More

    ‘ಜ್ಞಾನಸಿರಿ’ಗೆ ಅನುದಾನದ ಬರ ; ವಿವಿ ಹೊಸ ಕ್ಯಾಂಪಸ್‌ನಲ್ಲಿ ಹಾಸ್ಟೆಲ್ ಕಟ್ಟಡ ಪೂರ್ಣ

    ತುಮಕೂರು: ಮುಂದಿನ ಶೈಕ್ಷಣಿಕ ವರ್ಷದಿಂದ ತುಮಕೂರು ವಿವಿ ಬಿದರಕಟ್ಟೆ ಹೊಸ ಕ್ಯಾಂಪಸ್ ‘ಜ್ಞಾನಸಿರಿ’ಗೆ ಸ್ಥಳಾಂತರವಾಗಲಿದೆ ಎಂದು ಕುಲಪತಿ ಪ್ರೊ.ವೈ. ಎಸ್.ಸಿದ್ದೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

    ಮಂಗಳವಾರ ಹೊಸ ಕ್ಯಾಂಪಸ್‌ಗೆ ಭೇಟಿ ನೀಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸ್ನಾತಕೋತ್ತರ ಸಮಾಜಕಾರ್ಯ, ಜೀವರಸಾಯನಶಾಸ್ತ್ರ, ಸೂಕ್ಷ್ಮಾಣು ಜೀವಶಾಸ್ತ್ರ ಹಾಗೂ ಪರಿಸರ ವಿಜ್ಞಾನ ವಿಭಾಗಗಳು ಹೊಸ ಶೈಕ್ಷಣಿಕ ವರ್ಷದಿಂದ ಬಿದರಕಟ್ಟೆಯಲ್ಲಿ ಕಾರ್ಯನಿರ್ವಹಿಸಲು ಅಗತ್ಯವಾದ ಮೂಲಸೌಕರ್ಯ ಸಿದ್ಧವಿದೆ ಎಂದರು.

    ಲಭ್ಯವಿರುವ ಅನುದಾನದಿಂದ 240 ಎಕರೆ ವಿಸ್ತೀರ್ಣದ ಹೊಸ ಕ್ಯಾಂಪಸ್‌ನ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಮುಂದಿನ ಐದು ವರ್ಷಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಸುಸಜ್ಜಿತ ಕ್ಯಾಂಪಸ್ ಪೂರ್ಣಗೊಳ್ಳಲಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ದೃಷ್ಟಿಕೋನಕ್ಕೆ ಅನುಗುಣವಾಗಿ ಕ್ಯಾಂಪಸ್ ಮೂಡಿಬರಲಿದೆ ಎಂದರು.

    ತಲಾ 36 ಕೋಟಿ ರೂ. ವೆಚ್ಚದ ಮೂರು ಶೈಕ್ಷಣಿಕ ಬ್ಲಾಕ್‌ಗಳು ಒಂದೇ ಕಡೆ ತಲೆಯೆತ್ತಲಿದ್ದು, ಕಾಮಗಾರಿ ಆರಂಭವಾಗಿದೆ. ಮುಂದಿನ ವರ್ಷದ ವೇಳೆಗೆ ಕನಿಷ್ಠ 12 ವಿಭಾಗಗಳನ್ನು ಸ್ಥಳಾಂತರಿಸಲು ಅನುಕೂಲವಾಗುವಷ್ಟು ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
    ಮಹಿಳಾ ವಿದ್ಯಾರ್ಥಿನಿಲಯ, ಪುರುಷ ವಿದ್ಯಾರ್ಥಿನಿಲಯ ಹಾಗೂ ಸಂಶೋಧನಾರ್ಥಿಗಳ ವಸತಿಗೃಹ ಒಟ್ಟು 17.5 ಕೋಟಿ ರೂ. ವೆಚ್ಚದ ಮೂರು ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, ಒಂದೆರಡು ತಿಂಗಳಲ್ಲಿ ಬಳಕೆಗೆ ಸಿದ್ಧವಾಗಲಿವೆ. ಸಮಾಜ ಕಲ್ಯಾಣ ಇಲಾಖೆಯ ಅನುದಾನದಿಂದ ಇವುಗಳ ನಿರ್ಮಾಣ ಸಾಧ್ಯವಾಗಿದೆ ಎಂದರು.

    1.19 ಕೋಟಿ ರೂ. ರೂಸಾ ಅನುದಾನದಲ್ಲಿ ಗ್ರಂಥಾಲಯ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದೆ, ಸರ್ಕಾರದಿಂದ ಮಂಜೂರಾಗಿರುವ 40 ಕೋಟಿ ರೂ. ಇನ್ನೂ ಬಿಡುಗಡೆಯಾಗಿಲ್ಲ. ಹೊಸ ಕ್ಯಾಂಪಸ್ ಪೂರ್ಣಗೊಳ್ಳಲು ಏನಿಲ್ಲವೆಂದರೂ 250 ಕೋಟಿ ರೂ. ಅನುದಾನದ ಅವಶ್ಯಕತೆಯಿದೆ. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

    ಕಲಾಭವನ, ಪರೀಕ್ಷಾಪೂರ್ವ ತರಬೇತಿ ಕೇಂದ್ರ, ವಿಜ್ಞಾನ ಕೇಂದ್ರಗಳ ಕಾಮಗಾರಿಗಳು ಕೂಡ ಪ್ರಗತಿಯಲ್ಲಿವೆ. ವಿಜ್ಞಾನ ಜಗತ್ತು ಪರಿಕಲ್ಪನೆ ಸಾಕಾರಗೊಳ್ಳುತ್ತಿದ್ದು, ಅದಕ್ಕಾಗಿ 80 ಎಕಗೆ ಜಾಗ ಮೀಸಲಿಡಲಾಗಿದೆ. ಕರ್ನಾಟಕ ಕ್ರಿಕೆಟ್ ಅಸೋಸಿಯೇಶನ್ ವಿವಿ ಜತೆ ಮಾತುಕತೆ ನಡೆಸಿದ್ದು ತನ್ನ ಕೇಂದ್ರವನ್ನು ಹೊಸ ಕ್ಯಾಂಪಸ್‌ನಲ್ಲಿ ತೆರೆಯಲು ಆಸಕ್ತಿ ತೋರಿಸಿದೆ ಎಂದರು.
    ವಿವಿ ಇಂಜಿನಿಯರ್ ಮಂಜುನಾಥ್, ಕೆ.ಎಸ್. ನಾಗರಾಜ್ ಮತ್ತಿತರರು ಮಾಹಿತಿ ನೀಡಿದರು. ಸಹಾಯಕ ಪ್ರಾಧ್ಯಾಪಕ ಸೀಬಂತಿ ಪದ್ಮನಾಭ ಮತ್ತಿತರರು ಇದ್ದರು.

    ಕಾಮಗಾರಿಗಳ ಗುಣಮಟ್ಟಕ್ಕೆ ಆದ್ಯತೆ ನೀಡಲಾಗಿದೆ, ಇದಕ್ಕಾಗಿ ಎಸ್‌ಐಟಿ, ಎಸ್‌ಎಸ್‌ಐಟಿ ಹಾಗೂ ಲೋಕೋಪಯೋಗಿ ಇಲಾಖೆ ತಜ್ಞರ ಪ್ರತಿನಿಧಿಗಳನ್ನು ಒಳಗೊಂಡ ಗುಣಮಟ್ಟ ಪರಿಶೀಲನಾ ಸಮಿತಿ ರಚಿಸಲಾಗಿದೆ. ಹೊಸ ಕ್ಯಾಂಪಸ್ ನಿರ್ಮಾಣದೊಂದಿಗೆ ತುಮಕೂರು ವಿವಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲಿದೆ.
    ಕುಲಪತಿ ಪ್ರೊ.ವೈ. ಎಸ್.ಸಿದ್ದೇಗೌಡ

    ಕ್ಯಾಂಪಸ್ ನಿರ್ಮಾಣಕ್ಕೆ ಕುಲಪತಿಗಳ ಅತ್ಯುತ್ಸಾಹ ಕಂಡು ಖುಷಿಯಾಗಿದೆ ಆದರೆ, ಕ್ಯಾಂಪಸ್‌ನಲ್ಲಿ ಮಾಧ್ಯಮದವರು ಬರುವ ಬಗ್ಗೆಯೂ ಸಿಂಡಿಕೇಟ್ ಸದಸ್ಯರಿಗೆ ತಿಳಿಸಿಲ್ಲ, ಕ್ಯಾಂಪಸ್ ಕಾಯಕಲ್ಪದ ಬಗ್ಗೆಯೂ ಜಿಲ್ಲೆಯ ಶಿಕ್ಷಣ ತಜ್ಞರು, ಶಾಸಕರುಗಳಿಗೂ ಮಾಹಿತಿ ನೀಡುವುದಿಲ್ಲ ಹಾಗಾಗಿ, ಬಿದರೆಕಟ್ಟೆ ಕ್ಯಾಂಪಸ್ ನಿರ್ಮಾಣದ ಬಗ್ಗೆ ಭಿನ್ನಾಭಿಪ್ರಾಯಗಳಿದ್ದು ಕುಲಪತಿ ಏಕಪಕ್ಷೀಯವಾಗಿ ನಡೆದುಕೊಂಡರೆ ಸರ್ಕಾರದಿಂದ ಹಣ ಕೊಡಿಸುವವರು ಯಾರು?
    ಆರ್.ಕೆ.ಶ್ರೀನಿವಾಸ್ ಸಿಂಡಿಕೇಟ್ ಸದಸ್ಯ, ತುಮಕೂರು ವಿವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts