More

    ಉಡುಪಿಯಲ್ಲಿ ಸಂಪರ್ಕದ ಆತಂಕ

    ಉಡುಪಿ: ಜಿಲ್ಲೆಯಲ್ಲಿ ಸೋಮವಾರ 18 ಮಂದಿಗೆ ಕರೊನಾ ಸೋಂಕು ವರದಿಯಾಗಿದೆ.
    ಸ್ಥಳೀಯವಾಗಿ 9 ಪ್ರಕರಣಗಳು ವರದಿಯಾಗಿದ್ದು, 13 ಪುರುಷರು, 4 ಮಹಿಳೆಯರು. ಒಬ್ಬಳು ಬಾಲಕಿ ಸೇರಿ ಒಟ್ಟು 18 ಪ್ರಕರಣಗಳಲ್ಲಿ ಉಡುಪಿಯ ಒಂಬತ್ತು ಮಂದಿ, ಕುಂದಾಪುರದ ನಾಲ್ವರು, ಕಾರ್ಕಳದ ಐದು ಜನರಿದ್ದಾರೆ. ಮಹಾರಾಷ್ಟ್ರದಿಂದ ಬಂದ ಐವರು, ಬೆಂಗಳೂರಿನಿಂದ ಬಂದ ನಾಲ್ವರು ಸೇರಿದ್ದಾರೆ.

    ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ಆರು ಮಂದಿಗೆ ಸ್ಥಳೀಯವಾಗಿ ಸೋಂಕು ತಗುಲಿದೆ. ಇತ್ತೀಚೆಗೆ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ಕರೊನಾ ವಾರಿಯರ್ಸ್‌ಗೆ ಪಾಸಿಟಿವ್ ಬಂದಿದ್ದು, ಸೋಮವಾರ ಅಲ್ಲಿನ ಮತ್ತೊಬ್ಬ ಸ್ಟಾಫ್ ನರ್ಸ್‌ಗೆ ಪಾಸಿಟಿವ್ ಬಂದಿದೆ. ಕೆಎಂಸಿ ನರ್ಸ್ ಒಬ್ಬರ ಪ್ರಾಥಮಿಕ ಸಂಪರ್ಕದಿಂದ ಒಬ್ಬರಿಗೆ, ಉಡುಪಿಯ ಹೋಟೆಲ್ ಸಿಬ್ಬಂದಿಗೆ ಸೋಂಕು ಇರುವುದು ವರದಿಯಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1197ಕ್ಕೆ ಏರಿಕೆಯಾಗಿದೆ. ಸೋಮವಾರ ಐದು ಮಂದಿ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    74 ನೆಗೆಟಿವ್: ಜಿಲ್ಲೆಯಲ್ಲಿ ಸೋಮವಾರ 74 ಮಂದಿಯ ವರದಿ ನೆಗೆಟಿವ್ ಬಂದಿದೆ. 209 ಮಂದಿಯ ವರದಿ ಬರಲು ಬಾಕಿ ಇದ್ದು, 35 ಜನರ ಮಾದರಿ ಸಂಗ್ರಹಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 1056 ಮಂದಿ ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದು, 139 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

    ಹೆಜಮಾಡಿ ಕೋಡಿ ಮಹಿಳೆ
    ಪಡುಬಿದ್ರಿ: ಕೇರಳಕ್ಕೆ ತೆರಳಿ ಹಿಂದಿರುಗಿದ್ದ ಹೆಜಮಾಡಿ ಕೋಡಿಯ ಸೋಂಕಿತ ವ್ಯಕ್ತಿಯ ಮನೆ ಕೆಲಸದಾಕೆಗೂ ಸೋಂಕು ದೃಢವಾಗಿದೆ. ಜ್ವರ ಹಿನ್ನೆಲೆಯಲ್ಲಿ ಪುತ್ರನೊಂದಿಗೆ ಆಕೆಯನ್ನು ಭಾನುವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಆ ಮಹಿಳೆಯ ಸಂಪರ್ಕ ಹೊಂದಿದ್ದವರಿಗೆ ಆತಂಕ ಶುರುವಾಗಿದೆ. ಇದರೊಂದಿಗೆ ಕೋಡಿ ವ್ಯಕ್ತಿ ಸಂಪರ್ಕದಿಂದ 11 ಮಂದಿಗೆ ಸೋಂಕು ಹರಡಿದಂತಾಗಿದೆ.

    ಮಾಹಿತಿ ಮುಚ್ಚಿಟ್ಟದ್ದಕ್ಕೆ ಕೇಸು
    ಪಡುಬಿದ್ರಿ: ಪ್ರಯಾಣ ವಿವರ ಮುಚ್ಚಿಟ್ಟ ಕರೊನಾ ಸೋಂಕಿತ ಸಹೋದರರಾದ ನಡ್ಸಾಲ್ ಗ್ರಾಮದ ಇಬ್ಬರ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ. ಆರೋಪಿಗಳ ಮೊಬೈಲ್ ಸಂಖ್ಯೆಗಳ ಸಿ.ಡಿ.ಆರ್ ಪರಿಶೀಲನೆ ನಡೆಸಿದಾಗ, ಅವರು ಲಾಕ್‌ಡೌನ್ ಅವಧಿಯಲ್ಲಿಯೂ ಹಲವೆಡೆ ಭೇಟಿ ನೀಡಿ ಅನೇಕರನ್ನು ಸಂಪರ್ಕಿಸಿ ಕೋವಿಡ್-19 ಹರಡಲು ಕಾರಣರಾಗಿರುವುದು ಗೊತ್ತಾಗಿದೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ವಾಸುದೇವ ದೂರು ನೀಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts