ಉಡುಪಿ/ ಪಡುಬಿದ್ರಿ: ಉಡುಪಿಯನ್ನು ಕರೊನಾ ಮುಕ್ತ ಜಿಲ್ಲೆಯನ್ನಾಗಿಸುವ ಪ್ರಯತ್ನವಾಗಿ ಬುಧವಾರದಿಂದ ಐದು ದಿನ 50ಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳಿರುವ ಗ್ರಾಮ ಪಂಚಾಯಿತಿಗಳನ್ನು ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದ್ದು, 33 ಗ್ರಾಮ ಪಂಚಾಯಿತಿಯ 50 ಗ್ರಾಮಗಳು ಸಂಪೂರ್ಣ ಸ್ತಬ್ಧಗೊಂಡಿವೆ.
ಶಿರೂರು, ಜಡ್ಕಲ್, ಕಂಬದಕೋಣೆ, ನಾಡ, ಕಾವ್ರಾಡಿ, ಹೊಂಬಾಡಿ, ಮಂದಾಡಿ, ಕೋಟೇಶ್ವರ, ಹಾಲಾಡಿ, ಇಡೂರು ಕುಂಜ್ಞಾಡಿ, ಆಜ್ರಿ, ಆಲೂರು 38, ಕಳತ್ತೂರು, 80 ಬಡಗಬೆಟ್ಟು, ಅಲೆವೂರು, ಪೆರ್ಡೂರು, ತೆಂಕನಿಡಿಯೂರು, ಬೊಮ್ಮರಬೆಟ್ಟು, ಬೆಳಪು, ಬೆಳ್ವೆ, ಪಡುಬಿದ್ರಿ, ಶಿರ್ವ, ಮಾಳ, ಈದು, ಕುಕ್ಕುಂದೂರು, ಕಡ್ತಲ, ಮರ್ಣೆ, ಪಳ್ಳಿ, ನಿಟ್ಟೆ, ಮಿಯಾರು, ಬೆಳ್ಮಣ್, ಬೆಳ್ವೆ, ಮುದ್ರಾಡಿ, ವರಂಗ, ಹನೆಹಳ್ಳಿ ಗ್ರಾಮ ಪಂಚಾಯಿತಿ ಗ್ರಾಮಗಳನ್ನು ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದೆ.
ಕಾಪುವಿನಲ್ಲಿ ತಹಸೀಲ್ದಾರ್ ಪರಿಶೀಲನೆ
ಕಾಪು ತಾಲೂಕಿನಲ್ಲಿ 50ಕ್ಕಿಂತ ಅಧಿಕ ಪಾಸಿಟಿವ್ ಪ್ರಕರಣಗಳಿರುವ ಬೆಳ್ಳೆ, ಶಿರ್ವ, ಬೆಳಪು ಹಾಗೂ ಪಡುಬಿದ್ರಿ ಗ್ರಾಮಗಳಲ್ಲಿ ಸಂಪೂರ್ಣ ಲಾಕ್‌ಡೌನ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗ್ರಾಮಗಳಲ್ಲಿ ಆಸ್ಪತ್ರೆ, ಮೆಡಿಕಲ್ ಸಹಿತ ಕೆಲವೊಂದು ಚಟುವಟಿಕೆಗಳಿಗೆ ಮಾತ್ರ ವಿನಾಯಿತಿ ನೀಡಲಾಗಿತ್ತು.
ಪಡುಬಿದ್ರಿ ಪೇಟೆಯಲ್ಲಿನ ಹಾಲು ಅಧಿಕೃತ ವಿತರಕರು ಸೇರಿದಂತೆ ಚಿಲ್ಲರೆ ವಿತರಕರಿಗೂ ಹಾಲು ಮಾರಾಟಕ್ಕೆ ಅವಕಾಶ ನೀಡದ ಪರಿಣಾಮ ಜನ ಸುತ್ತಮುತ್ತಲಿನ ಗ್ರಾಮಗಳಿಗೆ ತೆರಳಿ ಹಾಲು ಖರೀದಿ ಮಾಡಬೇಯಿತು. ಲಾಕ್‌ಡೌನ್ ಆದ ಗ್ರಾಮಗಳಿಗೆ ತಹಸೀಲ್ದಾರ್ ಪ್ರತಿಭಾ ಆರ್. ಭೇಟಿ ನೀಡಿ ಪರಿಶೀಲಿಸಿದರು. ಪಡುಬಿದ್ರಿಯಲ್ಲಿ ಹಾಲು ವಿತರಣೆ ಮಾಡುವುದಾಗಿ ಗ್ರಾಪಂ ಒಪ್ಪಿದ್ದರೂ, ಅದು ನಡೆಯದೆ ಹಾಲಿಗಾಗಿ ಜನ ಪರದಾಡುವಂತಾಯಿತು. ಈ ಬಗ್ಗೆ ಮಾಹಿತಿ ಪಡೆದ ತಹಸೀಲ್ದಾರ್, ಗ್ರಾಪಂ ಅಧ್ಯಕ್ಷ ರವಿ ಶೆಟ್ಟಿ, ಪಿಡಿಒ ಪಂಚಾಕ್ಷರಿ ಸ್ವಾಮಿ ಕೆರಿಮಠ ಅವರಲ್ಲಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು. ಗುರುವಾರದಿಂದ ಜೂನ್ 7 ರವರೆಗೆ ಆಟೋರಿಕ್ಷಾವೊಂದರಲ್ಲಿ ಗ್ರಾಮ ವ್ಯಾಪ್ತಿಯಲ್ಲಿ ಹಾಲು ವಿತರಣೆಗೆ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷರು ಹಾಗೂ ಪಿಡಿಒ ಭರವಸೆ ನೀಡಿದರು.
ರಸ್ತೆಗಡ್ಡ ಮರದ ದಿಮ್ಮಿ: ಬೆಳಪು ಗ್ರಾಮದ ಗಡಿ ಪ್ರದೇಶದ ರಸ್ತೆಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳೀಯರು ಮರದ ದಿಮ್ಮಿಗಳನ್ನು ಅಡ್ಡವಿಟ್ಟು ವಾಹನ ಸಂಚರಿಸದಂತೆ ನೋಡಿಕೊಂಡರು.ಪಡುಬಿದ್ರಿ ಗ್ರಾಮ ಕರಣಿಕ ಶ್ಯಾಮ್‌ಸುಂದರ್, ಗ್ರಾಮ ಸಹಾಯಕ ಜಯರಾಮ, ಗ್ರಾಮಕರಣಿಕ ಅರುಣ್ ಕುಮಾರ್ ಉಪಸ್ಥಿತರಿದ್ದರು.
ಚೆಕ್‌ಪೋಸ್ಟ್‌ನಲ್ಲಿ ಬಂದೋಬಸ್ತ್:
ಹೆಜಮಾಡಿ ಚೆಕ್‌ಪೋಸ್ಟ್‌ಗೆ ತೆರಳಿ ಉಡುಪಿ ಜಿಲ್ಲೆ ಪ್ರವೇಶಿಸುವ ವಾಹನಗಳ ತಪಾಸಣೆ ನಡೆಸುವಂತೆ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಸೂಚಿಸಿದರು. ಉಚ್ಚಿಲದಲ್ಲಿ ಅಂಗಡಿ ಹಾಗೂ ಮೀನು ವ್ಯಾಪಾರಸ್ಥರಿಗೆ ದೈಹಿಕ ಅಂತರ ಹಾಗೂ ಮಾಸ್ಕ್ ಧರಿಸುವಂತೆ ಎಚ್ಚರಿಕೆ ನೀಡಿದರು. ಬೆಳಪು ಗ್ರಾಮದ ಗಡಿಭಾಗಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅನಗತ್ಯವಾಗಿ ಗ್ರಾಮದ ಒಳ ಬರುವ ವಾಹನಗಳನ್ನು ಜಪ್ತಿ ಮಾಡುವಂತೆ ಪಿಡಿಒ ರಮೇಶ್ ಹಾಗೂ ಪೊಲೀಸರಿಗೆ ಸೂಚಿಸಿದರು.
ಕಂಬದಕೋಣೆ-ಕೊಲ್ಲೂರು ರಸ್ತೆ ಸೀಲ್‌ಡೌನ್
ಗಂಗೊಳ್ಳಿ: 50ಕ್ಕಿಂತ ಹೆಚ್ಚು ಕೋವಿಡ್ ಪಾಸಿಟಿವ್ ಇರುವ ಗ್ರಾಮಗಳನ್ನು ಬುಧವಾರದಿಂದ ಸಂಪೂರ್ಣ ಲಾಕ್‌ಡೌನ್ ಮಾಡುವ ಜಿಲ್ಲಾಧಿಕಾರಿ ಆದೇಶದಂತೆ ಕಂಬದಕೋಣೆ ಗ್ರಾಮ ಪಂಚಾಯಿತಿಯ ಕಂಬದಕೋಣೆ-ಕೊಲ್ಲೂರು ರಸ್ತೆಯನ್ನು ಬುಧವಾರ ಸಂಪೂರ್ಣ ಸೀಲ್‌ಡೌನ್ ಮಾಡಲಾಯಿತು. ಗ್ರಾಪಂ ಅಧ್ಯಕ್ಷ ಸುಕೇಶ ಶೆಟ್ಟಿ, ಸದಸ್ಯರಾದ ರಾಜೇಶ ದೇವಾಡಿಗ, ಸತೀಶ ದೇವಾಡಿಗ, ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ಕಾರ್ಯದರ್ಶಿ ಪಾರ್ವತಿ, ಆರಕ್ಷಕ ಠಾಣಾ ಸಿಬ್ಬಂದಿ, ಗ್ರಾಮ ಸಹಾಯಕ, ಪಂಚಾಯಿತಿ ಸಿಬ್ಬಂದಿ ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು.