More

    ಉಡುಪಿ ಲಾಕ್‌ಡೌನ್, ಇಂದು ನಿರ್ಣಾಯಕ ಸಭೆ, ಜಿಲ್ಲಾಧಿಕಾರಿ ಜಗದೀಶ್ ಮಾಹಿತಿ

    ಉಡುಪಿ: ಜಿಲ್ಲೆ ಲಾಕ್‌ಡೌನ್ ವಿಷಯದಲ್ಲಿ ಮಂಗಳವಾರ ಬೆಳಗ್ಗೆ 10 ಗಂಟೆಗೆ ಜನಪ್ರತಿನಿಧಿಗಳ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‌ಡೌನ್ ವಿಚಾರದಲ್ಲಿ ಜಿಲ್ಲಾಡಳಿತದ ಅಭಿಪ್ರಾಯವನ್ನು ಸಿಎಂಗೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ತಿಳಿಸಲಾಗಿದೆ. ನಿರ್ಧಾರ ಕೈಗೊಳ್ಳುವ ಮುನ್ನ ಜನರಿಗೆ 1 ದಿನದ ಕಾಲಾವಕಾಶ ನೀಡಲಾಗುವುದು. ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನಕ್ಕೆ ತೊಂದರೆಯಾಗದಂತೆ ಎಚ್ಚರ ವಹಿಸಲಾಗುವುದು ಎಂದು ಅವರು ತಿಳಿಸಿದರು.

    ಹೊರ ಜಿಲ್ಲೆಗಳಿಂದ ಬರುವವರಿಗೆ ಜಿಲ್ಲಾ ಪ್ರವೇಶ ನಿಷೇಧಿಸಬೇಕು ಎಂದು ಸಿಎಂಗೆ ಮನವಿ ಮಾಡಲಾಗಿದೆ. ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯುವಂತೆ ಸೂಚನೆ ನೀಡಿದ್ದಾಗಿ ಡಿಸಿ ಹೇಳಿದರು.

    ಬಸ್ ಸಂಚಾರ ಬಗ್ಗೆ ತೀರ್ಮಾನ: ಜಿಲ್ಲೆಯಲ್ಲಿ ಬಸ್‌ಗಳಲ್ಲಿ ಸಾಮಾಜಿಕ ಅಂತರ ನಿಯಮ ಉಲ್ಲಂಘಿಸುತ್ತಿರುವ ಬಗ್ಗೆ ದೂರುಗಳು ಬಂದಿದ್ದು, 18-20 ಬಸ್ ಮಾಲೀಕರು, ಚಾಲಕರು- ನಿರ್ವಾಹಕರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಮಂಗಳವಾರದ ಸಭೆಯಲ್ಲಿ ಬಸ್ ಸಂಚಾರಕ್ಕೆ ಅವಕಾಶ ಇರಬೇಕೇ ಬೇಡವೇ ಎಂಬ ಬಗ್ಗೆ ಚರ್ಚೆ ನಡೆಯಲಿದೆ ಎಂದರು.

    ಸಭೆ-ಸಮಾರಂಭಕ್ಕಿಲ್ಲ ಅವಕಾಶ: ಮದುವೆಗೆ 50 ಮಂದಿಗೆ ಅನುಮತಿ ನೀಡಲಾಗುತ್ತದೆ. ಕೆಲವು ಸಂಘ-ಸಂಸ್ಥೆಗಳು ಪದಗ್ರಹಣ ಇತ್ಯಾದಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಇದಕ್ಕೆಲ್ಲ ಅವಕಾಶ ಇಲ್ಲ. ಯಕ್ಷಗಾನಕ್ಕೂ ಅನುಮತಿಯಿಲ್ಲ ಎಂದರು.

    ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಮಾತ್ರ ಸರ್ಕಾರ ಅನುಮತಿ ನೀಡಿದೆ. ಇಂದಿನ ಸಭೆಯಲ್ಲಿ ಕೆಲವು ಜಿಲ್ಲಾಧಿಕಾರಿಗಳು ಸಾಮಾಜಿಕ ಅಂತರ ಪಾಲನೆಯಾಗುತ್ತಿಲ್ಲ, ನಿರ್ಬಂಧ ವಿಧಿಸಿ ಎಂದು ಮುಖ್ಯಮಂತ್ರಿಯನ್ನು ಕೋರಿದ್ದಾರೆ. ನಿಯಮ ಪ್ರಕಾರ ಹಬ್ಬ ಹರಿದಿನಗಳನ್ನು ಮನೆಯಲ್ಲೇ ಆಚರಿಸಬೇಕು. ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ.
    – ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್‌ಡೌನ್ ಅನಿವಾರ್ಯ. ಉಡುಪಿ ಜಿಲ್ಲೆಯ ಮಟ್ಟಿಗೆ ಸದ್ಯಕ್ಕೆ ಲಾಕ್‌ಡೌನ್ ಅಗತ್ಯವಿಲ್ಲ ಅನ್ನಿಸುತ್ತದೆ. ಉಡುಪಿ-ದಕ್ಷಿಣ ಕನ್ನಡ ಗಡಿ ಮುಚ್ಚುವ ಅಥವಾ ತೆರೆಯುವ ಬಗ್ಗೆ ಮುಂದಿನ ದಿನದಲ್ಲಿ ಕ್ರಮ ಕೈಗೊಳ್ಳಲಾಗುವುದು.
    – ಕೋಟ ಶ್ರೀನಿವಾಸ ಪೂಜಾರಿ, ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts