಾರೆ. ಆಸ್ಪತ್ರೆಯಲ್ಲಿರುವ 208 ಮಂದಿ ಆರೋಗ್ಯವಾಗಿದ್ದಾರೆ. ಒಬ್ಬರಿಗೆ ಮಾತ್ರ ಚಿಕಿತ್ಸೆ ಮುಂದುವರಿದಿದೆ. ಒಬ್ಬರು ಪಾಸಿಟಿವ್ ವ್ಯಕ್ತಿಯನ್ನು ದಕ್ಷಿಣ ಕನ್ನಡಕ್ಕೆ ಹಸ್ತಾಂತರಿಸಲಾಗಿದೆ.

    ಜಿಲ್ಲೆಯಲ್ಲಿ ಕರೊನಾ ವೈರಸ್ ಸೋಂಕಿತ ಮೂವರು ಪುರುಷರು ಮೃತಪಟ್ಟಿದ್ದು, ಅವರೆಲ್ಲರೂ ಬೇರೆ ರಾಜ್ಯದಿಂದ ಬಂದವರು. ಹೃದಯ, ಕಿಡ್ನಿ ಹಾಗೂ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು. ಒಬ್ಬರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆ, ಮತ್ತಿಬ್ಬರು ಮನೆಯಲ್ಲೇ ಮೃತರಾಗಿದ್ದರು. ಈವರೆಗೆ ಕರೊನಾ ಸೋಂಕಿತ ಯಾವುದೇ ವ್ಯಕ್ತಿ ಆಸ್ಪತ್ರೆಯಲ್ಲಿ ನಿಧನರಾಗಿಲ್ಲ. ಸಾವಿರಕ್ಕೂ ಅಧಿಕ ಸೋಂಕಿತರಲ್ಲಿ 8 ಮಂದಿ ತೀವ್ರ ನಿಗಾದಲ್ಲಿದ್ದು, ಅದರಲ್ಲಿ ಒಬ್ಬರು ಮಾತ್ರ ಪ್ರಸಕ್ತ ಕ್ರಿಟಿಕಲ್ ಸ್ಥಿತಿಯಲ್ಲಿ ಇದ್ದು, ಉಳಿದವರು ಚೇತರಿಸಿಕೊಂಡಿದ್ದಾರೆ. ತುರ್ತು ನಿಗಾದಲ್ಲಿರುವ ವ್ಯಕ್ತಿಗೆ ಕಿಡ್ನಿ ಸಮಸ್ಯೆ ಇದ್ದು, ವೈದ್ಯರ ಕಣ್ಗಾವಲಲ್ಲಿ ಚಿಕಿತ್ಸೆ ಮುಂದುವರಿದಿದೆ.

    ಕರೊನಾ ಅಲ್ಲದೆ ಬೇರೆ ಕಾಯಿಲೆ ಇದ್ದವರಿಗೆ ವಿಶೇಷವಾಗಿ ಟಿಎಂಎ ಪೈ ಆಸ್ಪತ್ರೆಯಲ್ಲಿ ಪರಿಣಿತ ವೈದ್ಯರ ಮೂಲಕ ಆರೈಕೆ ಮಾಡಲಾಗಿತ್ತು. ಪಾಸಿಟಿವ್ ಬಂದವರಲ್ಲಿ ಅಧಿಕ ಸಂಖ್ಯೆ ಬೇರೆ ಬೇರೆ ಕಡೆಯಿಂದ ಬಂದವರದ್ದಾಗಿತ್ತು. 50 ವರ್ಷದ ಒಳಗೆ ಹಾಗೂ ರೋಗ ನಿರೋಧಕ ಶಕ್ತಿ ಹೊಂದಿದವರು ಬೇಗ ಸಹಜವಾಗಿಯೇ ಚೇತರಿಸಿಕೊಂಡಿದ್ದಾರೆ. ಕರೊನಾ ಹರಡದಂತೆ ಸಾರ್ವಜನಿಕರ ಜವಾಬ್ದಾರಿ. ಕರೊನಾ ಬಂದರೆ ಜೀವ ಹೋಗುತ್ತದೆ ಎನ್ನುವ ಭಯ ಬಿಡಬೇಕು.
    – ಡಾ.ಸುಧೀರಚಂದ್ರ ಸೂಡ ಜಿಲ್ಲಾ ಆರೋಗ್ಯಾಧಿಕಾರಿ, ಉಡುಪಿ

    ಕರೊನಾ ವೈರಸ್ ಬಂದರೆ ಜೀವ ಹೋಗುತ್ತದೆ ಎನ್ನುವ ಭಯ ಬಿಡಬೇಕು. ಪಾಸಿಟಿವ್ ಬಂದಿದೆ, ಆಸ್ಪತ್ರೆಗೆ ದಾಖಲಾಗಿದ್ದೇವೆ. ಮುಂದೆ ಹೇಗೋ ಏನೋ ಎನ್ನುವ ಭಯ ಇರಬಾರದು. ಆಸ್ಪತ್ರೆಯಲ್ಲಿ ನಮಗೆ ಯಾವುದೇ ವಿಶೇಷ ಚಿಕಿತ್ಸೆ ನೀಡಿಲ್ಲ. ಪೌಷ್ಟಿಕ ಆಹಾರ ನೀಡುತ್ತಾರೆ. ಆತ್ಮಸ್ಥೈರ್ಯ ತುಂಬಿದ್ದು ಬಿಟ್ಟರೆ ಮತ್ತೇನೂ ಚಿಕಿತ್ಸೆ ನೀಡಿಲ್ಲ.
    ಕುಂದಾಪುರ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾದ ವ್ಯಕ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts