More

    ತುರ್ತು ಸಂದರ್ಭಕ್ಕಿಲ್ಲ ಆಂಬುಲೆನ್ಸ್‌‌: ಎಲ್ಲವೂ ಕರೊನಾ ಸೇವೆಗೆ ಬಳಕೆ

    ಮಾಗಡಿ: ಸಾರ್ವಜನಿಕ ಆಸ್ಪತ್ರೆ ಮತ್ತು 108 ಆಂಬುಲೆನ್ಸ್‌ಗಳನ್ನು ಕಳೆದ 3 ತಿಂಗಳಿಂದ ಕರೊನಾ ಸೇವೆಗೆ ಬಳಸಿಕೊಳ್ಳುತ್ತಿರುವುದರಿಂದ ಗರ್ಭಿಣಿಯರು, ಅಪಘಾತದಲ್ಲಿ ಗಾಯಗೊಂಡವರಿಗೆ ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್ ಲಭ್ಯವಿಲ್ಲದೆ ನರಳುವಂತಾಗಿದೆ.

    ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 2 ಹೊಸ ಅಂಬುಲೆನ್ಸ್‌ಗಳು, ಒಂದು ನಗು-ಮಗು ಆಂಬುಲೆನ್ಸ್, ಚಿರಶಾಂತಿ ವಾಹನ, 108 ಆಂಬುಲೆನ್ಸ್ ಸೇರಿ 5 ಆಂಬುಲೆನ್ಸ್‌ಗಳಿವೆ. ಆದರೆ, ಈ ಎಲ್ಲವನ್ನೂ ಕರೊನಾ ಸೇವೆಗೆ ಬಳಸಿಕೊಳ್ಳುತ್ತಿರುವುದರಿಂದ ಅಪಘಾತ, ಹೆರಿಗೆ ಸೇರಿ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆಗಾಗಿ ರೋಗಿಗಳನ್ನು ಸಾಗಿಸಲು ತೊಂದರೆಯಾಗಿದೆ. ತುರ್ತು ಚಿಕಿತ್ಸೆಗಾಗಿ 108ಕ್ಕೆ ಕರೆ ಮಾಡಿದರೆ 23 ಕಿ.ಮೀ. ದೂರದ ಕುದೂರು, ಸೋಲೂರು, ತಾವರೆಕೆರೆಗಳ 108 ಅಂಬುಲೆನ್ಸ್ ಬರುವವರೆಗೂ ಕಾಯಬೇಕಾದ ಪರಿಸ್ಥಿತಿ ಉದ್ಭವವಾಗಿದೆ.

    ಮೃತಪಟ್ಟ ಮಗು: ಕುದೂರು ಮೂಲದ ವ್ಯಕ್ತಿ ಬುಧವಾರ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದು, ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ ಲಭ್ಯವಿಲ್ಲದೆ ಸುಮಾರು ಒಂದು ಗಂಟೆ ಕಾಯಬೇಕಾಯಿತು. ಅದೇ ರೀತಿ ಹುಲಿದುರ್ಗ ಉಜನಿ ಮೂಲದ 5 ತಿಂಗಳ ಮಗುವಿಗೆ ಉಸಿರಾಟದ ಸಮಸ್ಯೆ ಎದುರಾಗಿ ಮಾಗಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬಂದ ಪಾಲಕರು ಒಂದು ಗಂಟೆಗೂ ಹೆಚ್ಚು ಕಾಲ ಕಾದರೂ ಮಗುವಿಗೆ ಚಿಕಿತ್ಸೆ ಸಿಗದ ಕಾರಣ, ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳಲು ಮಾಗಡಿಯಲ್ಲಿ 108 ಆಂಬುಲೆನ್ಸ್ ಸಿಗದೆ ಮಗು ಮೃತಪಟ್ಟಿದೆ.

    ಸಾರ್ವಜನಿಕ ಆಸ್ಪತ್ರೆಗೆ ನೀಡಿರುವ 108 ಅಂಬುಲೆನ್ಸ್ ಅನ್ನು ಸಾರ್ವಜನಿಕ ತುರ್ತು ಸೇವೆಗೆ ಒದಗಿಸುವಂತೆ ಕಲ್ಲುದೇವನಹಳ್ಳಿ ಗ್ರಾಮದ ಬೆಂಕಿ ಮಹದೇವಯ್ಯ ಮನವಿ ಮಾಡಿದ್ದಾರೆ.

    ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ತುರ್ತು ಸೇವೆಗೆ 108 ಅಂಬುಲೆನ್ಸ್ ಅಗತ್ಯವಾಗಿದ್ದು, ಕೂಡಲೇ ಸಂಬಂಧಪಟ್ಟವರ ಬಳಿ ಚರ್ಚಿಸಿ 108 ಆಂಬುಲೆನ್ಸ್ ಎಂದಿನಂತೆ ಕಾರ್ಯನಿರ್ವಹಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.
    ಎ.ಮಂಜುನಾಥ್ ಶಾಸಕ

    ಕರೊನಾಗೆ ಅಗತ್ಯ ಇರುವುದರಿಂದ ಮಾಗಡಿಯ 108 ಆಂಬುಲೆನ್ಸ್ ಅನ್ನು ಕರೊನಾ ಸೋಂಕಿತರನ್ನು ಬೆಂಗಳೂರು ಕೆಂಗೇರಿ ಬಳಿಯ ರಾಜರಾಜೇಶ್ವರಿ ಆಸ್ಪತ್ರೆ ಮತ್ತು ರಾಮನಗರ ಕೋವಿಡ್ ಆಸ್ಪತ್ರೆಗೆ ಸಾಗಿಸಲು ಬಳಸಿಕೊಳ್ಳಲಾಗುತ್ತಿದೆ.
    ಡಾ. ಸಿ.ಕೆ. ರಾಜೇಶ್, ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ, ಮಾಗಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts