More

    ಮುಚ್ಚಿದ ಕ್ರೀಡಾಂಗಣ, ರದ್ದಾದ ಬೇಸಿಗೆ ಶಿಬಿರ, ಉಡುಪಿ ಜಿಲ್ಲಾ ಕ್ರೀಡಾ ಇಲಾಖೆಗೆ 20 ಲಕ್ಷ ರೂ.ನಷ್ಟ

    – ಅವಿನ್ ಶೆಟ್ಟಿ ಉಡುಪಿ
    ಲಾಕ್‌ಡೌನ್‌ನಿಂದಾಗಿ ಜಿಲ್ಲೆಯ ಕ್ರೀಡಾಂಗಣಗಳು ಸ್ತಬ್ಧವಾಗಿವೆ. ಈಜುಕೊಳ, ಬೇಸಿಗೆ ಶಿಬಿರ ಚಟುವಟಿಕೆಗಳಿಗೆ ಸಂಪೂರ್ಣ ಬ್ರೇಕ್ ಬಿದ್ದಿರುವುದರಿಂದ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆದಾಯಕ್ಕೂ ಹೊಡೆತ ಬಿದ್ದಿದೆ.

    ಏಪ್ರಿಲ್-ಮೇ ತಿಂಗಳಲ್ಲಿ ಕ್ರೀಡಾಂಗಣ, ಈಜುಕೊಳ, ಬೇಸಿಗೆ ಶಿಬಿರಗಳಿಂದ ಬರುತ್ತಿದ್ದ ವಾರ್ಷಿಕ ಆದಾಯ ಬಹುಪಾಲು 20 ಲಕ್ಷ ರೂ.ನಷ್ಟ ಉಂಟಾಗಿದೆ. ಎರಡು ಕೋಟಿ ರೂ. ವೆಚ್ಚದಲ್ಲಿ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದ ಬಳಿ ಐದು ವರ್ಷಗಳ ಹಿಂದೆ ಯವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ ನಿರ್ಮಿಸಲಾದ ಈಜು ಕೊಳಕ್ಕೆ ಬೇಸಿಗೆ ರಜಾ ಕಾಲದ ಈ ಎರಡು ತಿಂಗಳಲ್ಲಿ ಬಹು ಬೇಡಿಕೆ ಇರುತ್ತದೆ.

    ವಿದ್ಯಾರ್ಥಿಗಳು, ಯುವಕರು ಸೇರಿದಂತೆ ಎಲ್ಲ ವಯೋಮಾನದವರು ಈಜುಕೊಳದಲ್ಲಿ ಸಂಭ್ರಮಿಸುವುದು ಸಾಮಾನ್ಯ. ಹೀಗೆ ಸೀಸನ್‌ನಲ್ಲಿ ಈಜುಕೊಳ ಜನರಿಂದ ತುಂಬಿರುವುದರಿಂದ ಇಲಾಖೆಗೆ ಎರಡು ತಿಂಗಳಲ್ಲಿ ಬರುತ್ತಿದ್ದ 14-15 ಲಕ್ಷ ರೂ. ಆದಾಯ ಖೋತಾ ಆಗಿದೆ. ಸದ್ಯಕ್ಕೆ ಈಜುಕೊಳದ ನೀರು ಖಾಲಿ ಮಾಡಿ ಲಾಕ್ ಮಾಡಿ ಇಡಲಾಗಿದೆ.

    ಮುಚ್ಚಿದ ಜಿಮ್, ಬ್ಯಾಡ್ಮಿಂಟನ್, ಟೆನಿಸ್ ಕೋರ್ಟ್‌ಗಳು !
    ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿರುವ ಅಂತಾರಾಷ್ಟ್ರೀಯ ಗುಣಮಟ್ಟದ ಜಿಮ್‌ನಲ್ಲಿ 85-100 ಮಂದಿ ಸದಸ್ಯರಿದ್ದಾರೆ. ಎರಡು ತಿಂಗಳಲ್ಲಿ ಎರಡು ಲಕ್ಷ ರೂಪಾಯಿವರೆಗೆ ಆದಾಯ ನಷ್ಟವಾಗಿದೆ. ಹೊಸದಾಗಿ ನಿರ್ಮಿಸಲಾಗಿರುವ ಸರ್ವ ಸುಸಜ್ಜಿತ ಲಾನ್ ಟೆನಿಸ್ ಒಳಾಂಗಣ ಕ್ರೀಡಾಂಗಣದಲ್ಲಿ 30 ಸದಸ್ಯರಿದ್ದು, ಇವರಿಂದ ಎರಡು ತಿಂಗಳು 60 ಸಾವಿರ ರೂ. ಆದಾಯ ಬರುತ್ತಿತ್ತು. ಒಳಾಂಗಣ ಶಟಲ್ ಬ್ಯಾಡ್ಮಿಂಟನ್‌ನಲ್ಲಿ 100 ಸದಸ್ಯರಿಂದ ತಲಾ ಒಂದು ಸಾವಿರ ರೂ. ಶುಲ್ಕದಂತೆ ಎರಡು ತಿಂಗಳಲ್ಲಿ ಒಟ್ಟು 2ಲಕ್ಷ ರೂ. ಆದಾಯದ ಸಂಗ್ರಹಿಸುವ ನಿರೀಕ್ಷೆ ಇಲಾಖೆ ಹೊಂದಿತ್ತು. ಹೀಗೆ ಒಳಾಂಗಣ ಕ್ರೀಡೆಯಿಂದ ಬರುತ್ತಿದ್ದ 4.60 ಲಕ್ಷ ರೂ. ಆದಾಯ ಕೈತಪ್ಪಿದೆ.

    ಬೇಸಿಗೆ ಶಿಬಿರ ರದ್ದು: ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಬೇಸಿಗೆ ಅಥ್ಲೆಟಿಕ್ಸ್ ಕ್ಯಾಂಪ್‌ನಲ್ಲಿ 200 ರಿಂದ 300 ಮಂದಿ ಭಾಗವಹಿಸುತ್ತಾರೆ. ಈ ಶಿಬಿರಾರ್ಥಿಗಳಿಂದ 50-60 ಸಾವಿರ ರೂಪಾಯಿವರೆಗೆ ಹಣ ಸಂಗ್ರಹಿಸಲಾಗುತ್ತದೆ. ಈಜುಕೊಳ, ಒಳಾಂಗಣ ಹಾಗೂ ಜಿಲ್ಲಾ ಕ್ರೀಡಾಂಗಣಗಳಿಂದ ಬರುವ ಆದಾಯಗಳು ಇಲ್ಲಿನ ಗುತ್ತಿಗೆ ಆಧಾರಿತ ಸಿಬ್ಬಂದಿಯ ಸಂಬಳ ಹಾಗೂ ನಿರ್ವಹಣೆಗೆ ಮೂಲಗಳಾಗಿವೆ. ಲಾಕ್‌ಡೌನ್‌ನಿಂದಾಗಿ ಈ ಎಲ್ಲ ಗುಂಪು ಚಟುವಟಿಕೆ ರದ್ದುಗೊಂಡಿವೆ. ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ತರಬೇತಿ ಪಡೆಯುವ ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಸದ್ಯ ಮನೆ ಹಾಗೂ ಮನೆ ಸಮೀಪದ ಮೈದಾನಗಳಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ ಎನ್ನುತ್ತಾರೆ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ.

    ದ.ಕ ಜಿಲ್ಲೆಯಲ್ಲಿ ದೊಡ್ಡ ಮಟ್ಟಿನ ನಷ್ಟವಿಲ್ಲ: ಲಾಕ್‌ಡೌನ್‌ನಿಂದಾಗಿ ದ.ಕ ಜಿಲ್ಲಾ ಕ್ರೀಡಾ ಇಲಾಖೆಗೆ ದೊಡ್ಡ ಮಟ್ಟಿನ ನಷ್ಟ ಉಂಟಾಗಿಲ್ಲ. ಇಲಾಖೆಯಿಂದ ನಡೆಸುವ ಎಲ್ಲ ಬೇಸಿಗೆ ಶಿಬಿರಗಳು ಉಚಿತವಾಗಿಯೇ ನಡೆಯುತ್ತಿತ್ತು. ಮಂಗಳಾ ಈಜುಕೊಳ, ಪಾಲಿಕೆಗೆ ಸಂಬಂಧಿಸಿರುವುದರಿಂದ ಅದರ ಆದಾಯ ಪಾಲಿಕೆಗೆ ಸೇರುತ್ತದೆ. ಒಳಾಂಗಣ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದ ಬ್ಯಾಡ್ಮಿಂಟನ್ ಪಂದ್ಯಾವಳಿಗಳು ರದ್ದಾಗಿವೆ. ಕರಾವಳಿ ಉತ್ಸವ ಮೈದಾನದಲ್ಲಿ ಕೆಲವು ಕ್ರೀಡಾಕೂಟಗಳು ಆಯೋಜನೆಯಾಗುತ್ತಿತ್ತು. ಅವುಗಳು ನಡೆಯದೆ ಸ್ವಲ್ಪ ಹಿನ್ನಡೆಯಾಗಿದೆ ಎಂದು ದ.ಕ ಜಿಲ್ಲಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ ತಿಳಿಸಿದರು.

    ಲಾಕ್‌ಡೌನ್ ಜಾರಿ ಹಿನ್ನೆಲೆಯಲ್ಲಿ ಜಿಲ್ಲಾ ಕ್ರೀಡಾಂಗಣ, ಈಜುಕೊಳ, ಒಳಾಂಗಣ ಕ್ರೀಡಾಂಗಣಗಳನ್ನು ತಾತ್ಕಾಲಿಕ ಮುಚ್ಚಲಾಗಿದೆ. ಬೇಸಿಗೆ ಶಿಬಿರಗಳನ್ನೂ ರದ್ದುಗೊಳಿಸಲಾಗಿದೆ. ಏಪ್ರಿಲ್, ಮೇ ತಿಂಗಳು ಇಲಾಖೆಗೆ ಉತ್ತಮ ಆದಾಯ ಬರುತ್ತಿತ್ತು. ಈ ಸಲ ಆದಾಯಕ್ಕೆ ಹೊಡೆತ ಬಿದ್ದಿದೆ. ಕ್ರೀಡಾಪಟುಗಳು ಹೆಚ್ಚಾಗಿ ಮನೆಯಲ್ಲಿಯೇ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಫಿಟ್‌ನೆಸ್ ಕಾಪಾಡಿಕೊಳ್ಳುತ್ತಿದ್ದಾರೆ.
    -ಡಾ.ರೋಶನ್ ಕುಮಾರ್ ಶೆಟ್ಟಿ, ಸಹಾಯಕ ನಿರ್ದೇಶಕ, ಕ್ರೀಡಾ ಇಲಾಖೆ ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts