More

    ಬೆಂಗಳೂರಲ್ಲಿ 60% ಜನ ಬೂಸ್ಟರ್​ ಡೋಸ್​ ಇನ್ನೂ ಪಡೆದಿಲ್ಲ: ಬಿಬಿಎಂಪಿ ಆಯುಕ್ತ ತುಷಾರ್​ ಗಿರಿನಾಥ್​

    ಬೆಂಗಳೂರು: ದೇಶಾದ್ಯಂತ ಜನರಿಗೆ ಕರೋನಾ ಮರುಕಳಿಸುತ್ತಾ? ಮತ್ತೆ ಲಾಕ್​ಡೌನ್​ ಶುರುವಾಗುತ್ತಾ ಎನ್ನುವ ಚಿಂತೆ ಕಾಡುತ್ತಿದೆ. ಆದರೆ ಭಾರತ ಸರ್ಕಾರ ಈಗಾಗಲೇ ಆಸ್ಪತ್ರೆಗಳಲ್ಲಿ ಆಕ್ಸಿಜನ್​ ಸಿಲಿಂಡರ್​ಗಳು ಕಡಿಮೆ ಆಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುತ್ತಿದೆ. ಅದೇ ರೀತಿಯಲ್ಲಿ ಕರೋನಾ ಎದುರಿಸಲು ರಾಜ್ಯ ಸರ್ಕಾರಗಳು ಹಾಗೂ ನಗರ ಪಾಲಿಕೆಗಳು ಸಮರೋಪಾದಿಯಲ್ಲಿ ಸಜ್ಜಾಗುತ್ತಿವೆ.

    ಇದೀಗ ತಾಂತ್ರಿಕ ಸಲಹಾ ಸಮಿತಿ ಜತೆಗಿನ ಸಭೆ ಮುಕ್ತಾಯವಾಗಿದ್ದು ಕೋವಿಡ್ ಸಭೆ ಬಳಿಕ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿಕೆ ನೀಡಿದ್ದಾರೆ. ಈ ಸಂದರ್ಭ ಮಾತನಾಡಿದ ತುಷಾರ್​ ಗಿರಿನಾಥ್​, ‘ನಾವು ಸಭೆಯಲ್ಲಿ ಪಾಲಿಕೆ ತೆಗೆದುಕೊಂಡಿರುವ ಕ್ರಮದ ಬಗ್ಗೆ ವಿವರಿಸಿದ್ದೇವೆ. 1 ಲಕ್ಷ ಬೂಸ್ಟರ್ ಡೋಸ್ ನೀಡಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ. ನಗರದ 30 ಬೆಡ್ ಗಳಿರುವ 418 ಖಾಸಗಿ ಆಸ್ಪತ್ರೆಗಳ ಪಟ್ಟಿ ಮಾಡಿಕೊಂಡಿದ್ದು ಈಗಾಗಲೇ ಈ ಬಗ್ಗೆ ಫನಾ‌ ಸಂಘಟನೆ ಜೊತೆ ಮಾತನಾಡಿದ್ದೇವೆ’ ಎಂದಿದ್ದಾರೆ.

    ‘ಕರೋನಾ ಹೆಚ್ಚಾದಾಗ ನಮ್ಮ ಸನ್ನದ್ಧತೆ ಹೇಗಿದೆ ಎಂದು ಪರೀಕ್ಷಿಸಲು ನಾವು ಒಟ್ಟು 27 ಬಾರಿ ಮಾಕ್ ಡ್ರಿಲ್ ಮಾಡುತ್ತೇವೆ. ಆಕ್ಸಿಜನ್ ಲಭ್ಯತೆಯ ಬಗ್ಗೆಯೂ ತಾಂತ್ರಿಕ ಸಲಹಾ ಮಂಡಳಿಗೆ ಮಾಹಿತಿ ನೀಡಿದ್ದೇವೆ. ಜೊತೆಗೆ ೧ ಲಕ್ಷ ಕೋವಿಶೀಲ್ಡ್ ಬೂಸ್ಟರ್ ಡೋಸ್, ೪೦ ಸಾವಿರ corbvax ವ್ಯಾಕ್ಸಿನ್ ಅವಶ್ಯಕತೆ ಬಗ್ಗೆಯೂ ತಿಳಿಸಿದ್ದೇವೆ’ ಎಂದು ಆಯುಕ್ತರು ಬೆಂಗಳೂರು ನಗರದ ಸನ್ನದ್ಧತೆ ಹಾಗೂ ಅವಶ್ಯಕತೆಗಳ ಬಗ್ಗೆ ತಾಂತ್ರಿಕ ಸಲಹಾ ಸಮಿತಿಗೆ ಮಾಹಿತಿ ನೀಡಿದ್ದಾರೆ.

    ಇನ್ನು ಆಮ್ಲಜನಕದ ಕೊರತೆಯ ಬಗ್ಗೆ ಮಾತನಾಡಿದ ಆಯುಕ್ತರು ‘ನಾಳೆಯಿಂದ ಆಕ್ಸಿಜನ್ ಪ್ರಿಕಾಷನ್ ಬಗ್ಗೆ ಮಾಕ್ ಡ್ರಿಲ್ ಮಾಡಿ ಆಕ್ಸಿಜನ್ ರೆಡಿ ಇಟ್ಕೊಳ್ಳುತ್ತೇವೆ. TAC (Technical Advisory Committee) ಕೊಟ್ಟಿರುವ ಸಲಹೆ ಗಂಭೀರವಾಗಿ ತೆಗೆದುಕೊಂಡು ಆ ಪ್ರಕಾರ ಕೆಲಸ ಆರಂಭಿಸುತ್ತೇವೆ’ ಎಂದಿದ್ದಾರೆ

    ಇನ್ನೇನು ಹೊಸ ವರ್ಷ ಆಗಮಿಸಲಿದ್ದು ನಗರದಲ್ಲಿ ಪಾರ್ಟಿ ವಾತಾವರಣ ಹೆಚ್ಚಾಗಲಿದೆ. ಈ ಬಗ್ಗೆಯೂ ಮಾತನಾಡಿರುವ ಚೀಫ್​ ಕಮಿಷನರ್​, ‘ನ್ಯೂ ಇಯರ್ ಸೆಲೆಬ್ರೇಷನ್ ಬಗ್ಗೆಯೂ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಆ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಹೊಸ ಗೈಡ್ ಲೈನ್ಸ್ ಪ್ರಕಟ ಮಾಡುತ್ತೆ. ಮಾಸ್ಕ್ ಹಾಕ್ಕೋಬೇಕು ಅನ್ನೋದು ಎಲ್ಲರ ಅಭಿಪ್ರಾಯವಾಗಿದೆ’ ಎಂದಿದ್ದಾರೆ. ಬೆಂಗಳೂರಿಗೆ ಪ್ರತ್ಯೇಕ ರೂಲ್ಸ್​ ಮಾಡಲಾಗುತ್ತದಾ ಅಥವಾ ಯಥಾಸ್ಥಿತಿಯನ್ನು ಕಾಪಾಡಲಾಗುತ್ತಾ ಎನ್ನುವುದರ ಬಗ್ಗೆ ತುಷಾರ್​ ಗಿರಿನಾಥ್​ ಇನ್ನೂ ಮಾಹಿತಿ ನೀಡಿಲ್ಲ.

    ಕರೋನಾ ವಿರುದ್ಧ ಲಸಿಕೆ ಹಾಕಿಸಿಕೊಳ್ಳುವ ಹಾಗೂ ಕೋವಿಡ್​ ಟೆಸ್ಟಿಂಗ್​ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದು ‘ಇನ್ನೂ ಬೆಂಗಳೂರಲ್ಲಿ 60% ಮಂದಿ ಬೂಸ್ಟರ್ ಡೋಸ್ ಪಡೆಯೋದಕ್ಕೆ ಬಾಕಿ ಇದೆ. ಕರೋನಾ ಟೆಸ್ಟಿಂಗ್​ ಹೆಚ್ಚಾಗಲಿದೆ. ಬೂಸ್ಟರ್ ಡೋಸ್ ಪಡೆಯಲು ಜನರೇ ಮುಂದೆ ಬರಬೇಕು. ಮೀಟಿಂಗ್ ನಲ್ಲಿ ಕೆಲವೊಂದು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಅಧಿಕೃತವಾಗಿ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡುತ್ತೆ’ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts