More

    ಉಡುಪಿಯಲ್ಲಿ ಜನನಿಬಿಡ ಸ್ಥಳಗಳು ಖಾಲಿ

    ಉಡುಪಿ: ಕರೊನಾ ಮುಂಜಾಗ್ರತಾ ಕ್ರಮವಾಗಿ ಪ್ರಧಾನಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ನಗರದ ಜನ ಸ್ಪಂದಿಸಿದ್ದಾರೆ. ಭಾನುವಾರ ಬೆಳಗ್ಗೆಯಿಂದ ರಾತ್ರಿವರೆಗೂ ಮಣಿಪಾಲ, ಉಡುಪಿ, ಮಲ್ಪೆ ಪರಿಸರ ಸ್ತಬ್ಧವಾಗಿತ್ತು. ಜನನಿಬಿಡ ಸ್ಥಳಗಳು ಖಾಲಿಖಾಲಿಯಾಗಿ ಬಿಕೋ ಎನ್ನುತ್ತಿತ್ತು. ನಗರದ ಅಂಗಡಿಗಳು, ಹೋಟೆಲ್, ವಾಣಿಜ್ಯ ಮಳಿಗೆ, ಚಿತ್ರಮಂದಿರ, ಮಾಲ್, ಬ್ಯೂಟಿ ಪಾರ್ಲರ್, ಸೆಲೂನ್, ಚಿನ್ನದ ಮಳಿಗೆ, ಸೂಪರ್ ಮಾರ್ಕೆಟ್, ತರಕಾರಿ ಮಾರುಕಟ್ಟೆ, ಮೀನು ಮಾರುಕಟ್ಟೆ ಎಲ್ಲವೂ ಬಂದ್ ಆಗಿತ್ತು. ಇತಿಹಾಸದಲ್ಲಿ ಮೊದಲ ಬಾರಿ ಉಡುಪಿ ಈ ರೀತಿಯ ಬಂದ್ ಕಂಡಿದೆ. ಸದಾ ಗಿಜಿಗುಡುತ್ತಿದ್ದ ಸಿಟಿ ಬಸ್, ಸರ್ವೀಸ್ ಬಸ್ ನಿಲ್ದಾಣಗಳು ಪ್ರಯಾಣಿಕರು, ಬಸ್ ಸಂಚಾರ ಇಲ್ಲದೆ ಖಾಲಿ ಹೊಡೆಯುತ್ತಿದ್ದವು.

    ಸದಾ ವಾಹನ ಓಡಾಟ ಇರುವ ಕಲ್ಸಂಕ ಕೃತ್ತ, ಕೆ.ಎಂ. ಮಾರ್ಗ, ಬನ್ನಂಜೆ ರಸ್ತೆ, ಅಂಬಲಪಾಡಿ, ಕರಾವಳಿ ಜಂಕ್ಷನ್, ಬ್ರಹ್ಮಗಿರಿ ಸರ್ಕಲ್, ಕಡಿಯಾಳಿ, ಇಂದ್ರಾಳಿ, ಅಂಬಾಗಿಲು ಜಂಕ್ಷನ್, ಗುಂಡಿಬೈಲು, ಕೃಷ್ಣ ಮಠ ರಸ್ತೆ , ಮಣಿಪಾಲ ಡಿಸಿ ಆಫೀಸ್ ರಸ್ತೆ, ಮಣಿಪಾಲ ಟೈಗರ್ ಸರ್ಕಲ್, ಪರ್ಕಳ, ಕೋರ್ಟ್ ರಸ್ತೆಗಳು ವಾಹನ ಓಡಾಟ ಇಲ್ಲದೆ ಸ್ತಬ್ದವಾಗಿತ್ತು. ಕೆಲವು ಬೈಕ್, ಕಾರುಗಳಲ್ಲಿ ಅತಿ ವಿರಳವಾಗಿ ಓಡಾಡುವ ದೃಶ್ಯ ಕಂಡು ಬಂದಿತ್ತು. ಆಟೊ ಮತ್ತು ಟ್ಯಾಕ್ಸಿ ಸೇವೆಗಳು ಲಭ್ಯವಿರಲಿಲ್ಲ. ಕೆಲವು ಕಡೆ ರಿಕ್ಷಾ ನಿಲ್ದಾಣಗಳಲ್ಲಿ ಒಂದೆರಡು ರಿಕ್ಷಾಗಳು ತುರ್ತು ಸಾರ್ವಜನಿಕ ಸೇವೆ ನೀಡಲು ಅಣಿಯಾಗಿದ್ದವು. ಹಾಲಿನ ಮಳಿಗೆ, ಮೆಡಿಕಲ್ ಶಾಪ್‌ಗಳು ಮಾತ್ರ ತೆರೆದಿದ್ದವು, ತುರ್ತು ಸೇವೆಗಾಗಿ ಅಂಬುಲೆನ್ಸ್‌ಗಳಿಂದ ಗಸ್ತು ಜತೆಗೆ ಪೊಲೀಸ್ ಇಲಾಖೆ ಗಸ್ತು ನಿರಂತರವಾಗಿತ್ತು. ಕೆಲವು ಪೆಟ್ರೋಲ್ ಬಂಕ್‌ಗಳು ಬಂದ್ ಮಾಡಿದ್ದರೆ, ಬೆರಳಿಕೆಯಷ್ಟು ಪೆಟ್ರೊಲ್ ಬಂಕ್ ಕಾರ್ಯನಿರ್ವಹಿಸುತಿದ್ದವು.

    ಮಲ್ಪೆ ಬಂದರು ಬಿಕೋ: ಲಕ್ಷಾಂತರ ರೂ. ವಹಿವಾಟು ನಡೆಸುವ, ಸಾವಿರಾರು ಬೋಟು ಹೊಂದಿರುವ ದೇಶದ ಸರ್ವಋತು ಮಲ್ಪೆ ಮೀನುಗಾರಿಕೆ ಬಂದರು ಇತಿಹಾಸದಲ್ಲೆ ಮೊದಲ ಸಲ ಸಂಪೂರ್ಣ ಬಂದ್ ಆಗಿತ್ತು. ಮಲ್ಪೆ ಬಂದರಿನಲ್ಲಿ ಸದಾ ನೂರಾರು ಸಂಖ್ಯೆಯಲ್ಲಿ ಮೀನುಗಾರರು, ಗ್ರಾಹಕರು, ವ್ಯಾಪಾರಿಗಳು ನೆರೆದಿರುತ್ತಾರೆ. ಭಾನುವಾರ ಮಾತ್ರ ಬಂದರಿನಲ್ಲಿ ಯಾವುದೇ ಚಟುವಟಿಕೆ ಇಲ್ಲದೆ ನಿಶ್ಯಬ್ಧವಾಗಿತ್ತು. ಬಂದರು ಒಳಗಿನ ಅಂಗಡಿ, ಹೋಟೆಲ್ ಸೇರಿದಂತೆ. ಮಲ್ಪೆ ಪೇಟೆಯ ಅಂಗಡಿ, ಮುಂಗಟ್ಟುಗಳು ಬಂದ್ ಸಂಪೂರ್ಣ ಬಂದ್ ಆಗಿತ್ತು.

    ಸ್ವಯಂ ನಿರ್ಬಂಧಕ್ಕೆ ಕುಂದಾಪುರ ಸ್ತಬ್ಧ: ಕರೊನಾ ವೈರಸ್ ಹಾವಳಿ ನಿಯಂತ್ರಣಕ್ಕೆ ಭಾನುವಾರ ಜನತಾ ಕರ್ಫ್ಯೂ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆಗೆ ಕುಂದಾಪುರದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಎರಡು ದಶಕದ ಹಿಂದೆ ಭಾಸ್ಕರ ಕೊಠಾರಿ ಪ್ರಕರಣದಲ್ಲಿ ಕುಂದಾಪುರ ಮೊದಲ ಕರ್ಫ್ಯೂ ಕಂಡಿತ್ತು. ಕುಂದಾಪುರ ಪೇಟೆ ಅಲ್ಲದೆ ಸಣ್ಣಪುಟ್ಟ ಪಟ್ಟಣ ಹಾಗೂ ಇಡೀ ಗ್ರಾಮೀಣ ಭಾಗದಲ್ಲೂ ಜನತಾ ಕರ್ಫ್ಯೂ ಮೂಲಕ ತಮಗೆ ತಾವೇ ನಿರ್ಬಂಧ ಹೇರಿಕೊಂಡು ಜನ ಗೃಹಬಂಧಿಯಾದರು. ರಾಜ್ಯ ಸಾರಿಗೆ ಖಾಸಗಿ ಬಸ್‌ಗಳು ರಸ್ತೆಗಿಳಿಯದ ಪರಿಣಾಮ ಕುಂದಾಪುರ ಮತ್ತು ಗ್ರಾಮೀಣ ಭಾಗದ ಸಂಪರ್ಕ ಕಳಚಿತ್ತು. ಸ್ವಂತ ವಾಹನ ಇದ್ದವರು ಅಲ್ಲೊಬ್ಬರು ಇಲ್ಲೊಬ್ಬರು ಸಿಕ್ಕರೂ ಇಡೀ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಗ್ರಾಮೀಣ ಭಾಗದ ರಸ್ತೆಗಳ ಖಾಲಿಯಾಗಿತ್ತು. ವಾಣಿಜ್ಯ ಸಂಕೀರ್ಣ, ಅಂಗಡಿ ಮುಂಗಟ್ಟು, ಹೋಟೆಲ್ ಸಮುಚ್ಚಯ, ಗೂಡಂಗಡಿಗಳು ಕೂಡ ಬಂದ್ ಮಾಡಲಾಗಿತ್ತು.

    ಅಲ್ಲೊಂದು ಇಲ್ಲೊಂದು ಪೆಟ್ರೋಲ್ ಬಂಕ್, ಮೆಡಿಕಲ್ ಸ್ಟೋರ್, ಆಸ್ಪತ್ರೆ ಬಾಗಿಲು ತೆಗೆದಿದ್ದರೂ ಜನರಿಲ್ಲದೆ ಖಾಲಿ ಖಾಲಿಯಾಗಿತ್ತು. ಮೀನು ಮಾರುಕಟ್ಟೆ, ಹೂವಿನ ಮಾರುಕಟ್ಟೆ, ಮಾಂಸದ ಅಂಗಡಿ ಎಲ್ಲವೂ ಜನರಿಂದ ಮುಕ್ತ. ಪುರಸಭೆ ಪೌರ ಕಾರ್ಮಿಕರು, ಮೆಸ್ಕಾಂ ಸಿಬ್ಬಂದಿ ಎಂದಿನಂತೆ ಕರ್ತವ್ಯ ನಿರ್ವಹಿಸಿದರು.

    ಸಮುದ್ರಕ್ಕೆ ಇಳಿಯದ ಮೀನುಗಾರರು: ಕುಂದಾಪುರ ತಾಲೂಕಿನ ಪ್ರಮುಖ ಬಂದರುಗಳಲ್ಲಿ ನಿಶಬ್ದವಿತ್ತು. ಮೀನುಗಾರರು ಕಡಲಿಗಿಳಿದೆ ಮನೆಯಲ್ಲೇ ಉಳಿದಿದ್ದರಿಂದ ಗಂಗೊಳ್ಳಿ, ಮರವಂತೆ ಕೊಡೇರಿ ಬಂದರು ಬಿಕೋ ಎನ್ನುತ್ತಿತ್ತು. ಮರವಂತೆ ಬಂದರ್ ಬಳಿ ಬೆರಳೆಣಿಯಷ್ಟು ಮೀನುಗಾರರು ಬಲೆ ದುರಸ್ತ್ತಿಯಲ್ಲಿ ತೊಡಗಿಸಿಕೊಂಡಿದ್ದರೆ, ದೋಣಿಗಳ ದಡಕ್ಕೆ ಏರಿಸಿ ಇಡಲಾಗಿತ್ತು.

    ದೇವಳದಲ್ಲಿ ಪ್ರಾರ್ಥನೆ: ಕೋಟೇಶ್ವರ ದೊಡ್ಮನೆಬೆಟ್ಟು ಶ್ರೀ ಮುಖ್ಯಪ್ರಾಣ ದೇವಳದಲ್ಲಿ ಪ್ರತಿನಿತ್ಯ ಬೆಳಗ್ಗೆ 8.30ಕ್ಕೆ ಪೂಜೆ ನಡೆಯುತ್ತಿದ್ದು, ಪ್ರಧಾನಮಂತ್ರಿ ನೀಡಿದ ಜನತಾ ಕರ್ಫ್ಯೂಗೆ ಸಂಪೂರ್ಣ ಬೆಂಬಲ ಸೂಚಿಸುವ ಸಲುವಾಗಿ ದೇವಳದ ಪ್ರಧಾನ ಅರ್ಚಕ ವೈ.ಎನ್.ವೆಂಕಟೇಶಮೂರ್ತಿ ಭಟ್ಟರು ಬೆಳಗ್ಗೆ 7ರೊಳಗೆ ಮುಖ್ಯಪ್ರಾಣ ದೇವರಿಗೆ ಪೂಜೆ ಸಲ್ಲಿಸಿ ಕರೊನಾ ಸೋಂಕು ಎಂಬ ಮಹಾಮಾರಿ ದೂರವಾಗಲಿ ಎಂದು ಪ್ರಾರ್ಥಿಸಿ ಪೂಜೆ ಸಲ್ಲಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts