More

    ತುಮಕೂರು ವಿಶ್ವವಿದ್ಯಾಲಯ ಆವರಣದಲ್ಲಿ ವಿಹಾರಿಗಳು ; ಆತಂಕದಲ್ಲಿ ವಿದ್ಯಾರ್ಥಿಗಳು, ಸಿಬ್ಬಂದಿ

    ತುಮಕೂರು: ಕರೊನಾ ಭೀತಿ ನಡುವೆಯೂ ಅಂತಿಮ ವರ್ಷದ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಸರ್ಕಾರದ ಆದೇಶ ಹೊರಬಿದ್ದಿದೆ. ಈ ಮಧ್ಯೆ ತುಮಕೂರು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಪರೀಕ್ಷೆ ಬರೆಯಲಿರುವ 4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ವಿಶ್ವವಿದ್ಯಾಲಯದ 400ಕ್ಕೂ ಹೆಚ್ಚು ಸಿಬ್ಬಂದಿಗೆ ಕರೊನಾತಂಕ ಕಾಡಲಾರಂಭಿಸಿದೆ.

    ಜಿಲ್ಲಾ ಪೊಲೀಸ್ ಇಲಾಖೆಯ ಡಿಎಆರ್ ಮೈದಾನ ಸೇರಿ ನಗರದ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಆರೋಗ್ಯದ ದೃಷ್ಟಿಯಿಂದ ನಾಗರಿಕರಿಗೆ ವಾಯುವಿಹಾರಕ್ಕೆ ಅವಕಾಶ ನಿರಾಕರಿಸಿದ್ದರೂ ವಿವಿ ಮಾತ್ರ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಸಾವಿರಾರು ಜನರಿಗೆ ಪ್ರವೇಶಕ್ಕೆ ಅವಕಾಶ ನೀಡಿರುವುದು ಆತಂಕದ ಮೂಲವಾಗಿದೆ.

    ನಗರದ ಬಹುತೇಕ ಭಾಗದಲ್ಲಿ ವಿಹಾರ ಬಂದ್ ಮಾಡಿರುವ ಹಿನ್ನೆಲೆಯಲ್ಲಿ ನಗರದೆಲ್ಲೆಡೆ 2 ಸಾವಿರಕ್ಕೂ ಹೆಚ್ಚು ಜನ ವಿವಿ ಆವರಣದಲ್ಲಿ ಬೆಳಗ್ಗೆ, ಸಂಜೆ ಜಮಾಯಿಸುತ್ತಿದ್ದು ನಿಯಂತ್ರಣ ಕಷ್ಟವಾಗಿದೆ. ಇನ್ನೆರಡು ವಾರದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು ಕೂಡಲೇ ವಿಹಾರಿಗಳಿಗೆ ಪ್ರವೇಶ ನಿರ್ಬಂಧಿಸಬೇಕೆಂಬುದು ವಿವಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಆಗ್ರಹವಾಗಿದೆ. ಜನರು ಮಾಸ್ಕ್ ಧರಿಸುತ್ತಿಲ್ಲ: ವಿವಿ ಆವರಣದಲ್ಲಿ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಕಿಂಗ್ ಬರುವವರು ಉತ್ತಮ ಗಾಳಿ ಸೇವನೆಗಾಗಿ ಮಾಸ್ಕ್ ಧರಿಸುತ್ತಿಲ್ಲ. ಹಾಗಾಗಿ, ಸೋಂಕು ಸುಲಭವಾಗಿ ವರ್ಗಾವಣೆಯಾಗಲು ಸಾಧ್ಯವಿದೆ. ಸಾಕಷ್ಟು ಜನ ಕಂಟೇನ್ಮೆಂಟ್ ರೆನ್, ಸೀಲ್‌ಡೌನ್ ಪ್ರದೇಶಗಳಿಂದಲೂ ವಾಕಿಂಗ್‌ಗೆ ಬರುವುದರಿಂದ ಸೋಂಕು ಹರಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

    ಜನರು ಜೋರಾಗಿ ಉಸಿರಾಡುವ ಸಂದರ್ಭದಲ್ಲಿ ವೈರಾಣುಗಳು ವಿವಿ ಆವರಣದ ವಿವಿಧ ವಸ್ತುಗಳ ಮೇಲೆ ಕೂರುವ ಸಾಧ್ಯತೆಯಿದ್ದು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಆರೋಗ್ಯದ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿಯಾದರೂ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಹೇರಬೇಕಿದೆ.

    ಡಿಡಿ ಹಿಲ್ಸ್‌ಗೆ ಸಾವಿರಾರು ಕಾರು: ಭಾನುವಾರ ನಗರದೆಲ್ಲೆಡೆ ಲಾಕ್‌ಡೌನ್ ಜಾರಿ ಇರುವ ಕಾರಣಕ್ಕೆ ನಗರವಾಸಿಗಳೆಲ್ಲ ದೇವರಾಯನದುರ್ಗ, ನಾಮದಚಿಲುಮೆ ಅರಣ್ಯದ ಕಡೆ ಮುಖಮಾಡುತ್ತಿರುವುದು ಮತ್ತೊಂದು ಆತಂಕಕ್ಕೆ ಕಾರಣವಾಗಿದೆ. ನಗರದ ಶ್ರೀಮಂತರ ಗುಂಪು, ಗುಂಪಾಗಿ ಕಾರುಗಳಲ್ಲಿ ತೆರಳುತ್ತಿರುವ ಬಗ್ಗೆಯೂ ಜಿಲ್ಲಾಡಳಿತ ಗಂಭೀರವಾಗಿ ಚಿಂತಿಸಬೇಕಿದೆ. ದೇವರಾಯದುರ್ಗ ಸುತ್ತಮುತ್ತಲ ಹಳ್ಳಿಗಳ ಜನರು ವಿಹಾರದ ಹೆಸರಲ್ಲಿ ನಗರವಾಸಿಗಳ ದಾಳಿಗೆ ಕಂಗಾಲಾಗಿದ್ದು. ಕರೊನಾ ಹರಡುವ ಭೀತಿ ವ್ಯಕ್ತಪಡಿಸಿ ಜನರನ್ನು ನಿಯಂತ್ರಿಸಬೇಕು ಎಂದು ಪೊಲೀಸರಿಗೆ ಮನವಿ ಸಲ್ಲಿಸುತ್ತಿದ್ದಾರೆ.

    ಸಾರ್ವಜನಿಕ ಸ್ನೇಹಿಯಾಗಿರಲು ಬಯಸುವ ವಿವಿ ವಿಹಾರಕ್ಕೆ ಅವಕಾಶ ನೀಡಿದೆ. ಆದರೆ, ಇತ್ತೀಚೆಗೆ ಆವರಣಕ್ಕೆ ಬರುವವರ ಸಂಖ್ಯೆ ದುಪ್ಪಟ್ಟಾಗಿದೆ. ಸರ್ಕಾರದ ಮಾರ್ಗಸೂಚಿ ಪಾಲಿಸದಿರುವುದು ಗಮನಕ್ಕೆ ಬಂದಿದ್ದು ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಸಿಬ್ಬಂದಿ ಮನವಿ ಮಾಡಿದ್ದಾರೆ. ಈ ಬಗ್ಗೆ ಪರಿಶೀಲಿಸಲಾಗುತ್ತಿದೆ.
    ಪ್ರೊ.ವೈ.ಎಸ್.ಸಿದ್ದೇಗೌಡ ಕುಲಪತಿ

    ಕರೊನಾ ಸಂಕಷ್ಟದ ನಡುವೆ ಪರೀಕ್ಷೆ ಬರೆಯುವ ಸವಾಲಿದೆ. ಜನಸಂದಣಿಯಿಂದ ಸುಲಭವಾಗಿ ಸೋಂಕು ಹರಡಲು ಸಾಧ್ಯವಿದೆ. ಹಾಗಾಗಿ, ವಿವಿ ಆಡಳಿತ ಮಂಡಳಿ ಪರೀಕ್ಷೆ ಮುಗಿಯುವವರೆಗೂ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಬೇಕು.
    ಶೋಭಾರಾಣಿ ವಿವಿ ವಿದ್ಯಾರ್ಥಿನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts