More

  ಕರಾವಳಿಯ ರತ್ನಗಳಿಗೆ ಪದ್ಮ ಪ್ರಶಸ್ತಿಗಳ ಗರಿ

  ಇತ್ತೀಚೆಗೆ ಕೃಷ್ಣೈಕ್ಯರಾದ ವಿಶ್ವಸಂತ, ಸಾಮಾಜಿಕ ಕ್ರಾಂತಿಗೆ ಹೆಸರಾಗಿದ್ದ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರಿಗೆ ಆಧ್ಯಾತ್ಮಿಕ ಸಾಧನೆಗಾಗಿ ಹಾಗೂ ಕೇಂದ್ರದ ಮಾಜಿ ಸಚಿವ ಜಾರ್ಜ್ ಫರ್ನಾಂಡಿಸ್ ಅವರಿಗೆ ಕೇಂದ್ರ ಸರ್ಕಾರ ಪದ್ಮವಿಭೂಷಣ (ಮರಣೋತ್ತರ) ಪ್ರಶಸ್ತಿ ಪ್ರಕಟಿಸಿದೆ. ಪೇಜಾವರ ಶ್ರೀಗಳು ಕೊನೆಯುಸಿರೆಳೆದು ತಿಂಗಳೊಳಗೆ ಭಾರತ ರತ್ನದ ನಂತರ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ಘೋಷಿಸಿ ಗೌರವ ಸಲ್ಲಿಸಿದೆ. ಇನ್ನು, ಅನಕ್ಷರಸ್ಥನಾದರೂ ಕಿತ್ತಳೆ ಹಣ್ಣು ಮಾರಿ ಶಾಲೆ ನಿರ್ಮಾಣ ಮೂಲಕ ಅಕ್ಷರ ಸಂತನಾದ ಹರೇಕಳ ಹಾಜಬ್ಬ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

  ಪೇಜಾವರ ಶ್ರೀಗಳಿಗೆ ಪದ್ಮವಿಭೂಷಣ
  ಉಡುಪಿ: ದ.ಕ. ಜಿಲ್ಲೆ ಕಡಬ ತಾಲೂಕಿನ ರಾಮಕುಂಜದಲ್ಲಿ 1931ರ ಏಪ್ರಿಲ್ 27ರಂದು ಜನಿಸಿದ್ದ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು 2019ರ ಡಿ.29ರಂದು ಉಡುಪಿ ರಥಬೀದಿಯ ಪೇಜಾವರ ಮಠದಲ್ಲಿ ಕೃಷ್ಣೈಕ್ಯರಾಗಿದ್ದರು.
  ತನ್ನ 8ನೇ ವಯಸ್ಸಿನಲ್ಲಿ ಆಗಿನ ಪೇಜಾವರ ಮಠಾಧೀಶ ಶ್ರೀ ವಿಶ್ವಮಾನ್ಯತೀರ್ಥರಿಂದ ಹಂಪೆಯ ಚಕ್ರತೀರ್ಥದಲ್ಲಿ ಕ್ರಿ.ಶ.1938, ಡಿ.3ರಂದು ಸಂನ್ಯಾಸ ಸ್ವೀಕರಿಸಿದ್ದ ಶ್ರೀಗಳು ಬಾಲ್ಯದಲ್ಲೇ ವೇದ, ವೇದಾಂತಗಳಲ್ಲಿ ಪಾಂಡಿತ್ಯ ಸಂಪಾದಿಸಿದ್ದರು. 25ರ ಹರೆಯಲ್ಲೇ ಮೈಸೂರಿನ ಮಹಾರಾಜ ಜಯಚಾಮರಾಜ ಒಡೆಯರು ನಂಜನಗೂಡಿನಲ್ಲಿ ನಡೆಸಿದ ಆಗಮತ್ರಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
  ಐದು ಬಾರಿ ಸರ್ವಜ್ಞ ಪೀಠಾರೋಹಣ ಮಾಡಿ ಕೃಷ್ಣನ ಪೂಜಾ ಪರ್ಯಾಯ ನೆರವೇರಿಸಿದ ಕೀರ್ತಿ ಪೇಜಾವರ ಶ್ರೀಗಳಿಗೆ ಸಲ್ಲುತ್ತದೆ. ಕ್ರಿ.ಶ. 1952ರಲ್ಲಿ ಶ್ರೀಗಳವರ ಮೊದಲ ಪರ್ಯಾಯ, ನಂತರ ಕ್ರಿ.ಶ. 1968-69, 1984-86, 2000-2002ರವರೆಗೆ 4ನೇ ಪರ್ಯಾಯ, 2016-18ರಲ್ಲಿ ಐತಿಹಾಸಿಕ 5 ಪರ್ಯಾಯ ನೆರವೇರಿಸಿದ್ದರು.

  1985ರಲ್ಲಿ ಉಡುಪಿಯಲ್ಲಿ ನಡೆದ ವಿಶ್ವ ಹಿಂದೂ ಪರಿಷತ್‌ನ ಧರ್ಮಸಂಸತ್‌ನಲ್ಲಿ ಶ್ರೀರಾಮ ಜನ್ಮಭೂಮಿ ತಾಲಾ ಖೋಲೋ(ರಾಮ ಲಲ್ಲಾ ಗುಡಿಯ ಬೀಗ ತೆರೆದು ಬಿಡಿ) ಘೋಷಣೆಗೆ ಪ್ರಧಾನಿ ರಾಜೀವ್ ಗಾಂಧಿ ಸ್ಪಂದಿಸಿ ಗುಡಿಯ ಬೀಗ ತೆರೆಸಿದ್ದರು. ವಿಶ್ವ ಹಿಂದೂ ಪರಿಷತ್ ಜತೆಗೆ ಶ್ರೀಗಳು ನಿಕಟಸಂಪರ್ಕ ಹೊಂದಿದ್ದರು.

  ಸಾಮಾಜಿಕ ಸಾಧನೆ: 1956ರಲ್ಲಿ ಬೆಂಗಳೂರಿನಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರಾರಂಭಿಸಿದ್ದ ಶ್ರೀಗಳು ಸಮಾಜಕ್ಕೆ ನೂರಾರು ವಿಧ್ವಾಂಸರನ್ನು ಕೊಡುಗೆಯಾಗಿ ನೀಡಿದ್ದಾರೆ. ಅನೇಕ ವಿದ್ವಾಂಸರಿಗೆ ಆಶ್ರಯತಾಣವಾಗಿಯೂ ಈ ವಿದ್ಯಾಪೀಠ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಸುಮಾರು 300 ವಿದ್ಯಾರ್ಥಿಗಳು ಉಚಿತ ಊಟ, ವಸತಿಗಳ ಸೌಲಭ್ಯಗಳನ್ನು ಪಡೆದು ವೇದ-ಶಾಸ್ತ್ರಾಭ್ಯಾಸಗಳನ್ನು ನಡೆಸುತ್ತಿದ್ದಾರೆ. ಸಂಸ್ಕೃತ ಗ್ರಂಥಗಳು ವಿದ್ಯಾಪೀಠದ ಆಶ್ರಯದಲ್ಲಿ ಭಾಷಾಂತರಗೊಂಡಿವೆ. ದೆಹಲಿಯ ವಸಂತ ಕುಂಜ್ ಪ್ರದೇಶದಲ್ಲಿ ಒಂದು ಎಕರೆ ಜಾಗದಲ್ಲಿ ಕಳೆದ ವರ್ಷ ವೇದ-ವೇದಾಂತ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸಿದ್ದರು. ಪಾಜಕದಲ್ಲಿ ಎಲ್‌ಕೆಜಿಯಿಂದ ಪಿಯುಸಿವರೆಗೆ ಶಿಕ್ಷಣ ನೀಡುವ ಆನಂದ ತೀರ್ಥ ವಿದ್ಯಾಲಯ 3 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ.

  ಸಾಮಾಜಿಕ ಕ್ರಾಂತಿ: 70ರ ದಶಕದಲ್ಲಿ ಅಸ್ಪಶ್ಯತೆ ತಾಂಡವಾಡುತ್ತಿದ್ದ ಸಮಯದಲ್ಲಿ ಶ್ರೀಗಳು ಬೆಂಗಳೂರು, ಮೈಸೂರು ಪ್ರಾಂತಗಳಲ್ಲಿ ದಲಿತ ಕೇರಿಗಳಿಗೆ ಭೇಟಿ ನೀಡಿ ಕ್ರಾಂತಿ ಮಾಡಿದ್ದರು. ನಂತರ ನ ಹಿಂದುಃ ಪತಿತೋ ಭವೇತ್ ಎಂದು ಅಸ್ಪಶ್ಯತೆ ನಿವಾರಣೆಗೆ ದಿಟ್ಟ ಹೆಜ್ಜೆ ಇರಿಸಿದ್ದರು. ಕ್ರಿ.ಶ. 1975ರಲ್ಲಿ ಗುಲ್ಬರ್ಗದಲ್ಲಿ ಕ್ಷಾಮ ತಲೆ ದೋರಿದಾಗ ಸರ್ಕಾರಕ್ಕಿಂತಲೂ ಮೊದಲು ಗಂಜಿಕೇಂದ್ರ ತೆರೆದು ಜನರನ್ನು ಸಾಂತ್ವನಗೊಳಿಸಿದರು. ಆಂಧ್ರದ ಹಂಸಲದಿವಿಯಲ್ಲಿ ಬಿರುಗಾಳಿ ಬೀಸಿದಾಗ ನಿರ್ವಸಿತರಾದ ಸಾವಿರಾರು ಜನರಿಗೆ 150 ಮನೆಗಳನ್ನು ಕಟ್ಟಿಸಿಕೊಟ್ಟಿದ್ದರು. ಲಾತೂರಿನಲ್ಲಿ ಭೂಕಂಪ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿದ್ದರು. ಉಡುಪಿ ಶ್ರೀಕೃಷ್ಣ ಉಚಿತ ಚಿಕಿತ್ಸಾಲಯ, ಅನಾಥಮಕ್ಕಳನ್ನು ಪೋಷಿಸುವ ಶ್ರೀಕೃಷ್ಣ ಸೇವಾಧಾಮ, ಚಿಕ್ಕಮಗಳೂರು ಜಿಲ್ಲೆಯಲ್ಲಿ ನಕ್ಸಲ್ ಪೀಡಿತ ಪ್ರದೇಶಗಳ ಜನರಿಗೆ 2 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಸಂಪರ್ಕ, ಕುಗ್ರಾಮಗಳಿಗೆ ಸೌರವಿದ್ಯುತ್ ದೀಪಗಳ ಕೊಡುಗೆ ಮುಂತಾದವು ಶ್ರೀಗಳ ಸಾಧನಾ ಪಟ್ಟಿಯಲ್ಲಿ ಸೇರಿಕೊಂಡಿವೆ.

  ವೃಂದಾವನಸ್ಥರಾಗಿ ತಿಂಗಳೊಳಗೆ ಗೌರವ: ಶ್ವಾಸಕೋಶ, ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳನ್ನು ಡಿ.19ರಂದು ರಾತ್ರಿ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಡಿ.20ರಂದು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. 10 ದಿನ ವೈದ್ಯರು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಡಿ.29ರಂದು ಬೆಳಗ್ಗೆ 9.20ಕ್ಕೆ ನಿಧನ ಹೊಂದಿದ್ದರು. ಶ್ರೀಗಳ ಅಂತಿಮ ಇಚ್ಚೆಯಂತೆ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ವೃಂದಾವನ ಮಾಡಲಾಗಿತ್ತು. ಶ್ರೀಗಳು ನಿಧನರಾಗಿ ಒಂದು ತಿಂಗಳೊಳಗೆ ಕೇಂದ್ರ ಸರ್ಕಾರ ಭಾರತ ರತ್ನದ ನಂತರ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಣ ನೀಡಿ ಗೌರವ ಸಲ್ಲಿಸಿದೆ.

   ನಮ್ಮ ಗುರುಗಳಿಗೆ ಸರ್ಕಾರ ಪದ್ಮವಿಭೂಷಣ ಪ್ರಕಟಿಸಿರುವುದು ಸಂತಸ ತಂದಿದೆ. ಗುರುಗಳು ತಮ್ಮ ಜೀವನದಲ್ಲಿ ಯಾವುದೇ ವಿಭೂಷಣವನ್ನು ಧರಿಸಿದವರಲ್ಲ. ಇವತ್ತು ಕೇಂದ್ರ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿಯನ್ನು ಗುರುಗಳಿಗೆ ಸಮರ್ಪಿಸಿದೆ. ಅವರ ಜೀವಿತಾವಧಿಯಲ್ಲಿ ಈ ಪ್ರಶಸ್ತಿ ಬಂದಿದ್ದರೆ ನಮಗೆ ಹೆಚ್ಚು ಸಂತಸವಾಗುತ್ತಿತ್ತು. ಆದರೂ ಈಗ ನೀಡಿರುವ ಪ್ರಶಸ್ತಿಯನ್ನು ಸಂತಸದಿಂದ ಸ್ವೀಕರಿಸುತ್ತೇವೆ.
  – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ

   

  ಅಕ್ಷರ ಸಂತ ಹರೇಕಳ ಹಾಜಬ್ಬ: ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ತನ್ನೂರಿನ ಮಕ್ಕಳು ಶಿಕ್ಷಣವಂತರಾಗಬೇಕು ಎಂದು ಪಣ ತೊಟ್ಟ ಕಡು ಬಡವನೊಬ್ಬ ಶಾಲೆ ಕಟ್ಟಿ, ಮಕ್ಕಳು ಶಾಲೆಗೆ ಹೋಗುವುದನ್ನು ಕಂಡು ಕಣ್ಣು ತೇವ ಮಾಡಿಕೊಂಡ ಭಗೀರಥ. ತಾನು ಅನಕ್ಷರಸ್ಥನಾಗಿದ್ದರೂ ಅಕ್ಷರ ಸಂತ ಎಂದೇ ಕರೆಸಿಕೊಂಡ, ಸಾಧನೆಯಿಂದ ರಾಜ್ಯದ ಹಲವು ವಿಶ್ವವಿದ್ಯಾನಿಲಯ ಪಠ್ಯದಲ್ಲಿ ಸ್ಥಾನ ಪಡೆದ, ಬುಟ್ಟಿಯಲ್ಲಿ ಕಿತ್ತಳೆ ಹೊತ್ತು ಮಾರಿ ಶಾಲೆ ಕಟ್ಟಿ ವಿದ್ಯಾದಾನ ಮಾಡಿದ ಹರೇಕಳ ಹಾಜಬ್ಬಗೆ ಅರ್ಹವಾಗಿಯೇ ಪದ್ಮಶ್ರೀ ಪ್ರಶಸ್ತಿ ಒಲಿದಿದೆ.
  ಬೀಡಿ ಕಾರ್ಮಿಕ ಕುಟ್ಟುಮಾಕ – ಬೀಫಾತಿಮಾ ಅವರ ಆರು ಮಕ್ಕಳಲ್ಲಿ ಮೂರನೆಯವರಾಗಿ 1955ರಲ್ಲಿ ಮಂಗಳೂರಿಂದ 25 ಕಿ.ಮೀ. ದೂರದ ಹರೇಕಳದಲ್ಲಿ ಜನನ. ಬಾಲ್ಯದಲ್ಲೇ ಕಡು ಬಡತನ. ತಾಯಿ ಭತ್ತದ ಗದ್ದೆಯಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. 1974ರಲ್ಲಿ ನೆರೆ ಬಂದ ಕಾರಣ ಹರೇಕಳ ನ್ಯೂಪಡ್ಪು ಎಂಬಲ್ಲಿಗೆ ಕುಟುಂಬ ಸ್ಥಳಾಂತರಗೊಂಡಿತು. ಶಾಲೆಗೆ ಹೋಗಲಿಲ್ಲ, ಬದಲಾಗಿ ವ್ಯಾಪಾರ ಮಾಡಲು ಹೊರಟ ಹಾಜಬ್ಬರು ಜೀವನ ನಿರ್ವಹಣೆಗಾಗಿ ಮಂಗಳೂರಿನ ಸೆಂಟ್ರಲ್ ಮಾರ್ಕೆಟ್‌ನಲ್ಲಿ ಕಿತ್ತಳೆ ಹಣ್ಣು ವ್ಯಾಪಾರ ಆರಂಭಿಸಿದ್ದರು.
  ವ್ಯಾಪಾರ ಆರಂಭಿಸಿದ ಸಂದರ್ಭ ಭಾಷಾ ಸಮಸ್ಯೆ ಎದುರಾಯಿತು. ವಿದೇಶಿ ಮಹಿಳೆಯೊಬ್ಬರು ಕಿತ್ತಳೆಗೆ ದರ ಎಷ್ಟು ಎಂದು ಇಂಗ್ಲಿಷ್‌ನಲ್ಲಿ ಪ್ರಶ್ನಿಸಿದಾಗ ಕನ್ನಡದಲ್ಲೂ ಸರಿಯಾಗಿ ಉತ್ತರಿಸಲಾಗದೆ ಮರುಗಿದ್ದರು. ತನ್ನ ಹಾಗೆ ವಿದ್ಯಾಭ್ಯಾಸ ಇಲ್ಲದೆ ನನ್ನೂರಿನ ಮುಂದಿನ ಪೀಳಿಗೆಯವರು ಕಷ್ಟ ಅನುಭವಿಸಬಾರದು ಎಂದು ನಿರ್ಧರಿಸಿದ ಅವರು ತನಗೆ ಮನೆ ಇಲ್ಲದಿದ್ದರೂ ಈ ಬಗ್ಗೆ ಚಿಂತಿಸದೆ ಊರಿನಲ್ಲಿ ಶಾಲೆ ಕಟ್ಟುವ ಕನಸು ಕಂಡರು.

  ಅಂದಿನ ಶಾಸಕ ಯು.ಟಿ.ಫರೀದ್ ಸಹಕಾರದಿಂದ ಹರೇಕಳ ನ್ಯೂಪಡ್ಪುವಿನ ಮದರಸದಲ್ಲಿ ಶಾಲೆ ಆರಂಭಕ್ಕೆ ಅವಕಾಶ ನೀಡಿದರು. ಹೀಗೆ 1999, ಜೂನ್ 6ರಂದು ಒಂದನೇ ತರಗತಿ ಆರಂಭಗೊಂಡಿತು. ಪ್ರಾರಂಭದಲ್ಲಿ 28 ಮಕ್ಕಳು ಅಲ್ಲಿ ವಿದ್ಯಾಭ್ಯಾಸ ಪಡೆದರು. ಅಲ್ಲಿಂದ ಶಾಲೆ ಅಭಿಯಾನ ಆರಂಭಗೊಂಡಿತು. ಶಾಲೆಗೆ ಸ್ವಂತ ಕಟ್ಟಡ ನಿರ್ಮಿಸಬೇಕು ಎಂದು ಮನವಿ ಮಾಡಿದ ಪ್ರಕಾರ 40 ಸೆಂಟ್ಸ್ ಗುಡ್ಡ ಪ್ರದೇಶ ಮಂಜೂರುಗೊಂಡಿತು. ದಾನಿಗಳ ಸಹಕಾರದೊಂದಿಗೆ ಗುಡ್ಡ ಸಮತಟ್ಟುಗೊಳಿಸಿ ಆರಂಭದಲ್ಲಿ 1 ಕೊಠಡಿ ನಿರ್ಮಿಸಲಾಯಿತು. ಬಳಿಕ ಸರ್ವ ಶಿಕ್ಷಣ ಅಭಿಯಾನ ಹಾಗೂ ದಾನಿಗಳ ನೆರವಿನೊಂದಿಗೆ ಶಾಲೆ ಇನ್ನಷ್ಟು ಅಭಿವೃದ್ಧಿ ಹೊಂದಿತು. 2008ರಲ್ಲಿ ಪ್ರೌಢಶಾಲೆ ಆರಂಭಗೊಂಡಿತು. ಈಗ 1ರಿಂದ 10ನೇ ತರಗತಿವರೆಗೆ ಪ್ರತ್ಯೇಕ ಕೊಠಡಿ, ಕಂಪ್ಯೂಟರ್ ಲ್ಯಾಬ್ ಹಾಗೂ ಶಾಲಾ ಕಚೇರಿ ಕೊಠಡಿ ನಿರ್ಮಾಣಗೊಂಡಿದೆ.
  2013ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, 2006ರಲ್ಲಿ ವರ್ಷದ ಬ್ಯಾರಿ ಪ್ರಶಸ್ತಿ, ಯೇನೆಪೋಯ ಎಕ್ಸಲೆನ್ಸಿ ಅವಾರ್ಡ್, ರಾಜ್ಯ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಕ್ಷರದ ಅವಧೂತ ಬಿರುದು ಸೇರಿದಂತೆ ನೂರಾರು ಪ್ರಶಸ್ತಿಗಳು ಸಂದಿವೆ. ಲಭಿಸಿದ ನಗದು ಬಹುಮಾನದ ಚಿಕ್ಕಾಸನ್ನೂ ಸ್ವಂತಕ್ಕೆ ಬಳಸಿಕೊಳ್ಳದೇ ಶಾಲೆಗೆ ನೀಡಿದ್ದಾರೆ. ವಿದೇಶಗಳಲ್ಲೂ ಹಲವಾರು ಸಂಸ್ಥೆಗಳು ಅವರನ್ನು ಆಹ್ವಾನಿಸಿ ಪ್ರಶಸ್ತಿ ನೀಡಿ ಗೌರವಿಸಿದೆ. ಶಿವಮೊಗ್ಗದ ಕುವೆಂಪು, ದಾವಣಗೆರೆ, ಮಂಗಳೂರು ಮಂಗಳಗಂಗೋತ್ರಿ ವಿವಿಗಳು ಹಾಜಬ್ಬರ ಸಾಧನೆಯ ಕಿರು ಪರಿಚಯದ ಪಠ್ಯವನ್ನು ಅಳವಡಿಸಿವೆ. ಬಿಬಿಸಿ ರೇಡಿಯೊದಲ್ಲಿ ಸಂದರ್ಶನ ಪ್ರಸಾರವಾಗಿದೆ.

   ದೆಹಲಿಯಿಂದ ಯಾರೋ ಕರೆ ಮಾಡಿ ಹಿಂದಿಯಲ್ಲಿ ಮಾತನಾಡಿದರು. ನನಗೆ ಅರ್ಥವಾಗಲಿಲ್ಲ. ಹತ್ತಿರ ಇದ್ದವರಲ್ಲಿ ಕೇಳಿದಾಗ ಗೃಹ ಇಲಾಖೆ ಅಧಿಕಾರಿಗಳು ಎಂದು ಗೊತ್ತಾಯಿತು. ಸಂಜೆ ಎಡಿಸಿ ಕರೆ ಮಾಡಿ ಮಂಗಳೂರಿನಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಿ, ವಾಹನ ಕಳಿಸುತ್ತೇನೆ ಎಂದರು. ಬೇಡ, ನಾನೇ ಬರುವೆ ಎಂದು ತಿಳಿಸಿದೆ. ಪ್ರಶಸ್ತಿ ಬಂದಿರುವುದನ್ನು ಕೇಳಿ ಮಾತೇ ಹೊರಡುತ್ತಿಲ್ಲ. ನಂಬಲಾಗುತ್ತಿಲ್ಲ. ನಯಾಪೈಸೆ ಬೆಲೆ ಇಲ್ಲದ ಮನುಷ್ಯ ನಾನು.
  – ಹರೇಕಳ ಹಾಜಬ್ಬ

  ಹೋರಾಟಗಾರ ಜಾರ್ಜ್ ಫರ್ನಾಂಡಿಸ್: 1930ರ ಜೂನ್ 3ರಂದು ಮಂಗಳೂರಿನ ಬಿಜೈಯಲ್ಲಿ ಜನಿಸಿದವರು ಜಾರ್ಜ್ ಫರ್ನಾಂಡಿಸ್.
  19ರ ಹರೆಯದಲ್ಲಿ ಪಾದ್ರಿ ತರಬೇತಿಗಾಗಿ ಬೆಂಗಳೂರಿಗೆ ತೆರಳಿ ಅರ್ಧದಲ್ಲೇ ಬಿಟ್ಟು ಮುಂಬೈ ಸೇರಿದವರು ಪ್ಲಾಸಿಡ್ ಡಿಮೆಲ್ಲೊ, ಲೋಹಿಯಾ ಪ್ರಭಾವದಿಂದ ಕಾರ್ಮಿಕ ನಾಯಕರಾಗಿ ಬೆಳೆದವರು. ಕಾಂಗ್ರೆಸ್‌ನ ಜನಪ್ರಿಯ ನಾಯಕ ಎಸ್.ಕೆ. ಪಾಟೀಲ್ರನ್ನು ಪರಾಭವಗೊಳಿಸಿ ಜಾರ್ಜ್ ದಿ ಜಯಂಟ್ ಕಿಲ್ಲರ್ ಎಂಬ ಅನ್ವರ್ಥ ನಾಮ ಪಡೆದಿದ್ದರು. ರೈಲ್ವೆ ಚಳವಳಿ, ತುರ್ತು ಪರಿಸ್ಥಿತಿ ವಿರುದ್ಧ ಹೋರಾಟಕ್ಕೆ ಧುಮುಕಿ ಜೈಲು ಪಾಲಾದರು. ಬರೋಡಾ ಡೈನಮೈಟ್ ಪ್ರಕರಣದಲ್ಲಿ ತಿಹಾರ್ ಜೈಲು ಸೇರಿದಾಗ ಅಲ್ಲಿಂದಲೇ ಬಿಹಾರದಿಂದ ಲೋಕಸಭೆಗೆ ಸ್ಪರ್ಧಿಸಿ 3 ಲಕ್ಷ ಮತಗಳ ಅಂತರದಿಂದ ಗೆಲವು ಸಾಧಿಸಿದರು. ಈ ಅಭೂತಪೂರ್ವ ಗೆಲುವಿಗೆ ಕಾರಣವಾಗಿದ್ದು ಅವರಿಗೆ ಕೋಳ ತೊಟ್ಟು ಕೈ ಮೇಲೆತ್ತಿದ್ದ ಫೋಟೋ.
  ಬಳಿಕ ಮುರಾರ್ಜಿ ದೇಸಾಯಿ ನೇತೃತ್ವದ ಸರ್ಕಾರದಲ್ಲಿ ಕೈಗಾರಿಕೆ ಸಚಿವರಾದರು. ವಿ.ಪಿ.ಸಿಂಗ್ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿ ಕೊಂಕಣ ರೈಲ್ವೆ ಯೋಜನೆ ಅನುಷ್ಠಾನಗೊಳಿಸಿದರು. 1998ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದಾಗ ಜಾರ್ಜ್ ರಕ್ಷಣಾ ಸಚಿವರಾದರು. ಅವರ ಆಡಳಿಯ ಅವಧಿಯಲ್ಲಿಯೇ ಭಾರತ ಅಣ್ವಸ್ತ್ರ ಪರೀಕ್ಷೆ ಮಾಡಿತು. ಬಾರಾಕ್ ಕ್ಷಿಪಣಿ ಮತ್ತು ತೆಹಲ್ಕಾ ಹಗರಣಗಳ ಆರೋಪದಲ್ಲಿ ಮಂತ್ರಿ ಸ್ಥಾನವನ್ನೂ ಬಿಟ್ಟುಕೊಟ್ಟರು. ತನಿಖೆಯಲ್ಲಿ ನಿರ್ದೋಷಿ ಎಂದು ತೀರ್ಮಾನವಾದಾಗ ಮತ್ತೆ ರಕ್ಷಣಾ ಸಚಿವರಾದರು.
  9 ಬಾರಿ ಲೋಕಸಭೆಗೆ ಆಯ್ಕೆ, 2009ರಲ್ಲಿ ರಾಜ್ಯಸಭೆ ಪ್ರವೇಶ ಮಾಡಿದ್ದ ಅವರು 10 ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು. ಸಂಸತ್‌ನಲ್ಲಿ ಅವರು ಮಾತನಾಡಲು ನಿಂತರೆ ಇಡೀ ಸಂಸತ್ತೇ ಕಿವಿಯಾಗುತ್ತಿತ್ತು.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts