More

    ಚುನಾವಣೆ ಬಿಸಿ: ಅಭಿವೃದ್ಧಿ ಕೆಲಸಗಳಿಗೆ ಕಸಿವಿಸಿ

    ಆರ್​.ತುಳಸಿಕುಮಾರ್​

    ಬೆಂಗಳೂರು: ರಾಜಧಾನಿ ಬೆಂಗಳೂರು ನಗರದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು ನಿರೀಕ್ಷಿತ ಮಟ್ಟದಲ್ಲಿ ಜಾರಿಯಾಗದ ಕಾರಣ ನಾಗರಿಕರು ಬವಣೆಗೆ ಒಳಗಾಗಿದ್ದಾರೆ. ಕಾಲಮಿತಿಯಲ್ಲಿ ಅನುಷ್ಠಾನಕ್ಕೆ ತರುವುದಾಗಿ ಹೇಳಿದ್ದ ಸರ್ಕಾರ ಹಾಗೂ ಬಿಬಿಎಂಪಿ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ವಿವಿಧ ಕಾರಣಗಳಿಂದ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ತ್ವರಿತಗೊಳಿಸಲುವ ಕೆಲಸವೂ ಆಗದ ಕಾರಣ ಅಭಿವೃದ್ಧಿ ನಿಂತ ನೀರಾಗಿದೆ.

    ಮಹಾನಗರಕ್ಕೆ ವಿಶ್ವದರ್ಜೆಯ ಮೂಲಸೌಕರ್ಯ ಒದಗಿಸುವ ವಾಗ್ದಾನ ದಶಕದ ಹಿಂದೆಯೇ ನೀಡಲಾಗಿದೆ. ರಸ್ತೆ, ಚರಂಡಿ, ಫುಟ್‌ಪಾತ್, ಕುಡಿಯುವ ನೀರು, ಕೆರೆ ಪುನಶ್ಚೇತನ, ಮಳೆನೀರುಗಾಲುವೆಗಳ ಪುನರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ರೂಪಿಸಿ ಘೋಷಿಸಲಾಗಿದೆ. ಇವುಗಳಿಗೆ ಬೇಕಾದ ಆರ್ಥಿಕ ಸಂಪನ್ಮೂಲವನ್ನು ಬಜೆಟ್‌ನಲ್ಲಿ ನಮೂದಿಸಿದ್ದರೂ, ಸಕಾಲಕ್ಕೆ ಬಿಡುಗಡೆಯಾಗದ ಕಾರಣ ಕಾಮಗಾರಿಗಳು ಪೂರ್ಣಗೊಂಡಿಲ್ಲ.

    ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲು ನಿರ್ದಿಷ್ಟ ಚೌಕಟ್ಟು ಅಗತ್ಯ. ಜತೆಗೆ ಸ್ಪಷ್ಟ ಗುರಿಯೂ ಬೇಕು. ಈ ಎರಡೂ ಅಂಶಗಳ ಜತೆಗೆ ಸಮರ್ಪಕವಾಗಿ ನಿರ್ವಹಣೆ ಮಾಡಬೇಕಾಗುತ್ತದೆ. ಈ ಎಲ್ಲವನ್ನೂ ಒಟ್ಟುಗೂಡಿಸಿ ಗಟ್ಟಿ ನಾಯಕತ್ವ ಇದ್ದಲ್ಲಿ ಕಾಮಗಾರಿಗಳು ನಿಗದಿಯಂತೆ ಸಾಗುತ್ತದೆ. ಆದರೆ, ಎಲ್ಲ ಬೃಹತ್ ಯೋಜನೆಗಳನ್ನು ಒಮ್ಮಲೇ ಕೈಗೆತ್ತಿಕೊಂಡ ಪರಿಣಾಮ ಹಣ ಕ್ರೋಡೀಕರಣ ಹಾಗೂ ವೆಚ್ಚ ಮಾಡುವ ವಿಧಾನದಲ್ಲಿ ಲೋಪ ಇಣುಕಿದೆ. ಗುತ್ತಿಗೆ ನೀಡಿರುವ ಕಂಪನಿಗೆ ಕಾಮಗಾರಿ ಪೂರ್ಣಗೊಳಿಸಲು ಗುರಿ ನೀಡಿದೆಯಾದರೂ, ನಿರಂತರ ಮೇಲ್ವಿಚಾರಣೆ ಇಲ್ಲದೆ ಗುಣಮಟ್ಟದ ಕೆಲಸಗಳು ಆಗುತ್ತಿಲ್ಲ. ದೊಡ್ಡ ಮೊತ್ತದ ಬಿಲ್ ಪಾವತಿ ಮುನ್ನ ಮೂರನೇ ಸಂಸ್ಥೆಯಿಂದ ಕಾಮಗಾರಿ ತಪಾಸಣೆ ಮಾಡಿಸುವ ಪದ್ಧತಿಯೂ ಈಗ ಹಿಂದೆ ಸರಿದಿದೆ. ಇದರಿಂದಾಗಿ ಗುಣಮಟ್ಟ ಇಲ್ಲದ ಕಾಮಗಾರಿಗಳದ್ದೇ ಹೆಚ್ಚು ಸದ್ದು ಮಾಡುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಿದ್ದ ಸರ್ಕಾರ ಕಂಡೂ ಕಾಣದಂತಿರುವುದು ಭ್ರಷ್ಟಾಚಾರಕ್ಕೆ ಪರೋಕ್ಷ ಬೆಂಬಲ ನೀಡಲಾಗುತ್ತಿದೆ ಎಂಬ ಆಕ್ಷೇಪ ಕೇಳಿಬಂದಿದೆ.

    ಚುನಾವಣೆ ನೆಪ, ಕಾಮಗಾರಿಗಳಿಗೆ ಗರ:

    ಲೋಕಸಭಾ ಚುನಾವಣೆಯಿಂದಾಗಿ ಕಳೆದ ಮಾರ್ಚ್‌ನಿಂದಲೇ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಬಜೆಟ್ ಘೋಷಿತ ಹಾಗೂ ಹೊಸ ಯೋಜನೆಗಳ ಜಾರಿಗೆ ಟೆಂಡರ್ ಕರೆದು ಅಂತಿಮಗೊಳಿಸುವ ಕೆಲಸವೂ ಆಗುತ್ತಿಲ್ಲ. ನೀತಿ ಸಂಹಿತೆ ಉಲ್ಲಂಘನೆ ಆಗಲಿದೆ ಎಂಬ ಒಂದೇ ಕಾರಣಕ್ಕೆ ಕೆಲವೊಂದು ತುರ್ತು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅಧಿಕಾರಿ ವರ್ಗ ಹಿಂದೇಟು ಹಾಕುತ್ತಿದೆ. ಬರ ಹಿನ್ನೆಲೆಯಲ್ಲಿ ಕುಡಿಯುವ ನೀರು ಪೂರೈಕೆ ಕಾರ್ಯಕ್ರಮಕ್ಕೆ ಯಾವ ಅಡ್ಡಿಯೂ ಇಲ್ಲವೆಂದು ಚುನಾವಣಾ ಆಯೋಗವೇ ಹೇಳಿದೆ. ಆದರೂ, ಸಂಹಿತೆ ನೆಪ ಮಾಡಿ ಬೋರ್‌ವೆಲ್ ಕೊರೆಯಿಸುವ ಹಾಗೂ ನೀರು ಸರಬರಾಜು ಮಾಡುವ ಕಾರ್ಯವನ್ನು ಸಮರ್ಪಕವಾಗಿ ಮಾಡದ ಕಾರಣ ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಸದ್ಯ ಬೆಂಗಳೂರಿನಲ್ಲಿ ಮತದಾನ ಮುಗಿದಿದ್ದರೂ, ಲಿತಾಂಶ ಬರುವವರೆಗೂ ಸಂಹಿತೆ ಜಾರಿಯಲ್ಲಿರುವ ಕಾರಣ ಟೆಂಡರ್ ಅಂತಿಮಗೊಳಿಸಿ ಕಾರ್ಯಾದೇಶ ನೀಡಲು ಸಾಧ್ಯವಾಗದು ಎಂದು ಪಾಲಿಕೆ ಅಧಿಕಾರಿಗಳು ಕೈಚೆಲ್ಲಿದ್ದಾರೆ. ಆ ವೇಳೆಗೆ ಮುಂಗಾರು ಮಳೆ ಆರಂಭಗೊಂಡು 2-3 ತಿಂಗಳು ಕಾಮಗಾರಿ ನಡೆಸದಂತಹ ಸ್ಥಿತಿ ನಿರ್ಮಾಣವಾಗಲಿದೆ. ಬಳಿಕ ಮಳೆ ಹೆಚ್ಚಾಯಿತೆಂದು ಕೆಲಸ ಮಾಡಲಾಗದು ಎಂಬ ನೆಪ ಮಾಡುವ ಹೊತ್ತಿಗೆ ವರ್ಷಾಂತ್ಯ ಮುಗಿದು ಹೊಸ ಬಜೆಟ್‌ಗೆ ಸಿದ್ಧತೆ ಆರಂಭಿಸಲಾಗುತ್ತದೆ. ಆಗ ಹಾಲಿ ಕೆಲಸಗಳು ಮೂಲೆಗುಂಪಾಗಿ ಜನರಿಗೆ ಸೌಕರ್ಯ ಒದಗಿಸಲಾಗದೆ ನಗರ ಮತ್ತಷ್ಟು ಸಮಸ್ಯೆಗಳ ಸುಳಿಗೆ ಸಿಲುಕಿದರೂ ಅಚ್ಚರಿಪಡಬೇಕಿಲ್ಲ.

    ರೈಲ್ವೆ ಕಾಮಗಾರಿಗಳಿಗಿಲ್ಲ ಅಡ್ಡಿ:

    ಪ್ರಸ್ತುತ ನಗರದಲ್ಲಿ ನಮ್ಮ ಮೆಟ್ರೋ ಹಾಗೂ ಉಪನಗರ ರೈಲು ಯೋಜನೆಯ ಕಾಮಗಾರಿಗಳು ಮಾತ್ರ ಭರದಿಂದ ಸಾಗಿವೆ. ಅದರಲ್ಲೂ ಏರ್‌ಪೋರ್ಟ್‌ಗೆ ಸಂಪರ್ಕ ಕಲ್ಪಿಸುವ ಮೆಟ್ರೋ ಕಾಮಗಾರಿ 3 ಪಾಳಿಗಳಲ್ಲಿ ನಡೆಯುತ್ತಿದೆ. ಸಬರ್ಬನ್ ರೈಲ್ವೆ ಕೆಲಸವೂ ನಿಗದಿಯಂತೆ ನಡೆದಿದೆ. ಆದರೆ, ಇತರ ಕಾಮಗಾರಿಗಳು ಇಷ್ಟೇ ವೇಗದಲ್ಲಿ ನಡೆಯದಿರುವುದು ಆಯಾ ಸಂಸ್ಥೆಗಳಲ್ಲಿ ಇಚ್ಛಾಶಕ್ತಿ ಕೊರತೆ ಎದ್ದುಕಾಣುತ್ತಿದೆ.

    ಸಚಿವರ ಕ್ಷೇತ್ರಕ್ಕೆ ಅಭಿವೃದ್ಧಿ ಸೀಮಿತ:

    ಲೋಕಸಭಾ ಚುನಾವಣೆ ಘೋಷಣೆ ಮುನ್ನ ರಾಜ್ಯ ಸರ್ಕಾರ ನಗರದ ಅಭಿವೃದ್ಧಿಗೆ ಹಸಿರು ನಿಶಾನೆ ನೀಡಿತ್ತು. ಜತೆಗೆ ಗುತ್ತಿಗೆದಾರರಿಗೆ ಸ್ವಲ್ಪಮಟ್ಟಿಗೆ ಹಳೆಯ ಬಾಕಿ ಬಿಲ್ ಪಾವತಿಸಲಾಗಿದೆ. ಇದರಿಂದ ಹೊಸದಾಗಿ ಕಾಮಗಾರಿಗಳು ಆರಂಭಗೊಂಡಿದ್ದರೂ, ಅವುಗಳೆಲ್ಲವೂ ಸಚಿವರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರಗಳಿಗೆ ಸೀಮಿತ ಆಗಿವೆ. ಅದರಲ್ಲೂ ಚರಂಡಿ ನಿರ್ಮಾಣ ಹಾಗೂ ರಸ್ತೆ ಡಾಂಬರೀಕರಣದ ಕೆಲಸಗಳು ಮಾತ್ರ ನಡೆಯುತ್ತಿವೆ.

    ಬಿಸಿಲಿನಿಂದಾಗಿ ಕಾಮಗಾರಿ ಕುಂಠಿತ:

    ನಗರದಲ್ಲಿ ಈ ಬಾರಿ ರಣಬಿಸಿಲು ಕಂಡಿದೆ. ಫೆಬ್ರವರಿ ಅಂತ್ಯದಿಂದಲೇ ಪ್ರಖರ ಬಿಸಿಲಿನಿಂದಾಗಿ ಕಾಮಗಾರಿಗಳನ್ನು ಕೈಗೊಳ್ಳಲು ಕಾರ್ಮಿಕರಿಗೆ ಸಾಧ್ಯವಾಗುತ್ತಿಲ್ಲ. ಇತ್ತೀಚಿಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಲ್ಲ ರಾಜ್ಯ ಸರ್ಕಾರಗಳಿಗೆ ಸುತ್ತೋಲೆ ಹೊರಡಿಸಿ ಬಿಸಿಲಿನ ಸಮಸ್ಯೆಯಿಂದ ಕಾರ್ಮಿಕರನ್ನು ಪಾರ ಮಾಡಲು ಮಧ್ಯಾಹ್ನ 12ರಿಂದ 3 ಗಂಟೆವರೆಗೆ ವಿಶ್ರಾಂತಿ ನೀಡಬೇಕು. ಮಹಿಳೆಯರು ಸೇರಿ ಸಮರ್ಪಕವಾಗಿ ಕೆಲಸ ಮಾಡಲಾಗದವರಿಗೆ ಹಗರು ಕೆಲಸವನ್ನಷ್ಟೇ ನೀಡಬೇಕೆಂದು ರ್ಮಾನು ಹೊರಡಿಸಿದೆ. ಇದು ಕೂಡ ಕಾಮಗಾರಿ ಚುರುಕುಗೊಳ್ಳದಿರಲು ಅಡ್ಡಿಯಾಗಿದೆ. ನೀರಿನ ಅಭಾವದಿಂದಾಗಿ ಉದ್ಯಾನಗಳ ಅಭಿವೃದ್ಧಿ, ಕೆರೆಗಳ ಪುನಶ್ಚೇತನ ಹಾಗೂ ವೈಟ್ ಟಾಪಿಂಗ್ ಕಾಮಗಾರಿಯೂ ನಿಧಾನಗೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts