ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಹಾಗೂ ಕೃಷ್ಣಾ ತೀರದಲ್ಲಿ ಕಳೆದ ಎರಡು ದಿನಗಳಿಂದ ಮಳೆ ಅಬ್ಬರ ತಗ್ಗಿದ್ದರಿಂದ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಮಂಗಳವಾರ 4 ಅಡಿಯಷ್ಟು ಇಳಿಕೆ ಕಂಡಿದೆ. ಸೋಮವಾರ 1.51 ಲಕ್ಷ ಕ್ಯೂಸೆಕ್ ಇದ್ದ ನೀರಿನ ಪ್ರಮಾಣ, ಮಂಗಳವಾರ 1.37 ಲಕ್ಷಕ್ಕೆ ಇಳಿಕೆಯಾಗಿದೆ.
ದೂಧಗಂಗಾ, ವೇದಗಂಗಾ ಹಾಗೂ ಹೀರಣ್ಯಕೇಶಿ ನದಿಗಳ ನೀರಿನ ಪ್ರಮಾಣದಲ್ಲೂ ಗಣನೀಯ ಇಳಿಕೆ ಕಂಡಿದೆ. ಕೃಷ್ಣಾ ನದಿಗೆ 1,37,504 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹಿಪ್ಪರಗಿ ಬ್ಯಾರೇಜ್‌ನಿಂದ 1.47 ಲಕ್ಷ ಕ್ಯೂಸೆಕ್ ಹಾಗೂ ಆಲಮಟ್ಟಿ ಜಲಾಶದಿಂದ 39 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಮಳೆ ನಿಂತಿರುವುದರಿಂದ ಪ್ರವಾಹ ಆತಂಕ ದೂರಾಗಿದೆ.
ಕೃಷ್ಣಾ ನದಿಗೆ ಯಡೂರ ಬಳಿ ಅಡ್ಡಲಾಗಿ ನಿರ್ಮಿಸಲಾಗಿರುವ ಯಡೂರ-ಕಲ್ಲೋಳ, ದೂಧಗಂಗಾ ನದಿಗೆ ಮಲಿಕವಾಡ ಗ್ರಾಮದ ಬಳಿ ನಿರ್ಮಿಸಲಾಗಿರುವ ಮಲಿಕವಾಡ-ದತ್ತವಾಡ ಸೇತುವೆ ಮತ್ತು ವೇದಗಂಗಾ ನದಿಗೆ ಅಡ್ಡಲಾಗಿರುವ ಸಿದ್ನಾಳ-ಹುನ್ನರಗಿ, ಕಾರದಗಾ-ಬೋಜ, ಬೋಜವಾಡಿ-ಕುನ್ನೂರ, ಜತ್ರಾಟ-ಭೀವಶಿ, ಸಿದ್ನಾಳ-ಅಕ್ಕೋಳ ಸೇತುವೆ ಜಲಾವೃತ ಸ್ಥಿತಿಯಲ್ಲಿವೆ. ಸದಲಗಾ-ಬೋರಗಾಂವ ಹಾಗೂ ಯಕ್ಸಂಬಾ-ದಾನವಾಡ ಸೇತುವೆ ಸಂಚಾರಕ್ಕೆ ಮುಕ್ತವಾಗಿವೆ. ವಾಹನ ಹಾಗೂ ಜನಸಂಚಾರ ಆರಂಭಗೊಂಡಿದೆ.