More

    ಪಾತಾಳ ಕಂಡ ಬೆಳಗಾವಿ, ಚಿಕ್ಕೋಡಿ ಎಸ್ಸೆಸ್ಸೆಲ್ಸಿ ಫಲಿತಾಂಶ!


    ಬೆಳಗಾವಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಫಲಿತಾಂಶ ಗಣನೀಯವಾಗಿ ಕುಸಿತ ಕಂಡಿದೆ.

    ಬೆಳಗಾವಿ ಶೈಕ್ಷಣಿಕ ಜಿಲ್ಲೆ ಕಳೆದ ಬಾರಿ 26ನೇ ಸ್ಥಾನದಲ್ಲಿತ್ತು. ಈಗ 29ನೇ ಸ್ಥಾನಕ್ಕೆ ಕುಸಿದಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ 13ನೇ ಸ್ಥಾನದಿಂದ 25ನೇ ಸ್ಥಾನಕ್ಕೆ ಕುಸಿತವಾಗಿದೆ.

    ಪಾಸಿಂಗ್ ಪ್ಯಾಕೇಜ್, ವರ್ಷಪೂರ್ತಿ ಶಿಕ್ಷಕರ ವಿಶೇಷ ತರಗತಿಗಳು, ಮನೆಮನೆಗೆ ಭೇಟಿ ಕಾರ್ಯಕ್ರಮ, ಪಾಲಕರ ಸಭೆಗಳು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರಿಯಾಗಿಸಿಕೊಂಡು ತಯಾರಿಸಿದ್ದ ವಿಶೇಷ ಕಲಿಕಾ ಸಾಮಗ್ರಿಗಳಂತಹ ಯೋಜನೆಗಳು ಸಹಿತ ಇಲಾಖೆಯನ್ನು ಕೈ ಹಿಡಿದಿಲ್ಲ. ಈ ಹಿಂದಿನ ಫಲಿತಾಂಶಗಳಿಗಿಂತಲೂ ಈ ಬಾರಿ ಎರಡೂ ಶೈಕ್ಷಣಿಕ ಜಿಲ್ಲೆಗಳ ಫಲಿತಾಂಶ ಪಾತಾಳ ಕಂಡಿದೆ.

    25,248 ವಿದ್ಯಾರ್ಥಿಗಳು ಫೇಲ್: ಚಿಕ್ಕೋಡಿಯಲ್ಲಿ ಶೈಕ್ಷಣಿಕ ಜಿಲ್ಲೆಯಲ್ಲಿ 13,524 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಹಾಜರಾಗಿದ್ದ 44,812ರ ಪೈಕಿ 31,288 ವಿದ್ಯಾರ್ಥಿಗಳು ಪಾಸಾಗಿದ್ದು, ಒಟ್ಟಾರೆ ಫಲಿತಾಂಶ ಶೇ. 69.82 ಆಗಿದೆ. ಇದರೊಂದಿಗೆ 25ನೇ ಸ್ಥಾನಕ್ಕೆ ಕುಸಿದಿದೆ.

    ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 11,724 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಕುಳಿತ 33,434ರ ಪೈಕಿ 21,710 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಜಿಲ್ಲೆಯ ಒಟ್ಟಾರೆ ಫಲಿತಾಂಶ ಶೇ. 64.99 ಆಗಿದ್ದು, 29ನೇ ಸ್ಥಾನಕ್ಕೆ ಕುಸಿದಿದೆ. ಬೆಳಗಾವಿಯಲ್ಲಿ 6 ಶಾಲೆಗಳು ಶೂನ್ಯ ಫಲಿತಾಂಶ ದಾಖಲಿಸಿದರೆ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 5 ಶಾಲೆಗಳು ಶೂನ್ಯ ಫಲಿತಾಂಶ ದಾಖಲಿಸಿವೆ.

    ಬೆಳಗಾವಿ ನಗರ ಶೇ. 79.47 ಫಲಿತಾಂಶ ಬಂದರೆ, ರಾಮದುರ್ಗ ತಾಲೂಕು ಕೇವಲ ಶೇ. 55.16 ಅತಿ ಕಡಿಮೆ ಫಲಿತಾಂಶ ಪಡೆದಿದೆ. ಇನ್ನು ಖಾನಾಪುರ ಶೇ. 69.14, ಬೆಳಗಾವಿ ಗ್ರಾಮೀಣ ಶೇ. 67.68, ಬೈಲಹೊಂಗಲ ಶೇ. 60.98, ಸವದತ್ತಿ ಶೇ. 58.95, ಚನ್ನಮ್ಮನ ಕಿತ್ತೂರು ಶೇ. 57.80 ಫಲಿತಾಂಶ ಪಡೆದಿವೆ. ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಉತ್ತೀರ್ಣರಾದವರಲ್ಲಿ ವಿದ್ಯಾರ್ಥಿಗಳಿಗಿಂತ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿದೆ.

    ಪ್ರಯೋಜನವಾಗಲಿಲ್ಲ ಪೂರ್ವಸಿದ್ಧತೆ !

    ಜಿಲ್ಲಾಡಳಿತ, ಜಿಪಂ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಿಲ್ಲೆಯ ಫಲಿತಾಂಶ ಸುಧಾರಣೆಗೆ 15 ಸೂತ್ರಗಳ ಯೋಜನೆ ಸಿದ್ಧಪಡಿಸಿ ಕಳೆದ ಜೂನ್‌ನಿಂದಲೇ ಜಾರಿಗೆ ತರಲಾಗಿತ್ತು. ನಿರಂತರ ಕಲಿಕೆ, ವಿದ್ಯಾರ್ಥಿಗಳ ಶ್ರೇಣೀಕರಣ, ಆಪ್ತ ಸಮಾಲೋಚನೆ ಮತ್ತು ಮನೆ-ಮನೆ ಭೇಟಿ, ಪೋಷಕರ, ತಾಯಂದಿರ ಸಭೆ, ಅನುಭವ ಹಂಚಿಕೆ ಕಾರ್ಯಾಗಾರ, ಫಲಿತಾಂಶ ಮುಖಿ ಗ್ರಂಥಾಲಯ, ಸರಣಿ ಪರೀಕ್ಷೆಗಳ ನಿರ್ವಹಣೆ, ಫಲಿತಾಂಶಮುಖಿ ತರಬೇತಿ ಶಿಬಿರಗಳು, ವಿಷಯವಾರು ಕ್ಲಬ್‌ಗಳ ರಚನೆ, ಪುನರಾವರ್ತನೆ ಪ್ಯಾಕೇಜ್, ವಿಶೇಷ ಅಧ್ಯಯನ ತರಗತಿಗಳು, ಕಲಿಕೋತ್ಸವ ಸೇರಿ ಒಟ್ಟು 15 ಅಂಶಗಳನ್ನು ರೂಪಿಸಿ ಅನುಷ್ಠಾನಗೊಳಿಸಿತ್ತು. ಅಲ್ಲದೆ ಪ್ರತಿ ತಿಂಗಳು ಮೊದಲ ಹಾಗೂ ಎರಡನೇ ಶನಿವಾರ ವಿಷಯವಾರು ಶಿಕ್ಷಕರ ಸಮೂಹ ಸಭೆಗಳನ್ನು ನಡೆಸಿ, ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕೆ ಸೂತ್ರ ಕಂಡುಕೊಳ್ಳುವ ಕಾರ್ಯಕ್ರಮ ಹಾಕಿಕೊಂಡಿತ್ತು. ಕಡಿಮೆ ಉತ್ತೀರ್ಣತೆ ಪಡೆದ ಪ್ರೌಢಶಾಲೆಗಳ ಮೇಲೆ ಹೆಚ್ಚಿನ ನಿಗಾವಹಿಸಿ, ಉತ್ತಮ ಫಲಿತಾಂಶ ತರುವುದಕ್ಕೆ ಇಲಾಖೆ ಮುಂದಾಗಿತ್ತು. ಈ ವರ್ಷ 10 ಸ್ಥಾನದೊಳಗೆ ರ‌್ಯಾಂಕ್ ಬರುವುದಕ್ಕೆ ಗುರಿ ಹಾಕಿಕೊಂಡಿತ್ತು. ಜನವರಿಯಲ್ಲಿ ಸರಣಿ ಪರೀಕ್ಷೆ ಏರ್ಪಡಿಸಿತ್ತು. ಇಷ್ಟೆಲ್ಲ ಪೂರ್ವತಯಾರಿ ಮಾಡಿಕೊಂಡಿದ್ದರೂ ಎರಡೂ ಜಿಲ್ಲೆಗಳ ಫಲಿತಾಂಶ ನಿರೀಕ್ಷೆಗೂ ಮೀರಿ ಕುಸಿತ ಕಂಡಿರುವುದು ಅಧಿಕಾರಗಳ ಚಿಂತೆಗೆ ಕಾರಣವಾಗಿದೆ.

    ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಶಾಲೆಗಳಿಗೆ ಕರೆಸಿಕೊಂಡು 2ನೇ ಪರೀಕ್ಷೆ ದಿನಾಂಕದವರೆಗೆ ಪುನರ್‌ಬಲನ ತರಬೇತಿ ನಡೆಸುತ್ತೇವೆ. ಪಾಸಾಗುವಂತೆ ತರಗತಿ ಕೈಗೊಳ್ಳುತ್ತೇವೆ.
    | ಮೋಹನಕುಮಾರ ಹಂಚಾಟೆ, ಡಿಡಿಪಿಐ ಬೆಳಗಾವಿ,ಚಿಕ್ಕೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts