More

    TV ಮನೆ ಕತೆ; ಧಾರಾವಾಹಿಗಳನ್ನು ನೋಡುವುದು ಹೇಗೆ?

    TV ಮನೆ ಕತೆ; ಧಾರಾವಾಹಿಗಳನ್ನು ನೋಡುವುದು ಹೇಗೆ?ವರ್ಷಗಳಿಂದ ಪ್ರಸಾರವಾಗುತ್ತಾ ಬರುತ್ತಿರುವ ಟಿಆರ್​ಪಿಯ ಮಾಪಕದಲ್ಲಿ ತುಟ್ಟತುದಿಯನ್ನು ತಲುಪಿದ್ದ ಕೆಲವು ಧಾರಾವಾಹಿಗಳು ಮುಗಿದಿವೆ. ಕೆಲವು ಇನ್ನೇನು ಮುಗಿಯುತ್ತಿವೆ. ಕೆಲವು ಹೊಸ ಕಥೆಗೆ ಪೋಣಿಸಿಕೊಂಡಂತೆ ಬದಲಾಗಿವೆ. ಒಟ್ಟಿನಲ್ಲಿ ಹಳೆ ನೀರು ಹರಿದು ಹೋಗಿ ಹೊಸ ಕಥೆಗಳ ಕಾಲವಾಗಿದೆ. ಹೊಸ ಹೊಸ ಪಾತ್ರಗಳು, ಹೊಸ ಹೊಸ ಕಥೆಗಳು, ವಾಹಿನಿಗಳು ಎಲ್ಲ ಹಳೆಯ ಅಂಕ ಕಳೆದು ಹೊಸದಾಗಿ ಪರದೆಯೆತ್ತಿ ಹೊಸ ಅಂಕ ಶುರು ಮಾಡುತ್ತಿವೆ. ಈ ಸಂದರ್ಭದಲ್ಲಿ ವೀಕ್ಷಕರಾಗಿ ನಮ್ಮ ಜವಾಬ್ದಾರಿಯೂ ಹೆಚ್ಚಿದೆ. ನಮ್ಮನ್ನು ನಾವು ಬದಲಾಯಿಸಿಕೊಳ್ಳಲೂ ಇದು ಸುಸಂದರ್ಭ.

    ನನ್ನ ಸ್ನೇಹಿತರ ಮನೆಗಳಲ್ಲಿ, ಸಂಬಂಧಿಕರ ಮನೆಗಳಲ್ಲಿ ಮುಗಿದ ಮೆಗಾ ಧಾರಾವಾಹಿಯ ಬಗೆಗೆ, ಶುರುವಾಗುತ್ತಿರುವ ಹೊಸ ಧಾರಾವಾಹಿಯ ಬಗೆಗೆ ಮಾತು ಬಂದಾಗಲೆಲ್ಲಾ ಎರಡು ರೀತಿಯ ವರ್ಗಗಳಾಗಿ ವೀಕ್ಷಕರು ವಿಂಗಡವಾಗುತ್ತಾರೆ. ‘ಈ ಹೊಸ ಧಾರಾವಾಹಿ ನೋಡಲು ತೊಡಗುವುದಿಲ್ಲವೆಂದು ನಿರ್ಧರಿಸಿದ್ದೇನಪ್ಪಾ. ಸುಮ್ಮನೆ ಇನ್ನೊಂದು ಐದು ವರ್ಗಗಳಿಗೆ ಅದೊಂದು ಚಟವಾಗಿಬಿಡುತ್ತದೆ. ನೋಡಲು ಶುರು ಮಾಡಿದರೆ ತಾನೇ ಸಮಸ್ಯೆ?’ ಎನ್ನುವವರದು ಒಂದು ವರ್ಗವಾದರೆ, ಮತ್ತೊಂದು ವರ್ಗ ಯಾವ ಯೋಚನೆಯೂ ಇಲ್ಲದೇ ಹೊಸ ಧಾರಾವಾಹಿಯನ್ನು ನೋಡತೊಡಗುವ ಮತ್ತು ಕೆಲವೇ ವಾರಗಳಲ್ಲಿ ಆ ಧಾರಾವಾಹಿಯ ಪಾತ್ರಗಳ ಕಷ್ಟ ಸುಖಗಳಲ್ಲಿ ತನ್ಮಯವಾಗಿಬಿಡುವ ವರ್ಗ.

    ಎರಡೂ ಧೋರಣೆಗಳಲ್ಲಿ ವೀಕ್ಷಕರಾಗಿ ನಮಗೆ ನಷ್ಟವಿದೆ. ಧಾರಾವಾಹಿಯನ್ನೇ ನೋಡದೇ ಮನೆ ಮನೆಗೆ ಬಂದು ಕೂರುವ ಕಷ್ಟವಿಲ್ಲದೇ ಹೊತ್ತು ಕಳೆಸುವ ಒಂದು ಸಾಧನವನ್ನು ಯಾರದೋ ಮೇಲಿನ ದ್ವೇಷ ಸಾಧನೆಯೆಂಬಂತೆ ದೂರ ಇಡಬೇಕಾದ ಅವಶ್ಯಕತೆ ಇಲ್ಲ. ಹಾಗೆಯೇ ಧಾರಾವಾಹಿಗಳಿಗೇ ದಾಸರಾಗಿ ಅಲ್ಲಿನ ಪಾತ್ರಗಳ ದುಗುಡ ದುಮ್ಮಾನಗಳನ್ನೆಲ್ಲಾ ನಮ್ಮ ತಲೆಯ ಮೇಲೆ ಹಾಕಿಕೊಂಡು ನರಳುವ ಅಗತ್ಯವೂ ಇಲ್ಲ.

    ಅವೆರಡರ ನಡುವಿನ ಸರಿಯಾದ ಹದವರಿಯುವುದು ವೀಕ್ಷಕರ ಜವಾಬ್ದಾರಿ. ಧಾರಾವಾಹಿಗಳು ಇರುವುದು ನಮ್ಮ ಮನರಂಜನೆಗಾಗಿ. ಮೊದಲನೆಯ ವೀಕ್ಷಕ ವರ್ಗ ಆ ಮಾಧ್ಯಮವನ್ನು ಪೂರ್ಣ ಅರಿವಿನೊಂದಿಗೆ ತಿರಸ್ಕರಿಸಿ ಅದರ ಬಗೆಗಿನ ಪ್ರತಿಭಟನೆಯನ್ನೋ, ಭಯವನ್ನೋ ತೋರಿದರೆ ಎರಡನೆಯ ವರ್ಗ ಅವನ್ನು ತಲೆಯ ಮೇಲೆ ಕೂರಿಸಿಕೊಂಡು ದಾಸ್ಯವನ್ನು ಅನುಭವಿಸುತ್ತಾರೆ.

    ಅಲ್ಲಿ ಬರುವ ಕಥೆ, ಪಾತ್ರಗಳು ಎಲ್ಲವೂ ಕಾಲ್ಪನಿಕ. ಅವುಗಳ ಹಲವು ಸಂದರ್ಭಗಳು ನಿಜ ಜೀವನದ ಸಂದರ್ಭಗಳಿಗೆ ಹೋಲಿಕೆಯಿರಬಹುದು. ಆದರೂ ಅದು ಸಂಪೂರ್ಣ ಕಾಲ್ಪನಿಕ. ಆ ವಾಸ್ತವವನ್ನು ಅರಿಯಬೇಕು. ಮಕ್ಕಳು ಕಥೆ ಹೇಳು ಎಂದು ಪೀಡಿಸಿ ಕಾಗಕ್ಕ ಗುಬ್ಬಕ್ಕನ ಕಥೆ ಕೇಳುತ್ತವೆ. ಬೆಳಗಾಗೆದ್ದು ಮನೆಯ ಮುಂದೆ ಹಾರುವ ಕಾಗೆಯನ್ನೋ, ಕಿಟಕಿಯಲ್ಲಿ ಗೂಡು ಕಟ್ಟಿದ ಗುಬ್ಬಿಯನ್ನೋ ನೋಡಿ ಇದೇ ಆ ಕಾಗೆ, ಆ ಗುಬ್ಬಿ ಎಂದು ಯೋಚಿಸುತ್ತವೆಯೇ? ಪುಟ್ಟ ಪುಟ್ಟ ಮಕ್ಕಳಿಗೂ ಗೊತ್ತು ಅಲ್ಲಿ ಕಿಚಿಪಿಚಿ ಮಾಡುತ್ತಾ ಹಾರುತ್ತಿರುವ ಗುಬ್ಬಿ ಈಗ ಹಾರಿ ಬಂದು ‘ಕಾಗಕ್ಕ, ಕಾಗಕ್ಕ…’ ಎಂದು ಮಾತನಾಡಿಬಿಡುವುದಿಲ್ಲ ಎಂದು, ಅದು ಕೇವಲ ಕಥೆ ಎಂದು.

    ಆ ಮಕ್ಕಳಿಗೆ ಕಾಗಕ್ಕ ಗುಬ್ಬಕ್ಕನ ಕಥೆ ಹೇಳುವ ನಾವುಗಳು ಏಕೆ ಆ ಪಾತ್ರಗಳು ಅಲ್ಲಿಂದೆದ್ದು ಬಂದು ನಮ್ಮೊಡನೆೆ ಬದುಕುತ್ತಿವೆ ಎಂದುಕೊಳ್ಳಬೇಕು? ಅಥವಾ ಇದು ಕೆಟ್ಟದ್ದು, ಇದು ದಡ್ಡತನದ್ದು, ಇದು ಸೋಮಾರಿಗಳದ್ದು ಎಂದು ಯಾವುದೋ ಒಂದು ಋಣಾತ್ಮಕ ವರ್ಗಕ್ಕೆ ಧಾರಾವಾಹಿಗಳನ್ನು ಸೇರಿಸಿ ಅವು ಕೊಡಬಹುದಾದ ಮನರಂಜನೆಯಿಂದ ವಂಚಿತರಾಗಬೇಕು? ಪ್ರತಿಯೊಬ್ಬರೂ ಧಾರಾವಾಹಿ ನೋಡಬಹುದು. ಆದರೆ ಅದಕ್ಕೆ ಮುನ್ನ ಕೆಲವು ಆಲೋಚನೆಗಳನ್ನು ಧೋರಣೆಗಳನ್ನು ರೂಢಿಸಿಕೊಳ್ಳಬೇಕು.

    ಧಾರಾವಾಹಿಯೊಂದು ನನಗಾಗಿ ನನ್ನಮನೆಗೆ ಬರುತ್ತಿದೆ. ನನಗೆ ಬಿಡುವಿದ್ದರೆ, ಆ ಕಥೆ ಆಸಕ್ತಿ ಮೂಡಿಸಿದರೆ ಅದನ್ನು ನೋಡುತ್ತೇನೆೆ ನಂತರ ಅದನ್ನು ಮರೆಯುತ್ತೇನ ಬಿಡುವಿಲ್ಲದಿದ್ದರೆ ಆ ಸಂಚಿಕೆ ನೋಡಲಾಗುವುದಿಲ್ಲ. ಆದರೆ ಅದಕ್ಕಾಗಿ ನಾನು ಮರುಗುವುದಿಲ್ಲ. ಇರುವ ಕೆಲಸ ಬಿಟ್ಟಾದರೂ ಧಾರಾವಾಹಿ ನೋಡುವ ಆತಂಕದ ಮನಃಸ್ಥಿತಿ ಬೆಳೆಸಿಕೊಳ್ಳುವುದಿಲ್ಲ. ಧಾರಾವಾಹಿ ನೋಡುವುದು ಅಥವಾ ನೋಡದಿರುವುದು ವೈಯಕ್ತಿಕ ನಿರ್ಧಾರ. ನೋಡುವವರ ಮುಂದೆ ನೋಡದವರಾಗಲೀ ಅಥವಾ ನೋಡದವರ ಮುಂದೆ ನೋಡುವವರಾಗಲೀ ಕೀಳರಿಮೆ ಅಥವಾ ಮುಜುಗರವನ್ನನುಭವಿಸುವ ಅಗತ್ಯವಿಲ್ಲ.

    ಧಾರಾವಾಹಿ ನೋಡುವ ಅಭ್ಯಾಸವಿಲ್ಲದವರು ಶ್ರೇಷ್ಠರೂ ಆಗುವುದಿಲ್ಲ, ನೋಡುವವರು ಕನಿಷ್ಠರೂ ಅಲ್ಲ.

    ಎಲ್ಲ ಉದ್ಯಮಗಳಂತೆ ಧಾರಾವಾಹಿ ನಿರ್ವಣವೂ ಒಂದು ಉದ್ಯಮ. ಅಲ್ಲಿ ತೋರಿಸುವ ಕಥೆಗಳು. ಕೇವಲ ಕಥೆಗಳು. ನಿಜವಾದ ವ್ಯಕ್ತಿಗಾಗಲೀ, ಸಂದರ್ಭಕ್ಕಾಗಲೀ ಸಾಮ್ಯವಿದ್ದರೆ ಅದು ಕಾಕತಾಳೀಯ ಮಾತ್ರ. ಅಲ್ಲಿ ಕಣ್ಣೀರು ಹಾಕುವವರು, ಸಂಚು ಮಾಡುವವರು ನಿರ್ದೇಶಕರು ಕಟ್ ಎಂದ ಕೂಡಲೇ ನಮ್ಮ ನಿಮ್ಮಂಥಾ ಸಾಧಾರಣ ಬದುಕಿಗೆ ಮರಳುವವರು.

    ನನಗೆ ಆಸಕ್ತಿ ಮೂಡದಿದ್ದರೆ, ನಾನು ನೋಡುವುದಿಲ್ಲ. ಅಥವಾ ಅದು ಸಾರುವ ಸಂದೇಶ ನನ್ನ ಸರಿ ತಪ್ಪುಗಳ ಮಾಪಕದಲ್ಲಿ ತಪ್ಪಾಗಿದ್ದರೆ ನೋಡುವುದಿಲ್ಲ.

    ಕೊನೆಯ ಅಂಶ ಬಹು ಮುಖ್ಯವಾದದ್ದು. ಧಾರಾವಾಹಿಗಳ ಉದ್ದೇಶವೇ ಮನರಂಜನೆ. ಅದನ್ನು ಅವು ಕೊಡಲಾಗದಿದ್ದರ, ಆಸಕ್ತಿ ಮೂಡಿಸದಿದ್ದರೆ ಅವುಗಳನ್ನು ನೋಡುವುದರಲ್ಲಿ ಅರ್ಥವಿಲ್ಲ. ಒಂದು ಧಾರಾವಾಹಿ ನನ್ನ ‘ಒಳ್ಳೆಯ ಸಮಾಜ’ದ ಪರಿಕಲ್ಪನೆಯಲ್ಲಿ ತಪ್ಪು ಎಂಬ ದಿಕ್ಕು ಹಿಡಿಯುತ್ತಿದೆ ಎನಿಸಿದರಂತೂ ಅದನ್ನು ಒಂದು ಕರ್ತವ್ಯ ಎಂಬಂತೆ ನೋಡುವುದನ್ನು ನಿಲ್ಲಿಸಬೇಕು. ತಪ್ಪಿನ ಕಡೆಗಿನ ಔದಾಸೀನ್ಯವೂ ತಪ್ಪಿಗೆ ಪ್ರೋತ್ಸಾಹವನ್ನೇ ನೀಡುತ್ತದೆ.

    ಒಂದು ಮಾತು ವೀಕ್ಷಕರು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಧಾರಾವಾಹಿಗಳಿಗೆ ಪುರಸ್ಕಾರದ ಅಗತ್ಯ ಎಷ್ಟಿದೆಯೋ ಅಷ್ಟೇ ಅಗತ್ಯ ನಮ್ಮ ತಿರಸ್ಕಾರದ್ದೂ ಇದೆ. ಮನರಂಜನೆಯ ಮೂಲ ಉದ್ದೇಶವೇ ನೆರವೇರಿಸದೇ ನಿರಾಸಕ್ತಿದಾಯಕವಾದ ಧಾರಾವಾಹಿಗಳನ್ನು ತಿರಸ್ಕರಿಸಿದರೆ ಮತ್ತೊಂದು ಕೆಲವೇ ತಿಂಗಳುಗಳಲ್ಲಿ ಸಿದ್ಧವಾಗುತ್ತದೆ. ಅದನ್ನು ಇದಕ್ಕಿಂತ ಭಿನ್ನವಾಗಿ ಮಾಡಿರುವ ಸಾಧ್ಯತೆಗಳಿರುತ್ತದೆ. ಇರುವುದೇ ಇದು ಎಂದು ನೋಡುತ್ತಾ ಕುಳಿತರೆ ಅದೇ ಕಥೆಯನ್ನು ಬೇರೆ ಪಾತ್ರಧಾರಿಗಳೊಂದಿಗೆ ನೋಡುತ್ತಲೇ ಇರಬೇಕಾಗುತ್ತದೆ ಮತ್ತು ಕೊನೆಗೆ ವೀಕ್ಷಕರಿಗೆ ಏನು ಬೇಕೋ ಅದನ್ನು ಕೊಡುತ್ತೇವೆ ಎಂಬ ಅಪವಾದವನ್ನೂ ಹೊರಬೇಕಾಗುತ್ತದೆ.

    ಬಹುಶಃ ಈ ಮನಃಸ್ಥಿತಿ ನಮಗೆ ಧಾರಾವಾಹಿ ನೋಡಲು, ನಮಗೆ ಬೇಕಾದ ರೀತಿಯಲ್ಲಿ ಬದಲಾದ ಧಾರಾವಾಹಿಗಳನ್ನು ನೋಡಲು, ನಮ್ಮ ದೃಷ್ಟಿಕೋನಗಳಿಗೆ ತಕ್ಕಂತೆ ಅವುಗಳಿಂದ ಆನಂದ ಪಡೆಯಲು ಸಹಾಯಕವಾಗಬಹುದು. ಈ ಪರಿಪ್ರೇಕ್ಷೆಯಿಂದ ಹೊಸ ಕಥೆಗಳನ್ನು ನೋಡಲು ಸಿದ್ಧರಾಗೋಣ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts