More

    TV ಮನೆ ಕತೆ: ಬಿಗ್​ಬಾಸ್ ಸಾಧಕ ಬಾಧಕ

    TV ಮನೆ ಕತೆ: ಬಿಗ್​ಬಾಸ್ ಸಾಧಕ ಬಾಧಕಕಳೆದ ವಾರ ತನ್ನನ್ನು ತಾನು ‘ಅತಿ ದೊಡ್ಡ’ ರಿಯಾಲಿಟಿ ಶೋ ಎಂದು ಕರೆದುಕೊಳ್ಳುವ ‘ಬಿಗ್ ಬಾಸ್’ ತನ್ನ ಏಳನೇ ಸೀಸನ್ ಅನ್ನು ಅದ್ದೂರಿಯಿಂದ ಮುಕ್ತಾಯಗೊಳಿಸಿತು. ನನ್ನೊಡನೆ ಕೆಲ ಕಾಲ ಸಹನಟನಾಗಿ ಕೆಲಸ ಮಾಡಿದ್ದ ಶೈನ್ ಶೆಟ್ಟಿ ಈ ಸೀಸನ್ನಿನ ವಿಜೇತರಾದರು ಎನ್ನುವುದು ನನಗೆ ವೈಯಕ್ತಿಕವಾಗಿ ಬಹಳ ಹೆಮ್ಮೆಯ ಸಂಗತಿ.

    ‘ಬಿಗ್ ಬಾಸ್’ ಎಂದೊಡನೆ ಬೇರೆಲ್ಲಾ ಕಿರುತೆರೆಯ ಕಾರ್ಯಕ್ರಮಗಳಿಗೆ ಬರುವ ಮಿಶ್ರ ಪ್ರತಿಕ್ರಿಯೆ ಸಿಗುವುದೇ ಇಲ್ಲ. ಇಲ್ಲಿ ನಮಗೆ ಕಾಣ ಸಿಗುವುದು ಎರಡು ಅತಿರೇಕದ ಪ್ರತಿಕ್ರಿಯೆಗಳು. ಪ್ರತೀ ದಿನ ಅದನ್ನು ವ್ರತವೆಂಬಂತೆ ನೋಡಿ. ಅದರಲ್ಲಿನ ಸ್ಪರ್ಧಿಗಳ ನಡವಳಿಕೆಗಳ ಬಗ್ಗೆ, ಅವರು ಅಲ್ಲಿ ಮಂಡಿಸಿದ ಅಭಿಪ್ರಾಯಗಳ ಬಗ್ಗೆ, ಅಲ್ಲಿ ನಡೆದ ಜಗಳಗಳ ಬಗ್ಗೆ ಪರ ವಿರುದ್ಧವಾದ ನಿಲುವುಗಳನ್ನು ತೆಗೆದು ಅದರ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಹಾಕಿ, ಚರ್ಚೆಗಳನ್ನು ಹುಟ್ಟುಹಾಕುವವರು ಒಂದು ತುದಿಯಾದರೆ, ಅದೊಂದು ತೀರಾ ನಾಟಕೀಯ. ಆರೋಗ್ಯಕರ ಸಮಾಜಕ್ಕೆ ಮಾರಕ ಎಂದು ಭಾವಿಸಿ ಪ್ರತಿಭಟನೆಯ ರೂಪದಲ್ಲಿ ಅದನ್ನು ನೋಡದೇ ಉಳಿಯುವ ಮತ್ತೊಂದು ತುದಿಯವರು. ಮೂರನೆಯ ವರ್ಗವೆಂದರೆ ಖ್ಯಾತ ಸಿನಿಮಾ ನಟನೊಬ್ಬ ಯಾವುದೇ ಪಾತ್ರವಾಗಿ ಅಲ್ಲದೇ ತಾನೇ ನಿಜರೂಪದಲ್ಲಿ ಅದನ್ನು ನಡೆಸಿಕೊಡುವುದರಿಂದ ವಾರದ ಎರಡು ದಿನ ಮಾತ್ರ, ಆ ನಟನಿಗಾಗಿ ನೋಡುವವರು. ಒಂದು ಅರ್ಥದಲ್ಲಿ ಇವರೂ ಎರಡನೆಯ ಗುಂಪಿಗೇ ಸೇರುತ್ತಾರೆ.

    ಈ ಕಾರ್ಯಕ್ರಮಕ್ಕೆ ಮಾತ್ರ ಏಕೆ ವೀಕ್ಷಕರು ಹೀಗೆ ಎರಡು ಎಕ್ಸ್​ಟ್ರೀಮ್ಳಲ್ಲಿ ಪ್ರತಿಕ್ರಿಯಿಸುತ್ತಾರೆ ಎಂದು ಯೋಚಿಸಿದರೆ ನನಗೆ ಅನ್ನಿಸುವುದು ಮೊದಲನೆಯದಾಗಿ ಧಾರಾವಾಹಿಗಳು ಕಾಲ್ಪನಿಕ. ಅವು ಸತ್ಯವಲ್ಲ ಎಂಬ ಸತ್ಯ ಮನಸ್ಸಿನ ಮೂಲೆಯಲ್ಲಿ ಕೂತು ಅದರಲ್ಲಿ ಬರುವ ಎಲ್ಲಾ ಸಮಾಜ ವಿರೋಧಿ ಅಥವಾ ಒಪ್ಪಲಾರದ ಅಂಶಗಳನ್ನು ಕ್ಷಮಿಸುತ್ತಿರುತ್ತೇವೆ. ಆದರೆ ಇಲ್ಲಿ ಹಾಗಲ್ಲ. ಇದು ಕಾಲ್ಪನಿಕವಲ್ಲ. ಅಲ್ಲಿ ನಗುತ್ತಿರುವವರು, ಅಳುತ್ತಿರುವವರು, ಜಗಳ ಕಾಯುತ್ತಿರುವವರು ಯಾವುದೇ ಪಾತ್ರಗಳಲ್ಲ ಬದಲಿಗೆ ನಮ್ಮ ನಿಮ್ಮಂಥ ನಿಜ ಜೀವನದ ವ್ಯಕ್ತಿಗಳೇ. ಈ ವಾಸ್ತವ ಬಹುಶಃ ವೀಕ್ಷಕರನ್ನು ‘ಬಿಗ್ ಬಾಸ್’ ಬಗ್ಗೆ ನಿರ್ಲಿಪ್ತ ಅಥವಾ ತಟಸ್ಥ ನಿಲುವನ್ನು ತಡೆಯಲು ಅಡ್ಡಿ ಮಾಡುತ್ತಿರಬಹುದು.

    ಅಲ್ಲಿ ಕಂಡು ಬರುವ ನಡವಳಿಕೆಗಳು, ಮಾತು, ಭಾಷೆ, ಅಭಿಪ್ರಾಯಗಳು ಎಲ್ಲವೂ ವೇದಿಕೆಯ ಮೇಲೋ ಅಥವಾ ಕ್ಯಾಮೆರಾದ ಮುಂದೆಯೋ ಆಡಿದ್ದು ಮಾಡಿದ್ದಲ್ಲವಾದ್ದರಿಂದ ಮನುಷ್ಯ ಸಹಜವಾದ ಒಳ್ಳೆಯ ಮತ್ತು ಕೆಟ್ಟ ಎರಡರ ಅಭಿವ್ಯಕ್ತಿಯೂ ಆಗಿರುತ್ತದೆ. ಇಷ್ಟು ನೇರವಾದ ವ್ಯಕ್ತಿತ್ವ ಪ್ರದರ್ಶನ ಸಹಜವಾಗಿಯೇ ಕೆಲವರಿಗೆ ರೇಜಿಗೆ ಹುಟ್ಟಿಸಿದರೆ ಮತ್ತೆ ಕೆಲವರಿಗೆ ಕುತೂಹಲ ಮೂಡಿಸುತ್ತದೆ.

    ಕಿರುತೆರೆಯ ವೀಕ್ಷಕರಲ್ಲೊಬ್ಬಳಾಗಿ ನನಗೆ ಆ ಕಾರ್ಯಕ್ರಮದ ಬಗ್ಗೆ ಕೆಲವು ಧನಾತ್ಮಕ ಅಂಶಗಳು ಕಾಣುತ್ತವೆ. ಮೊದಲನೆಯದಾಗಿ ಈ ಕಾರ್ಯಕ್ರಮದ ಮೂಲಕ ತೆರೆ ಮರೆಯ ಎಷ್ಟೋ ಕಲಾವಿದರು ಜನಸಾಮಾನ್ಯರಿಗೆ ಪರಿಚಯವಾದರು. ಅರುಣ್ ಸಾಗರ್​ರವರಿಂದ ಮೊದಲ್ಗೊಂಡು ವಾಸುಕಿ ವೈಭವ್​ನಂಥ ಬಹಳಷ್ಟು ಜನ ಪ್ರತಿಭಾವಂತ ಜನರು ತೆರೆಯ ಹಿಂದೆಯೇ ದುಡಿದು ಜನರ ಮುಂದೆ ಎಲೆ ಮರೆಯ ಕಾಯಿಯಾಗಿದ್ದವರು ಜನರ ಕಣ್ಣಿಗೆ ಬಿದ್ದು, ತೆರೆಯ ಹಿಂದೆ ಎಷ್ಟೆಷ್ಟು ಜನ ದುಡಿಯುತ್ತಾರೆ ಎಂಬ ಸ್ಥೂಲವಾದ ಅರಿವಾದರೂ ಜನಕ್ಕೆ ಆಗುವಂತಾಯಿತು.

    ನಮ್ಮ ವರ್ತನೆ ಮತ್ತೊಬ್ಬರಿಗೆ ಹೇಗೆ ಕಾಣುತ್ತದೆಂಬ ಅರಿವು ನಮಗೆ ಸಾಮಾನ್ಯವಾಗಿ ಇರುವುದಿಲ್ಲ. ಅಲ್ಲಿ ಬಹಳಷ್ಟು ಮಂದಿ ಸೇರುವುದರಿಂದ ವಿಭಿನ್ನ ವ್ಯಕ್ತಿತ್ವಗಳನ್ನು ನೋಡಲು ಸಿಗುತ್ತದೆ. ತಮ್ಮನ್ನು ತಾವು ಹೋಲಿಸಿಕೊಳ್ಳಬಹುದಾದ ವ್ಯಕ್ತಿಗಳ ನಡೆ ನುಡಿ ನಮ್ಮನ್ನು ಎಚ್ಚರಿಸುತ್ತದೆ. ನಮ್ಮನ್ನು ನಾವು ಪರಿವರ್ತಿಸಿಕೊಳ್ಳಲು ಅಥವಾ ನಮ್ಮ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಲು ಅನುವು ಮಾಡಿಕೊಡುತ್ತದೆ.

    ಆದರೆ ಇಂಥಾ ಕಾರ್ಯಕ್ರಮಗಳಲ್ಲಿ ನಕಾರಾತ್ಮಕ ಅಂಶಗಳೂ ಉಂಟು. ಒಂದು ನಾಗರಿಕ ಸಮಾಜದಲ್ಲಿ ಬದುಕುವ ನಮಗೆ ಸಮಾಜ ಹಾಕಿರುವ ಅಲಿಖಿತ ಕಟ್ಟಳೆಗಳಿರುತ್ತವೆ. ಅದರಂತೆಯೇ ನಡೆಯಬೇಕು. ಅದು ಸಮಾಜದ ಆರೋಗ್ಯಕ್ಕೂ ಬಹಳ ಮುಖ್ಯ. ತೀವ್ರವಾದ ಪ್ರೇಮ, ರೋಷ, ಗಂಡು ಹೆಣ್ಣುಗಳ ನಡುವಿನ ಆಕರ್ಷಣೆ ಇವೆಲ್ಲಾ ಸಮಾಜದೊಳಗಿದ್ದದ್ದೇ ಮತ್ತು ಅದು ಪ್ರತಿಯೊಬ್ಬರಿಗೂ ತಿಳಿದದ್ದೇ ಆದರೂ ಕೆಲವು ಭಾವಗಳು ತೆರೆಯ ಮರೆಯಲ್ಲಿರುವುದೇ ಸರಿಯಾದದ್ದು. ಅಂಥ ಭಾವಗಳು ಅಂತರ್ಗಾಮಿಯಾಗಿದ್ದಾಗ ಹೇಗೆ ಸಹಜವೋ ಹಾಗೆಯೇ ಮುಸುಕಿನಿಂದ ನೇರಾ ನೇರ ಎದುರಿಗೆ ಬಂದರೆ ವಿಕೃತಿ ಎನಿಸಿಕೊಳ್ಳುತ್ತದೆ. ‘ಬಿಗ್ ಬಾಸ್’ನಂಥ ರಿಯಾಲಿಟಿ ಶೋಗಳು ಅಂಥ ಭಾವಗಳಿಗೆ ‘ಇಟ್ಸ್ ಒಕೆ’ ಅಥವಾ ‘ಪರವಾಗಿಲ್ಲ’ ಎಂಬ ಪರವಾನಗಿ ಕೊಟ್ಟುಬಿಡುತ್ತವೆ. ಇದು ಸಮಾಜದ ದೃಷ್ಟಿಯಿಂದ ಅಪಾಯಕಾರಿ. ನಾವೇ ನಮಗೆ ಹಾಕಿಕೊಂಡ ಸರಿ ತಪ್ಪುಗಳ ಬೇಲಿಯೊಳಗೆ ಬದುಕುತ್ತಿರುವುದರಿಂದಲೇ ನಮ್ಮ ಸಮಾಜಕ್ಕೆ ಒಂದು ಬಿಗಿ ಇರುವುದು. ಯಾವಾಗ ಆ ಕಟ್ಟು ಕಟ್ಟಳೆಗಳು ‘ಪರವಾಗಿಲ್ಲ’ದ ಬಲೆಗೆ ಬಿದ್ದು ಜಾಳಾಗುತ್ತದೆಯೋ ಅಲ್ಲಿಂದ ಸ್ವೇಚ್ಛೆಯ ಆರಂಭ.

    ‘ಬಿಗ್ ಬಾಸ್’ ಪ್ರತಿ ಬಾರಿಯೂ ತನ್ನೊಳಗೆ ವಿಭಿನ್ನ ಕಲೆಗಳಲ್ಲಿ ಅಥವಾ ವೃತ್ತಿಗಳಲ್ಲಿ ಹೆಸರು ಮಾಡಿದವರನ್ನು ಸೇರಿಸುತ್ತದೆ. ಆದರೆ ಅವರಿಂದ ಮೂಟೆ ಹೊರುವುದು, ಕಳ್ಳ ಪೊಲೀಸ್ ಆಟ ಮೊದಲಾದ ಅಸಂಬದ್ಧ ಆಟಗಳನ್ನೇ ಆಡಿಸುತ್ತಾ ಇರುತ್ತದೆ. ಅವೂ ಬೇಕು. ಆದರೆ ಅಲ್ಲಿ ಸೇರಿರುವ ಜನರ ಸ್ಕಿಲ್​ಗಳಿಂದ ವೀಕ್ಷಕರಿಗೆ ಏನಾದರೂ ಉಪಯೋಗವಾಗುವಂಥ ಆಟಗಳು ಇದ್ದರೆ ಇಂಥ ಕಾರ್ಯಕ್ರಮಗಳು ಮತ್ತಷ್ಟು ಉದ್ದೇಶಪೂರ್ವಕವಾಗಬಲ್ಲವು. ಸಂಪೂರ್ಣ ತಮ್ಮನ್ನು ತಾವು ತೊಡಗಿಸಿಕೊಂಡು ನೋಡುವ ವೀಕ್ಷಕ ವರ್ಗಕ್ಕೆ ಕಿಂಚಿತ್ ಮಾಹಿತಿಪೂರ್ಣವೂ ಆಗಬಹುದಿತ್ತು.

    ಮನರಂಜನೆಗೆ ‘ನಿರರ್ಥಕತೆ’ ಇರಬೇಕು ಎಂದು ಖ್ಯಾತ ರಂಗಕರ್ವಿು ಪ್ರಸನ್ನ ಅವರು ತಮ್ಮ ಮಾತಿನಲ್ಲಿ ಒಮ್ಮೆ ಹೇಳಿದ್ದರು. ಮನರಂಜನೆ ಎಂಬುದು ನಮ್ಮನ್ನು ತೀರಾ ಒಳಗೊಳ್ಳುವಂತೆ ಮಾಡದೇ ಸುಮ್ಮನೆ ನಮ್ಮನ್ನು ಹಗುರಾಗಿ ತೇಲಿಸಿಕೊಂಡು ಒಂದರಿಂದ ಎರಡು ಗಂಟೆ ದಾಟಿಸಿ ಹಗುರವಾಗಿ ವಾಸ್ತವಕ್ಕೆ ತಂದು ಬಿಡಬೇಕು ಎಂದು. ಅಷ್ಟರ ಮಟ್ಟಿಗೆ ಧಾರಾವಾಹಿಗಳಿಗೆ ಹೋಲಿಸಿದರೆ ‘ಬಿಗ್ ಬಾಸ್’ ಸಾರ್ಥಕವಾಯಿತೆಂದೇ ಹೇಳಬೇಕು. ಆದರೂ ನಿಜವಾದ ಅಂದರೆ ಆರೋಗ್ಯಕರ ಮನರಂಜನೆ ನೀಡುವ ದಿಸೆಯಲ್ಲಿ ರಿಯಾಲಿಟಿ ಶೋಗಳು ಇನ್ನೂ ಬಹು ದೂರ ಸಾಗಬೇಕಿದೆ.

    (ಲೇಖಕರು ಸಿನಿಮಾ, ಕಿರುತೆರೆ, ರಂಗಭೂಮಿ ಕಲಾವಿದೆ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts