More

    ಇಬ್ಬರು ಸಚಿವರು.. ಬಜೆಟ್ ನಿರೀಕ್ಷೆ ನೂರಾರು…

    ಹಾವೇರಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗುರುವಾರ ಬಜೆಟ್ ಮಂಡಿಸುತ್ತಿದ್ದು, ಜಿಲ್ಲೆಗೆ ಭರಪೂರ ಕೊಡುಗೆ ಸಿಗುವ ನಿರೀಕ್ಷೆ ಗರಿಗೆದರಿದೆ.

    ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿಯೂ ಬಿಜೆಪಿ ಶಾಸಕರೇ ಆಯ್ಕೆಯಾಗಿದ್ದಾರೆ. ಇಬ್ಬರು ಶಾಸಕರು ಸಚಿವರಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಜಿಲ್ಲೆಯ ಮೇಲೆ ಅಪಾರ ಪ್ರೀತಿಯಿದೆ. ಹೀಗಾಗಿ, ಈ ಬಾರಿಯ ಬಜೆಟ್​ನಲ್ಲಿ ಜಿಲ್ಲೆಗೆ ಹೆಚ್ಚಿನ ಯೋಜನೆಗಳು, ಅನುದಾನ ಸಿಗಬಹುದು ಎಂಬ ನಿರೀಕ್ಷೆಗಳು ಸಹಜವಾಗಿ ಹೆಚ್ಚಿವೆ.

    ಜಿಲ್ಲೆಯ ಬಹುದಿನಗಳ ಬೇಡಿಕೆಯಾಗಿದ್ದ ವೈದ್ಯಕೀಯ ಕಾಲೇಜ್ ಈಗಾಗಲೇ ಮಂಜೂರಾಗಿದ್ದು, ಕಟ್ಟಡ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಹೀಗಾಗಿ, ಈ ಬಾರಿಯ ಪ್ರಮುಖ ಬೇಡಿಕೆ ಎಂದರೆ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ರಚನೆಯಾಗಬೇಕು ಎಂಬುದು. ಇದಕ್ಕಾಗಿ 100 ಕೋಟಿ ರೂ.ಗಳ ಅನುದಾನದ ಬೇಡಿಕೆಯಿದ್ದು, ಇದನ್ನು ಮುಖ್ಯಮಂತ್ರಿ ಈಡೇರಿಸಬಹುದು. ಇಲ್ಲವೇ ಪ್ರತ್ಯೇಕ ಒಕ್ಕೂಟದ ಬದಲು ಮೆಗಾ ಡೇರಿಯನ್ನಾದರೂ ನೀಡಬಹುದು ಎಂಬ ಆಸೆ ಹಾಲು ಉತ್ಪಾದಕರದ್ದಾಗಿದೆ. ಇತ್ತೀಚೆಗೆ ಹಾನಗಲ್ಲ ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ನಡೆದ ಏತ ನೀರಾವರಿ ಯೋಜನೆ ಶಂಕುಸ್ಥಾಪನೆ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಪ್ರತ್ಯೇಕ ಹಾಲು ಒಕ್ಕೂಟ ರಚನೆಗೆ ಪೂರಕವಾಗಿ ಮೆಗಾ ಡೇರಿ ಸ್ಥಾಪನೆಯ ಬೇಡಿಕೆಯನ್ನು ಮುಖ್ಯಮಂತ್ರಿಯವರಲ್ಲಿ ಮಂಡಿಸಿದ್ದರು. ಇದಕ್ಕೆ ಯಡಿಯೂರಪ್ಪನವರು ಸಮ್ಮತಿ ಸೂಚಿಸಿದ್ದಾರೆ. ಹೀಗಾಗಿ, ಒಕ್ಕೂಟ ಘೊಷಣೆಯಾಗದೇ ಇದ್ದರೂ ಮೆಗಾ ಡೇರಿಯಾದರೂ ಸಿಗುವ ವಿಶ್ವಾಸ ಹೆಚ್ಚಿದೆ.

    ಪ್ರತ್ಯೇಕ ಡಿಸಿಸಿ ಬ್ಯಾಂಕ್: ಕಳೆದ ಒಂದು ದಶಕಗಳಿಂದ ಜಿಲ್ಲೆಗೆ ಪ್ರತ್ಯೇಕ ಸಹಕಾರಿ ಬ್ಯಾಂಕ್ ಆಗಬೇಕು ಎಂಬ ಬೇಡಿಕೆ ಮುಂಚೂಣಿಯಲ್ಲಿದೆ. 2016ರ ಬಜೆಟ್​ನಲ್ಲಿ ಘೊಷಣೆಯಾದ ಪ್ರತ್ಯೇಕ ಜಿಲ್ಲಾ ಸಹಕಾರಿ ಬ್ಯಾಂಕ್ ಈವರೆಗೂ ಅನುಷ್ಠಾನವಾಗಿಲ್ಲ. ಪ್ರಸ್ತುತ ಧಾರವಾಡ ಕೆಸಿಸಿ ಬ್ಯಾಂಕ್ ಅಧೀನದಲ್ಲಿ ಜಿಲ್ಲೆ ಬರುತ್ತಿದ್ದು, ಇದರಿಂದ ರೈತರಿಗೆ ಹೆಚ್ಚಿನ ಪ್ರಯೋಜನವಾಗುತ್ತಿಲ್ಲ. ರೈತರು ಸಾಲಕ್ಕಾಗಿ ಅನಿವಾರ್ಯವಾಗಿ ರಾಷ್ಟ್ರೀಕೃತ ಬ್ಯಾಂಕ್​ಗಳ ಮೊರೆ ಹೋಗಬೇಕಾಗಿದೆ. ಈ ಬಜೆಟ್​ನಲ್ಲಾದರೂ ಈ ಬೇಡಿಕೆ ಈಡೇರಬಹುದು ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.

    ಜಿಲ್ಲೆಯಲ್ಲಿ ತುಂಗಭದ್ರಾ, ಧರ್ವ, ಕುಮದ್ವತಿ, ವರದಾ ಹೀಗೆ ನಾಲ್ಕು ನದಿಗಳು ಹರಿದಿವೆ. ಇವುಗಳನ್ನು ಬಳಸಿಕೊಂಡು ಜಿಲ್ಲೆಯ ಎಲ್ಲ ನಗರ, ಪಟ್ಟಣಗಳಿಗೆ ನಿರಂತರ ಕುಡಿಯುವ ನೀರಿನ ಜೊತೆಗೆ ಕೆರೆಗಳನ್ನು ತುಂಬಿಸಬೇಕಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೂಲಸೌಲಭ್ಯ ವಂಚಿತವಾಗಿದೆ. ಮಾರುಕಟ್ಟೆಗೆ ಉತ್ತೇಜನ ನೀಡುವ ಉದ್ದೇಶದಿಂದ 8 ವರ್ಷಗಳ ಹಿಂದೆ ಘೊಷಣೆಯಾದ ಸ್ಪೈಸ್ ಪಾರ್ಕ್ ನಿರ್ವಣಕ್ಕೆ ಈವರೆಗೂ ಚಾಲನೆ ಸಿಕ್ಕಿಲ್ಲ. ಈ ಬಜೆಟ್​ನಲ್ಲಾದರೂ ಸ್ಪೈಸ್ ಪಾರ್ಕ್ ನಿರ್ವಣಕ್ಕೆ ಅನುದಾನ ಸಿಗಬಹುದು. ದೇವಿಹೊಸೂರು ಮೆಣಸಿನಕಾಯಿ ತಳಿ ಅಭಿವೃದ್ಧಿ ಸಂಸ್ಥೆಗೆ ಮೂಲಸೌಕರ್ಯಕ್ಕೆ ಹೆಚ್ಚಿನ ಅನುದಾನ ಸಿಗಬಹುದೆಂಬ ನಿರೀಕ್ಷೆಯಿದೆ.

    ಜಿಲ್ಲೆಯಲ್ಲಿ ಕನಕದಾಸರ ಜನ್ಮಭೂಮಿ ಬಾಡ, ಕರ್ಮಭೂಮಿ ಕಾಗಿನೆಲೆ, ಬಂಕಾಪುರದ ನವಿಲುಧಾಮ, ರಾಣೆಬೆನ್ನೂರಿನ ಕೃಷ್ಣಮೃಗ ಅಭಯಾರಣ್ಯ ಸೇರಿ ಅನೇಕ ಪ್ರವಾಸಿತಾಣಗಳಿಗೆ ಈ ತಾಣಗಳು ಇನ್ನಷ್ಟು ಅಭಿವೃದ್ಧಿಯಾಗಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸುವ ತಾಣಗಳಾಗಿ ರೂಪುಗೊಳ್ಳುವ ರೀತಿಯಲ್ಲಿ ಅಭಿವೃದ್ಧಿಯಾಗಬೇಕಾಗಿದೆ. ಇದಕ್ಕಾಗಿ ಸರ್ಕಾರ ಬಜೆಟ್​ನಲ್ಲಿ ಅನುದಾನ ಘೊಷಿಸಬಹುದು. ಸಂತ ಶಿಶುನಾಳ ಶರೀಫರ ಜನ್ಮಸ್ಥಳ ಶಿಶುನಾಳ, ಸರ್ವಜ್ಞ ಜನ್ಮಸ್ಥಳ, ಅಂಬಿಗರ ಚೌಡಯ್ಯನವರ ಐಕ್ಯಸ್ಥಳಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಿ ಎಂಬ ಅಪೇಕ್ಷೆ ಜನರದ್ದಾಗಿದೆ.

    ಕೈಗಾರಿಕಾ ಅಭಿವೃದ್ಧಿಗೆ ಬೇಕಿದೆ ಒತ್ತು: ಜಿಲ್ಲೆ ಕೃಷಿ ಪ್ರಧಾನವಾಗಿದ್ದು, ಇಲ್ಲಿ ಹೇಳಿಕೊಳ್ಳುವಂತಹ ದೊಡ್ಡ ಕೈಗಾರಿಕೆಗಳೇ ಇಲ್ಲದಂತಾಗಿದೆ. ಹೀಗಾಗಿ, ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಜಿಲ್ಲೆಯ ವಿದ್ಯಾವಂತ ಯುವಕರು ಉದ್ಯೋಗ ಅರಸಿ ಮಹಾನಗರಗಳ ಕಡೆ ಮುಖ ಮಾಡಿದ್ದಾರೆ. ಈ ಹಿಂದೆ ಜಿಲ್ಲೆಗೆ ಟಾಟಾ ಮೆಟಾಲಿಕ್ ಉಕ್ಕು ಕಾರ್ಖಾನೆ ಬಂದಿತ್ತು. ರೈತರ ವಿರೋಧ ಹಾಗೂ ಅದಿರಿನ ಅಲಭ್ಯತೆಯಿಂದ ಜಿಲ್ಲೆಯಿಂದ ಪಲಾಯನವಾಯಿತು. ಕೃಷಿ ಪೂರಕವಾದ ಕೈಗಾರಿಕೆಗಳು ಜಿಲ್ಲೆಗೆ ಬರಬೇಕಿದ್ದು, ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರ ಬಜೆಟ್​ನಲ್ಲಿ ಅನುಕೂಲ ಕಲ್ಪಿಸಬೇಕು. ಕೈಗಾರಿಕಾ ಹಬ್ ಸ್ಥಾಪಿಸಬೇಕು ಎಂಬ ಬೇಡಿಕೆಯಿದೆ.

    ಹೊಸ ತಾಲೂಕು ರಚನೆ: ಜಿಲ್ಲೆಯಲ್ಲಿ ಈಗಾಗಲೇ ರಟ್ಟಿಹಳ್ಳಿ ಹೊಸ ತಾಲೂಕಾಗಿದೆ. ಆದರೆ, ಅದು ಇನ್ನೂ ಪೂರ್ಣ ಪ್ರಮಾಣದಲ್ಲಿ ತಾಲೂಕಾಗಿ ಕಾರ್ಯನಿರ್ವಹಿಸುವಷ್ಟು ಸಮರ್ಥವಾಗಿಲ್ಲ. ಒಂದೆರೆಡು ಇಲಾಖೆಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಕಚೇರಿಗಳು ಇನ್ನೂ ಹಿರೇಕೆರೂರಿನಲ್ಲಿವೆ. ರಟ್ಟಿಹಳ್ಳಿಯಲ್ಲಿ ತಾಲೂಕು ಆಡಳಿತ ಭವನ ನಿರ್ಮಾಣ ಹಾಗೂ ವಿವಿಧ ಕಚೇರಿ ಕಟ್ಟಡಗಳಿಗೆ ವಿಶೇಷ ಅನುದಾನ ನಿರೀಕ್ಷಿಸಲಾಗಿದೆ. ಇದರ ಜತೆಗೆ ಅಕ್ಕಿಆಲೂರು, ಗುತ್ತಲ, ಬಂಕಾಪುರಗಳನ್ನು ತಾಲೂಕಾಗಿ ಘೊಷಿಸಬೇಕು ಎಂಬ ಬೇಡಿಕೆಯೂ ಹೆಚ್ಚಿದೆ.

    ರಾಣೆಬೆನ್ನೂರನ ಕೃಷ್ಣಮೃಗ ಅಭಯಾರಣ್ಯದಲ್ಲಿ ಸಾವಿರಾರು ಕೃಷ್ಣಮೃಗಗಳಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ನೀರಿನ ಜತೆಗೆ ಅವುಗಳ ಸ್ವಚ್ಛಂದ ಓಡಾಟಕ್ಕೆ ಅನುಕೂಲವಾಗುವಂತೆ ಸೌಲಭ್ಯ ಕಲ್ಪಿಸಬೇಕಾಗಿದೆ. ಅಂತೆಯೇ ಬಂಕಾಪುರದಲ್ಲಿರುವ ರಾಷ್ಟ್ರೀಯ ನವಿಲುಧಾಮ ಸಹ ಮೂಲಸೌಲಭ್ಯದಿಂದ ವಂಚಿತವಾಗಿದೆ. ಪ್ರತಿವರ್ಷ ನವಿಲುಗಳು ಆಹಾರ ಅರಸಿ ಧಾಮದಿಂದ ಹೊರಬಂದು ಬೇಟೆಗಾರರ ಬೇಟೆಗೆ ಬಲಿಯಾಗುತ್ತಿದ್ದು, ಇವುಗಳನ್ನು ಸಂರಕ್ಷಿಸುವ ಕಾರ್ಯವಾಗಬೇಕಿದೆ. ಈ ವನ್ಯಜೀವಿಧಾಮಗಳಿಗೆ ಸರ್ಕಾರ ಬಜೆಟ್​ನಲ್ಲಿ ಅನುದಾನ ನೀಡಬಹುದು ಎಂದು ಜನ ಕಾತರದಿಂದ ಕಾಯುತ್ತಿದ್ದಾರೆ.

    ಇತರ ಬೇಡಿಕೆಗಳು: ಜಿಲ್ಲಾ ಕೇಂದ್ರ ಹಾವೇರಿ ನಗರಕ್ಕೆ ವರ್ತಲ ರಸ್ತೆ ನಿರ್ಮಾಣ ಮತ್ತು ಮೂಲ ಸೌಕರ್ಯ ಅಭಿವೃದ್ಧಿಗೆ ಅನುದಾನ, ರಾಣೆಬೆನ್ನೂರು ತಾಲೂಕು ತುಮ್ಮಿನಕಟ್ಟೆಯಲ್ಲಿ ಜವಳಿ ಪಾರ್ಕ್ ಸ್ಥಾಪನೆ, ಹಾನಗಲ್ಲ ಭಾಗದಲ್ಲಿ ಮಾವು ಸಂಸ್ಕರಣಾ ಘಟಕ, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನೂತನ ಎಸ್​ಪಿ ಕಚೇರಿ ಕಟ್ಟಡ ನಿರ್ವಣಕ್ಕೆ ಅನುದಾನ, ಉದ್ಯೋಗ ಸೃಜನೆಗಾಗಿ ಮಂಜೂರಾಗಿರುವ ಜಿಟಿಡಿಸಿ ತರಬೇತಿ ಕಟ್ಟಡಕ್ಕೆ ಅನುದಾನ ಸೇರಿ ಇನ್ನಿತರ ಸೌಲಭ್ಯಗಳಿಗೆ ಈ ಬಜೆಟ್​ನಲ್ಲಾದರೂ ಹಣ ಮೀಸಲಿಡಬಹುದು ಎಂಬ ನಿರೀಕ್ಷೆಯನ್ನು ಜನತೆ ಹೊಂದಿದ್ದಾರೆ.

    ಜಿಲ್ಲೆಯಲ್ಲಿ ಇಬ್ಬರು ಪ್ರಬಲ ಖಾತೆ ಹೊಂದಿರುವ ಸಚಿವರಿರುವುದರಿಂದ ಬಜೆಟ್​ನಲ್ಲಿ ಹೆಚ್ಚಿನ ಸೌಲಭ್ಯ, ಅನುದಾನದ ನಿರೀಕ್ಷೆ ಸಹಜವಾಗಿದೆ. ಅದರಲ್ಲೂ ಜಿಲ್ಲೆಯ ಹಿರೇಕೆರೂರ ಶಾಸಕ ಬಿ.ಸಿ. ಪಾಟೀಲರು ಕೃಷಿ ಸಚಿವರಾಗಿದ್ದು, ಜಿಲ್ಲೆಯ ಕೃಷಿಕರ ಅನೇಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಯೋಜನೆಗಳು ಜಿಲ್ಲೆಗೆ ಬರುವ ನಿರೀಕ್ಷೆಗಳು ಸಹಜವಾಗಿ ಎದ್ದಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts