More

    ರಣ ಬಿಸಿಲಿಗೆ ಬತ್ತುತ್ತಿದೆ ತುಂಗಭದ್ರಾ

    ರಾಣೆಬೆನ್ನೂರ: ಬೇಸಿಗೆಯ ರಣ ಬಿಸಿಲಿಗೆ ತಾಲೂಕಿನಲ್ಲಿ ಹರಿದಿರುವ ತುಂಗಭದ್ರಾ ನದಿಯಲ್ಲಿ ನೀರಿ ಪ್ರಮಾಣ ಕಡಿಮೆಯಾಗುತ್ತಿದ್ದು, ಇನ್ನು 15 ದಿನ ಕಳೆದರೆ ನಗರ ಸೇರಿ ತಾಲೂಕಿನಾದ್ಯಂತ ಜಲಕ್ಷಾಮ ಎದುರಾಗುವ ಸಂಭವವಿದೆ.

    ಸದ್ಯ ನದಿಯಲ್ಲಿ ನೀರಿನ ಹರಿವು ಗಣನೀಯ ಕಡಿಮೆಯಾಗಿದೆ. ಬಿಸಿಲಿನ ಪ್ರಖರತೆಗೆ ನೀರು ಆವಿಯಾಗತೊಡಗಿದೆ. ನದಿಯುದ್ದಕ್ಕೂ ಅಲ್ಲಲ್ಲಿ ಗುಂಡಿಗಳಲ್ಲಿ ಕೊಂಚ ಪ್ರಮಾಣದಲ್ಲಿ ನೀರು ನಿಂತಿರುವುದನ್ನು ಹೊರತು ಪಡಿಸಿದರೆ, ಕಳೆದ ಫೆಬ್ರವರಿ, ಮಾರ್ಚ್​ನಲ್ಲಿ ಹರಿಯುತ್ತಿದ್ದ ನೀರು ಈಗ ಕಾಣುತ್ತಿಲ್ಲ. ಆದ್ದರಿಂದ ಕುಡಿಯುವ ನೀರಿನ ಅಭಾವ ಎದುರಾಗಲಿದ್ದು, ಜನ ಜಾನುವಾರುಗಳಿಗೆ ಸಂಕಟ ಸೃಷ್ಟಿಯಾಗುವ ಲಕ್ಷಣಗಳು ಕಾಣಿಸುತ್ತಿವೆ.

    ತುಂಗಭದ್ರಾ ನದಿ ನೀರು ಕೇವಲ ಗ್ರಾಮೀಣ ಭಾಗ ಮಾತ್ರವಲ್ಲದೇ ರಾಣೆಬೆನ್ನೂರ ನಗರ, ಹಾವೇರಿ, ಬ್ಯಾಡಗಿ ಪಟ್ಟಣ, ಗುತ್ತಲಕ್ಕೂ ಪೂರೈಕೆ ಆಗುತ್ತಿದೆ. ತುಂಗಭದ್ರಾ ನದಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕು ಹಳ್ಳೂರು ಗ್ರಾಮದ ಮೂಲಕ ಜಿಲ್ಲೆಗೆ ಪ್ರವೇಶಿಸಿ, ಹಾವೇರಿ ತಾಲೂಕಿನ ತೆರದಹಳ್ಳಿ ಮೂಲಕ ಗದಗ ಜಿಲ್ಲೆ ಪ್ರವೇಶಿಸುತ್ತದೆ. ಈ ಮಾರ್ಗದಲ್ಲಿ ಬರುವ ಎಲ್ಲ ಗ್ರಾಮಗಳು ತುಂಗಭದ್ರಾ ನದಿ ನೀರನ್ನೇ ನಂಬಿಕೊಂಡಿವೆ.

    ತಾಲೂಕಿನಲ್ಲಿ 108 ಗ್ರಾಮಗಳಿಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ತುಂಗಭದ್ರಾ ನದಿಯಿಂದ ನೀರು ಪೂರೈಸಲಾಗುತ್ತಿದೆ. ಸದ್ಯ ನದಿಯಲ್ಲಿರುವ ನೀರು ಮುಂದಿನ 15 ದಿನಕ್ಕೆ ಸಾಕಾಗಬಹುದು. ಅಷ್ಟರೊಳಗೆ ಭದ್ರಾ ಜಲಾಶಯದಿಂದ ನೀರು ಹರಿಸಿದರೆ, ಏಪ್ರಿಲ್ ಹಾಗೂ ಮೇ ತಿಂಗಳಿಗೆ ನೀರು ಲಭ್ಯವಾಗಲಿದೆ. ಕರೊನಾ ಸೋಂಕು ತೆಡೆಗಟ್ಟುವ ಸಲುವಾಗಿ ವಿವಿಧ ಕಾರ್ಯಚರಣೆಯಲ್ಲಿ ಪಾಲ್ಗೊಂಡಿರುವ ಜಿಲ್ಲಾಡಳಿತ ಕುಡಿಯುವ ನೀರಿನ ಬಗ್ಗೆ ಈವರೆಗೂ ಚಿಂತಿಸಿಲ್ಲ. ಆದರೆ, ಮುಂದೆಯೂ ಕ್ರಮ ಕೈಗೊಳ್ಳದಿದ್ದರೆ, ನೀರಿನ ಅಭಾವ ಹೆಚ್ಚಾಗಲಿದೆ.

    ತುಂಗಭದ್ರಾ ನದಿಯಲ್ಲಿ ನೀರಿನ ಅಭಾವ ಸೃಷ್ಟಿಯಾದಾಗ ಭದ್ರಾ ಜಲಾಶಯದಿಂದ ನೀರು ಹರಿಸಲಾಗುತ್ತದೆ. ಪ್ರಸಕ್ತ ವರ್ಷ ಭದ್ರಾ ಜಲಾಶಯದಿಂದ ಮೈಲಾರ ಜಾತ್ರೆ ನಿಮಿತ್ತ ಫೆಬ್ರವರಿಯಲ್ಲಿ ನೀರು ಹರಿಸಲಾಗಿತ್ತು. ಇದಾದ ಬಳಿಕ ಮತ್ತೆ ನೀರು ಹರಿಸಿಲ್ಲ. ಆದ್ದರಿಂದ ಜಿಲ್ಲಾಡಳಿತ ಭದ್ರಾ ಜಲಾಶಯದಿಂದ ನೀರು ಹರಿಸಲು ಸೂಕ್ತ್ತ ಕ್ರಮ ಕೈಗೊಳ್ಳಬೇಕಿದೆ.

    ಸದ್ಯ ನದಿಯಲ್ಲಿರುವ ನೀರು 15 ದಿನಕ್ಕೆ ಸಾಕಾಗುತ್ತದೆ. ಮುಂದಿನ ದಿನದಲ್ಲಿ ಭದ್ರಾ ಜಲಾಶಯದಿಂದ ನೀರು ಹರಿಸಿದರೆ ಅನುಕೂಲವಾಗಲಿದೆ. ಇಲ್ಲವಾದರೆ ಬೋರ್​ವೆಲ್​ನಿಂದ ನೀರು ಪೂರೈಸುವುದು ಅನಿವಾರ್ಯವಾಗಲಿದೆ.

    | ಡಾ. ಎನ್. ಮಹಾಂತೇಶ, ನಗರಸಭೆ ಆಯುಕ್ತ ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts