More

    ಅರ್ಜಿಗಳ ವಿಲೇಗೆ ಆದ್ಯತೆ ನೀಡಲು ತುಷಾರ್ ಗಿರಿನಾಥ್ ಸೂಚನೆ

    ಬೆಂಗಳೂರು: ಕೆ.ಆರ್.ಪುರದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲನೆ ನಡೆಸಿ ಆದ್ಯತೆ ಮೇರೆಗೆ ವಿಲೇವಾರಿ ಮಾಡಬೇಕು ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ವಿವಿಧ ವಿಭಾಗಗಳ ಮುಖ್ಯಸ್ಥರಿಗೆ ಗುರುವಾರ ಸೂಚಿಸಿದ್ದಾರೆ.

    ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬುಧವಾರ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದಲ್ಲಿ ಸ್ವೀಕರಿಸಿರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಸೂಚಿಸಿದ್ದಾರೆ. ಇದಕ್ಕಾಗಿ ನೋಡಲ್ ಅಧಿಕಾರಿಗಳು ನಿಯೋಜನೆ ಆಗಿದ್ದಾರೆ. ಸ್ವೀಕರಿಸಿದ 5 ಸಾವಿರ ಅರ್ಜಿಗಳ ಪೈಕಿ ಅರ್ಧದಷ್ಟು ಪಾಲಿಕೆಗೆ ಸಂಬಂಧಿಸಿದ್ದಾಗಿದೆ. ಇವುಗಳನ್ನು ವಿಭಾಗವಾರು ವಿಂಗಡಿಸಿ ತಕ್ಷಣವೇ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

    ಜನರಿಂದ ಸ್ವೀಕರಿಸಲಾದ ಅರ್ಜಿಗಳು ಮಹದೇವಪುರ ಹಾಗೂ ಕೆ.ಆರ್.ಪುರ ಮತಕ್ಷೇತ್ರಕ್ಕೆ ಸಂಬಂಧಿಸಿದ್ದಾಗಿದೆ. ಆದರೂ ಬೇರೆ ಕಡೆಗಳಿಂದ ಜನರು ಬಂದು ಅಹವಾಲು ಸಲ್ಲಿಸಿದ್ದರೂ, ಅವುಗಳನ್ನು ಕ್ರೋಡೀಕರಿಸಿ ಆದ್ಯತೆ ಮೇರೆಗೆ ವಿಲೇ ಮಾಡಬೇಕು. ರಸ್ತೆ, ಚರಂಡಿ, ವಿದ್ಯುತ್ ದೀಪ ಸಹಿತ ಮೂಲಸೌಕರ್ಯಕ್ಕೆ ಸಂಬಂಧಿಸಿದ ದೂರುಗಳನ್ನು ಸ್ಥಳೀಯವಾಗಿಯೇ ಇತ್ಯರ್ಥಪಡಿಸಬೇಕು. ಹೆಚ್ಚು ಹಣ ಬಳಸಬೇಕಾದ ಯೋಜನೆಗಳಿದ್ದಲ್ಲಿ ಅವುಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತರಬೇಕು. ಗಂಭೀರ ಪ್ರಕರಣಗಳನ್ನು ಮಾತ್ರ ಕೇಂದ್ರ ಕಚೇರಿಗೆ ತಲುಪಿಸಬೇಕು ಎಂದು ತುಷಾರ್ ಗಿರಿನಾಥ್ ಕೆಳ ಹಂತದ ಅಧಿಕಾರಿ ವರ್ಗಕ್ಕೆ ಸೂಚನೆ ನೀಡಿದರು.

    ನಾಳೆ ಯಲಹಂಕದಲ್ಲಿ ಅಹವಾಲು ಆಲಿಕೆ ಕಾರ್ಯಕ್ರಮ:

    ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದ ಎರಡನೇ ಭಾಗವಾಗಿ ಶುಕ್ರವಾರ (ಜ.5) ಬೆಳಿಗ್ಗೆ 9.30 ಗಂಟೆಗೆ ಯಲಹಂಕದ ಎನ್‌ಇಎಸ್ ಬಸ್ ನಿಲ್ದಾಣ ಸಮೀಪವಿರುವ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಿಗದಿಯಾಗಿದೆ. ಈ ಅಹವಾಲು ಆಲಿಕೆ ಕಾರ್ಯಕ್ರಮದಲ್ಲಿ ಯಲಹಂಕ, ಬ್ಯಾಟರಾಯನಪುರ ಹಾಗೂ ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ತಮ್ಮ ಕುಂದು-ಕೊರತೆಯನ್ನು ಸಲ್ಲಿಸಬಹುದಾಗಿದೆ. ಕಾರ್ಯಕ್ರಮವನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಮೂರೂ ಕ್ಷೇತ್ರಗಳ ಶಾಸಕರು, ಸಂಸದರು ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts